• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ವಿಶೇಷ ಲೇಖನಗಳು

    ಯುಗಪುರುಷರು ತೋರಿದ ಮಾರ್ಗ: ನಡೆಯೋಣ ನಾವೀಗ

    September 17th, 2008.


    - ಚಕ್ರವರ್ತಿ ಸೂಲಿಬೆಲೆ,

    ಅವತ್ತು ಅಮೇರಿಕನ್ನರ ಪಾಲಿಗೆ ಅಚ್ಚರಿಯ ದಿನ. ಅವರ ಬೀದಿಗಳಲ್ಲಿ ಕಾವಿಧಾರಿಯಾದ ’ಕಪ್ಪುವ್ಯಕ್ತಿ’ ಯನ್ನು ಕಂಡು ಹುಬ್ಬೇರಿಸಿದರು. ಆ ವ್ಯಕ್ತಿ ಮನೆಯ ಮುಂದೆ ನಿಂತು ಭಿಕ್ಷೆ ಬೇಡುತ್ತಿದ್ದಾನೆ. ಒಂದಷ್ಟು ಜನರಿಗೆ ಅಸಹ್ಯವೆನ್ನಿಸಿತು. ಮೈಕೈ ಗಟ್ಟಿಯಾಗಿರುವ ವ್ಯಕ್ತಿ ಭಿಕ್ಷೆ ಬೇಡುವುದೆಂದರೇನು? ಮನೆಯೆದುರಿಗೆ ಬಂದು ಅಡಿಯಿಂದ ಮುಡಿಯವರೆಗೂ ನೋಡಿ ಧಡಾರನೆ ಬಾಗಿಲು ಬಡಿದರು. ನಾಲ್ಕಾರು ಮನೆಗಳನ್ನು ಅಲೆದಾಡಿದ ಸನ್ಯಾಸಿಗೆ .ಇದು ಭಾರತವಲ್ಲ. ಎಂಬುದು ಗೊತ್ತಾಯ್ತು. ಅಷ್ಟರಲ್ಲಿ ಬಂಗಲೆಯೊಂದರಿಂದ ಬಂದ ಹೆಣ್ಣುಮಗಳು ಈ ಸನ್ಯಾಸಿಯನ್ನು ಮನೆಯೊಳಕ್ಕೆ ಕರೆದೊಯ್ದಳು. ಅವರ ಪಾಂಡಿತ್ಯಕ್ಕೆ ತಲೆದೂಗಿದಳು. ತನ್ನ ಪರಿಚಯದ ಹಾರ್ವರ್ಡ್ ಯೂನಿವರ್ಸಿಟಿಯ ಪ್ರೆಫೆಸರ್-ರೈಟ್ಸ್‌ನನ್ನು ಮನೆಗೆ ಕರೆದಳು. ಆತ ಈ ಸನ್ಯಾಸಿಯನ್ನು ಪರೀಕ್ಷಾ ದೃಷ್ಟಿಯಿಂದಲೇ ಮಾತನಾಡಿಸಿದ. ಮಾತಾಡುತ್ತಾ ಆಡುತ್ತಾ ತಾನೇ ಕುಬ್ಜನಾಗಿ ಬಿಟ್ಟ. ಭಾರತದಿಂದ ಬಂದ ಸನ್ಯಾಸಿಯ ಪ್ರಖರತೆ ಅವನಿಗೆ ಅರಿವಾಯಿತು. ಆ ಸನ್ಯಾಸಿಗೆ ತಾನೇ ಪರಿಚಯ ಪತ್ರ ನೀಡಿದ. ’ಈತನನ್ನು ’ನೀನು ಯಾರು?’ ಎಂದು ಕೇಳುವುದೂ, ಸೂರ್ಯನಿಗೆ ಹೊಳೆಯಲು ಅಧಿಕಾರವೇನೆಂದು ಕೇಳುವುದೂ ಒಂದೇ’ ಎಂದು ಬರೆದ !.

    ನೋ ಡೌಟ್ !. ಅವರು ಸ್ವಾಮಿ ವಿವೇಕಾನಂದರೇ. ಪ್ರತಿ ಕ್ಷಣವೂ ಕಷ್ಟದ ಸರಮಾಲೆಗಳನ್ನೇ ಎದುರಿಸುತ್ತಾ, ಚಿಕಾಗೋ ಸರ್ವಧರ್ಮ ಸಮ್ಮೇಳನದ ವೇದಿಕೆಯ ಮೇಲೆ ನಿಂತು ಹಿಂದೂ ಧರ್ಮದ ಡಿಂಡಿಮ ಬಾರಿಸಿ ಬಂದರು. ಅವರ ಮೂರು ನಿಮಿಷದ ಭಾಷಣ, ಅಮೇರಿಕದ ಜನರಿಗೆ ಅಂಟಿದ್ದ ನೂರಾರು ರೋಗಗಳನ್ನು ಕಿತ್ತೆಸೆಯಿತು. ಅಲ್ಲಿನ ಜನತೆಗೆ ಸ್ವಾಮೀಜಿ ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗಗಳನ್ನೆಲ್ಲ ಬೋಧಿಸಿದರು. ಧ್ಯಾನಕ್ಕೆ ಅವರನ್ನು ಕೂರಿಸಿದರು. ಯಾವ ಸತ್ಯವನ್ನು ನಮ್ಮ ಋಷಿಗಳು ಕಂಡುಕೊಂಡಿದ್ದರೋ ಅದನ್ನೆಲ್ಲ ಅವರಿಗೆ ಚಾಚೂ ತಪ್ಪದೇ ವಿವರಿಸಿದರು. ಮರಳಿ ಭಾರತಕ್ಕೆ ಬಂದರು.

    ಈಗ ಇಲ್ಲಿ ಅವರ ಮತ್ತೊಂದು ಪ್ರವಾಸ ಶುರುವಾಯ್ತು. ’ಕೊಲಂಬೋ ಇಂದ ಅಲ್ಮೋರಾಕ್ಕೆ!’ ಈ ಬಾರಿ ಭಾರತೀಯರಿಗೆ ಅವರು ಅಪರಿಚಿತರಲ್ಲ. ಪ್ರತಿಯೊಬ್ಬರಿಗೂ ಸ್ವಾಮೀಜಿಯ ಬಗ್ಗೆ ಚೆನ್ನಾಗಿ ಗೊತ್ತು. ಸ್ವಾಮೀಜಿ ಕಾಲಿಟ್ಟೆಡೆಯಲ್ಲೆಲ್ಲಾ ಸಾವಿರ-ಸಾವಿರ ತರುಣರು. ಒಂದು ದಿನವೂ ಬಿಡುವಿಲ್ಲದಂತೆ ಅವರು ಮಾತನಾಡಿದರು. ಈ ಬಾರಿ ಕರ್ಮಯೋಗವಿಲ್ಲ, ಜ್ಞಾನ-ಭಕ್ತಿಯೋಗಗಳೂ ಇಲ್ಲ. ಈಗೇನಿದ್ದರೂ ಬರಿಯ ಚಾಟಿ ಏಟುಗಳು. ಮಲಗಿದ್ದ ಆತ್ಮವನ್ನು ಬಡಿದೆಬ್ಬಿಸುವಂತಹ ಮಾತುಗಳು. ಶಕ್ತಿಯ ಮಾತ್ರೆಗಳು!

    ಬ್ರಿಟೀಷರ ದಾಸ್ಯದಲ್ಲಿ ಭಾರತೀಯತೆಯನ್ನು ಮರೆತು ಹೋದ ಜನರಿಗೆ ಅವರು ಹೇಳಿದ ಮಾತುಗಳು ಉದ್ಬೋಧಕ, ಕ್ರಾಂತಿಕಾರಕ. ಒಮ್ಮೆಯಂತೂ ತುಂಬಿದ ಸಭೆಯಲ್ಲಿ ಅವರು ಹೇಳಿದ್ದರು, ’ನನಗೆ ಫುಟ್‌ಬಾಲ್ ಬಹಳ ಇಷ್ಟ. ಏಕೆಂದರೆ ಅಲ್ಲಿ ಪ್ರತೀ Kick ಗೆ Counter Kick ಇರುತ್ತಲ್ಲ’ ಎಂದಿದ್ದರು. ಅವರ ಪ್ರತೀ ಭಾಷಣವೂ, ಆ ಭಾಷಣದ ಒಂದೊಂದು ಪದವೂ ಸರಿಯಾಗಿ ವಿಶ್ಲೇಷಿಸಿದರೆ ಆಗಿನ ಕಾಲಕ್ಕೇ ರಾಜದ್ರೋಹವೇ ! ಹೀಗಾಗಿಯೇ ಭಾರತದ ರಾಷ್ಟ್ರಪಿತ, ಕ್ರಾಂತಿಯ ಹರಿಕಾರ ಎಂಬುದಕ್ಕೆಲ್ಲ ಸೂಕ್ತ ವ್ಯಕ್ತಿ ಅವರೇ ! ಸದಾಕಾಲ ಸೇವೆಯ ಮಾತುಗಳನ್ನಾಡುತ್ತ, ಭಾರತವನ್ನು ಅದರ ದಾರಿದ್ರ ದಿಂದ, ಮೌಢ್ಯತನದಿಂದ, ಅಜ್ಞಾನದಿಂದ ಮೇಲೆತ್ತುವ ಚಿಂತನೆ ನೀಡಿದವರು ಸ್ವಾಮೀಜಿ.

    ಹೆಸರು-ಕೀರ್ತಿ ಯಾವುದು ಬೇಡ, ಶೋಷಿತರ ಸೇವೆಗೆ ಮುನ್ನುಗ್ಗಿ. ಬೇಕಾದವರಿಗೆ ಹೆಸರು ಕೊಡಿ, ನೀವು ಕೆಲಸ ಮಾಡಿ ಎಂದವರು ಸ್ವಾಮೀಜಿ. ಅವರ ಮಾತು ಕೇಳಿ, ಸೋದರಿ ನಿವೇದಿತಾ ಬಂಗಾಳದ ಪ್ಲೇಗ್ ಪೀಡಿತರ ಸೇವೆಗೆ ಸೆರಗು ಕಟ್ಟಿ ನಿಂತಳು. ಕಲ್ಯಾಣ್ ಮಹಾರಾಜ್ ಹೃಷಿಕೇಶದಲ್ಲಿ ಆಸ್ಪತ್ರೆ ತೆರೆದರು. ಅವರ ಚಿಂತನೆಯ ಸ್ಫೂರ್ತಿಯಿಂದ ಕೊಚ್ಚಿ ಹೋದ ಅದೆಷ್ಟೋ ಯುವ ವೈದ್ಯರು, ತಮ್ಮ ವೃತ್ತಿ ತೊರೆದು ಹಳ್ಳಿಗಳಲ್ಲಿ ಸೇವಾ ಕೈಂಕರ್ಯ ಶುರುವಿಟ್ಟರು. ಹೆಗ್ಗಡದೇವನ ಕೋಟೆಯಲ್ಲಿ ಬಾಲಸುಬ್ರಹ್ಮಣ್ಯಂ, ಸೋಲಿಗರ ತಾಣಗಳಲ್ಲಿ ಡಾ| ಸುದರ್ಶನ್, ಪಾವಗಡದಲ್ಲಿ ಸ್ವಾಮಿ ಜಪಾನಂದಜೀ, ನರೇಂದ್ರ ಫೌಂಡೇಶನ್‌ನ ರಾಜಣ್ಣ ಹೀಗೆ ಸಾಲು ಸಾಲು ಜನ ಈಗಲೂ ಸ್ವಾಮೀಜಿಯ ಮಾತುಗಳಿಗೆ ನೀರೆರೆಯುತ್ತಿದ್ದಾರೆ. ಸ್ವಾಮೀಜಿ ಖುದ್ದು ಬಂದು ಹೇಳುವ ಅಗತ್ಯವಿಲ್ಲ. ಅವರ ಮಾತುಗಳ ಶಕ್ತಿ ಇದೆಯಲ್ಲಾ, ಸಾವಿರಾರು ವರ್ಷಗಳವರೆಗೆ ಅದೇ ಕೆಲಸ ಮಾಡಬಲ್ಲದು. ಅವರ ಚಿಂತನೆಗಳಿಂದ ಪ್ರೇರೇಪಣೆ ಪಡೆದು ರಾಮಕೃಷ್ಣಾಶ್ರಮದ ಸನ್ಯಾಸಿಯೊಬ್ಬರನ್ನು ಭೇಟಿ ಮಾಡಿ ತಾನೂ ಸನ್ಯಾಸಿಯಾಗುತ್ತೇನೆಂದು ಯುವಕನೊಬ್ಬ ಹೇಳಿದ. ವಿವೇಕಾನಂದರಿಂದ ಪ್ರೇರೇಪಣೆ ಪಡೆದ ಆ ಯುವಕ ಸನ್ಯಾಸಿಯಾಗಿ ಒಂದೆಡೆ ಕೂರಲಾರ ಎಂಬುದು ಆಶ್ರಮದ ಸಾಧುಗಳಿಗೆ ಖಂಡಿತ ಗೊತ್ತಿತ್ತು. ಅವನಿಗೆ ರಾಷ್ಟ್ರ ರಕ್ಷಣೆಯ ದೀಕ್ಷೆ ನೀಡಿ ಕಳುಹಿಸಿದರು. ಮುಂದೆ ಆತ, ಈ ರಾಷ್ಟ್ರದ ರಕ್ಷಣೆಗಾಗಿ, ದೇಶ ಬಿಟ್ಟ. ಇಟಲಿ, ಜರ್ಮನಿಗಳಲ್ಲಿ ಅಲೆದಾಡಿದ. ಜಪಾನಿನಲ್ಲಿ ಸೈನ್ಯ ಕಟ್ಟಿದ. ಅಲ್ಲಿಂದ ಭಾರತದ ಮೇಲೆ ಆಕ್ರಮಣ ಮಾಡಿ ಆಂಗ್ಲರನ್ನು ಓಡಿಸುವ ಸಾಹಸ ಮಾಡಿದ ! ಸುಭಾಷ್‌ಚಂದ್ರಬೋಸ್ ಎಂಬ ಹೆಸರಿನಲ್ಲಿ ನಮ್ಮ ಮನದಲ್ಲಿ ಅಚ್ಚಳಿಯದೆ ಉಳಿದುಬಿಟ್ಟ.

    ನೋಡಿ. ವಿವೇಕಾನಂದರ ಅಧ್ಯಯನ ನಮ್ಮ ಜೀವನವನ್ನು ಯಾವ ಪರಿ ಬದಲಾಯಿಸಿ ಬಿಡುತ್ತೆ. ಆತ ನಮ್ಮನ್ನು ಕುಳಿತುಕೊಳ್ಳಲು ಬಿಡಲಾರ. ನಾವು ಸದಾ ಚಟುವಟಿಕೆಯಿಂದ, ಕ್ರಿಯಾಶೀಲತೆಯಿಂದ ಇರುವಂತೆ ಮಾಡಬಲ್ಲ ಶಕ್ತಿ ಸ್ವಾಮೀಜಿಯ ಮಾತುಗಳಲ್ಲಿದೆ. .ಅದೊಂದು ಶಕ್ತಿಯ ಗಣಿ, ಅದನ್ನು ಹೊಕ್ಕರೆ ನಾವು ಪುನೀತರಾದಂತೆ !. ಹಾಗಂತ ಕುವೆಂಪು ಹೇಳುತ್ತಾರೆ.

    ಖಂಡಿತಾ ಹೌದಪ್ಪ. ’ಧ್ಯಾನ ಮಾಡುವುದು ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಂಡಲ್ಲ, ಅದನ್ನು ಪೂರ್ತಿ ತೆರೆದು. ಆ ತೆರೆದ ಬಾಗಿಲುಗಳ ಮೂಲಕ ಹೊರಗೆ ನೋಡುತ್ತಾ ಅಲ್ಲಿರುವ ನೋವು ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ನಾಲ್ಕು ಹನಿ ಕಣ್ಣೀರು ಸುರಿಸಿದರೆ ಅದೇ ನಿಜವಾದ ಧ್ಯಾನ’ ಎಂದವರು ಅವರು. ’ಸಮಾಜದೊಂದಿಗೆ ಒಂದಾಗದೇ ಹೋದರೆ, ಸಮಾಜದ ಉದ್ಧಾರಕ್ಕಾಗಿ ಪ್ರತಿ ಸ್ಪಂದಿಸದೆ ಇದ್ದರೆ ನಮ್ಮ ಮೋಕ್ಷಕ್ಕೂ ಬೆಲೆ ಇಲ್ಲ’ ಎಂದವರು ಅವರು. ಸ್ವಾಮೀಜಿಯವರ ಚಿಂತನೆಗಳು ತಮೋಗುಣದಿಂದ ಬಾಧಿತರಾಗಿರುವ ನಮ್ಮ ಆಲಸ್ಯವನ್ನು ಕಿತ್ತೆಸೆದು, ನಮ್ಮನ್ನು ರಜೋಗುಣಕ್ಕೇರಿಸಲಿ. ಸದಾ ನಾವು ಚಟುವಟಿಕೆಯಿಂದ ಕೂಡಿರುವಂತೆ ಮಾಡಲಿ. ಏನಂತೀರಿ

    ಯುಗಪುರುಷರು ತೋರಿದ ಮಾರ್ಗ: ನಡೆಯೋಣ ನಾವೀಗ :- ಈವರೆಗೆ ೧ ಪ್ರತಿಕ್ರಿಯೆ

    1. as prabhu

      yes it is nise

    ಪ್ರತಿಕ್ರಿಯಿಸಿ :