ಮೂರು ತುಂಬಿದ ಕಿಶೋರಿಗೆ ಪುಟ್ಟದೊಂದು ಮುಕುಟ
September 17th, 2008.
ನಿಜಕ್ಕೂ ಖುಷಿಪಡಲು ಕಾರಣವಿದೆ. ನಮ್ಮ ಸೃಜನಶೀಲತೆಯ ಹುಡುಕಾಟದ ತಿಂಗಳ ಪತ್ರಿಕೆ ’ಚೈತ್ರರಶ್ಮಿ’ಗೆ ದೆಹಲಿಯ ’ರಿಜಿಸ್ಟ್ರಾರ್ ಆಫ್ ನ್ಯೂಸ್ ಪೇಪರ್‍ಸ್ ಫಾರ್ ಇಂಡಿಯಾ’ (ಆರ್ ಎನ್ ಐ KARKAN/೨೦೦೬/೧೯೧೦೯)ದ ಮಾನ್ಯತೆ ದೊರೆತಿದೆ. ಆ ಮೂಲಕ ನಮ್ಮ ಒಂದೂವರೆ ವರ್ಷಗಳ ಪ್ರಯತ್ನಕ್ಕೆ ಯಶಸ್ಸು ದೊರೆತಂತಾಗಿದೆ. ಪತ್ರಿಕೋದ್ಯಮ ಜಗತ್ತಿನಲ್ಲಿ ಆರ್.ಎನ್.ಐ ಪಡೆಯುವುದೇನೂ ದೊಡ್ಡ ಸಾಧನೆ ಅಲ್ಲವಾದರೂ ಈ ಜಡ್ಡುಗಟ್ಟಿದ ಸರಕಾರೀ ವ್ಯವಸ್ಥೆಯಲ್ಲಿ ದುಡ್ಡು ಮತ್ತು ಶಿಫಾರಸ್ಸು ಎರಡೂ ಇಲ್ಲದ ಸಾಮಾನ್ಯನೊಬ್ಬನಿಗೆ ಅದು ಅತೀ ದೊಡ್ಡ ಸವಾಲೇ ಸರಿ. ದಾಖಲೆ ಪತ್ರಗಳನ್ನು ಹಿಡಿದು ಕಛೇರಿಯಿಂದ ಕಛೇರಿಗೆ ಅಲೆಯಬಲ್ಲ ತಾಳ್ಮೆ ಮತ್ತು ಜಾಣ್ಮೆ ನಮಗಿರದಿದ್ದರೆ ಅದು ಹೋರಾಟದ ಹಾದಿ. ಸಮಾಜದ ಎಲ್ಲ ವ್ಯವಸ್ಥೆಗಳ ಬಗ್ಗೆ ಅಧಿಕಾರಯುತವಾಗಿ ಬರೆಯುವ ಪತ್ರಿಕೋದ್ಯಮ ತನ್ನ ಬುಡದಲ್ಲೇ ಇರುವ ಈ ಕೊಳಕು ವ್ಯವಸ್ಥೆಯ ಬಗ್ಗೆ ಮೌನವಹಿಸಿರುವುದು ವಿಪರ್ಯಾಸ.
ಈ ಪ್ರಯತ್ನದಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ಸಹಕರಿಸಿದ ’ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಶ್ರೀ ಶ್ರೀಧರರಾವ್ ಅವರಿಗೆ ನಮ್ಮ ಅನಂತ ಕೃತಜ್ಞತೆಗಳು ಸಲ್ಲುತ್ತವೆ. ಅವರ ಸಹಕಾರವಿರದಿದ್ದರೆ ಇದೊಂದು ಬಹುದೊಡ್ಡ ಸವಾಲಾಗುತ್ತಿತ್ತು. ಹಾಗೆಯೇ ಅಗತ್ಯ ಮಾಹಿತಿ ನೀಡಿ ಸಹಕರಿಸಿದ ಹೊಸನಗರ ’ಗ್ರಾಮ್ಯಕಲಾ’ ಪತ್ರಿಕೆಯ ಸಂಪಾದಕ ಶ್ರೀ ಗಣೇಶ್ ಬೆಳ್ಳಿ, ಶ್ರೀ ಚಕ್ರವರ್ತಿ ಸೂಲಿಬೆಲೆ, ಅನೂಹ್ಯ ಟ್ರಸ್ಟ್‌ನ ಶ್ರೀ ಬಾಲಸೂರಿ ಅವರಿಗೆ ಚೈತ್ರರಶ್ಮಿ ಬಳಗದ ವಂದನೆಗಳು. ಜೊತೆಗೆ ಸದಾ ಬೆಂಬಲ ನೀಡಿದ ಗೆಳೆಯರಾದ ಉದಯ್, ಗುರುಪ್ರಸಾದ್, ಚಿದಂಬರ್, ನಾರಾಯಣ್, ರಾಜೇಶ್, ಸೋದರಿಯರಾದ ರಜನಿ, ನಿಶ್ಚಿತಾ, ಪ್ರಿಯಾ.ಎಂ.ಭಟ್, ಸುಧಾ ಹೆಗಡೆ, ಚೂಡಾಮಣಿ, ಚೇತನಾ ಮತ್ತು ಮನೋರಮಾ ಹಾಗೂ ಚೈತ್ರರಶ್ಮಿ ಬಳಗದ ಎಲ್ಲ ಮಿತ್ರರಿಗೆ ನನ್ನ ಪ್ರೀತಿಪೂರ್ವಕ ಕೃತಜ್ಞತೆಗಳು.
ಈ ಪುಟ್ಟ ಯಶಸ್ಸಿನೊಡನೆ ಚೈತ್ರರಶ್ಮಿಯ ಭಾವಯಾವನ್ನು ಇನ್ನಷ್ಟು ಸಶಕ್ತವಾಗಿ, ಸುಂದರವಾಗಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ. ಚೈತ್ರರಶ್ಮಿ ನನ್ನೊಬ್ಬನ ಪ್ರಯತ್ನದ ಫಲ ಎಂದರೆ ಅದು ಉತ್ಪ್ರೇಕ್ಷೆಯ ಮಾತಷ್ಟೇ. ಕಳೆದ ಈ ಮೂರು ವರ್ಷಗಳಲ್ಲಿ ನಿಮ್ಮೆಲ್ಲರ ಬೆಂಬಲ, ಹಾರೈಕೆ, ಪ್ರೀತಿಗಳಿರದಿದ್ದರೆ ರಶ್ಮಿಯ ಬೆಳಕು ಖಂಡಿತಾ ಮಸುಕಾಗುತ್ತಿತ್ತು. ಆದರೂ ಏನೋ ಒಂದಿಷ್ಟು ಬರೆದು ಪ್ರತಿ ತಿಂಗಳು ಮುದ್ರಿಸಿಬಿಟ್ಟರೆ ಅದು ಒಂದು ಪತ್ರಿಕೆಯಾದೀತು, ’ಚೈತ್ರರಶ್ಮಿ’ ಯಾಗುವುದಿಲ್ಲ. ಚೈತ್ರರಶ್ಮಿ ಎಂದರೆ ಹೊಸತನದ ತುಡಿತ, ಹೊಸಭಾವ ಮಿಡಿತ. ಸದಾ ಹೊಸತನದೆಡೆಗೆ ನಮ್ಮನ್ನು ನಾವು ತೆರೆದುಕೊಳ್ಳಬಲ್ಲ ಭಾನಪ್ರವಾಹ. ಈ ಪುಟ್ಟ ಯಶಸ್ಸಿನೊಡನೆ ಅಂತಹ ಒಂದು ಹೊಸತನದೆಡೆಗೆ, ಕ್ರಿಯಾಶೀಲತೆಯೆಡೆಗೆ ಸಾಗೋಣ, ತಿಳಿಯೋಣ, ಬೆಳೆಯೋಣ, ಅರಿಯೋಣ ಮತ್ತು ಭಾವಸಲಿಲದಲಿ ಹರಿಯೋಣ.