• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ವಿಚಾರ ರಶ್ಮಿ

    ಪ್ರೇಮಕವಿಗೆ ಪ್ರೀತಿಯ ಭೋಪರಾಕ್

    September 17th, 2008.


    ’ನಕ್ಕ ಹಾಗೆ ನಟಿಸಬೇಡ, ನಕ್ಕು ಬಿಡು ಸುಮ್ಮನೆ

    ಬೆಳಕಾಗಲಿ, ತಂಪಾಗಲಿ ನಿನ್ನೊಲವಿನ ಒಳಮನೆ’.

    ಇಂತಹ ಅಮೋಘ ಸಾಲುಗಳ ಆ ಸುಂದರ ಹಾಡನ್ನು ಕೇಳುವಾಗ ಇದು ನಮ್ಮೊಲವಿನ ಮಾತು, ನಮ್ಮೊಳಗಿನ ಹಾಡು, ನಮ್ಮೆದೆಯ ಪಿಸುಮಾತೇ ಇದು ಎನಿಸುವಷ್ಟು ಅದು ಕಾಡುತ್ತದೆ. ಪ್ರೀತಿಯ ಬಗ್ಗೆ, ಪ್ರೇಮದ ಬಗ್ಗೆ ಇದಕ್ಕಿಂತ ಸರಳವಾಗಿ, ಇದಕ್ಕಿಂತ ಹೃದಯಸ್ಪರ್ಶಿಯಾಗಿ ಬರೆಯಲು ಸಾಧ್ಯವೇ ಇಲ್ಲವೇನೋ ಎನ್ನಿಸುವಷ್ಟು ಮನಮುಟ್ಟುವಂತೆ ಬರೆದವರು ಕನ್ನಡದ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ. ಬದುಕಿನುದ್ದಕ್ಕೂ ಪ್ರತಿಕೂಲ ಪರಿಸ್ಥಿತಿಯಲ್ಲೇ ಹೋರಾಟ ನಡೆಸುತ್ತಾ ಬಂದರೂ ನೋವನ್ನು ನುಂಗಿ ತಮ್ಮ ನಲಿವನ್ನು ಮಾತ್ರ ಜನತೆಗೆ ನೀಡುತ್ತಾ ಬಂದ ಕವಿ ಕೆ.ಎಸ್.ನ. ಕೆ.ಎಸ್.ನರಸಿಂಹಸ್ವಾಮಿಯವರು ಹುಟ್ಟಿದ್ದು ಜನವರಿ ೨೬, ೧೯೧೫ ರಂದು ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ. ಮೈಸೂರಿನಲ್ಲಿ ಸರಕಾರಿ ನೌಕರಿ, ೧೯೭೦ ರಲ್ಲಿ ನಿವೃತ್ತಿ. ಯುವಕರ್ನಾಟಕ ಪತ್ರಿಕೆಯ ಸಂಪಾದಕತ್ವ. ನಾಲ್ಕು ದಶಕಕ್ಕೂ ಹೆಚ್ಚಿನ ಸಾಹಿತ್ಯ ಸೇವೆ. ಮೈಸೂರು ಮಲ್ಲಿಗೆ (೧೯೪೨), ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ದೀಪ ಸಾಲುಗಳ ನಡುವೆ ಮುಂತಾದ ಕವನ ಸಂಕಲನಗಳು, ಬಣ್ಣದ ಚಿಟ್ಟೆ , ಬೆಟ್ಟದ ಗೌರಿ, ಕಂಬನಿ, ನಿನ್ನ ಹೆಸರು, ಚಿತ್ರವಳ್ಳಿಯ ಚೆಲುವೆಯರು ಮುಂತಾದ ಅನುವಾದಿತ ಕವನಗಳು, ಮಾರಿಯ ಕಲ್ಲು, ಉಪವನ, ದಮಯಂತಿ ಇತ್ಯಾದಿ ಗದ್ಯ ಲೇಖನಗಳು ಕೆ.ಎಸ್.ನ. ಅವರ ಕಾವ್ಯ ಪ್ರತಿಭೆಗೆ ಸಾಕ್ಷಿಯಾಗಿ ನಿಂತಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಪಂಪ ಪ್ರಶಸ್ತಿ, ಕೇರಳದ ಕುಮಾರನ್ ಆಶನ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಕೆ.ಎಸ್.ನ ಮುಡಿಯೇರಿ ತಮ್ಮ ಮೌಲ್ಯ ಹೆಚ್ಚಿಸಿಕೊಂಡಿವೆ. ಪ್ರೀತಿಗೆ, ಪ್ರೇಮಕ್ಕೆ ಅನ್ವರ್ಥವಾಗುವಂತೆ ಬರೆದವರು ಕೆ.ಎಸ್.ನ. ಅವರ ’ಮೈಸೂರು ಮಲ್ಲಿಗೆ’ ಕವನ ಸಂಕಲನ ಸಾಹಿತ್ಯಾಸಕ್ತರಷ್ಟೇ ಅಲ್ಲದೆ, ಜನಸಾಮಾನ್ಯರನ್ನು ತಲುಪಿ ಇದುವರೆಗೆ ೨೬ ಮುದ್ರಣಗಳನ್ನು ಕಂಡಿರುವುದು ಅವರ ಹೆಗ್ಗಳಿಕೆ. ಹಾಗಾಗಿಯೇ ಅವರು ನಾಲ್ಕು ದಶಕಗಳ ಹಿಂದೆ ಬರೆದ ಪದ್ಯಗಳೇ ಇಂದಿಗೂ ಯುವ ಪ್ರೇಮಿಗಳ ಹೃದಯದ ಹಾಡಾಗಿದೆ. ಅವರು ಕಟ್ಟಿಕೊಟ್ಟ ಮಲ್ಲಿಗೆಯ ಕಂಪು, ಒಲವಿನ ಮಾಧುರ್‍ಯ, ಪಿಸುಮಾತಿನ ಸಂವೇದನೆ, ಪ್ರೀತಿಯ ಮನಸುಗಳ ಕಲರವ ಅಂದಿಗೂ, ಇಂದಿಗೂ, ಎಂದಿಗೂ ಪ್ರಸ್ತುತ. ’ನಿನ್ನ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ | ಕಾಲವಳಿಸದ ನೆಲದ ಚೆಲುವಿಗೆ ನಿನ್ನ ಪ್ರೀತಿಯ ಹೋಲಿಕೆ|’ ಎಂಬ ಅವರದೇ ಪ್ರೀತಿಯ ಸಾಲುಗಳೊಂದಿಗೆ ಒಲವಿನ ಕವಿ ಕೆ.ಎಸ್. ನರಸಿಂಹಸ್ವಾಮಿಯವರಿಗೆ ಚೈತ್ರರಶ್ಮಿಯ ’ಜನುಮದಿನದ ನಮನ’.

    ಪ್ರತಿಕ್ರಿಯಿಸಿ :