• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಮುಖಪುಟ >> ಮನದಮಾತು

  ನುಡಿನಮನ

  September 16th, 2008.


  ಯಾವ ’ಮೋಹನ’ ಮುರಳಿ ಕರೆಯಿತೋ… ?

  ಅಗಲಿದ ’ಸಮಾಜ ಚೇತನ’ಕ್ಕೊಂದು ಭಾವನಮನ

  ಅವರು ಹತ್ತು ವರ್ಷಗಳ ಹಿಂದೆಯೇ ಬೆಂಗಳೂರಿನ ಪ್ರತಿಷ್ಠಿತ ’ಮೈಕೊ’ ಕಂಪನಿಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಯಲ್ಲಿದ್ದವರು. ಬೆಂಗಳೂರಿನಂತಹ ನಗರದಲ್ಲಿ ಉನ್ನತ ಸ್ಥಾನಮಾನ ಗಳಿಸಬೇಕು, ಹೆಚ್ಚು ಹಣ ಗಳಿಸಿ ಸುಖ ಸಂತೋಷದಿಂದ ಬದುಕಬೇಕು ಅದು ಎಲ್ಲರ ಕನಸು ಬಹುಶಃ ಅವರೂ ಅದೇ ಕೆಲಸದಲ್ಲಿ ಮುಂದುವರಿದಿದ್ದರೆ ಅದಕ್ಕಿಂತ ಉನ್ನತ ಹುದ್ದೆ, ಸುಖ ಸಂತೋಷಗಳನ್ನು ಗಳಿಸಬಹುದಾಗಿತ್ತು. ಆದರೆ ಅವರ ಚಿಂತನೆಯೇ ಬೇರೆ ತರದ್ದು. ಸಮಾಜಕ್ಕೆ ಒದಗಿರುವ ಅಪಾಯಗಳು, ಸಂಸ್ಕೃತಿ, ಧರ್ಮ ಎದುರಿಸುತ್ತಿರುವ ಆತಂಕಗಳು, ಸಮಸ್ಯೆಗಳು, ಸವಾಲುಗಳು, ಬಡಜನರ ನೋವುಗಳು ಅವರನ್ನು ತಲ್ಲಣಗೊಳಿಸಿದ್ದವು. ಚಿಂತೆಗೀಡು ಮಾಡಿದ್ದವು. ಸಮಾಜ, ಧರ್ಮ, ಸಂಸ್ಕೃತಿಗಳ ರಕ್ಷಣೆಗಾಗಿ ನಾವೇನು ಮಾಡಬಹುದು ಎಂಬ ಪ್ರಶ್ನೆ ಅವರನ್ನು ಕಾಡತೊಡಗಿತ್ತು. ವೈಯಕ್ತಿಕವಾಗಿ ಎಲ್ಲಾ ರೀತಿಯ ಸಂಪತ್ತು, ಸ್ಥಾನಮಾನ ಎಲ್ಲವನ್ನೂ ತಂದು ಕೊಡಬಹುದಾಗಿದ್ದ ಇಂಜಿನಿಯರ್ ವೃತ್ತಿಗೆ ರಾಜೀನಾಮೆ ನೀಡಿ ಅವರು ಸಮಾಜದ ಕೆಲಸ ಮಾಡುವ ನಿಶ್ಚಯ ಕೈಗೊಂಡರು. ಅಲ್ಲಿಂದ ಅವರ ಮತ್ತೊಂದು ’ಸಾಮಾಜಿಕ ಯಾತ್ರೆ’ ಆರಂಭಗೊಂಡಿತು.

  ’ಧರ್ಮ ಜಾಗರಣ’ದ ಹೆಸರಿನಲ್ಲಿ ಬೆಂಗಳೂರಿನಿಂದ ಬೀದರ್‌ವರೆಗೆ, ಕೋಲಾರದಿಂದ ಮಂಗಳೂರಿನವರೆಗೆ ಸತತ ಪ್ರವಾಸ ಮಾಡಿ ಜಾಗೃತಿ ಮೂಡಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮಂತಹ ಸಾವಿರಾರು ಯುವಕರಿಗೆ ಸಮಾಜ ಕಾರ್ಯಕ್ಕೆ ಸ್ಫೂರ್ತಿ ನೀಡಿದರು. ನಾಡಿನ ಬಹುತೇಕ ಎಲ್ಲಾ ಸಂತರನ್ನೂ ಭೇಟಿಮಾಡಿ ಅವರೆಲ್ಲರನ್ನೂ ಧರ್ಮ ರಕ್ಷಣೆಗಾಗಿ ಒಂದೇ ವೇದಿಕೆಗೆ ತರುವ ಪ್ರಯತ್ನ ಮಾಡಿದರು. ’ಮತಾಂತರ’ದ ವಿರುದ್ಧ ಹಿಂದೂ ಶೋಷಿತ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಅವರನ್ನೂ ಸಮಾಜದ ಮುಖ್ಯವಾಹಿನಿಗೆ ತರುವ ಸತತ ಪ್ರಯತ್ನ ಮಾಡಿದರು. ದೇಶ, ಸಮಾಜ, ಧರ್ಮ, ಸಂಸ್ಕೃತಿ ಬಿಟ್ಟು ಬೇರೇನನ್ನೂ ಯೋಚಿಸದೆ ಸಮಾಜದ ಕೆಲಸ ಮಾಡುತ್ತಲೇ ಕೇವಲ ೪೨ನೇ ವಯಸ್ಸಿನಲ್ಲಿ ಕಾಣದ ಲೋಕಕ್ಕೆ ನಡೆದು ಹೋದರು. ಹೋಗುವಾಗಲೂ ಹಾಗೇ ಹೋಗಲಿಲ್ಲ. ತಮ್ಮ ಎರಡೂ ಕಣ್ಣುಗಳನ್ನು ದಾನ ಮಾಡಿ ಅದನ್ನು ಸಮಾಜಕ್ಕೆ ಕೊಡುಗೆ ನೀಡಿ ಹೋದರು. ಅವರು ಮೋಹನ್‌ಕುಮಾರ್, ನಮ್ಮೆಲ್ಲರಿಗೆ ಪ್ರೀತಿಯ ಮೋಹನ್‌ಜೀ. ಓದಿದ್ದು ಇಂಜಿನಿಯರಿಂಗ್, ವೈಯಕ್ತಿಕ ಪ್ರತಿಭೆಯಿಂದ ದೊಡ್ಡ ಕಂಪನಿಯ ಉನ್ನತ ಹುದ್ದೆಗೇರಿದರೂ ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ಸಮಾಜ ಕಾರ್ಯಕ್ಕೆ ಸಮರ್ಪಿತಗೊಂಡವರು. ಮೈಸೂರಿನ ಶ್ರೀ ಸುತ್ತೂರು ಮಠಾಧೀಶರ ಪ್ರೇರಣೆಯಿಂದ ಆರಂಭಗೊಂಡ ’ಭಾರತೀಯ ಸಾಂಸ್ಕೃತಿಕ ಪರಿಷತ್’ ನ ಸಂಚಾಲಕರಾಗಿ ನಾಡಿನ ಎಲ್ಲಾ ಸಂತರನ್ನೂ ಭೇಟಿಯಾಗಿ ಅವರನ್ನು ಸಂಸ್ಕೃತಿ ರಕ್ಷಣೆಯ ಕಾರ್ಯದಲ್ಲಿ ತೊಡಗುವಂತೆ ಪ್ರೇರೇಪಿಸಿದವರು. ಅವರನ್ನು ಬಹುವಾಗಿ ಕಾಡಿದ್ದು ’ಮತಾಂತರ’. ಹಿಂದೂ ಧರ್ಮದ ಕಳಂಕ ’ಅಸ್ಪೃಶ್ಯತೆ’ ಯ ಕಾರಣದಿಂದ ನಮ್ಮದೇ ಧರ್ಮದ ಶೋಷಿತ ಬಂಧುಗಳು ಅನ್ಯಧರ್ಮೀಯರ ಆಮಿಷಗಳಿಗೆ ಒಳಗಾಗಿ ಮತಾಂತರಗೊಳ್ಳುತ್ತಿರುವ ಬಗ್ಗೆ ಮೋಹನ್‌ಜೀ ಸದಾ ಚಿಂತಿತರಾಗಿದ್ದರು. ಹಾಗಾಗಿಯೇ ’ಧರ್ಮ ಜಾಗರಣ’ ದ ಮೂಲಕ ಆ ಶೋಷಿತ ಬಂಧುಗಳೊಂದಿಗೆ ಬೆರೆತು ಅವರ ನೋವುಗಳಿಗೆ ಸ್ಪಂದಿಸುವ ಪ್ರಯತ್ನ ಮಾಡಿದರು, ಹಾಗೆಯೇ ಅಸ್ಪೃಶ್ಯತೆ ಆಚರಿಸುತ್ತಿರುವ ಮೇಲ್ವರ್ಗದವರಲ್ಲಿ ಜಾಗೃತಿ ಮೂಡಿಸಿದರು. ತಿರುಪತಿಯಲ್ಲಿ ಮತಾಂತರದ ಮಾರಿ ಹಬ್ಬತೊಡಗಿದಾಗ ನಾಡಿನ ಸಂತರನ್ನು ಪ್ರೇರೇಪಿಸಿ ’ತಿರುಪತಿ ತಿರುಮಲ ಸಂರಕ್ಷಣ ಟ್ರಸ್ಟ್’ ರಚಿಸಿ ಅದರ ಕಾರ್ಯದರ್ಶಿಯಾಗಿ ಮತಾಂತರಕ್ಕೆ ಸ್ಪಷ್ಟ ವಿರೋಧ ವ್ಯಕ್ತಪಡಿಸಿದರು. ಸಂತರೆಲ್ಲಾ ತಿರುಪತಿಯಲ್ಲಿ ಮತಾಂತರದ ವಿರುದ್ಧ ಒಂದಾಗುವಂತೆ ಮಾಡಿದ್ದು ಅವರ ಸಾಧನೆಯೇ. ಅಪರೂಪವಾಗುತ್ತಿರುವ ’ಭಾರತೀಯ ಅವಧಾನ ಕಲೆ’ ರಾಷ್ಟ್ರೋತ್ಥಾನ ಪರಿಷತ್ ಮೂಲಕ ಸಿ.ಡಿ.ಯಲ್ಲಿ ಹೊರಬರುವಂತೆ ಪ್ರೇರಣೆ ನೀಡಿದ್ದು ಅವರೇ. ಹೀಗಾಗಿ ಧರ್ಮ- ಸಂಸ್ಕೃತಿಯ ವಿಷಯದಲ್ಲಿ ಏನೇ ಸವಾಲುಗಳು ಎದುರಾದಾಗ ಅಲ್ಲಿ ಮೋಹನ್‌ಜೀ ಇರುತ್ತಿದ್ದರು. ತಾವಷ್ಟೇ ಅಲ್ಲ, ಸಾವಿರಾರು ಯುವಕರಿಗೆ ಧರ್ಮ ಸಂಸ್ಕೃತಿ ರಕ್ಷಣೆಯ ಸ್ಫೂರ್ತಿ ನೀಡಿದ್ದು ಮೋಹನ್ ಕುಮಾರ್ ಅವರೇ. ಹಾಗಾಗಿಯೇ ಕಳೆದ ಶಿವರಾತ್ರಿಯ ದಿನ ಹೃದಯಾಘಾತಕ್ಕೊಳಗಾಗಿ ಮೋಹನ್‌ಜೀ ತೀರಿಕೊಂಡರು ಎಂಬ ಸುದ್ದಿ ಬಂದಾಗ ಯಾರೂ ನಂಬಲಿಲ್ಲ. ಸಾಯುವಂತಹ ವಯಸ್ಸೇ ಆಗಿರಲಿಲ್ಲ ಅವರಿಗೆ. ’ಬೇರೆ ಯಾರೋ ಇರಬೇಕು ಬಿಡಿ’ ಅಂತಲೇ ಅಂದುಕೊಂಡರು. ಆದರೆ ತೀರಿಕೊಂಡವರು ನಮ್ಮ ಮೋಹನ್ ಜೀ ಅವರೇ ಅಂತ ಖಚಿತವಾದಾಗ ನಿಜಕ್ಕೂ ಅದೊಂದು ಸಹಿಸಲಾಗದ ಅನಿರೀಕ್ಷಿತ ಆಘಾತ. ಅವರ ಪಾರ್ಥಿವ ಶರೀರದ ಅಂತಿಮ ನಮನಕ್ಕೆ ಜನಸಾಗರ. ಮಧ್ಯಾಹ್ನ ೧೨ಕ್ಕೆ ಆರಂಭಗೊಂಡ ಅಂತಿಮ ನಮನ ಸಂಜೆ ಆರು ಘಂಟೆಯಾದರೂ ಮುಗಿಯಲಿಲ್ಲವೆಂದರೆ ಅದು ಮೋಹನ್‌ಜೀ ಅವರು ಬದುಕಿದ ರೀತಿಗೆ ಸಾಕ್ಷಿ. ಅಲ್ಲಿ ಮಹಿಳೆಯರು, ಯುವಕರು, ವೃದ್ಧರು, ಮಕ್ಕಳು ಎಲ್ಲರೂ ಇದ್ದರು. ಅವರೆಲ್ಲರ ಹೃದಯದಲ್ಲಿ ಅಪಾರ ನೋವು ಮಡುಗಟ್ಟಿತ್ತು. ’ಒಬ್ಬ ಮನುಷ್ಯನ ಬದುಕನ್ನು ಅವನ ಸಾವಿನಲ್ಲಿ ನೋಡು’ ಅನ್ನೋ ಮಾತಿದೆ. ಮೋಹನ್‌ಜೀ ಅವರಿಗೆ ಆ ಮಾತು ಬಹಳ ಸತ್ಯವೆನಿಸುತ್ತದೆ. ಬೆಂಗಳೂರಿನಂತಹ ನಗರದಲ್ಲಿ ಬಹುತೇಕ ಎಲ್ಲರೂ ಅವರವರ ಕೆಲಸದಲ್ಲಿ ಮುಳುಗಿರ್‍ತಾರೆ, ಬೇರೆಯವರ ನೋವಿಗೆ ಸ್ಪಂದಿಸುವವರು ಕಡಿಮೆಯೇ. ಆದರೆ ಮೋಹನ್‌ಜೀ ತೀರಿಕೊಂಡರು ಅಂತ ಗೊತ್ತಾದಾಗ ಅವರ ’ಅಂತಿಮಯಾತ್ರೆ’ ಗೆ ಸೇರಿದ್ದು ಎಂಟುಸಾವಿರ ಜನ!. ಮೈಸೂರು, ತುಮಕೂರು, ಕೋಲಾರ ಶಿವಮೊಗ್ಗಗಳಿಂದಲೂ ಜನ ಅಂತಿಮ ಯಾತ್ರೆಗೆ ಬಂದಿದ್ದರೆಂದರೆ ಮೋಹನ್‌ಜೀ ಸಮಾಜಕ್ಕೆ ನೀಡಿದ ಕೊಡುಗೆಯ ಬಗ್ಗೆ ಹೇಳಬೇಕಾಗಿಯೇ ಇಲ್ಲ. ಸದಾ ಹಸನುಖಿ, ಪ್ರತಿನಿಮಿಷವೂ ಸಮಾಜ ಕಾರ್ಯತತ್ಪರ, ಯುವಶಕ್ತಿಗೆ ಸ್ಫೂರ್ತಿ, ಸಂಸ್ಕೃತಿ ರಕ್ಷಣೆಗೆ ಪ್ರೇರಣಾದಾಯಿ ವ್ಯಕ್ತಿತ್ವದ ಮೋಹನ್‌ಕುಮಾರ್‌ಜೀ ದುರದೃಷ್ಟವಶಾತ್ ಅಕಾಲ ಮರಣಕ್ಕೀಡಾದದ್ದು ಸಮಾಜಕ್ಕೆ ಬಹುದೊಡ್ಡ ನಷ್ಟ. ಅವರ ಸಾವಿನೊಂದಿಗೆ ಧರ್ಮ-ಸಂಸ್ಕೃತಿ ರಕ್ಷಣೆಯ ನೇತೃತ್ವ ವಹಿಸಿದ್ದ ’ಸಮಾಜ ಸ್ಫೂರ್ತಿ ಚೇತನ’ವೊಂದು ದೂರವಾದಂತಾಗಿದೆ. ಸಾವಿನ ನಂತರವೂ ’ನೇತ್ರದಾನ’ ಮಾಡಿ ಅವರು ನಮಗೊಂದು ಆದರ್ಶವನ್ನು ಕಟ್ಟಿಕೊಟ್ಟಿದ್ದಾರೆ. ಕೇವಲ ೧೫ ದಿನದ ಹಿಂದೆ ಹೊಸಕೋಟೆಯಿಂದ ಮೋಹನ್‌ಜೀ ಅವರ ಜೊತೆ ಕಾರಲ್ಲಿ ಜೊತೆಯಾಗಿ ಬರುವಾಗ ನಾನು ಕೇಳಿದ್ದೆ ’ಸಮಾಜ ಕಾರ್ಯಕ್ಕೆ ನಿಮಗೆ ಸ್ಫೂರ್ತಿ ಏನು?’ ಎಂದು. ’ಸಮಾಜ ಸಂಸ್ಕೃತಿಗಳಿಗೆ ಅಪಾಯ, ಸವಾಲುಗಳು ಎದುರಾದಾಗ ಸ್ಫೂರ್ತಿಗಾಗಿ ನಾವು ಕಾಯಬೇಕಾಗಿಲ್ಲ. ಅದರ ರಕ್ಷಣೆಗೆ ಧಾವಿಸಬೇಕಾದ್ದು ನಮ್ಮ ಕರ್ತವ್ಯ’ ಎಂದಿದ್ದರು ಮೋಹನ್‌ಜೀ. ಹಾಗೆಯೇ ಮುಂದಿನ ದಿನಗಳಲ್ಲಿ ತಾವು ಕೈಗೊಳ್ಳಲಿರುವ ಯೋಜನೆಗಳ ಕುರಿತೂ ವಿವರಿಸಿದ್ದರು. ದುರದೃಷ್ಟವಶಾತ್ ಹಾಗೆ ಹೇಳಿದ ಹದಿನೈದೇ ದಿನಕ್ಕೆ ಅವರು ನಮ್ಮನ್ನಗಲಿದ್ದು ದುರಂತ. ಮೋಹನ್‌ಜೀ ಅವರ ಬದುಕು ನಮಗೊಂದು ಪಾಠವಾಗಬೇಕು. ಆದರ್ಶವಾಗಬೇಕು. ನಾವೆಲ್ಲರೂ ನಮ್ಮ ವೈಯಕ್ತಿಕ ಸುಖ-ಸಂತೋಷಗಳಲ್ಲಿ ಮುಳುಗಿಹೋಗಿದ್ದಾಗಲೂ ಮೋಹನ್‌ಜೀ ಅವರಂತಹ ಸಾವಿರಾರು ಮಂದಿ ತಮ್ಮೆಲ್ಲಾ ವೈಯಕ್ತಿಕ ಆಸೆ-ಆಕಾಂಕ್ಷೆ, ಸುಖ ಸಂತೋಷಗಳನ್ನು ತ್ಯಾಗ ಮಾಡಿ ಸಮಾಜದ ಕೆಲಸಕ್ಕಾಗಿ ಬದುಕನ್ನು ಸಮರ್ಪಿಸುತ್ತಿದ್ದಾರೆ ಎಂಬುದು ನೆನಪಿರಲಿ. ನಾವೂ ನಮ್ಮೆಲ್ಲಾ ಕೆಲಸಗಳ ಮಧ್ಯೆಯೂ ಧರ್ಮ-ಸಂಸ್ಕೃತಿ, ಸಮಾಜ ರಕ್ಷಣೆಯ ಕಾರ್ಯದಲ್ಲಿ ಪಾಲ್ಗೊಂಡರೆ, ಕನಿಷ್ಠ ಅಂತಹ ಚಿಂತನೆ ನಡೆಸಿದರೆ ಮಾತ್ರ ಅದು ಮೋಹನ್ ಜೀ ಅವರಿಗೆ ನಾವು ಸಲ್ಲಿಸಬಲ್ಲ ಶ್ರದ್ಧಾಂಜಲಿ. ಅಗಲಿದ ಸಮಾಜ ಚೇತನಕ್ಕೆ ಚೈತ್ರರಶ್ಮಿಯ ಭಾವಪೂರ್ಣ ಅಶ್ರುತರ್ಪಣ, ಭಾವನಮನ.

  ಪ್ರತಿಕ್ರಿಯಿಸಿ :