• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಮುಖಪುಟ >> ಮನದಮಾತು

  ’ಕನಸು’ಗಳಿರುವಲ್ಲಿ ಕಾಸು ನಿಷಿದ್ಧ, ಕಷ್ಟ ಅನಿವಾರ್ಯವಾ?

  September 15th, 2008.


  – ರಾಮು

  ಕ್ರಿಯಾಶೀಲ ಗೆಳೆಯ ಬೇಗ ಚೇತರಿಸಿಕೊಳ್ಳಲಿ

  ’ಜೀವನದಲ್ಲಿ ಎಷ್ಟೊಂದು ಮಂದಿ ’ಮಜಾ’ದ ಹೆಸರಿನಲ್ಲಿ ಏನೆಲ್ಲಾ ಮಾಡ್ತಾರೆ, ಅವರ್‍ಯಾರಿಗೂ ಏನೂ ಆಗಲ್ಲ, ಆದರೆ ಏನೋ ಒಂದಿಷ್ಟು ಒಳ್ಳೇದು ಮಾಡ್ಬೇಕು ಎಂಬ ಹಂಬಲ ಹೊತ್ತು ಹೊರಟ ನಮ್ಮಂತಹವರಿಗೆ ಯಾಕೆ ಪದೇ ಪದೇ ಹೀಗಾಗುತ್ತೆ?’ ಆತನ ಪ್ರಶ್ನೆಗೆ ಅಲ್ಲಿದ್ದ ಯಾರಲ್ಲೂ ಉತ್ತರವಿರಲಿಲ್ಲ. ಬೆಂಗಳೂರಿನ ನೃಪತುಂಗ ರಸ್ತೆಯ ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಡಿ. ವಾರ್ಡ್‌ನ ಬೆಡ್ ಒಂದರಲ್ಲಿ ಅತ್ತ ಮಲಗಲೂ ಆಗದ ಇತ್ತ ಕೂರಲೂ ಆಗದ ಸ್ಥಿತಿಯಲ್ಲಿ ಮಲಗಿದ್ದ ಆ ಗೆಳೆಯನ ಆ ಪ್ರಶ್ನೆಯ ಹಿಂದೆ ಅಪಾರ ನೋವಿತ್ತು, ಹತಾಶೆಯಿತ್ತು.

  ’ನಿನ್ನ ಪ್ರಶ್ನೆ ನನ್ನ ಪ್ರಶ್ನೆ ಕೂಡಾ’ ಎನ್ನಬೇಕೆನಿಸಿದರೂ ಆ ಗೆಳೆಯನಿಗೊಂದಿಷ್ಟು ಧೈರ್ಯ ತುಂಬುವ ಕರ್ತವ್ಯ ನನ್ನದಾಗಿದ್ದರಿಂದ ಸಾಂತ್ವನ ನೀಡುವ ಪ್ರಯತ್ನ ಮಾಡಿದೆ. ’ನೋಡು, ಜಗತ್ತಿನಲ್ಲಿ ತುಂಬಾ ಮಂದಿಯ ದಾರಿ, ಗುರಿ ಎಲ್ಲವೂ ಒಂದೇ ಆಗಿರುತ್ತೆ, ಸಮಾಜ ಚಿಂತನೆಯಿಂದ ಹೊರತಾದ ಆ ದಾರಿ ಸವಾಲುಗಳಿಲ್ಲದೆ ಸುರಕ್ಷಿತವಾಗಿರುತ್ತೆ. ಆದರೆ ಎಲ್ಲೋ ಕೆಲವು ನಮ್ಮಂತಹ .ಹುಚ್ಚರು. ಮಾತ್ರ ಬೇರೆಯದೇ ದಾರಿಯಲ್ಲಿ ನಡೆಯ ಹೊರಟುಬಿಡ್ತೇವೆ. ಈ ದಾರಿಯಿದೆಯಲ್ಲ ಅದು ದುರ್ಗಮವೂ, ಕಲ್ಲು ಮುಳ್ಳುಗಳಿಂದ ಕೂಡಿದ್ದೂ ಆಗಿರುತ್ತೆ. ಸಹಜವಾಗಿ ಈ ದಾರಿಯಲ್ಲಿ ಹೊರಟವರು ಅಲ್ಲಿ ಎದುರಾಗಬಲ್ಲ ಎಲ್ಲ ಸಂಕಷ್ಟಗಳಿಗೆ ಮೊದಲೇ ಸಿದ್ಧರಾಗಿರಬೇಕಾದ್ದು ಅನಿವಾರ್ಯ. ಹಾಗಾಗಿ ಆ ಎಲ್ಲ ಸಂಕಷ್ಟಗಳನ್ನು ಎದುರಿಸಿಯೂ ಗುರಿಯೆಡೆಗೆ ತಲುಪಬಲ್ಲ ಶ್ರದ್ಧೆ, ಆತ್ಮವಿಶ್ವಾಸ ಹೊಂದಿದವರು ಮಾತ್ರ ಯಶಸ್ಸು ಗಳಿಸಬಲ್ಲರು. ಹಾಗಂತ ಈ ದಾರಿಯಲ್ಲಿ ಹೊರಟವರೆಲ್ಲರಿಗೂ ಯಶಸ್ಸು ಸಿಗುತ್ತೆ ಅಂತಲ್ಲ, ಆದರೂ ಒಂದು ವಿಶಿಷ್ಟ ದಾರಿಯಲ್ಲಿ ನಡೆದುಬಂದ ಆನಂದ, ಆತ್ಮತೃಪ್ತಿ ಖಂಡಿತವಾಗಿಯೂ ನಮಗೆ ಸಿಕ್ಕೇ ಸಿಗುತ್ತದೆ. ಕಷ್ಟ ಬಂದಾಗ ಅದರ ಪರಿಹಾರಕ್ಕಾಗಿ ಬಡಿದಾಡೋದು ದೊಡ್ಡ ಮಾತಲ್ಲ. ಅದನ್ನು ಎಲ್ಲರೂ ಮಾಡುತ್ತಾರೆ. ಆದರೆ ಕಂಡ ಕನಸು, ಕೈಗೊಂಡ ನಿರ್ಣಯ, ಕೊಟ್ಟ ಮಾತು, ತೆಗೆದುಕೊಂಡ ನಿಲುವು-ಇವುಗಳ ಸಾಕಾರಕ್ಕಾಗಿ ಬಡಿದಾಡೋದಿದೆಯಲ್ಲ ?, ಅದಕ್ಕೆ ತುಂಬ ಸಹನೆ ಬೇಕು. ತುಂಬ ಎನರ್ಜಿ ಬೇಕು. ಮುಖ್ಯವಾಗಿ ಕನಸೊಂದಕ್ಕೆ, ಅದು ಈಡೇರುವ ತನಕ ಗಂಟುಬೀಳಬಲ್ಲ ಹಟ ಬೇಕು. ಈ ಕನಸುಗಳು ನಿದ್ದೇಲಿ ಬೀಳೋ ಕನಸುಗಳಲ್ಲ, ನಾವೇ ಕಟ್ಟಿಕೊಂಡಂತವು. ಅದನ್ನು ಸಾಕಾರ ಮಾಡಬೇಕಾದವರು ನಾವೇ ಅಲ್ಲವಾ?’ ಎಂದೆ. ಆತ, ಮುಗುಳ್ನಗೆಯೊಂದಿಗೆ ಸಮ್ಮತಿಸಿದ.

  ಅವನು ದೀಪಕ್. ಸಾಗರದ ಹುಲಿದೇವರಬನ ಎಂಬ ಪುಟ್ಟ ಗ್ರಾಮದ ಕ್ರಿಯಾಶೀಲ ಕನಸುಗಾರ. ಅವನ ’ಜ್ಞಾನದೀಪ’ವೆಂಬ ಪುಟ್ಟ ಕೈಬರಹದ ಪತ್ರಿಕೆ ’ಚೈತ್ರರಶ್ಮಿ’ಗೆ ಸ್ಪೂರ್ತಿಯಾದ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಆ ಪುಟ್ಟ ಹಳ್ಳಿಯಲ್ಲಿ ಸೋದರಿ ಸಂಗೀತಾರ ಜತೆಗೂಡಿ ’ಜ್ಞಾನದೀಪ’ ಎಂಬ ಪುಟ್ಟ ಮಕ್ಕಳ ಪತ್ರಿಕೆ ಹೊರತರುತ್ತಿದ್ದ ದೀಪಕ್. ಅಲ್ಲಿನ ಸುತ್ತಮುತ್ತಲ ಹಳ್ಳಿಗಳ ಶಾಲಾ ಮಕ್ಕಳಿಂದ ಪುಟ್ಟಪುಟ್ಟ ಲೇಖನ ಬರೆಸಿ ಅದನ್ನು ತನ್ನ ಕೈಬರಹದಲ್ಲಿ ಬರೆದು, ಒಪ್ಪ ಓರಣಗೊಳಿಸಿ ಆ ಕೈಬರಹದ ಪತ್ರಿಕೆಯನ್ನು ತನ್ನದೇ ಖರ್ಚಿನಲ್ಲಿ ಜೆರಾಕ್ಸ್ ಮಾಡಿಸಿ ಎಲ್ಲ ಶಾಲೆಗೂ ಹಂಚುತ್ತಿದ್ದ ಆತನ .ಜ್ಞಾನದೀಪ. ಕೆಲವರಿಗೆ ಹುಚ್ಚುತನ ಎನ್ನಿಸಿದ್ರೂ ನೂರಾರು ಮಕ್ಕಳಿಗೆ ಸ್ಫೂರ್ತಿ ನೀಡಿದ್ದು ಸತ್ಯ. ಅದಕ್ಕಿಂತ ಹೆಚ್ಚಾಗಿ ಆತನ ಪ್ರಯತ್ನ, ಕ್ರಿಯಾಶೀಲತೆ ಎಂಥವರಿಗೂ ಪ್ರೇರಣೆ ನೀಡುವಂತದ್ದೇ. ಆಗಲೇ ಸಾಗರದ ಸಾಗರ ಗಂಗೋತ್ರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಓದುತ್ತಿದ್ದ ದೀಪಕ್ ಅಲ್ಲೂ ಕಾಲೇಜು ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿ ಮಿತ್ರರ ಸಹಾಯದಿಂದ ’ಕಾನೂನು ಗಂಗೋತ್ರಿ’ ಎಂಬ ಪತ್ರಿಕೆಯನ್ನು ಸತತ ೫ ವರ್ಷ ಹೊರತಂದದ್ದು ಸಾಧನೆಯೇ. ಕಾನೂನಿಗೆ ಸಂಬಂಧಪಟ್ಟ ಬರಹಗಳಿರುತ್ತಿದ್ದ ಈ ಪತ್ರಿಕೆ ಜನಸಾಮಾನ್ಯರಿಗೂ ಕಾನೂನು ವಿಷಯದ ಜ್ಞಾನ ತಲುಪಿಸುವ ಪ್ರಯತ್ನವಾಗಿತ್ತಲ್ಲದೆ ಅಲ್ಲಿನ ಕಾಲೇಜು ಪತ್ರಿಕೆಗಳಲ್ಲೇ ವಿಶಿಷ್ಟವಾಗಿತ್ತು. ಪದವಿ ಮುಗಿಯುತ್ತಿದ್ದಂತೆಯೇ ದೀಪಕ್ ತನ್ನ ವ್ಯಾಪ್ತಿ ಹೆಚ್ಚಿಸಿಕೊಂಡು ಸಾಗರದಲ್ಲೇ ’ಸಾಗರದೀಪ’ ಎಂಬ ವಿಶಿಷ್ಟ ವಾರಪತ್ರಿಕೆ ಹೊರತಂದ. ಅಲ್ಲಿನ ಅನೇಕ ಪತ್ರಿಕೆಗಳ ಮಧ್ಯೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಭರವಸೆ ಹುಟ್ಟಿಸಿದ್ದು ಸಾಗರದೀಪ. ಸಾಗರ ಸುತ್ತಮುತ್ತಲಿನ ಪ್ರತಿಭಾವಂತ ಯುವಮಿತ್ರರು ಅದರಲ್ಲಿ ಬರೆಯುತ್ತಿದ್ದುದು ವಿಶೇಷ.

  ಆದರೆ ಅನಿವಾರ್ಯ ಕಾರಣಗಳಿಂದಾಗಿ ದೀಪಕ್ ಬೆಂಗಳೂರಿಗೆ ಬರಬೇಕಾಯಿತು. ಇಲ್ಲಿಗೆ ಬಂದ ಮೇಲೂ ’ಕಳೆದುಹೋದವರ ಪಟ್ಟಿ’ಗೆ ಸೇರದೆ ತನ್ನ ಕ್ರಿಯಾಶೀಲತೆಯನ್ನು ಇನ್ನಷು ಹೆಚ್ಚಿಸಿಕೊಂಡದ್ದು ಆತನ ಹೆಗ್ಗಳಿಕೆ. ಇಲ್ಲಿನ ಕೋ-ಆಪರೇಟೀವ್ ಬ್ಯಾಂಕ್ ಒಂದರ ಮ್ಯಾನೇಜರ್ ಆಗಿ ಉದ್ಯೋಗದ ನಡುವೆ ಆತ ’ವಿಜಯಜ್ಯೋತಿ ಅಂಧರ ವಸತಿ ಶಾಲೆ’ಯ ಮ್ಯಾನೇಜರ್ ಆಗಿ ಕೂಡಾ ಸೇವೆಗಿಳಿದ. ಅಚ್ಚರಿಯಾಗಬಹುದು. ಅಂಧರ ಶಾಲೆಯ ಮ್ಯಾನೇಜರ್ ಆದ ಮೂರೇ ತಿಂಗಳಲ್ಲಿ ಆತ ಅದಕ್ಕೊಂದು ಹೊಸ ರೂಪ ನೀಡಿದ. ’ಯಾವ ಕೆಲಸಕ್ಕೂ ಬಾರದವರು’ ಎಂಬ ಹಣೆಪಟ್ಟಿ ಹೊತ್ತಿದ್ದ ಆ ಶಾಲೆಯ ಅಂಧ ಮಕ್ಕಳಿಗೆ ತರಬೇತಿ ನೀಡಿ ಅವರದ್ದೇ ಆದ ಒಂದು ’ಆರ್ಕೆಸ್ಟ್ರಾ ತಂಡ’ ಕಟ್ಟಿದ. ಈ ತಂಡ ಇದುವರೆಗೆ ಬೆಂಗಳೂರಿನ ಹಲವು ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿ ಮೆಚ್ಚುಗೆ ಗಳಿಸಿದೆ. ಆತ ಅಷ್ಟಕ್ಕೇ ಸುಮ್ಮನಾಗದೆ ಆ ಅಂಧ ಪ್ರತಿಭಾವಂತರಿಂದಲೇ ಸೆಣಬಿನ ಮ್ಯಾಟ್, ಕ್ಯಾಂಡಲ್‌ಗಳನ್ನು ತಯಾರು ಮಾಡಿಸಿ, ಅವರಿಂದಲೇ ಮಾರಾಟ ಮಾಡಿಸಿ, ಅದರಿಂದ ಬರುವ ಹಣವನ್ನು ಅವರ ಶ್ರೇಯೋಭಿವೃದ್ಧಿಗಾಗಿಯೇ ಬಳಸುವಂತೆ ಮಾಡಿರೋದು ಆತನ ಕನಸುಗಳೇ. ಕೆಲವೇ ತಿಂಗಳುಗಳ ಹಿಂದೆ ಕೇವಲ ಅಂಧರ ಶಾಲೆ ಅಷ್ಟೇ ಆಗಿದ್ದ ಆ ಶಾಲೆ ಈಗ ಹಲವು ಕ್ರಿಯಾಶೀಲ ಚಟುವಟಿಕೆಗಳ ತಾಣ ಆಗಿರೋದು ದೀಪಕ್ ಎಂಬ ಆ ಸಹೃದಯಿ ಕನಸುಗಾರನಿಂದ. ನಮ್ಮಂತಹ ಯುವಶಕ್ತಿ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಆತನೇ ನಿದರ್ಶನ.

  ’ಒಳ್ಳೆಯವರಿಗೇ ಯಾಕೆ ಕಷ್ಟಗಳು ಬರ್‍ತವೆ?’ ಎಂಬ ಮಿಲಿಯನ್ ಡಾಲರ್ ಪ್ರಶ್ನೆಯ ಮಧ್ಯೆಯೇ ವಿಧಿ ಈ ಗೆಳೆಯನ ಮೇಲೆ ಮತ್ತೊಮ್ಮೆ ಪ್ರಹಾರ ಮಾಡಿದೆ. ಕಳೆದ ತಿಂಗಳು ಸಂಭವಿಸಿದ ಅಪಘಾತವೊಂದರಲ್ಲಿ ದೀಪಕ್ ಭಾರಿ ಆಘಾತ ಅನುಭವಿಸಿದ್ದಾರೆ. ಇದು ೨ ವರ್ಷದಲ್ಲಿ ಅವರಿಗಾಗುತ್ತಿರುವ ೨ನೇ ಅಪಘಾತ. ಕ್ರೂರ ವಿಧಿಗೆ ಧಿಕ್ಕಾರವಿರಲಿ. ಆ ಕ್ರಿಯಾಶೀಲ ಗೆಳೆಯ ಬೇಗ ಚೇತರಿಸಿಕೊಳ್ಳಲಿ. ’ಜ್ಞಾನದೀಪದ ಕನಸುಗಾರ’ನಿಗೆ ’ಚೈತ್ರರಶ್ಮಿ ಬಳಗ’ದ ಶುಭಹಾರೈಕೆ. ಇದರ ಮಧ್ಯೆ ಮತ್ತೊಂದು ಆಘಾತಕಾರಿ, ದುಃಖದ ಸುದ್ದಿ ಬಂದಿದೆ.

  ’ಭಾರತದರ್ಶನ’ ಉಪನ್ಯಾಸ ಮಾಲೆಯ ಮೂಲಕ ಲಕ್ಷಾಂತರ ಜನರಿಗೆ ರಾಷ್ಟ್ರಾಭಿಮಾನದ ಪ್ರೇರಣೆ ನೀಡುತ್ತಿರುವ ಹಿರಿಯ ಚಿಂತಕರೂ, ಚೈತ್ರರಶ್ಮಿಗೆ, ನಮಗೆ ಸ್ಫೂರ್ತಿದಾಯಕರೂ, ಪ್ರೇರಕರೂ, ಮಾರ್ಗದರ್ಶಕರೂ ಆದ ಶ್ರೀ ವಿದ್ಯಾನಂದ ಶೆಣೈ ಅವರು ತೀವ್ರ ಅನಾರೋಗ್ಯಕ್ಕೊಳಗಾಗಿದ್ದಾರೆ. ಭಾರತದ ಸಾಂಸ್ಕೃತಿಕ ಇತಿಹಾಸವನ್ನು ರೋಮಾಂಚಕ ರೀತಿಯಲ್ಲಿ ಇಂದಿನ ಪೀಳಿಗೆಗೆ ಪರಿಚಯಿಸುತ್ತಾ, ಕಳೆದ ೩೦ ವರ್ಷಗಳಿಂದಲೂ ಸಮಾಜಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ’ಭಾರತದರ್ಶನ’ದ ಸಂತ ಶ್ರೀ ವಿದ್ಯಾನಂದಜೀ ಬೇಗ ಚೇತರಿಸಿಕೊಳ್ಳಲಿ, ಅವರ ಮಾರ್ಗದರ್ಶನದಲ್ಲಿ ನಡೆವ ಸೌಭಾಗ್ಯ ಇನ್ನು ಮುಂದೆಯೂ ನಮಗಿರಲಿ ಎಂದು ಚೈತ್ರರಶ್ಮಿ ಹಾರೈಸುತ್ತದೆ.

  ’ಕನಸು’ಗಳಿರುವಲ್ಲಿ ಕಾಸು ನಿಷಿದ್ಧ, ಕಷ್ಟ ಅನಿವಾರ್ಯವಾ? :- ಈವರೆಗೆ 3 ಪ್ರತಿಕ್ರಿಯೆಗಳು

  1. sdukanya

   ramu its simply wounder full wel done mwn go ahead

  2. sdukanya

   its is veeeeeeery very goood

  3. parashuram

   odee tubha kushi aethu adkinth hechu besravaethu yakendare
   intha ondu hosa thana net nali sikedake hagene
   namm depak ge ada afagatha agabardethu odee besravaethu adsthu bega gunamukanagali hushargli endu a devarli prathisuve
   depak ennu hchina kelasamadali a devaru athanege a shkthi nedali

  ಪ್ರತಿಕ್ರಿಯಿಸಿ :