ಮಾಸ್ತಿ ಆಸ್ತಿ ಅನ್ನಿಸೋದೇ ಇದಕ್ಕೆ!
September 17th, 2008.
- ಚಕ್ರವರ್ತಿ ಸೂಲಿಬೆಲೆ
ನಮ್ಮಲ್ಲಿ ಬಹಳ ಜನರಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅಂದರೆ ಜ್ಞಾನಪೀಠ ಪ್ರಶಸ್ತಿ ವಿಜೇತರು ಅಂತಷ್ಟೇ ಗೊತ್ತು. ಇನ್ನು ಸ್ವಲ್ಪ ಬಲ್ಲವರು ಅವರು ಬರೆದ ಕೃತಿಗಳ ಬಗ್ಗೆ ಮಾತನಾಡಿಯಾರು. ಆದರೆ, ಅವರ ಮಾನವೀಯ ಮುಖದ ಅರಿವಿರೋರು ಮಾತ್ರ ಬಹಳ ಕಡಿಮೆ ಜನ. ಬಹಳ ಹಿಂದಿನ ಮಾತು. ಮಾಸ್ತಿಯವರು ತಮ್ಮ ಗೆಳೆಯರೊಡನೆ ಮನೆಯಿಂದ ಹೊರ ಹೋಗ್ಲಿಕ್ಕೆ ತಯಾರಿ ನಡೆಸಿದ್ರು. ಎಂದಿನಂತೆ ಒಪ್ಪವಾಗಿ ವಸ್ತ್ರ ಧರಿಸಿ, ಗತ್ತಿನಿಂದ ಹೊರಗಡಿ ಇಡಲು ಅನುವಾದರು. ಅವರು ಹೊಸ್ತಿಲು ದಾಟುವಷ್ಟರಲ್ಲಿ ಎದುರಿಗೆ ಚಮ್ಮಾರನೊಬ್ಬ ಬಂದು ನಿಂತ. ’ಸಾರ್ ಹರಿದ ಚಪ್ಪಲಿ ಇದ್ರೆ ಕೊಡಿ, ಹೊಲಿದು ಕೊಡ್ತೇನೆ. ತುಂಬ ಶ್ರದ್ಧೆಯಿಂದ ಮಾಡಿಕೊಡ್ತೇನೆ ಎಂದ ಆ ಚಮ್ಮಾರ.
ಮಾಸ್ತಿಯವರ ಜತೆಯಲ್ಲಿದ್ದವನೊಬ್ಬ ಮುಖ ಸಿಂಡರಿಸಿದ. ಹೊರಗೆ ಹೊರಟಾಗ ಇದ್ಯಾವ ಅನಿಷ್ಟ ಅಡ್ಡಬಂತು ಎಂಬ ಭಾವ ಅವನ ಮುಖದಲ್ಲಿ ಎದ್ದು ಕಾಣುತ್ತಿತ್ತು. ಮಾಸ್ತಿಯವರು ಮಾತ್ರ ನಸುನಗುತ್ತಾ, ’ಹಳೆಯ ಚಪ್ಪಲಿ ಯಾವ್ದೂ ಇಲ್ಲವಪ್ಪ, ಇದೋ ಈ ಐದು ರೂಪಾಯಿ ಇಟ್ಟುಕೋ. ಮುಂದಿನ ಸಲ ಬಂದಾಗ ಹರಿದ ಚಪ್ಪಲಿ ಇದ್ರೆ ಕೊಡ್ತೇನೆ ಎಂದರು. ’ಬೇಡ ಸ್ವಾಮೀ, ನಾವು ದುಡಿದು ತಿನ್ನೋರು. ದುಡಿಯದೇ ಪಡೆದ ಹಣ ಬದುಕು ಹಾಳು ಮಾಡುತ್ತೆ. ಪರ್ವಾಗಿಲ್ಲ ಬಿಡಿ. ಮತ್ತೊಂದು ಸಲ ಬರ್ತೇನೆ’ ಎನ್ನುತ್ತಾ ಆ ಚಮ್ಮಾರ ಹೊರಟೇ ಬಿಟ್ಟ. ಮಾಸ್ತಿಯವರ ಕರುಳು ಕಿವುಚಿದಂತಾಯಿತು. ’ಒಂದ್ನಿಮಿಷ ಇರಪ್ಪಾ’ ಎಂದವರೇ ಮನೆಯೊಳಗೆ ಓಡಿದರು. ಅಡುಗೆ ಮನೆಗೆ ಹೋಗಿ ಮೊಂಡಾಗಿ ಹೋಗಿದ್ದ ಚಾಕು ಹುಡುಕಿ ತಂದರು. ದಿವಿನಾಗಿದ್ದ ತಮ್ಮ ಚಪ್ಪಲಿಯ ದಾರಗಳನ್ನು ಕಷ್ಟಪಟ್ಟು ಹರಿದು ಹಾಕಿದರು. ಅದನ್ನೊಯ್ದು ಚಮ್ಮಾರನ ಮುಂದೆ ಇಟ್ಟರು. ಚಮ್ಮಾರನಿಗೆ ಆನಂದವಾಯಿತು. ಆತ ಮನಸ್ಸಿಟ್ಟು ಚಪ್ಪಲಿ ಹೊಲೆದುಕೊಟ್ಟ. ಮಾಸ್ತಿಯವರು ಐದು ರೂಪಾಯಿ ಕೊಟ್ಟರೂ ಬೇಡವೆಂದು ತನ್ನ ಮಜೂರಿ ಎರಡು ರೂಪಾಯಿ ಪಡೆದು ಹೊರಟ. ಅವನು ಹೋದ ದಿಕ್ಕನ್ನೆ ನೋಡುತ್ತ ನಿಂತ ಮಾಸ್ತಿ ಏನೋ ನೆನಪಾದವರಂತೆ ಮನೆಯೊಳಕ್ಕೆ ಓಡಿದರು. ಅಟ್ಟದ ಮೇಲಿನ ಚೀಲವೊಂದನ್ನು ಕೆಳಕ್ಕಿಳಿಸಿದರು. ಅದರಲ್ಲಿನ ಹಳೆಯ ಚಪ್ಪಲಿಗಳನ್ನು ಹುಡುಕಿದರು. ಕೆಲವೊಂದನ್ನು ತಾವೇ ಹರಿದರು. ಜೊತೆಯಲ್ಲಿದ್ದವ ಬಂದು ಕೇಳಿದ. ’ಅದೇಕೆ ಆ ಚಪ್ಪಲಿಗಳನ್ನು ಹರಿಯುತ್ತಿದ್ದೀರಿ?, ’ಮಾಸ್ತಿ ಮಗುವಿನಷ್ಟೇ ಮುಗ್ಧವಾಗಿ ಉತ್ತರಿಸಿದರು. ’ಆ ಚಪ್ಪಲಿಯವ ಮತ್ತೆ ಬಂದರೆ ಈ ಬಾರಿ ಅವನು ಐದು ರೂಪಾಯಿಗಿಂತ ಕಡಿಮೆ ತೆಗೆದುಕೊಂಡು ಹೋಗುವಂತಿಲ್ಲ, ಹಾಗೆ ಮಾಡುತ್ತೇನೆ’ ಎಂದರು.
January 31st, 2009 at 12:13 am
ಆ ಮುಗ್ದತನ,ಮಾನವೀಯತೆ ಎಲ್ಲರಲ್ಲಿ ಇದ್ದಾರೆ ಎಷ್ಟು ಚೆಂದ.