• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಪತ್ರರಶ್ಮಿ

    ಮೌನ-ಮಳೆಯ ಸಾಂಗತ್ಯದಲಿ ಕಾಡುವುದು ನಿನ್ನ ನೆನಪು

    September 17th, 2008.


    ಪ್ರೀತಿಯ ಸೋನು,

    ಇವತ್ತು ಬೆಳಗಿನಿಂದಲೂ ಯಾಕೋ ಮಳೆ ಬಿಟ್ಟು ಬಿಡದೆ ಸುರಿತಾ ಇದೆ. ಜೊತೆಗೆ ನಿನ್ನ ನೆನಪು ಕೂಡ. ನಿಜವಾಗಲೂ ಸೋನು ಬದುಕಿನಲ್ಲಿ ನಿನ್ನೊಂದಿಗೆ ಕಳೆದ ಕ್ಷಣಗಳಿವೆಯಲ್ಲ ಅವೆಲ್ಲ ಯಾವತ್ತಿಗೂ ಮರೆಯಲಾಗದ ಸವಿಸವಿ ನೆನಪು. ಬದುಕು ತನ್ನ ಬಯಲಿನಲ್ಲಿ ನನ್ನ ನೋವು ತುಂಬಿದ ಮನಸ್ಸಿನ ಜೊತೆ ಒಂಟಿಯಾಗಿಸಿದರೂ ಒಂದು ವಿಷಯದ ಮಟ್ಟಿಗೆ ಐಶ್ವರ್ಯವಂತಳನ್ನಾಗಿಸಿದೆ. ಅದು ನಿಷ್ಕಲ್ಮದ ಸ್ನೇಹದಲ್ಲಿ.

    ಎಲ್ಲವೂ ಇದ್ದೂ ಇಲ್ಲದಂತೆ ಬೆಳೆದ ಬದುಕಿನ ತುಂಬ ಜೀವಂತಿಕೆ ತುಂಬಿದ್ದು ಒಂದು ಮಳೆಗಾಲ ಇನ್ನೊಂದು ನಿನ್ನ ಸ್ನೇಹ.

    ಮನೆಯ ಜಗುಲಿಯಲ್ಲಿ ಕುಳಿತು ಹನಿಹನಿಯಾಗಿ ಕೊಳೆ ತೊಳೆಯುವ ನೀರಾಗಿ ಧರೆಗಿಳಿವ ಮಳೆಯನ್ನು ನೋಡುವುದರಲ್ಲೆ, ಅದರೊಳಗಿನ ಹಿತ ತರುವ ಸವಿಯನ್ನ ಮೌನವಾಗಿ ಸವಿಯುವುದರಲ್ಲೆ ನಾನು ಬದುಕಿನ ನೋವ ಕ್ಷಣ ಕಳೆದವಳು. ಗಿಡದ ಮೇಲೆ ಬಿದ್ದು ತೊಟ್ಟಿಕ್ಕುವ ಹನಿ, ಹುಲ್ಲಿನ ಮೇಲೆಲ್ಲ ಹರಡಿ ವಜ್ರದಂತೆ ಮಿನುಗುವ ಹನಿ, ಹೂವ ಒಡಲೊಳಗೆ ಹುದುಗಿ ಹೋಗುವ ತುಂಟ ಹನಿ, ಸ್ವಾತಿ ಮುತ್ತಾಗುವ ಕನಸು ಹೊತ್ತ ಹನಿ ಇವೆಲ್ಲವೂ ನನ್ನ ಪಾಲಿಗೆ ಒಡನಾಡಿಗಳಂತೆ. ಇಂಥ ಮೂಕ ಮನಸ್ಸಿನ ನನ್ನ ಮೌನ ಸಾಂಗತ್ಯಕ್ಕೆ ಸಾಥಿಯಂತೆ ಸಾಗಿ ಬಂದವಳು ನೀನು.

    ಸೋನು ! ಸಣ್ಣಗೆ ಜಿನುಗುವ ಮಳೆಯಲ್ಲಿ ಕೊಂಚ ದೂರದ ಶರಧಿಯಲ್ಲಿ ಕಾಲು ತೋಯಿಸಿ ಮುತ್ತಿಕ್ಕುವ ತೆರೆಗಳ ಜೊತೆ, ಜಿನುಗುವ ಮಳೆಯಲ್ಲಿ ನೆನೆಯುತ್ತಾ ಮೌನವಾಗಿ ನಾವು ನಡೆದ ಕ್ಷಣದಲ್ಲಿ ನಮ್ಮೊಳಗೆ ಮಳೆಯಂತೆ ಮಾತಿನ ಹನಿ ಭಾವದ ಮಿನುಗುವಿಕೆ ಇತ್ತು ಅಂತ ನಿಂಗೆ ಅನ್ನಿಸಲ್ವಾ? ಆದರೂ ಮಳೆಯ ನಂತರದ ಬಾನಿನಂತೆ ನಿರ್ಮಲ ಮನಸ್ಸು ನಮ್ಮದಾಗಿತ್ತು ಅಲ್ವಾ? ಇಂದು ಮತ್ತದೆ ಮಳೆಯಿದೆ. ಶರಧಿಯ ದಡವಿದೆ ಆ ಮರಳ ಕಣಗಳೆಲ್ಲಾ ನಮ್ಮ ಪಾದ ಸ್ಪರ್ಶಕ್ಕೆ ಕಾಯುತ್ತಿದೆಯೋ ಎನ್ನುವಂತಿದೆ. ಜೊತೆಗೆ ಮೌನ ಸಾಂಗತ್ಯಕ್ಕೆ ನಾ ಕಾದಿದ್ದರೂ ನೀ ದೂರ ಬಹುದೂರವಲ್ಲೇ ಸೋನು !. ಮಳೆಗೂ-ನಿಂಗೂ-ನಂಗೂ ಅದೇಕೊ ನಂಟು ಗೊತ್ತಿಲ್ಲ. ನಮ್ಮನಡುವಿನ ಬಾಂಧವ್ಯದ ಸೇತುವೆ ಮಳೆನಾ ಅಥವಾ ಭಾವದ ವ್ಯಕ್ತಪಡಿಸುವಿಕೆ ಮಳೆಯಂತದ್ದಾ ? ಗೊತ್ತಿಲ್ಲ.

    ಸೋನು ! ಮಣ್ಣು ಪಕ್ವಗೊಂಡಿರುವಾಗ ಯಾವ ಬೀಜ ಬಿತ್ತಿದರೂ ಮೊಳಕೆಯೊಡೆಯುತ್ತೆ. ಇದು ಪ್ರಕೃತಿ ನಿಯಮ. ಇದರಂತೆ ಮನದಭೂಮಿ ಆರ್ದ್ರಗೊಂಡಾಗ ನಮ್ಮ ನೋವು ಹಂಚಿಕೊಂಡ ಹೃದಯ ನಮ್ಮ ಎದೆ ಬಡಿತಕ್ಕೆ ಸ್ಪಂದಿಸುವಂತೆ ಅನ್ನಿಸುತ್ತೆ.

    ಅವತ್ತು ನನ್ನ ಆರ್ದ್ರಗೊಂಡ ಮನಸ್ಸಿನ ನೋವು ಹಂಚಿಕೊಂಡು ಸ್ಪಂದಿಸಿದ ಹೃದಯ ನಿನ್ನದಾಗಿತ್ತು !. ನಿನಗೇನು ಅನ್ನಿಸುತ್ತೆ ? ಪ್ಲೀಸ್ ಪತ್ರ ಬರಿ .

    -ನಿನ್ನ ಪ್ರೀತಿಯ ಗೆಳತಿ

    ಪ್ರತಿಕ್ರಿಯಿಸಿ :