ದೇಶ ಕಾಯುವ ಯೋಧರು ನೆನಪಾಗಲಿ ಒಮ್ಮೆ
September 17th, 2008.
(ಯೋಧ ಕ್ಯಾಪ್ಟನ್ ವಿಜಯಂತ್ ಥಾಪರ್ ತಂದೆ ಬರೆದ ಪತ್ರ)
ಪ್ರಿಯ ರಾಮಚಂದ್ರ,
ಕ್ಯಾಪ್ಟನ್ ವಿಜಯಂತ್ ಥಾಪರ್ ಕುರಿತು ನೀವು ಬರೆದ ವಿಚಾರಪೂರ್ಣ, ಅಭಿಮಾನ ಪೂರ್ವಕ ಈ-ಮೇಲ್ ನೋಡಿದೆ. ಧನ್ಯವಾದ. ಕಾರ್ಗಿಲ್ ಸಮರ ಕಳೆದ ಎಂಟು ವರ್ಷಗಳ ನಂತರವೂ ಹುತಾತ್ಮ ಯೋಧರನ್ನು ನೆನೆವ ನಿಮ್ಮಂತಹ ದೇಶವಾಸಿಗಳೆಲ್ಲರ ಪ್ರೀತಿ, ಅಭಿಮಾನಕ್ಕೆ ನಾವು ಕೃತಜ್ಞರಾಗಿದ್ದೇವೆ. ನಮಗಾಗಿ, ದೇಶಕ್ಕಾಗಿ ತಮ್ಮೆಲ್ಲ ಸುಖ ಸಂತೋಷಗಳನ್ನು ಬದಿಗಿಟ್ಟು ಸೇವೆಗೈಯುವ ವೀರರನ್ನು, ದೇಶಕ್ಕಾಗಿ ಮಡಿದ ಹುತಾತ್ಮರನ್ನು ಸ್ಮರಿಸುವುದೇ ನಾವು ಅವರಿಗೆ ಸಲ್ಲಿಸಬಲ್ಲ ಕೃತಜ್ಞತೆ. ವಿಜಯಂತ್ ನಂತಹ ಸಾವಿರಾರು ಯೋಧರು ದೇಶರಕ್ಷಣೆಯ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿ, ಅತ್ಯಂತ ಗೌರವಯುತವಾಗಿ ವೀರಮರಣವನ್ನು ಪಡೆದು ಆ ಮೂಲಕ ಭಾರತೀಯ ಯುವಕರ ಶೌರ್ಯ, ಸಾಹಸಗಳನ್ನು ಪ್ರದರ್ಶಿಸಿದ್ದಾರೆ. ಮಗನನ್ನು ಕಳೆದುಕೊಂಡ ದುಃಖ, ನೋವು ನಮ್ಮನ್ನು ಬಾಧಿಸಿದರೂ ದೇಶಕ್ಕಾಗಿ ಆತ ಮಾಡಿದ ಬಲಿದಾನ ನಮ್ಮನ್ನು ಹೆಮ್ಮೆ ಪಡುವಂತೆ ಮಾಡಿದೆ. ವಿಜಯಂತ್ ನಂತಹ ಸಾವಿರಾರು ಯೋಧರ ತ್ಯಾಗ, ಶೌರ್ಯ, ಸಾಹಸ, ಬಲಿದಾನಗಳನ್ನು ಮುಂದಿನ ಜನಾಂಗಕ್ಕೆ ತಿಳಿಸಬೇಕಾದ, ಅದರಿಂದ ಸ್ಫೂರ್ತಿ ನೀಡಬೇಕಾದ ಮತ್ತು ಆ ಮೂಲಕ ಅವರೆಲ್ಲರೂ ತಮ್ಮ ಹಿರಿಯರ ಕುರಿತು ಅಭಿಮಾನ ಪಡುವಂತೆ, ದೇಶವನ್ನು ಪ್ರೀತಿಸುವಂತೆ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಅದಕ್ಕಾಗಿಯೇ ನಾವು www.captainvijyantthapar.com ಎಂಬ ವೆಬ್‌ಸೈಟ್ ಸ್ಥಾಪಿಸಿದ್ದೇವೆ. ದೇಶ ಕಾಯುವ ವೀರ ಯೋಧರ ಕುರಿತು ಒಮ್ಮೆಯಾದರೂ ಚಿಂತಿಸುವ ಪ್ರಯತ್ನ ಮಾಡೋಣ. ಈ ದೇಶ ನಮ್ಮದು, ಅದನ್ನು ಪ್ರೀತಿಸೋಣ. ದೇಶರಕ್ಷಣೆಯ ಕಾರ್ಯಕ್ಕೆ ಮುಡಿಪಾಗೋಣ. ಕ್ಯಾಪ್ಟನ್ ವಿಜಯಂತ್‌ನಂತಹ ಹುತಾತ್ಮ ಯೋಧರು ನಮಗೆ ಸ್ಫೂರ್ತಿಯಾಗಲಿ.
ಧನ್ಯವಾದ,
ಕರ್ನಲ್ ವೀರೇಂದ್ರ ಥಾಪರ್
ಶ್ರೀಮತಿ ತೃಪ್ತಾ ಥಾಪರ್
ನೊಯಿಡಾ, ನವದೆಹಲಿ.