ಸ್ವಾಮಿ ವಿವೇಕಾನಂದರ ಕವನವೊಂದರ ಕನ್ನಡ ಅನುವಾದ
January 12th, 2015.
ಸ್ವಾಮಿ ವಿವೇಕಾನಂದರ ಕವನವೊಂದರ ಕನ್ನಡ ಅನುವಾದ. ಸ್ವಾಮಿ ವಿವೇಕಾನಂದರ ಪ್ರತಿಭೆಯ ಮುಖಗಳು ಅನೇಕ. ಸಿಡಿಲ ಸಂತನಾಗಿ, ದಾರ್ಶನಿಕರಾಗಿ, ವೀರ ಸನ್ಯಾಸಿಯಾಗಿ ಅವರು ನಮಗೆಲ್ಲ ಸುಪರಿಚಿತ. ಆದರೆ ಅವರೊಬ್ಬ ಕವಿಯೂ ಆಗಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ಕವಿಯಾಗಿ, ಗದ್ಯಲೇಖಕರಾಗಿ, ಕಲಾವಿಮರ್ಶಕರಾಗಿ, ಸಂಗೀತಜ್ಞರಾಗಿ ಅವರ ಕೊಡುಗೆ ಗಣನೀಯವಾಗಿದ್ದರೂ ಈ ನಿಟ್ಟಿನಲ್ಲಿ ನಡೆದ ಅಧ್ಯಯನಗಳು ವಿರಳ. ಈ ಹಿನ್ನೆಲೆಯಲ್ಲಿ ಸ್ಮಾಮಿ ವಿವೇಕಾನಂದರೇ ಬರೆದ ‘ಇನ್ ಸರ್ಚ್ ಆಫ್ ಗಾಡ್ ಎಂಡ್ ಅದರ್ ಪೊಯೆಮ್ಸ್’ ಇಂಗ್ಲಿಷ್ ಕವನ ಸಂಕಲನದ ಕನ್ನಡ ಅನುವಾದ ‘ವಿವೇಕಾನಂದ ಕವಿತಾವಳಿ’ ಯಿಂದ ಆಯ್ದ ಒಂದು ಸ್ಪೂರ್ತಿದಾಯಕ ಕವನವೊಂದನ್ನು ನಮ್ಮ ಚೈತ್ರರಶ್ಮಿ ಹಿಂದೊಮ್ಮೆ ಪ್ರಕಟಿಸಿತ್ತು. ಈ ಪುಸ್ತಕವನ್ನು ರಾಮಕೃಷ್ಣ ಮಿಶನ್ ಪ್ರಕಟಿಸಿದೆ. ಅವರ ಜನ್ಮದಿನದ ನೆಪದಲ್ಲಿ ಮತ್ತೊಮ್ಮೆ ಇದನ್ನು ಹಂಚಿಕೊಳ್ಳುತ್ತಿದ್ದೇವೆ. ಇಂತಹ ಸ್ಪೂರ್ತಿದಾಯಕ ಕವನವನ್ನು ಬರೆದ ಆ ಮಹಾನ್ ಚೇತನಕ್ಕೆ ನಮನ.
ಹತಾಶೆಗೊಳದಿರು, ಓ ಧೀರಾತ್ಮನೆ, ಜಯವದು ನಿಶ್ಚಿತ, ನಿಶ್ಚಿತವು!
ಸೂರ್ಯನು ಮುಗಿಲಲಿ ಮರೆಯಾಗಿದ್ದರು,
ಕಾಳಿಮೆಯಲಿ ಬಾನ್ ಮುಳುಗಿದರು,
ಹತಾಶೆಗೊಳದಿರು, ಓ ಧೀರಾತ್ಮನೆ,
ಜಯವದು ನಿಶ್ಚಿತ, ನಿಶ್ಚಿತವು!.||
ಶಿಶಿರದ ಬೆನ್ನೆಡೆ ವಸಂತ ಬರುವುದು
ಇಳಿದರು ಅಲೆ ಮೇಲೇಳುವುದು;
ನೆರಳ ನಡುವಿನಿಂ ಬೆಳಕು ನುಗ್ಗುವುದು
ಸ್ಥಿರವಾಗಿರು ಓ ಧೀರಾತ್ಮ! ||
ಬಾಳ ಹೊಣೆಗಳವು ಬೇವಾಗುವುವು
ಸಂತಸ ಕ್ಷಣದಲಿ ಮುಗಿಯುವುದು
ಗುರಿಯನು ನೆರಳದು ನುಂಗುವುದು
ಕತ್ತಲ ಸೀಳುತ ನಡೆ ಧೀರಾತ್ಮನೆ
ಸಂತತ ಸಾವಿರ ಯತ್ನದಲಿ! ||
ಇಟ್ಟ ಅಡಿಗಳು ಪಟ್ಟ ಪಾಡುಗಳು
ವ್ಯರ್ಥವಲ್ಲವೆಂದೆಂದಿಗೂ,
ಕನಸು ಕರಗಿದರು, ಶಕ್ತಿ ಗುಂದಿದರೂ
ನಿನ್ನುದ್ಧಾರಕನುದಿಸುವನು.
ತಡೆ ತಡೆದಿರು ನೀ, ಓ ಧೀರಾತ್ಮನೆ
ಒಳಿತೆಂದಿಗೂ ಅಳಿಯುವುದಿಲ್ಲ! ||
ತಿಳಿದು ಬಾಳುವರು ಕೆಲವರಾದರೂ
ಅವರೇ ಬಾಳ್ಗೆ ಬೆಳಕೀಯುವರು
ಮಂದಿ ನಿಜದ ಬೆಲೆ ಅರಿಯುವುದೆಂದಿಗೋ,
ಕಿವುಡನೆನಿಸವರ ನುಡಿಗಳಿಗೆ! ||
ದೂರದರ್ಶಿಗಳು ನೆರವಿಗೆ ನಿಲುವರು,
ಸರ್ವಶಕ್ತ ನಿನ್ನೊಡನಿಹನು;
ಹರಕೆಯದೆಲ್ಲವೂ ಹರಿದು ಬರಲಿ,
ನೀ ನಡೆ ಧೀರಾತ್ಮನೆ ಗುರಿಯೆಡೆಗೆ ||