ನನ್ನ ದೃಷ್ಟಿಯಲ್ಲಿ ’ಅಳಿದ ಮೇಲೆ’ ಕಾದಂಬರಿ
September 16th, 2008.
- ಮಂಗಳಾಗೌರಿ. ಎಂ,ಕಣಿಯೂರು, ದ.ಕ
’ಅಳಿದ ಮೇಲೆ’ ಕಾದಂಬರಿಯ ಪಾತ್ರಗಳಲ್ಲಿ ಎದ್ದು ಕಾಣುವ ಅಂಶ ಜೀವನಾಸಕ್ತಿ ಅಥವಾ ಬದುಕಿನಲ್ಲಿ ಶ್ರದ್ಧೆ, ಬದುಕಿನಲ್ಲಿ ಪ್ರಾಮಾಣಿಕತೆ. ಪಾರ್ವತಿಯಾಗಲೀ, ಮೂಕಾಂಬುವಾಗಲೀ ಎಷ್ಟೇ ಕಷ್ಟ ಬಂದರೂ ಬದುಕಿನಲ್ಲಿ ಶ್ರದ್ಧೆ ಕಳಕೊಳ್ಳುವುದಿಲ್ಲ. ವಯಸ್ಸಾದರೂ ಬಾಯಿ ರುಚಿ ಎಂಬುದಿದೆಯಲ್ಲ. ಉಪ್ಪು ಮೆಣಸಿನ ರುಚಿ ಅದಕ್ಕೆ ಇನ್ನೂ ತಿಳಿಯುತ್ತದೆ ಎಂಬುದು ಅವರ ಜೀವನ ಪ್ರೀತಿಗೆ ಸಾಕ್ಷಿ.
ಕಾರಂತರ ಪ್ರತಿಭೆಯಲ್ಲಿ ಮುಖ್ಯವಾದ ಎರಡು ಧಾರೆಗಳಿವೆ. ಒಂದು ಕಾವ್ಯಾತ್ಮಕ ಮತ್ತೊಂದು ವೈಚಾರಿಕ. ’ಮರಳಿ ಮಣ್ಣಿಗೆ’ ಇತ್ಯಾದಿಗಳು ಕಾವ್ಯಾತ್ಮಕ ಧಾರೆಯ ಅತ್ಯುತ್ತಮ ಕೃತಿಗಳಾದರೆ, ವೈಚಾರಿಕ ಧಾರೆಯ ಶ್ರೇಷ್ಠ ಕೃತಿಗಳಲ್ಲಿ ’ಅಳಿದ ಮೇಲೆ’ ಯೂ ಒಂದು. ಕಾರಂತರು ಹುಡುಕ ಹೊರಟಿರುವುದು ಅಳಿದ ಮೇಲೆ ಉಳಿದುದನ್ನು. ಅದಕ್ಕೆ ಅವರು ಅಳಿದ ಮೇಲಿನಿಂದಲೇ ಆರಂಭಿಸುತ್ತಾರೆ. ಆದ್ದರಿಂದ ಕಾದಂಬರಿ ಯಶವಂತರಾಯರ ಸಾವಿನಿಂದ ಆರಂಭ. ನಿರೂಪಕನ ಕೆಲಸ ಭೂತ - ವರ್ತಮಾನಗಳನ್ನು ಬೆಸೆಯುವುದು. ವಿವಿಧ ವ್ಯಕ್ತಿಗಳು ಯಶವಂತರ ಬದುಕನ್ನು ಕಂಡ ರೀತಿಯನ್ನು ಕಾರಂತರು ನಮ್ಮ ಮುಂದಿಡುತ್ತಾರೆ. ಅಷ್ಟಕ್ಕೆ ನಿಲ್ಲದೆ, ಮುಂದೆ ಹೋಗಿ, ತಾನು ಅರಿತುದನ್ನು ವಿಮರ್ಶಿಸುತ್ತಾರೆ. ಮೊದಲನೆ ಬಗೆಯಿಂದ ನಮಗೆ ಯಶವಂತರ ಬದುಕಿನ ವಿಸ್ತಾರ ಸಿಕ್ಕರೆ, ಎರಡನೆ ರೀತಿಯಿಂದ ಈ ವಿಸ್ತಾರ ಸಂಕುಚಿತವಾಗುತ್ತದೆ ಎಂದರೆ ಲೇಖಕರ ಅರ್ಥಕ್ಕೆ ಘಟನೆಗಳ ಅರ್ಥ ಸೀಮಿತವಾಗುತ್ತದೆ. ಆದರೆ, ಗಾಢವಾಗುತ್ತದೆ. ಕಾರಂತರು ಬದುಕನ್ನು ನೋಡುವಾಗ ವಾಸ್ತವವಾಗಿ, ಸಂಪೂರ್ಣ ವಾಗಿ ಪ್ರಾಮಾಣಿಕವಾಗಿ, ವಿಮರ್ಶಕನಂತೆ ತೆರೆದ ಕಣ್ಣಿನಿಂದ ನೋಡುತ್ತಾರೆ. ಹೀಗೆ ಬದುಕನ್ನು ನೋಡುವಾಗ ಅವರನ್ನು ಬಾಧಿಸಿದ ಮುಖ್ಯ ವಿಷಯಗಳ ಮೇಲೆ ಕಾದಂಬರಿ ಯಲ್ಲೂ ಒತ್ತು ಬೀಳುತ್ತದೆ. ಈ ಕಾದಂಬರಿಯಲ್ಲಿ ಕಾರಂತರು ಯಶವಂತರಾಯರ ಮೂಲಕವಾಗಿ ಬದುಕೆಂದರೇನು? ಸಾರ್ಥಕ ಬದುಕು ಯಾವುದು? ಕಾಮ-ಸಂಬಂಧಗಳ ಸತ್ಯವೇನು? ನಮ್ಮ ನಂಬಿಕೆಗಳ ಯಥಾರ್ಥವೇನು? ಎಂಬುದನ್ನು ಅರ್ಥ ಮಾಡಿಕೊಳ್ಳ ಹೊರಟಿದ್ದಾರೆ. ಜೀವನದಲ್ಲಿ ಅನುಭವಿಸುವ ಸುಖದುಃಖಗಳಿಂದ ಮಾಗುತ್ತಾ, ನಮ್ಮ ವ್ಯಕ್ತಿತ್ವ ಯಾವ ರೀತಿ ಪಕ್ವತೆ ಪಡೆಯುತ್ತದೆ ಎಂಬುದು ಕಾದಂಬರಿಯ ವಸ್ತು. ’ಅಳಿದ ಮೇಲೆ’ ಕಾದಂಬರಿ ಜೀವನದ ಒಂದು ಪ್ರತಿಬಿಂಬವಲ್ಲ. ಬದಲಿಗೆ, ಜೀವನದಿಂದ ಹೊರಬಂದ ಮಹತ್ವಪೂರ್ಣ ದಾಖಲೆ. ಜೀವನದ ಯಾವುದೋ ಒಂದು ಕ್ಷಣದಲ್ಲಿ ಬದುಕಿನ ಸತ್ಯ ಮಾರ್ಪಾಡಾಗುತ್ತದೆ ಎಂಬುದು ಕಾರಂತರಿಗೆ ಒಪ್ಪಿಗೆ ಇಲ್ಲ. ಆದ್ದರಿಂದಲೇ, ಕಾದಂಬರಿಯಲ್ಲಿ ನಾಟಕೀಯತೆಯಾಗಲೀ, ಕಾವ್ಯಮಯತೆಯಾಗಲೀ, ಮಾಂತ್ರಿಕತೆಯಾಗಲೀ ಕಾಣ ಸಿಗುವುದಿಲ್ಲ. ಕಾದಂಬರಿಯಲ್ಲಿ ಭಾವಗೀತಾತ್ಮಕ ಅಂಶಗಳು ಕಡಿಮೆ. ಆದ್ದರಿಂದಲೇ, ಯಶವಂತರ ಹಾಗೂ ಸರಸಿಯ ಪ್ರೇಮದ ತೀವ್ರತೆ ಕಾರಂತರ ವಸ್ತುವಾಗುವುದಿಲ್ಲ. ಬದಲಿಗೆ, ಅವರ ದಾಂಪತ್ಯ ಜೀವನ ಪ್ರಾಮುಖ್ಯತೆ ಪಡೆಯುತ್ತದೆ. ನಾಜೂಕಾದ ಕುಸುರಿ ಕೆಲಸಕ್ಕೆ ಕಾರಂತರು ಪ್ರಾಮುಖ್ಯತೆ ಕೊಟ್ಟವರಲ್ಲ. ತನಗೆ ಹೇಳಬೇಕು ಅನಿಸಿದ್ದನ್ನು ಹೇಳುವುದಷ್ಟೇ ಅವರ ಕೆಲಸ.
’ಅಳಿದ ಮೇಲೆ’ ಕಾದಂಬರಿಯ ಪಾತ್ರಗಳಲ್ಲಿ ಎದ್ದು ಕಾಣುವ ಅಂಶ ಜೀವನಾಸಕ್ತಿ ಅಥವಾ ಬದುಕಿನಲ್ಲಿ ಶ್ರದ್ಧೆ, ಬದುಕಿನಲ್ಲಿ ಪ್ರಾಮಾಣಿಕತೆ. ಪಾರ್ವತಿಯಾಗಲೀ, ಮೂಕಾಂಬುವಾಗಲೀ ಎಷ್ಟೇ ಕಷ್ಟ ಬಂದರೂ ಬದುಕಿನಲ್ಲಿ ಶ್ರದ್ಧೆ ಕಳಕೊಳ್ಳುವುದಿಲ್ಲ. ವಯಸ್ಸಾದರೂ ಬಾಯಿ ರುಚಿ ಎಂಬುದಿದೆಯಲ್ಲ. ಉಪ್ಪು ಮೆಣಸಿನ ರುಚಿ ಅದಕ್ಕೆ ಇನ್ನೂ ತಿಳಿಯುತ್ತದೆ ಎಂಬುದು ಅವರ ಜೀವನ ಪ್ರೀತಿಗೆ ಸಾಕ್ಷಿ. ಬದುಕಿನ ಒಂದು ಮೂಲಭೂತ ಅಂಶವಾದ ಕಾಮವನ್ನು ಕಾರಂತರು ಆರಾಧಿಸುವುದೂ ಇಲ್ಲ, ಧಿಕ್ಕರಿಸುವುದೂ ಇಲ್ಲ, ಒಪ್ಪಿಕೊಳ್ಳುತ್ತಾರೆ. ಕಾರಂತರ ನಿಲುವಿನಂತೆ ಬಾಳ್ವೆಯ ಪ್ರಶ್ನೆಯು ಒಬ್ಬರು ಬಾಳಿ, ಇನ್ನೊಬ್ಬರು ಉತ್ತರಿಸಿ, ಮೂರನೆಯವರು ಒಪ್ಪಿ ಸಾಗುವಂತಹ ಪ್ರಶ್ನೆ ಎಂದೂ ಆಗಿರಲಾರದು. ಅನಿವಾರ್‍ಯವಾಗಿರುವ ಬಾಳಿನ ರೀತಿಯನ್ನು ಕಂಡರೆ, ಅದು ಅವರವರು ಬಾಳಿ ಬದುಕಿ, ಅನುಭವಿಸಿ, ಹೋರಾಡಿ, ಪರಿಸ್ಥಿತಿಗಳಿಗೆ ಹೊಂದಿಕೊಂಡು ಪರಿಣಾಮಗೊಳ್ಳಬೇಕಾದ ಸಮಸ್ಯೆ. ’ಅಳಿದ ಮೇಲೆ’ ಕಾದಂಬರಿಯಲ್ಲಿ ಪುಟ ತಿರುಗಿಸಿಕೊಂಡು ಹೋಗಲು ಸಾಧ್ಯವಿಲ್ಲ. ಇದರಲ್ಲಿನ ಪ್ರತಿ ಘಟನೆ ವಿವರಣೆ, ಸಂಭಾಷಣೆಯನ್ನು ಗಮನಿಸಬೇಕು. ಅಲ್ಲಿರುವ ಅನುಭವದ ಪಕ್ವತೆ ನಮ್ಮ ಓಟವನ್ನು ತಡೆದು ನಿಲ್ಲಿಸಿ ಬದುಕಿನ ಸಂಕೀರ್ಣತೆ, ವಿಸ್ತಾರತೆಯತ್ತ ಬೆಟ್ಟು ಮಾಡುತ್ತದೆ. ಹಾಗೆಂದು ಈ ಕಾದಂಬರಿ ಎಲ್ಲಾ ಓದುಗರಿಗೂ ಇಷ್ಟವಾಗಬೇಕೆಂದೇನೂ ಇಲ್ಲ. ಆದರೆ, ಉತ್ತಮ ಅಭಿರುಚಿಯ ಕಾರಂತರ ಕಾದಂಬರಿಗಳ ಓದುಗರಿಗೆ, ’ಅಳಿದ ಮೇಲೆ’ ಕಾದಂಬರಿ ಬಲು ಮೆಚ್ಚಿಗೆಯಾಗಬಹುದಾದ ಕಾದಂಬರಿ.