ಹತಾಶೆಗೊಳದಿರು, ಓ ಧೀರಾತ್ಮನೆ
September 17th, 2008.
ಸ್ವಾಮಿ ವಿವೇಕಾನಂದರ ಪ್ರತಿಭೆಯ ಮುಖಗಳು ಅನೇಕ. ಸಂತನಾಗಿ, ದಾರ್ಶನಿಕನಾಗಿ, ವೀರಸನ್ಯಾಸಿಯಾಗಿ ಅವರು ನಮಗೆ ಸುಪರಿಚಿತ. ಆದರೆ ಕವಿಯಾಗಿ, ಗದ್ಯಲೇಖಕರಾಗಿ, ಕಲಾವಿಮರ್ಶಕರಾಗಿ, ಸಂಗೀತಜ್ಞರಾಗಿ ಅವರ ಸ್ವೋಪಜ್ಞವಾದ ಕೊಡುಗೆ ಗಮನೀಯವಾಗಿದ್ದರೂ ಈ ನಿಟ್ಟಿನಲ್ಲಿ ನಡೆದ ಅಧ್ಯಯನಗಳು ವಿರಳ. ಈ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದರೇ ಬರೆದ ’ಇನ್ ಸರ್ಚ್ ಆಫ್ ಗಾಡ್ ಅಂಡ್ ಅದರ್ ಪೊಯಮ್ಸ್’ ಇಂಗ್ಲೀಷ್ ಕವನ ಸಂಕಲನದ ಕನ್ನಡಾನುವಾದ ’ವಿವೇಕಾನಂದ ಕವಿತಾವಳಿ’ ಯಿಂದ ಆಯ್ದ ಸ್ಫೂರ್ತಿದಾಯಕ ಕವನವೊಂದನ್ನು ಇಲ್ಲಿ ನೀಡಿದ್ದೇವೆ.
ಇದು ಸ್ವಾಮೀಜಿಯವರ ಜನ್ಮದಿನದ (ಜನವರಿ ೧೨) ಪ್ರಯುಕ್ತ ಚೈತ್ರರಶ್ಮಿಯ ನಮನ.
ಸೂರ್ಯನು ಮುಗಿಲಲಿ ಮರೆಯಾಗಿದ್ದರು,
ಕಾಳಿಮೆಯಲಿ ಬಾನ್ ಮುಳುಗಿದರು,
ಹತಾಶೆಗೊಳದಿರು, ಓ ಧೀರಾತ್ಮನೆ,
ಜಯವದು ನಿಶ್ಚಿತ, ನಿಶ್ಚಿತವು!.||
ಶಿಶಿರದ ಬೆನ್ನೆಡೆ ವಸಂತ ಬರುವುದು
ಇಳಿದರು ಅಲೆ ಮೇಲೇಳುವುದು;
ನೆರಳ ನಡುವಿನಿಂ ಬೆಳಕು ನುಗ್ಗುವುದು
ಸ್ಥಿರವಾಗಿರು ಓ ಧೀರಾತ್ಮ! ||
ಬಾಳ ಹೊಣೆಗಳವು ಬೇವಾಗುವುವು
ಸಂತಸ ಕ್ಷಣದಲಿ ಮುಗಿಯುವುದು
ಗುರಿಯನು ನೆರಳದು ನುಂಗುವುದು
ಕತ್ತಲ ಸೀಳುತ ನಡೆ ಧೀರಾತ್ಮನೆ
ಸಂತತ ಸಾವಿರ ಯತ್ನದಲಿ! ||
ಇಟ್ಟ ಅಡಿಗಳು ಪಟ್ಟ ಪಾಡುಗಳು
ವ್ಯರ್ಥವಲ್ಲವೆಂದೆಂದಿಗೂ,
ಕನಸು ಕರಗಿದರು, ಶಕ್ತಿ ಗುಂದಿದರೂ
ನಿನ್ನುದ್ಧಾರಕನುದಿಸುವನು.
ತಡೆ ತಡೆದಿರು ನೀ, ಓ ಧೀರಾತ್ಮನೆ
ಒಳಿತೆಂದಿಗೂ ಅಳಿಯುವುದಿಲ್ಲ! ||
ತಿಳಿದು ಬಾಳುವರು ಕೆಲವರಾದರೂ
ಅವರೇ ಬಾಳ್ಗೆ ಬೆಳಕೀಯುವರು
ಮಂದಿ ನಿಜದ ಬೆಲೆ ಅರಿಯುವುದೆಂದಿಗೋ,
ಕಿವುಡನೆನಿಸವರ ನುಡಿಗಳಿಗೆ! ||
ದೂರದರ್ಶಿಗಳು ನೆರವಿಗೆ ನಿಲುವರು,
ಸರ್ವಶಕ್ತ ನಿನ್ನೊಡನಿಹನು;
ಹರಕೆಯದೆಲ್ಲವೂ ಹರಿದು ಬರಲಿ,
ನೀ ನಡೆ ಧೀರಾತ್ಮನೆ ಗುರಿಯೆಡೆಗೆ ||