ನಿನ್ನ ಪ್ರೇಮದ ಪರಿಯ………….
September 17th, 2008.
-ಪೂರ್ಣಿಮಾ
ಹಾಯ್ !
ನಿನ್ನ ಏನಂತ ಕರೆಯಲಿ ಗೊತ್ತಿಲ್ಲ!
ನೀನು ಸ್ನೇಹಿತನಾ?! ಅದೇ ಪರಿಧಿಯಲ್ಲಿದ್ದು ಅದನ್ನು ದಾಟಿ ಕನಸು ಕಟ್ಟಿದೆ. ಆತ್ಮ ಬಂಧುವಾ?!
ಆತ್ಮದ ಇರುವಿಕೆ ಅರಿವಾಗುವ ಮುನ್ನವೇ? ಸರಿದು ಹೋದೆ. ಮತ್ತೆ ಪ್ರೇಮಿಯಾ?! ………
ಖಂಡಿತಾ ಅಲ್ಲ. ಆದರೆ ನೀನೇಕೆ ನನ್ನ ಪಾಲಿಗೆ ಕಹಿ ನೆನಪಾದೆ? ಯಾಕೆ ಉತ್ತರವಿಲ್ಲದ ಪ್ರಶ್ನೆಯಾದೆ? ಬದುಕಿನ ವೈಚಿತ್ರ್ಯವೇ ಇದು. ಒಂದೊಂದು ಹಂತದಲ್ಲೂ ನಮ್ಮ ನಿರೀಕ್ಷೆಗೆ ಮೀರಿದ್ದನ್ನೇ, ನಾವು ಕಲ್ಪಿಸಿಕೊಳ್ಳದ್ದನ್ನೆ ನಮ್ಮ ಮುಂದಿಟ್ಟು ತಮಾಷೆ ನೋಡುತ್ತದೆ.
ನನ್ನ ಬದುಕಿನ ಹಲವು ವರ್ಷಗಳವರೆಗೆ ನಿನ್ನ ಇರುವಿಕೆ ಕೂಡ ನನ್ನ ಗ್ರಹಿಕೆಗೆ ಬಂದಿರಲಿಲ್ಲ. ನಂತರವೂ ನೀನು ಪರಿಚಯ ಆಗದಿದ್ದರೆ ನಾನು ಒಂದಷ್ಟು ಕಣ್ಣೀರು, ನೋವು, ನಿರಾಸೆ, ಹಿಂಸೆಪಡುತ್ತಿರಲಿಲ್ಲವೇನೋ. ಕಾಲೇಜ್ ಎಂಬ ಆ ಬಣ್ಣದ ಲೋಕದಲ್ಲಿ ನಿಧಾನವಾಗಿ ನೀನು ವೇದಿಕೆ ಏರತೊಡಗಿದೆ. ನಿನ್ನೊಳಗಿನ ಮುಗ್ಧ ಮನಸ್ಸು, ಪುಟ್ಟ ಪ್ರಪಂಚಕ್ಕೆ ಮೆಚ್ಚಿ ನಾನು ನಿನ್ನೆಡೆಗೆ ಸ್ನೇಹ ಹಸ್ತ ಚಾಚಿದೆ.
ಆದರೆ ನೀನೇಕೋ ಅದನ್ನ ದಾಟಿ ದೂರ ಬಹುದೂರ ನಡೆದೆ. ನೀವು ಹುಡುಗರೇ ಹೀಗೆ ಅಲ್ವಾ! ಹುಡುಗಿ ಚಾಚಿದ ಕೈಗಳಲ್ಲಿ ನಿಮಗೆ ಕಾಣಿಸೋದು ಪ್ರೇಮ ರೆಂಬೆಯೊಂದೇ…! ಕೈ ತುಂಬ ಇರಬಹುದಾದ ಅಕ್ಕರತೆಯ, ಸಹೋದರತೆಯ, ಸ್ನೇಹದ ರೆಂಬೆ ನಿಮಗೆ ಕಾಣಿಸೋದೇ ಇಲ್ಲಾ ಅಲ್ವಾ? ನಿನ್ನನ್ನು ನಾನೆಂದಾದರೂ ಪ್ರೀತಿಸಿದ್ದೆನಾ? ಓo ನನ್ನ ತುಂಬ ತುಂಬಿದ್ದು ನಿನ್ನೆಡೆಗೆ ಸ್ನೇಹದ ನೋಟ, ಆದರೆ ಅದರಲ್ಲೂ ನೀನು ಪ್ರೀತಿ ಪ್ರೇಮದ ಭಾವ ಕಂಡಿದ್ದಾದರೂ ಹೇಗೆ? ಅಷ್ಟಕ್ಕೂ ನಾನೇ ಕಾಣದ ಅಮೃತವನ್ನ (ಪ್ರೀತಿ, ಪ್ರೇಮ ಎಂಬ) ನಿನಗೆ ಹೇಗೆ ನೀಡಲಿ!? ಸುಂದರವಾಗಿ ಬದುಕಿ ಬಿಡಬಹುದಾಗಿದ್ದ ಕಾಲವನ್ನೆಲ್ಲ ನೀನು ದೊರೆಯಲಾರದ ಪ್ರೀತಿ ಹುಡುಕಾಟದಲ್ಲಿ ಕಳೆದುಕೊಂಡೇ ಅಲ್ವಾ? ಬಿಳಿ ಪರದೆಯಂತಿದ್ದ ಸ್ನೇಹಕ್ಕೆ ಪ್ರೇಮದ ರಂಗು ಎರಚಿ ಅರ್ಥವಿಲ್ಲದ ಚಿತ್ತಾರವಾಗಿಸಿದೆ. ಪ್ರತಿಫಲ ಏನು ಒಂದಷ್ಟು ನೋವು, ನಿರಾಸೆ ……… ಸೋಲು.
ಆ ರಾತ್ರಿ ಸ್ನೇಹಿತರ ಜೊತೆಗೂಡಿ ಹುಣ್ಣಿಮೆಯ ಬೆಳದಿಂಗಳಿನ ಸವಿ-ಸವಿ ರಕ್ತದಲ್ಲೆ ಹೊಸ ವರ್ಷಕ್ಕೆ ಶುಭ ಕೋರಿದ ಹುಚ್ಚು ಹುಡುಗಾ ನೀನು! ಅದನ್ನೆ ಎದುರು ನಿಂತು ಸ್ನೇಹಪೂರ್ವಕವಾಗಿ ಹೇಳಬಹುದಿತ್ತಲ್ಲ ಎಂದೂ ನನ್ನ ಎದುರು ನಿಲ್ಲದ ನಿನ್ನ ಬಗ್ಗೆ ಏನೆಂದುಕೊಳ್ಳಲಿ!
ಯುತ್ತಾ ಕೂತಾಗ ನಿನೆಂದ ಮಾತು ’ನಾವಿಬ್ಬರು ಕೊನೆವರೆಗೂ ಹೀಗೆ ಇರೋಣಾ!’. ನಾನು ಪ್ರತಿಕ್ರಿಯಿಸಿದ್ದೆ ’ಹೌದು ಹೀಗೆ, ಉತ್ತಮ
ಸ್ನೇಹಿತರಾಗಿ!’. ಆದರೆ ಬದುಕಿನಲ್ಲಿ ಅಂದುಕೊಂಡದ್ದೆಲ್ಲ ಆದರೆ ಅಂದುಕೊಳ್ಳುವಿಕೆಗೆ ಬೆಲೆ ಇಲ್ಲಾ! ಯಾವುದನ್ನೊ ಇಷ್ಟಪಟ್ಟು ಯಾವುದನ್ನೋ ಪಡೆದುಕೊಂಡಾಗಲೇ ಕಳೆದುಕೊಳ್ಳುವಿಕೆಯ ಕಷ್ಟ ಗೊತ್ತಾಗುವುದು. ಎಲ್ಲವೂ ಮರೆತು ಹೋಗಿತ್ತು ಅಂದುಕೊಂಡರೆ!, ನಿಜ ಎಲ್ಲವನ್ನೂ ಮರೆತಿದ್ದೆ! ಆದರೆ ಇಂದು ನಿನ್ನ ಕಂಡಾಗ, ಕಂಡೂ ಕಾಣದಂತೆ ಕಣ್ಮರೆಯಾದಾಗ ಅದೇಕೊ ಬದುಕಿನ ಪುಟಗಳು ಗಾಳಿಗೆ
ಸಿಕ್ಕಂತೆ ಹೊಯ್ದಾಡಿದವು. ನಿನ್ನ ನೆನಪಾದಾಗ ಮನದ ಮೌನ…… ಕೊನೆಯಲೊಂದು ನಿಟ್ಟುಸಿರು, ಉತ್ತರವಿಲ್ಲದ ಪ್ರಶ್ನೆಗಳು!
ನಿನ್ನ ಪ್ರೇಮದ ಪರಿಯ…..