• Login

 • Loading...


  Loading...

  Register





  A password will be mailed to you.
  Log in | Lost password?

  Retrieve password





  A confirmation mail will be sent to your e-mail address.
  Log in | Register

 • ಹುಡುಕು

 • ಮುಖಪುಟ >> ವಿಶೇಷ ಲೇಖನಗಳು

  ನೆನಪಾಗಬೇಕಿದೆ ಕಾವ್ಯದ ಓದು

  March 17th, 2015.


  ನೆನಪಾಗಬೇಕಿದೆ ಕಾವ್ಯದ ಓದು

  – ನವೀನ ಭಟ್, ಗಂಗೋತ್ರಿ

  ಈ ಮುಂದಿನ ಮಾತು ಉಳಿದ ಯಾವುದೇ ಕ್ಷೇತ್ರಕ್ಕೆ ಇಂದಿನ ವಾತಾವರಣದಲ್ಲಿ ಹೊಂದಿಕೊಳ್ಳುತ್ತದೆ ಎಂದು ನಿಮಗೆ ಅನ್ನಿಸಬಹುದು, ಆದರೆ ಇದನ್ನು ಸಾಹಿತ್ಯದ ಕ್ಷೇತ್ರಕ್ಕೆ ಅನ್ವಯವಾಗುವಂತೆ ಹೇಳುತ್ತಿದ್ದೇನೆ ಇಲ್ಲಿ. ಅದೇನೆಂದರೆ, ಇಂದು ನಾವು ಗುರುತಿಸಿಕೊಳ್ಳುವಿಕೆಯ banner ಯುಗದಲ್ಲಿ ಇದ್ದೇವೆ ಎನ್ನುವುದು. ಈ ಕಣ್ಣುಗಳನ್ನೇ ಸಹಜವೆಂಬಂತೆ ಬೆಳೆಸಿಕೊಂಡು ಬರುತ್ತಿರುವ ನಮ್ಮ ತಲೆಮಾರು ಮಾಧ್ಯಮಗಳ ಮಿದುಳನ್ನೇ ಆಧರಿಸಿದಂತೆ ಒಮ್ಮೊಮ್ಮೆ ಅನ್ನಿಸುವುದಿದೆ. ಇದೇ ಕಾರಣಕ್ಕೆ ನಮ್ಮ ಕವಿಗಳು ನಮಗಿವತ್ತು ಸಿನಿಮಾ ಅಥವಾ ಧ್ವನಿ ಮಾಧ್ಯಮದಲ್ಲಿ ಮುದ್ರಿತವಾದಷ್ಟು ಮಾತ್ರವೇ ನೆನಪುಳಿದಿದ್ದಾರೆ. ಇದು ದೂರುವಿಕೆಯಲ್ಲ, ಈ ಯುಗದ ಧಾವಂತದ ಅಗತ್ಯವನ್ನು ಕಡೆಗಣಿಸುವಂತಿಲ್ಲವಲ್ಲ. ಈ ಗೋಜಲಿನಲ್ಲಿ ಕಾವ್ಯದ ಓದುವಿಕೆ ಎನ್ನುವ ರಸಾನುಭವವನ್ನು ಮರೆತಂತಿದ್ದೇವೆ. ನೀ ಹಿಂಗ ನೋಡಬ್ಯಾಡ, ಮುಗಿಲ ಮಾರಿಗೆ, ಕುರುಡು ಕಾಂಚಾಣ, ಮೂಡಲ ಮನೆಯಾ, ಎನ್ನುವಷ್ಟು-ಅಂದರೆ ಧ್ವನಿಮಾಧ್ಯಮದಲ್ಲಿ ಬಂದಷ್ಟರಲ್ಲೇ ಬೆಂದ್ರೆ ಕೂಡ ನೆನಪಿರುವುದು ನಮಗೆ. ಅನುಭಾವದ ಕವಿಯ ಕಾಣ್ಕೆಯನ್ನು ನಮ್ಮದೇ ದನಿಯಲ್ಲಿ, ಲಯದಲ್ಲಿ ಓದಿಕೊಳ್ಳುವಾಗಿನ ಸುಖ, ಅದನ್ನು ಹಾಡಾಗಿ ಕೇಳುವಲ್ಲಿ ಇರದು. ಆ ಹಿನ್ನೆಲೆಯಲ್ಲಿ ಬೇಂದ್ರೆಯವರನ್ನು ಮರುತರಿಸಿಕೊಳ್ಳುವ ಪ್ರಯತ್ನ ಇಲ್ಲಿದೆ.

  ಅಶ್ವಥ್ ಅವರಂಥ ಸಿರಿ ಕೊರಳಿನಲ್ಲಿ ಬಂದ ಬೇಂದ್ರೆಯವರ ಕಾವ್ಯದ ಸಾಲುಗಳು ಕನ್ನಡ ಗಾಳಿಯನ್ನೆಲ್ಲ ಅಪೂರ್ವವಾಗಿ ವ್ಯಾಪಿಸಿದ್ದು ಸತ್ಯ. ಅದರ ಬೆನ್ನಿನಲ್ಲಿಯೇ ಆ ಸಾಲುಗಳನ್ನು ನಿರ್ದಿಷ್ಟ ರಾಗ ಕಲ್ಪನೆಯ ಹೊರತಾಗಿ ಓದಿಕೊಳ್ಳಲಾಗದಂಥ ಗಾಢ ಪ್ರಭಾವದ ಬಂಧನಕ್ಕೂ ಸಿಲುಕಿದ್ದೇವೆ. ಅನುಭಾವದ ಎತ್ತರ ಮತ್ತು ಬೇಂದ್ರೆ ಚಿಂತನೆಯ ಆಳ ಅಗಲಗಳನ್ನು ಮನಸಿನ ಅಳತೆಯಲ್ಲಿ ಅಂದಾಜಿಸುವ ಹಂತಕ್ಕೆ ತಲುಪುವುದಾದರೂ ನಿರಂತರವಾಗಿ ಆ ಕಾವ್ಯ ವಾತಾವರಣದ ಒಳ ಸುಳಿಯೊಂದು ನಮ್ಮಲ್ಲಿ ಉಳಿಯಲೇ ಬೇಕಿರುವುದು ಅನಿವಾರ್ಯ. ಅಷ್ಟು ಗಾಢ ಓದು ಮತ್ತು ಆ ಸಹನೆ ನಮ್ಮಲ್ಲಿ ಮೂಡುವುದಿದ್ದರೆ, ಅದು ಏಕಾಂತದ ಸಮಯದಲ್ಲಿ ಮನಸಿಗೆ ಹಿತ ಕಂಡ ಸಾಲುಗಳನ್ನು ಇಚ್ಛೆಪಟ್ಟ ಲಯದಲ್ಲಿ ಓದಿಕೊಳ್ಳುವುದರಿಂದ ಸಾಧ್ಯ. ಅಂಥ ಓದಿಗೆ ಒದಗುವ ಬೇಂದ್ರೆ ಕಾವ್ಯ ತೋಟದ ಅಸಂಖ್ಯ ಸಾಲುಗಳಿವೆ. ಪ್ರಾಯಃ, ’ಪಾತರಗಿತ್ತೀ ಪಕ್ಕಾ, ನೋಡೀದೇನಽ ಅಕ್ಕಾ.. ’ ಎನ್ನುವ ಪದ್ಯ ನೆನಪಿದ್ದರೂ ಅದು ಬೇಂದ್ರೆಯವರದೇ ಎನ್ನುವ ವಿಚಾರ ಸ್ಮೃತಿಯಿಂದ ಮಾಸಿದೆ. ಮಾನವ ಚಿಂತನೆಯ ಉನ್ನತಿಯನ್ನು ತಲುಪಿದ ಜೀವ, ಮಕ್ಕಳೆಂಬ ನೆಲದ ಜೀವಿಗಳ ಆನಂದಕ್ಕಾಗಿ ಕೂಡ ಬರೆಯುವುದು ಒಂದು ಅಚ್ಚರಿ, ಅದು ಆ ಕಾಲದ ಎಚ್ಚರವೂ ಆಗಿತ್ತು ಎನ್ನಿಸುತ್ತದೆ, ಯಾಕೆಂದರೆ ಇದಕ್ಕೆ ಕುವೆಂಪು, ಕಾರಂತರಂಥವರೂ ಹೊರತಲ್ಲ. ಆ ಪದ್ಯಕ್ಕೆ ತನ್ನದೆಂದು ಗುರುತಿಸಿಕೊಳ್ಳುವ ಲಯವಿದೆ, ಮಕ್ಕಳ ಮನಸಿನಂಥ ಕೌತುಕವಿದೆ. ಓದುಗನ ಮಗುತನವನ್ನು ಅದರಿಂದಲೇ ತಟ್ಟುವ ಅದೇನೋ ಅದರಲ್ಲಿದೆ. ’ಬೀದಿನಾಯಿ ರಾಧಿಗೆ, ಹೊಟ್ಟೆ ತುಂಬ ಮೊಲೆಗಳು..’- ಓದುವ ಕ್ಷಣದಲ್ಲಿ ’ಅರೆ!’ ಅನ್ನಿಸುವ ಅಚ್ಚರಿಯನ್ನು, ಕಿರು ನಗೆಯನ್ನು ತುಂಬುವ ಸಾಲುಗಳು ಅವು. ನೆತ್ತಿಯ ಪ್ರಜ್ಞೆಯ ಆದರೆ ನೆಲದ ಕಣ್ಣಿನ ಕಬ್ಬಿಗನ ಮಿತಿಗೆ ಮಾತ್ರ ನಿಲುಕುವ ಹದ ಇದು.

  ಒಂದು ಕಾವ್ಯವನ್ನು ಅಡೆ ತಡೆಯಿರದೆ ನಿರಾಳವಾಗಿ ಓದುವಷ್ಟು ತೆರೆಮನದ ರಹದಾರಿಯನ್ನು ವಿಮರ್ಶೆಯು ಯಾವುದೇ ಕಾವ್ಯದ ಕುರಿತು ನಿರ್ಮಿಸಿಕೊಡುತ್ತದೆ ಎಂದು ನಂಬಲಾಗದು. ಕಾವ್ಯ ಮತ್ತು ಅದರ ಓದುಗನ ಮಧ್ಯೆ ವಿಮರ್ಶೆಯು ಸೇತುವೆಯಾಗುವ ಸಾಧ್ಯತೆಗಳಿದ್ದಾಗಲೂ ಅದಿಲ್ಲದಿರುವ ಓದೇ ಹೆಚ್ಚು ಮೌಲಿಕವಾದುದು ಮತ್ತು ಅರ್ಥವತ್ತಾದುದು. ತಮ್ಮ ಎಪ್ಪತ್ತೆರಡನೆಯ ಹುಟ್ಟು ಹಬ್ಬದ ಹೊತ್ತಿಗೆ ಆಯ್ದ ಎಪ್ಪತ್ತೆರಡು ಕವನಗಳ ಸಂಗ್ರಹ ‘ಬಾ ಹತ್ತರ’ ಕ್ಕೆ ತಾವೇ ಮುನ್ನುಡಿ ಬರೆಯುತ್ತ ಬೇಂದ್ರೆ ಹೀಗೆನ್ನುತ್ತಾರೆ- ’ಕೇವಲ ಬುದ್ಧಿ ಭಾವಗಳಿಂದ ನಿರ್ವಾಹವನ್ನು ಮಾಡದೆ, ವಿಮರ್ಶಕನೂ ಪ್ರಜ್ಞೆ ಪ್ರತಿಭೆಗಳಿಂದ ದೃಷ್ಟಿಕೋನಗಳನ್ನು ಹಿಗ್ಗಿಸಬಲ್ಲ. ಅಂಥವರಿಗೆ ನನ್ನ ಸಂತತ ವಂದನೆಗಳು’. ವಿಮರ್ಶೆಯು ಕಾವ್ಯದ ಮೂರ್ತಿಯನ್ನು ಭಂಜಿಸುವಂಥದಾಗಿರದೆ, ಅದರ ಒತ್ತಾಸೆಯಾಗಿ, ಚಾಚುಗೈಯಾಗಿ ಸಹಕರಿಸಬೇಕೆಂಬ ಅವರ ಧ್ವನಿಯೇ, ಕಾವ್ಯದ ಕುರಿತ ಅವರ ನಿಲುವನ್ನು ಹೇಳುವಂತಿದೆ.

  ವಿರಹದ ಉರಿಯ ಕವಿತೆ ’ಓ ನಾರಾಯಣಾ!’ ದ ಸಾಲುಗಳಿವು..
  ಹಂಬಲಿಸಿ ಹಲುಬಿ ಗಳಹುವೆನು ಪಂಡಿತವಕ್ಕಿ/ ಒಮ್ಮೆ ಮುದ್ದಿಡು ಮಾಡು ಮೂಕಳನ್ನು. / ಗೊಂಬೆಯಂದದಿ ನಿಲ್ಲಿಸುವ ಹಾಗೆ ಕೊಳಲೂದಿ/ ಅಂಬೆಗರೆಯುವ ಮೂಕ ಆಕಳನ್ನು.
  ….ಮುಡಿ ನಿನ್ನ ಅಡಿಗಿಟ್ಟು ನಡುಬೆಂಕಿ ಸೇರುವೆನು/ಮಾಸತಿಯ ಹಾಗೆನ್ನ ದಿವ್ಯ ಚಿತೆಯೇ.

  ಇಲ್ಲೆಲ್ಲ ತನ್ನನ್ನು ಸುಟ್ಟುಕೊಳ್ಳುವುದಕ್ಕೂ ಸಿದ್ಧವಾದ ಹೆಣ್ಣಿನ ವಿರಹವಿದೆ. ಭಕ್ತಿಯೇ ಅದಿರಬಹುದು, ಹಿಂಸೆಯಾಗದಂತೆ ಅರೆ ಕ್ಷಣದಲ್ಲಿ ಸುಟ್ಟು ಮುಗಿದುಬಿಡುವ ಧಾವಂತ, ಆ ಅರ್ಪಣೆ ಕವಿತೆಯ ಮೂಲ ಒಳಗು. ವಾಚನಕ್ಕೆ ಮುಖ್ಯವಾಗುವುದು ಇಲ್ಲಿ ಆ ಭಾವಕ್ಕೆ ಸಾಥ್ ಕೊಡುವ ಪದವಿನ್ಯಾಸ, ವಿಳಂಬವೆನ್ನಿಸದ ಅದರ ಓಟ, ಅರ್ಥ ದಕ್ಷತೆ ಮತ್ತು ಲಹರಿಯಂತೆಯೇ ಹರಿವ ಲಯ. ಬೇಂದ್ರೆಯವರ ಬಹುತೇಕ ಕವಿತೆಗಳು ಧ್ವನಿಮೂಲವಾಗಿರುವುದಕ್ಕೇನೆಯೆ ಇಂದಿನ ಸಾಹಿತ್ಯ ವಾತಾವರಣದಲ್ಲಿ ಅವರ ಕಾವ್ಯಗಳ ಓದು ಹೆಚ್ಚು ಸ್ವಾಗತಾರ್ಹವಾಗಿದೆ. ನಮ್ಮ ನಮ್ಮಷ್ಟಕ್ಕೆ ಕಾವ್ಯ ಓದಲು ಬಯಸುವ ಎಲ್ಲ ಆರೋಗ್ಯವಂತ ಚಿಂತನೆಗಳಿಗೆ ಇಲ್ಲಿ ಸಮೃದ್ಧ ಮೇವಿದೆ.

  ಮೇರು ಕವಿ ಕಾಲಿದಾಸನ ಮೇಘದೂತವನ್ನು ಕನ್ನಡದ ಗಂಧದಲ್ಲಿ ಮರುನಿರ್ಮಿಸಿದ್ದು ಪ್ರತಿಭೆಯ ದೊಡ್ಡ ಸಾಧನೆ. ಮೂಲವಿರದೆಯೂ ತನ್ನ ಸ್ವತಂತ್ರ ಓದನ್ನು ಹೊಂದಿರುವ ಅಪೂರ್ವ ನಿರ್ಮಿತಿ ಇದು. ಅಚ್ಚರಿಯಾಗುವ ಸಂಗತಿಯೆಂದರೆ ಕನ್ನಡಕ್ಕೆ ಹೊಂದುವಂತೆ ಅದನ್ನು ಬರೆಯುತ್ತಲೂ, ಅರ್ಥ ಮತ್ತು ಛಂದದ ಸಾಂಗತ್ಯವನ್ನು ಕಾಳಿದಾಸನ ಶ್ಲೋಕಗಳಿಗೆ ಸಮಾನಾಂತರವಾಗಿ ಹೊಂದಿಸಿದ್ದು. ಆಯಾ ಶ್ಲೋಕದ ಅರ್ಥವು ಅದಕ್ಕೆ ಸಂಬಂಧಪಟ್ಟ ಭಾವಾನುವಾದದ ಪದ್ಯದ ಮಿತಿಯಲ್ಲಿಯೇ ಪುನರ್ಭಾವಗೊಂಡಿದೆ, ತನ್ನ ಆವಾರವನ್ನು ಬಿಟ್ಟು ಹೊರಗೆ ಹರಿದು ಅಸ್ತವ್ಯಸ್ತವಾಗಿಲ್ಲ. ಕಾಳಿದಾಸ ಮತ್ತು ಬೇಂದ್ರೆಯನ್ನು ಒಟ್ಟಿಗೆ ಇಟ್ಟು ನೋಡಿದಾಗ ಇದು ಹೆಚ್ಚು ಸ್ಫುಟವಾಗುತ್ತದೆ. ಕನ್ನಡವನ್ನು ಅಷ್ಟು ಸುಭದ್ರವಾಗಿ ಬಳಸುವ ಶೈಲಿಯೇ ನಮ್ಮ ತಲೆಮಾರಿಗೆ ಮರೆತಿದೆ, ಕನ್ನಡವು ಸಂಸ್ಕೃತದಷ್ಟು ಸಾಂದ್ರತೆಯನ್ನು ಒಳಗೊಳ್ಳದು ಎನ್ನುವ ವಾದಕ್ಕೆ ಬೇಂದ್ರೆ ಉತ್ತರವಾಗುತ್ತಾರೆ.

  ತಾನು ಉಂಡ ಎದೆಯೊಲುಮೆ ತಾನು ಸೊಗವಟ್ಟು ಪಡೆದ ಹೆಣ್ಣು/ ತಾನು ಕಂಡ ಋತುಮಾನ ತನ್ನ ಬಾಗಿಸಿದ ಚೆಲುವು ಕಣ್ಣು// ಬಂದ ಬಂದ ನದಿ ಬೆಟ್ಟ ಪಟ್ಟಣದ ರಮ್ಯ ಛಾಯೆಯಿಂದ/ ಮೋಡದೊಂದು ನೆವ ಮಾಡಿ ಹಾಡಿದನು ಯಕ್ಷ ಮಾಯೆಯಿಂದ.

  ಇದು ಒಂದು ಉದಾಹರಣೆಯಷ್ಟೆ ಅವರ ಪದ ಸಾಮರ್ಥ್ಯ ಮತ್ತು ಸಂರಚನೆಗೆ. ಪದಗಳ ಬಳಕೆಯ ಬಗ್ಗೆ ಜತನವಾಗಿರುವಂತೆ ಹೇಳಿಕೊಡುವ ಕಾವ್ಯಗಳನ್ನು, ಅಂಥ ಸಾಹಿತ್ಯದ ಓದನ್ನು, ಮರೆತೆವಾದರೆ ಅಷ್ಟರಮಟ್ಟಿಗೆ ಭಾಷೆಯ ಸಾಧ್ಯತೆಯನ್ನು ಮಂಕು ಮಾಡಿಕೊಂಡಂತೆ. ಪದಾಡಂಬರವಾಗುತ್ತಿರುವ ಹಲವು ಸಾಹಿತ್ಯಗಣ್ಯರ ಜ್ಞಾನಪೀಠದ ವಾಕ್ಯಗಳನ್ನು ಓದುವಾಗ ಈ ಮಾತು ಅರ್ಥವಾದೀತು. ಬೇಂದ್ರೆ ಬರಿಯ ಕಾವ್ಯವನ್ನಲ್ಲ, ಭಾಷೆಯನ್ನೂ ಕಟ್ಟಿದರು.

  ದಾರಿಗದಾರೋ, ಕಲ್ಲಾಗಿದ್ದೆನೇನೋ, ಬೆಕ್ಕು ಹಾರುತಿದೆ ನೋಡಿದಿರಾ.. ಎಷ್ಟೆಲ್ಲ ಕವಿತೆಗಳು ದಿನ ದಿನಕ್ಕೂ ಹೊಸ ಓದಾಗುವಂತಿವೆ. ನಮ್ಮೊಳಗಿನ ಕಾವ್ಯಾನಂದಕ್ಕಾಗಿ ಬೇಂದ್ರೆ ನಮ್ಮೋದಿಗೆ ಒದಗಬೇಕಿದೆ. ಬರಿಯ ಚಿಂತನೆಯನ್ನು ಹೇಳುವುದಕ್ಕೆ ಗದ್ಯವಿದೆ, ಪದ್ಯವೇ ಯಾಕೆ ತನ್ನ ಅಂತರಂಗಕ್ಕೆ ಅನಿವಾರ್ಯ ಎನ್ನುವುದರ ಅರಿವು ಹುಟ್ಟುವುದಕ್ಕೆ ಕಾವ್ಯಗಳನ್ನು ವಾಚಿಸಬೇಕು, ಅದೂ ಬೇಂದ್ರೆಯಂಥ ಅನುಭಾವದ ಕವಿಯ ಕಾವ್ಯಗಳನ್ನು. ನಾಕುತಂತಿ ಕೃತಿಯ ಎತ್ತರ ಸಾಮಾನ್ಯ ಮನಸಿಗೆ ನಿಲುಕುವಂತಿಲ್ಲದಿರಬಹುದು, ಆದರೂ ಅದರ ಗೇಯತೆಯಿಂದಾಗಿ, ಗಾಯನ ಸಾಧ್ಯತೆಯಿಂದಾಗಿ, ಕನ್ನಡ ನಾಡನ್ನು ವ್ಯಾಪಿಸಿದೆ. ಕಾವ್ಯಗಳ ಕುರಿತಾಗಿ ಸೆಳೆತ ಹುಟ್ಟಿಸುವ ಓದು ಸಾಹಿತ್ಯಕ ಅಗತ್ಯ ಮಾತ್ರವಲ್ಲ ಸಾಂಸ್ಕೃತಿಕ ಅಗತ್ಯ ಕೂಡ ಹೌದು. ಆ ಹಿನ್ನೆಲೆಯಲ್ಲಿ ಬೇಂದ್ರೆ ಕಾವ್ಯದ ಓದು ಪ್ರಸ್ತುತವಾದುದು.

  ಪ್ರತಿಕ್ರಿಯಿಸಿ :