• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಪತ್ರರಶ್ಮಿ

    ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ

    September 17th, 2008.


    ಹಾಯ್, ಸ್ವೀಟ್ ಹಾರ್ಟ್

    ನಿನ್ನ ಸಿಹಿಸಿಹಿ ಹೃದಯದ ನೆನಪೇ ಎಷ್ಟು ಮಧುರ!. ನನ್ನ ಮುದ್ದು ಮಗಳೇ ನಿನ್ನ ಪತಿಯ ಮನೆಗೆ ಕಳಿಸಿಕೊಟ್ಟು ನಾ ಬರೆಯುತ್ತಿರುವ ಮೊದಲ ಪತ್ರವಿದು. ಕನಸುಗಳ ಮೂಟೆ ಹೊತ್ತು, ಭಾವಗಳ ಗುಂಗು ಹೊತ್ತು, ಮದರಂಗಿಯ ಬಿಡಿಸಿದ ಕೈಯಲ್ಲಿ ತುಸು ಬೆವರುತ್ತಾ, ಕೆನ್ನೆಗೆ ಹಚ್ಚಿದ ಅರಿಶಿನದಲ್ಲಿ ನಾಚಿಕೆ ಸುರಿಸುತ್ತಾ, ಕಣ್ಣಲ್ಲೇ ಕನಸ ದೀಪ ಹೊತ್ತಿಸುತ್ತಾ, ನಲ್ಲನೆಡೆಗೆ ಹೆಜ್ಜೆಯಿಟ್ಟ ನನ್ನ ಪ್ರೀತಿಯ ಮಗಳೇ, ನೀನಡೆವ ಹಾದಿ ಹೂವಾಗಲಿ, ನಿನ್ನೆಡೆಗೆ ಆ ನಗು ಹರಿದು ಬರಲಿ. ನಿಮ್ಮಿಬ್ಬರಿಗೂ ಶುಭವಾಗಲಿ.

    ನೀನೆಂದೂ ನನ್ನ ಮಗಳಾಗಿರಲಿಲ್ಲ, ಮಗಳಿಗಿಂತ ಹೆಚ್ಚಾಗಿ ಸ್ನೇಹಿತೆಯಾಗಿದ್ದೆ, ಬಂಧುವಾಗಿದ್ದೆ. ಒಂದು ಕ್ಷಣ ಯೋಚಿಸುತ್ತೇನೆ. ನನ್ನ ಮೂವತ್ತು ವರ್ಷದ ಜೀವನದಲ್ಲಿ ನಾನು ಮಾತಾಡದೇ ನನ್ನ ಮೌನದಲ್ಲಿ ನನ್ನ ಅತೀ ಹೆಚ್ಚು ಅರ್ಥಮಾಡಿಕೊಂಡವಳೆಂದರೆ ನೀನೇ. ಬಹುಶಃ ನನ್ನವರೆನ್ನುವ ಯಾರೂ ನನಗೆ ಕೊಡದ ಈ ಭಾವಬಂಧುತ್ವವನ್ನ ನೀ ನನಗೆ ಕೊಟ್ಟೆ. ನಮ್ಮಿಬ್ಬರ ಸಂಬಂಧ ಅಮ್ಮ ಮಗಳದ್ದಾಗಿರಬಹುದು. ಅದಕ್ಕಿಂತ ಹೆಚ್ಚಾದ ಸ್ನೇಹದ ಕೊಂಡಿಯೊಂದು ಬೆಸೆದುಕೊಂಡಿದೆ ನಮ್ಮಿಬ್ಬರ ನಡುವೆ. ಅವತ್ತು ಜೊತೆಯಲ್ಲಿ ಕಳೆದ ದಿನಗಳಿರಬಹುದು. ಇವತ್ತು ನೂರಾರು ಮೈಲಿ ದೂರದಲ್ಲಿರುವಾಗ ಕೂಡ. ನಿನ್ನಂತಹ ಇನ್ನೊಬ್ಬಳು ನನಗೆ ಅಗತ್ಯವೇ ಇಲ್ಲ ಎನ್ನುವಷ್ಟು. ಈ ಸ್ನೇಹಕ್ಕೆ, ಪ್ರೀತಿಗೆ ಎಷ್ಟು ಶಕ್ತಿಯಿದೆ! ಆ ಪ್ರೀತಿ ಭರವಸೆಗೆ ಒಂದಿಷ್ಟು ಅಧಿಕಾರವೂ ಇದೆ. ಕರ್ತವ್ಯವೂ ಇದೆ. ಹಾಗಾಗಿ ನಿನಗಾಗಿ ಒಂದೆರಡು ಸಾಲುಗಳನ್ನು ಬರೆಯುತ್ತಿದ್ದೇನೆ. ದಯವಿಟ್ಟು ಇದನ್ನ ಮರೀಬೇಡ.

    ನೀನೇ ಇಷ್ಟಪಟ್ಟ ಬದುಕಿದು. ಹಾಗಾಗಿ ಬದುಕಿನ ಪ್ರತೀ ಹೆಜ್ಜೆಯಲ್ಲೂ ಸಹನೆಯಿರಲಿ. ಶಾಂತಿ. ಸಮಾಧಾನಗಳೇ ನಿನ್ನ ನಡೆ, ನುಡಿಗಳಾಗಲೀ. ನಗುವೇ ಆಭರಣವಾಗಿರಲಿ. ಮನೆಯನ್ನು ಮಂದಿರವೆಂದು ತಿಳಿ. ಮನಸ್ಸನ್ನೇ ನಂದಾದೀಪವಾಗಿಸು. ಅನ್ಯಾಯ ಅಧರ್ಮಗಳಿಗೆ ಎಡೆಕೊಡಬೇಡ.ಎಲ್ಲರನ್ನೂ ಪ್ರೀತಿಸು ಗೌರವಿಸು. ಎಲ್ಲಕ್ಕಿಂತ ಹೆಚ್ಚು ಕಾರ್ಯಶೀಲಳಾಗು. ನಿನ್ನ ಶೃದ್ಧೆ ಪ್ರೇಮ ಎಲ್ಲವೂ ವ್ಯಕ್ತವಾಗುವುದು ನಿನ್ನ ಕೆಲಸಗಳಿಂದಲೇ. ನಿನ್ನಲ್ಲಿಟ್ಟ ನಿರೀಕ್ಷೆಯನ್ನು ಸಫಲಗೊಳಿಸೋಕೆ ಮನಸ್ವೀ ಪ್ರಯತ್ನಿಸು. ಜೊತೆಜೊತೆಗೆ ನಿನಗೊಂದು ಬದುಕಿನ ಗುರಿಯಿರಲಿ. ಅದು ನಿನಗಾಗಿ. ಅತ್ತ ನಡೆಯುತ್ತಲೇ ಇರು. ನಿನ್ನ ನೋವು ನಲಿವುಗಳನ್ನು ಬಿಚ್ಚಿಡಬೇಡ. ಬೇರೆಯವರಿಗಾಗಿ ಸದಾನಗುವುದನ್ನೆ ರೂಢಿ ಮಾಡಿಕೋ. ಇದು ನಿನಗೆ ಪ್ರಯೋಜನಕ್ಕೆ ಬರಬಹುದು. ತುಂಬು ಸಂಸಾರದಲ್ಲಿ ಬೆಳೆದವಳು ನೀನು. ನಂಗೊತ್ತು ನಮ್ಮೆಲ್ಲರ ಪ್ರೀತಿ ನಿನ್ನ ಹಠಮಾರಿಯನ್ನಾಗಿಸಿದೆ. ಆದರೆ ಆ ಹಠ ಪತಿಯ ಮನೆಯಲ್ಲಿ ಮಾಡೋದಿಲ್ಲ ಎಂಬ ನಂಬಿಕೆ ನನಗಿದೆ. ಯಾಕಂದ್ರೆ ನಿನ್ನ ಸ್ವಭಾವ ಬಲ್ಲವಳು ನಾನು. ಮಾತಿನಂತೆ ಜೋರಾಗಿಲ್ಲ ನಿನ್ನ ಮನಸ್ಸು. ಅದು ಬೆಣ್ಣೆಯಷ್ಟು ಮೃದು. ಹಾಗಂತ ಎಲ್ಲರಿಗೂ ಅರ್ಥವಾಗಿ ಬಿಡೋದಿಲ್ಲ ಅಲ್ಲವಾ?

    ಹಾಗಾಗಿ ಮಾತು ಕಡಿಮೆ ಮೌನ ಬಂಗಾರ ಅನ್ನೋದನ್ನ ನೆನಪಿಟ್ಟುಕೋ. ಜೊತೆಯಿಲ್ಲದ ಹೊತ್ತಲ್ಲಿ ಒಂಟಿ ಭಾವ ತಂದುಕೊಳ್ಳಬೇಡ. .ನೆನಪೊಂದು. ಅದ್ಭುತ ಜೊತೆಗಾರ, .ಕನಸೊಂದು. ಅದ್ಭುತ ಚೈತನ್ಯ. ಹಾಗಾಗಿ ನಿನ್ನ ಕೆಲಸಗಳ ಜೊತೆ ಮುಂದೆ ಸಾಗು. ಇಷ್ಟು ಸಾಕಲ್ಲವಾ ಮಗಳೇ ಶುಭವಾಗಲೀ ನಿನಗೆ.

    ನಾನಿದ್ದೇನೆ ನಿನ್ನ ಜೊತೆಗೆ

    ~ ನಿನ್ನಮ್ಮ

    ಪ್ರತಿಕ್ರಿಯಿಸಿ :