ಅದು ’ಬದುಕಲು ಕಲಿಸಿದ’ ಪುಸ್ತಕ
September 16th, 2008.
-ಡಾ|| ನಿವೇದಿತಾ ಹೆಗಡೆ,ಮೈಸೂರು
“ಗುಣ-ಅವಗುಣಗಳಿಂದ ಮನಕಡಲ ಮಂಥನ
ಕಡಲಾಮೆ ಕೆಳಗಿಲ್ಲ ಕಡಲ್ ತಳದಿ ನೋವ ಕಥನ”
ಎಲ್ಲ ಹದಿಹರೆಯದವರಂತೆ ನನ್ನ ಸ್ಥಿತಿಯೂ ಇದಕ್ಕೆ ಹೊರತಾಗಿರಲಿಲ್ಲ. ಹೈಸ್ಕೂಲಿನ ಆ ದಿನಗಳನ್ನು ನೆನೆಸಿಕೊಂಡರೆ ಈಗ ನಗು ಬರುತ್ತದೆ. ಅಂದು ’ಹಿಂದೆ ಗುರುವಿಲ್ಲ; ಮುಂದೆ ಗುರಿಯಿಲ್ಲ’ದ ಸ್ಥಿತಿ.
ಮೆಚ್ಚಿನ ವಿಷಯ ವಿಜ್ಞಾನವಾದ್ದರಿಂದ ಎಲ್ಲವನ್ನೂ ಪ್ರಶ್ನಿಸುವ ಗೀಳು. ಧರ್ಮದ ನಿಜವಾದ ಅರ್ಥವನ್ನೇ ಗ್ರಹಿಸಲಾರದೆ, ಅದರಲ್ಲಿ ಶ್ರದ್ಧೆಯನ್ನೇ ಕಳೆದುಕೊಂಡ ಸ್ಥಿತಿ. ಒಟ್ಟಿನಲ್ಲಿ ಧರ್ಮ, ಸಂಪ್ರದಾಯವೆಂದರೆ ಅಂಧಾನುಕರಣೆ ಎಂದು ತೀರ್ಮಾನಿಸಿದ್ದ ದಿನಗಳವು.
ಆಗ ನನ್ನ ನೆರವಿಗೆ ಬಂದದ್ದು ’ಬದುಕಲು-ಕಲಿಯಿರಿ’ ಎಂಬ ಪುಸ್ತಕ.ಅಜ್ಜನಿಂದ ಉಡುಗೊರೆಯಾಗಿ ಪಡೆದ ಈ ಪುಸ್ತಕವನ್ನು ಓದಲು ಹತ್ತಿದೆ. ರೋಮಾಂಚನವಾಯಿತು. ಬರವಣಿಗೆ ಸುಲಲಿತವಾಗಿತ್ತು, ತೀಕ್ಷ್ಣವಾಗಿತ್ತು, ನೇರ ಹೃದಯಕ್ಕೆ ಹೊಕ್ಕಿತ್ತು. ಅಂದಿನಿಂದ ಹೃದಯದಲ್ಲಿ ಉತ್ಕೃಷ್ಟ ಆದರ್ಶಗಳ ಬೀಜ ಬಿತ್ತಿದಂತಾಯಿತು, ಕ್ರಮೇಣ ಮೆದುಳಲ್ಲಿ ಹುದುಗಿದ್ದ ಸಂದೇಹಗಳೆಲ್ಲ ದೂರವಾಗುತ್ತಾ ಬಂದವು. ಗ್ರಂಥಕಾರರಾದ ’ಸ್ವಾಮಿ ಜಗದಾತ್ಮಾನಂದ’ರ ಬಗ್ಗೆ ಅಜ್ಜನ ಬಾಯಿಂದಲೇ ಕೇಳಿ ತಿಳಿದಿದ್ದನೇ ಹೊರತು ಇಷ್ಟು ವರ್ಷಗಳವರೆಗೆ ಅವರನ್ನು ಕಾಣುವ, ಕಂಡು ಮಾತನಾಡುವ ಸೌಭಾಗ್ಯ ಒದಗಿ ಬಂದಿರಲಿಲ್ಲ. ಈ ಬಾರಿ ಅಜ್ಜನ ಮನೆಗೆ ಹೋದಾಗ ಅವರನ್ನು ಭೇಟಿಯಾದೆ. ನನ್ನನ್ನು ಕಂಡಕೂಡಲೇ ಬಹಳ ಪ್ರೀತಿಯಿಂದ, ಎಷ್ಟೋ ವರ್ಷಗಳಿಂದ ಪರಿಚಯವಿದ್ದವರಂತೆ ಮಾತನಾಡಿಸಿದರು. ಅವರೆದುರು ಹಿಂದೂ ಧರ್ಮ ಹಾಗೂ ಆಧ್ಯಾತ್ಮಿಕ ವಿಚಾರವಾಗಿ ಏನೇನೋ ಪ್ರಶ್ನೆಗಳನ್ನು ಕೇಳಬೇಕೆಂದು ಮನಸ್ಸಿನಲ್ಲೇ ಕಲೆಹಾಕಿಕೊಂಡು ಹೋಗಿದ್ದೆ. ಆದರೆ ’ಮಗು ಏನಾದರು ಸಂದೇಹವಿದ್ದರೆ ಕೇಳು’ ಎಂದಾಗ ಬಾಯಿಂದ ಮಾತೇ ಹೊರಡಲಿಲ್ಲ ಏಕೆಂದರೆ ಅದಾಗಲೇ ವಾಗ್ದೇವಿ ಅವರ ಮಾತಿನ ಮೂಲಕ ಉತ್ತರಿಸಿದ್ದಳು, ನಾನು ಪ್ರಶ್ನೆ ಕೇಳುವ ಮೊದಲೇ. ಸ್ವಾಮಿ ಜಗದಾತ್ಮಾನಂದರು ಪೊನ್ನಂಪೇಟೆಯ ’ಶ್ರೀ ರಾಮಕೃಷ್ಣ ಶಾರದಾಶ್ರಮ’ ದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ನಾಡಿನ ಹಿರಿಯ ಸಂತರು. ವಯೋವೃದ್ಧರಾದರೂ ಸ್ವಲ್ಪವೂ ಉತ್ಸಾಹಗಳನ್ನು ಕಳೆದುಕೊಳ್ಳದೆ ಚಟುವಟಿಕೆಯಿಂದಿರುತ್ತಾರೆ. ಇವರ ಭಾಷಣಗಳನ್ನು ಕೇಳಲು ಸದಾ ಕಿಕ್ಕಿರಿದ ಜನಜಂಗುಳಿಯಿರುತ್ತದೆ. ’ಅಹಂ’ನ ಲವಲೇಶವೂ ಇಲ್ಲದ ’ಕರ್ಮಯೋಗಿ’ ಇವರು. ಈ ಮಹಾತ್ಮರನ್ನು ಒಮ್ಮೆ ಭೇಟಿಯಾದವರಿಗೆಲ್ಲ ಮತ್ತೆ ಮತ್ತೆ ಅವರನ್ನು ಕಾಣುವ, ಅವರ ಮಾತನ್ನು ಆಲಿಸುವ ಹಂಬಲವಾಗುತ್ತದೆ. ಇದುವರೆಗೆ ’ಬದುಕಲು ಕಲಿಯಿರಿ’ ಸುಮಾರು ೨ ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ.
ಈ ಪುಸ್ತಕವು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಎಷ್ಟೋ ವಿದ್ಯಾರ್ಥಿಗಳ ಜೀವವನ್ನುಳಿಸಿದೆ. ಸಮಾಜದಲ್ಲಿ ಅಶಕ್ತರೂ, ಆತ್ಮವಿಶ್ವಾಸವನ್ನು ಕಳೆದುಕೊಂಡ ಅದೆಷ್ಟೋ ಮಂದಿಗೆ ನವಚೇತನವನ್ನು ತುಂಬಿದೆ. ಪುಸ್ತಕವು ಯಾವುದೇ ಪ್ರಚಾರವಿಲ್ಲದೆ, ಇಷ್ಟು ಜನಪ್ರಿಯವಾಗಲು ಕಾರಣ-ಸರಳವಾದ ಭಾಷೆ, ಉದಾಹರಣೆಗಳೊಂದಿಗೆ ನಿರೂಪಣೆ, ಎಲ್ಲಕ್ಕಿಂತ ಮಿಗಿಲಾಗಿ ಕರ್ತೃವಿನ ಹೃದಯ ಸಂಪನ್ನತೆ.
ಸರ್ವರಿಗೂ ಒಳಿತಾಗಲಿ ಎಂದು ಬರೆದ ಪುಸ್ತಕವಲ್ಲವೇ ಇದು! ಸ್ವತಃ ಸ್ವಾಮಿ ವಿವೇಕಾನಂದರೇ ಹೇಳಿ ಬರೆಸಿದಂತಿದೆ.
ಜಡವೇನು? ಜೀವವೇಂ? ಚೈತನ್ಯ ನಿದ್ರಿಸಿರು |
ವೆಡೆಯಲ್ಲ ಜಡಲೋಕ ಕಲ್ಲು ಕಡ್ಡಿ ಕಸ ||
ಅಡಗಿರ್‍ವ ಚೈತನ್ಯವೆಚ್ಚರಲು ಜಂತು ಜಗ
ಜಡವೆ ಜೀವದ ವಸತಿ - ಮಂಕುತಿಮ್ಮ ||
“Energy can neither be created nor be destroyed” ಎಂಬ ವಿಜ್ಞಾನದ ಮೂಲ ತತ್ವವು ಆಧ್ಯಾತ್ಮಿಕತೆಯಲ್ಲೇ ಹುದುಗಿದೆ. ಪಾಶ್ಚಿಮಾತ್ಯದ ಅಂಧಾನುಕರಣೆಯ ಫಲವಾಗಿ ’ಜಡವಾದಕ್ಕೆ’ ಬಲಿಬೀಳುತ್ತಿರುವ ಯುವಭಾರತ ಎಚ್ಚೆತ್ತುಕೊಳ್ಳಬೇಕಾಗಿದೆ. ವೈಜ್ಞಾನಿಕ ಹಿನ್ನೆಲೆಯಲ್ಲಿ ಧರ್ಮವನ್ನು ವಿಶ್ಲೇಷಿಸಿರುವ ಈ ಪುಸ್ತಕವು ಹಿರಿಯರಿಗೂ-ಕಿರಿಯರಿಗೂ ಮಾರ್ಗದರ್ಶಿಯಾಗಿದೆ.
April 28th, 2009 at 9:31 pm
Yes.realy this book is great I have read this book more than 50 times.and my life is completely changed in to the possitive feelings.am happy and lots of thanks to swamy jagadathmananda swamiji.