ಸ್ನೇಹಮಿಲನ
September 17th, 2008.
ಸಹೃದಯರ ಸಮಾಗಮ ಮತ್ತು ಆಪ್ತಸಂವಾದ
ಅಘನಾಶಿನಿಯ ಮಡಿಲಲ್ಲಿ ಸ್ನೇಹಮಿಲನ, ಸಂಭ್ರಮ
’ಚೈತ್ರರಶ್ಮಿ’ ಯಂತಹ ಪುಟ್ಟ ಪತ್ರಿಕೆಯನ್ನು ಮೂರು ವರ್ಷ ನಡೆಸಿದ್ದೇ ದೊಡ್ಡ ಸಾಧನೆ ಅಂತ ನಾನಂತೂ ಅಂದುಕೊಳ್ಳುವುದಿಲ್ಲ. ಆದರೆ ನಮ್ಮ ನೂರೆಂಟು ಹಳವಂಡಗಳ ಮಧ್ಯೆಯೂ ಈ ಪುಟ್ಟ ಭಾವಯಾನದ ಹೆಸರಿನಲ್ಲಿ ಒಂದಷ್ಟು ಜನ ಸಹೃದಯರು, ಸಮಾನಾಸಕ್ತರು, ಭಾವಜೀವಿಗಳು, ಸಾಹಿತ್ಯ ಪ್ರೇಮಿಗಳು ತಮ್ಮದೇ ಒಂದು ಬಳಗ ಕಟ್ಟಿಕೊಂಡರಲ್ಲಾ ಅದು ನಿಜಕ್ಕೂ ಸಂಭ್ರಮದ ಸಂಗತಿ. ಚೈತ್ರರಶ್ಮಿ ಈ ೩ ವರ್ಷಗಳಲ್ಲಿ ಅನೇಕ ಸಮಸ್ಯೆ, ಸವಾಲುಗಳನ್ನೆದುರಿಸಿದೆ ನಿಜ. ಆದರೆ ಅವೆಲ್ಲದರ ಆಚೆ ಪತ್ರಿಕೆಗಾಗಿ ಕಾಯುವ, ಪತ್ರಿಕೆ ಸಿಕ್ಕಾಗ ಸಂಭ್ರಮಿಸುವ ಒಂದು ಸಹೃದಯಿ ಓದುಗ ವರ್ಗ ಚೈತ್ರರಶ್ಮಿಗಿದೆ ಅನ್ನೋದೆ ನಮ್ಮೆಲ್ಲ ಪ್ರಯತ್ನಗಳ ಸಾರ್ಥಕತೆ. ಚೈತ್ರರಶ್ಮಿ ಬಳಗದ ನಮ್ಮೆಲ್ಲ ಮಿತ್ರರ ನಡುವಿನ ಅಕ್ಕರೆ, ಆತ್ಮೀಯತೆಗಳನ್ನು ಇನ್ನಷ್ಟು ಸದೃಢಗೊಳಿಸುವ, ಸಮ್ಮಿಲನಗೊಳಿಸುವ ಪ್ರಯತ್ನವೇ ’ಸ್ನೇಹಮಿಲನ’. ಆದರೆ ’ಸ್ನೇಹಮಿಲನ’ ವೆಂದರೆ ನಾಲ್ಕಾರು ಮಿತ್ರರು ಸೇರುವ ಸ್ನೇಹಕೂಟವಷ್ಟೇ ಅಲ್ಲ ಅಥವಾ ಚೈತ್ರರಶ್ಮಿಯ ಕುರಿತಾದ ಕೇವಲ ಒಂದಷ್ಟು ಮಾತುಕತೆಯಲ್ಲ. ಚೈತ್ರರಶ್ಮಿಯ ಪ್ರಮುಖ ಚಿಂತನೆಗಳಾದ ಸಾಹಿತ್ಯ, ಸೃಜನಶೀಲತೆ, ದೇಶಭಕ್ತಿಯು ಸೇರಿದಂತೆ ಪ್ರಸ್ತುತ ಸಾಮಾಜಿಕ, ಸಾಂಸ್ಕೃತಿಕ ವಿದ್ಯಮಾನಗ ಆತಂಕಗಳ, ಸಂಭ್ರಮಗಳ, ಸವಾಲುಗಳ ಚಿಂತನ – ಮಂಥನ. ಚೈತ್ರರಶ್ಮಿಯ ಉತ್ತರಕನ್ನಡ ಬಳಗ ಆಯೋಜಿಸುತ್ತಿರುವ ಈ ಮೊದಲ ’ಸ್ನೇಹಮಿಲನ’ ಮುಂದಿನ ದಿನಗಳಲ್ಲಿ ಬಳಗದ ಇತರೆಡೆಯಲ್ಲೂ ಆಯೋಜನೆಗೊಂಡು ಒಂದು ಆರೋಗ್ಯಕರ ಚರ್ಚೆಗೆ ನಾಂದಿ ಹಾಡಿ ಆ ಮೂಲಕ ಸೃಜನಶೀಲರೆಲ್ಲರ ಚಿಂತನೆಗಳಿಗೆ ಮೆರುಗು ತುಂಬಲಿ ಎನ್ನುವುದು ಚೈತ್ರರಶ್ಮಿಯ ಆಶಯ.
’ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ’ ಎಂಬ ಮಾತಿದೆ. ಚೈತ್ರರಶ್ಮಿಯೆಂಬ ಭಾವಯಾನದ ಸಹವಾಸಕ್ಕೆ ಬಿದ್ದ ಒಂದಷ್ಟು ಸಜ್ಜನ ಮಿತ್ರರು ಆ ಸಂಭ್ರಮದ ಸ್ನೇಹಮಿಲನಕ್ಕೆ ನಾಂದಿ ಹಾಡಿದ್ದಾರೆ. ಅವರೆಲ್ಲರೊಂದಿಗೆ ಅಕ್ಕರೆಯ ಆತ್ಮೀಯತೆಯ ಸಂವಾದದ ಸವಿಜೇನು ಸವಿಯಲು ನಾನು ಹೋಗುತ್ತಿದ್ದೇನೆ. ನವೆಂಬರ್ ೪ ರಂದು ಶಿರಸಿಯ ಟಿ.ಎಸ್.ಎಸ್. ಹಾಸ್ಟೆಲ್ ಸಭಾಂಗಣದಲ್ಲಿ ಆ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಲ ನೀವೂ ಅಲ್ಲಿರುತ್ತೀರಿ ಎಂಬ ನಂಬಿಕೆ ಹಾರೈಕೆ ನನ್ನದು.
October 24th, 2011 at 9:43 am
ನಿಮ್ಮ ವೆಬ್ ಸೈಟ್ ನೋಡಿದೆ. ಪತ್ರ ರಶ್ಮಿ, ಕಥಾ ರಶ್ಮಿ ಹೀಗೆ ಹಲ ವಿಭಾಗ ನೋಡಿ ಖುಷಿ ಆಯಿತು. ಆದರೆ ಸೆಪ್ಟೆಂಬರ್ ೧೫, ೨೦೦೮ರ ನಂತರ ಏನಾಯಿತು? ಯಾವ ಪೋಸ್ಟುಗಳೂ ಇಲ್ಲ.. ನವೀನ ಬರಹಗಳೊಂದಿಗೆ ಇದು ಇನ್ನಷ್ಟು ಸುಂದರವಾಗಬಹುದೆಂಬ ಅನಿಸಿಕೆಯೊಂದಿಗೆ,
ನಿಮ್ಮ ವಿಶ್ವಾಸಿ, ಪ್ರಶಸ್ತಿ