ಬದುಕು ಬದಲಿಸಿದ ಪುಸ್ತಕಗಳು
September 16th, 2008.
-ಪ್ರಿಯಾ.ಎಂ. ಭಟ್, ಕುಮಟಾ
ಮನಸ ಬಾಗಿಲ ತಟ್ಟಿದ. ಹೃದಯ ಆರ್ದೃಗೊಂಡ ಆ ಕ್ಷಣಗಳನ್ನು ಹೇಳಿಕೊಳ್ಳಲು ಈ ಹೊತ್ತು ಕೈಯಲ್ಲಿ ಪೆನ್ನು ಹಿಡಿದಿರುವೆನೆಂದರೆ ಅದೇ ಕ್ಷಣಗಳಿಗೆ, ಅದೇ ಸ್ಫೂರ್ತಿಗಳಿಗೆ ಮತ್ತೊಮ್ಮೆ ನಮಿಸುತ್ತೇನೆ. ಅದೇ ತಾನೇ ಎಸ್.ಎಸ್.ಎಲ್.ಸಿ ಮುಗಿಸಿ ಮನೆಯಲ್ಲಿ ಕುಳಿತ ದಿನಗಳು. ಇಲ್ಲದ್ದನ್ನ ಹುಡುಕುವುದೇ ಮನಸ್ಸಿನ ಕೆಲಸ. ಎಷ್ಟಿದ್ದರೂ ತೃಪ್ತಿಯಿಲ್ಲದ ಮನುಷ್ಯ….. ಅಂತಹ ನನ್ನೊಳಗಿನ ಮನುಷ್ಯನಿಗೆ ಬದುಕನ್ನೆ ಬಂದಂತೆ ಸ್ವೀಕರಿಸಲು ಕಲಿಸಿದ್ದು ಆ ಪುಸ್ತಕಗಳು. ಸ್ನೇಹಿತರಿಲ್ಲದ ಹೆಚ್ಚಿನ ವಿದ್ಯಾಭ್ಯಾಸವಿಲ್ಲದ ಆ ದಿನಗಳಲ್ಲಿಪುಸ್ತಕಗಳೇ ನನ್ನ ಸಂಗಾತಿಯಾಗಿದ್ದವು. ಮಹಾಭಾರತ ಹಾಗೂ ರಾಮಾಯಾಣದ ಓದು ನನ್ನ ತುಂಬಾ ಯೋಚಿಸುವಂತೆ ಪ್ರೇರೇಪಿಸಿತು. ಭಾರತವಂತೂ ಅದೊಂದು ಸಮುದ್ರ. ಆಳಕ್ಕೆ ಹೋದಷ್ಟು ಅಪ್ಪಟ ಮುತ್ತು ರತ್ನಗಳು. ಅಂತಹ ಅಪರೂಪದ ಅಗಾಧ ವಿಶ್ವಕೋಶಕ್ಕೆ ಬದುಕನ್ನೇ ಬದಲಿಸುವ ಶಕ್ತಿಯಿದೆಯಲ್ಲವೆ? ಭಗವದ್ಗೀತೆಯ ಸಾರ ಮನುಷ್ಯ ಧರ್ಮವಲ್ಲವೆ! ನಿಜಕ್ಕೂ ಮಹಾಭಾರತವೆಂಬ ಪುಸ್ತಕ ನನ್ನ ಬದುಕಲ್ಲಿ, ಯೋಚನೆಯಲ್ಲಿ ತುಂಬಾ ಬದಲಾವಣೆ ತಂದಿತು. ಅಲ್ಲಿಂದ ನಂತರ ಪುಸ್ತಕಗಳ ಓದುವುದು ಜೀವನದ ಅವಿಭಾಜ್ಯ ಅಂಗವೇ ಆಯಿತೆಂದರೆ ತಪ್ಪಲ್ಲ. ಎಸ್.ಎಲ್ ಭೈರಪ್ಪ, ಕಾರಂತರ ಕಾದಂಬರಿಗಳು, ಯಂಡಮೂರಿ ವೀರೇಂದ್ರನಾಥರ ಪುಸ್ತಕ ಕಾದಂಬರಿಗಳು ನನ್ನ ಸಾಹಿತ್ಯ ಪ್ರೀತಿಯನ್ನು ಹೆಚ್ಚಿಸಿದವು. ಓದಿದ ಪುಸ್ತಕಗಳಿಗೆ ಲೆಕ್ಕವಿಲ್ಲದಿದ್ದರೂ ಆ ಓದು ಭವಿಷ್ಯದಲ್ಲಿ ನನಗೊಂದು ವ್ಯಕ್ತಿತ್ವ ತಂದುಕೊಟ್ಟಿದೆಯೆಂದರೆ ಅತಿಶಯೋಕ್ತಿಯಲ್ಲ. ಒಬ್ಬ ಮನುಷ್ಯ ಒಂದು ಘಟನೆ ನಮ್ಮೊಳಗಿನ ನಮ್ಮ ತೆರೆದು ತೋರಿಸುವುದಕ್ಕಿಂತ ಸಾವಿರ ಪಾಲು ನಮ್ಮನ್ನು ನಾವು ನೋಡಿಕೊಳ್ಳುವುದು ಪುಸ್ತಕಗಳಿಂದ ಸಾಧ್ಯವೇನೋ. ಪ್ರತೀ ಪಾತ್ರದೊಂದಿಗೂ ಎಲ್ಲೋ ಒಂದು ಲಿಂಕ್ ನಮ್ಮೊಂದಿಗೆ ತಳಕು ಹಾಕಿಕೊಳ್ಳುತ್ತದೆ.
ಆ ಕ್ಷಣದ ವಿಮರ್ಶೆ ನಮ್ಮೊಂದಿಗೆ ಆರಂಭವಾಗುತ್ತದೆ. ಅಂತಹ ಪಾತ್ರ ಕುಂತಿ, ದ್ರೌಪದಿಯಿಂದ ಹಿಡಿದು ನಮ್ಮೊಳಗಿನ ಮಂಥರೆಯವರೆಗೂ, ’ದಾಟು’ ವಿನ ಸತ್ಯಳಿಂದ ಹಿಡಿದು ಮರಣಮೃದಂಗದ ಅನುಷಾಳವರೆಗೂ ನನ್ನನ್ನು ಕಾಡಿದೆ. ಕಾದಂಬರಿಗಳು, ಪುಸ್ತಕಗಳು ಯಾವುದೇ ಆಗಿರಲಿ. ಆ ಪಾತ್ರಗಳೊಂದಿಗೆ ಕಣ್ಣೀರಾಗಿದ್ದು ಇದೆ, ಬಿಕ್ಕಳಿಸಿ ಅತ್ತಿದ್ದೂ ಇದೆ. ಅದು ಜೀವಂತ ಅನುಭವವೇ ಅನ್ನಿಸಿದಾಗ ನಾವೂ ಅವರೊಂದಿಗೆ ಮಾತನಾಡತೊಡಗಿ ಬಿಡುತ್ತೇವೆ. ಒಂದು ಸಾಮಾನ್ಯ ಕಾದಂಬರಿ ’ಸಾಯಿಸುತೆ’ಯವರ ’ಶ್ರೀರಸ್ತು ಶುಭಮಸ್ತು’ ದ ನಾಯಕಿ ನೀರಜಾ ನನ್ನೊಳಗೆ ತುಂಬಿದ ಆತ್ಮವಿಶ್ವಾಸವನ್ನು ಯಾವ ಸ್ನೇಹಿತರೂ ಕೊಡಲಾರರೇನೋ. ಅಂತಹ ಪಾತ್ರ ಸೃಷ್ಠಿಸಿದ ಎಲ್ಲ ಎಲ್ಲ ಕಲಾವಿದರಿಗೂ ನನ್ನ ನೂರೊಂದು ನಮನ.
July 5th, 2010 at 11:33 am
jeevanave ondu pustaka
July 30th, 2010 at 1:02 am
jeevanada prati ghatanegale pustaka emba kannadi