’ಸ್ತ್ರೀ’ ಎಂದರೆ ಅಷ್ಟೇ ಸಾಕೆ?
September 17th, 2008.
- ಸಿಂಚನ, ಎನ್.ಮೂರ್ತಿ, ಶಿವಮೊಗ್ಗ

ಪ್ರಾಕೃತವಾಗಿ ಅವಳು ಶ್ರೇಷ್ಠಳೇ, ಅದರಲ್ಲಿ ಎರಡು ಮಾತಿಲ್ಲ. ಆದರೆ ಆ ಶ್ರೇಷ್ಠತೆಯನ್ನು ಅವಳು ಮೈಗೂಡಿಸಿ ಕೊಂಡಾಗ ಮಾತ್ರ ಆಕೆ ಶ್ರೇಷ್ಠ ಸ್ತ್ರೀ ಆಗುತ್ತಾಳೆ ಅಲ್ಲವೇ? ಅದನ್ನು ಬಿಟ್ಟು ಕೇವಲ ಆರ್ಥಿಕ ಅಥವಾ ದೈಹಿಕ ಸ್ವಾವಲಂಬನೆಯನ್ನೇ ಸ್ತ್ರೀತ್ವದ ಪರಿಪರ್ಣತೆ ಎಂದರೆ ಹೇಗೇ? ಆಕೆ ಮಾನಸಿಕವಾಗಿ, ಬೌದ್ಧಿಕವಾಗಿ ಹೆಚ್ಚಾಗಿ ಹಾರ್ದಿಕವಾಗಿ ಆಕೆ ಸ್ತ್ರೀ ಆಗಬೇಕು. ಆಗ ಆಕೆ ಪರಿಪೂರ್ಣ ಅಲ್ಲವೇ?
ಮೊನ್ನೆ ಎಂದಿನಂತೆ ನಮ್ಮ ’ಬಡವರ ಬಂಧು’ ಬಿ.ಎಂ.ಟಿ.ಸಿ. ಬಸ್‌ನಲ್ಲಿ ನೇತಾಡುತ್ತಾ, ಓಲಾಡುತ್ತಾ ಕಾಲೇಜ್‌ಗೆ ಹೊರಟಿದ್ದೆ. ಬಸ್‌ನಲ್ಲಿರುವ ಕಬ್ಬಿಣದ ಸರಳುಗಳನ್ನು ಸಹಿತ ಹಿಡಿದುಕೊಳ್ಳಲು ಸಾಧ್ಯವಾಗ ದಿರುವಷ್ಟು ಜನಜಾತ್ರೆ, ಒಬ್ಬರು ಇನ್ನೊಬ್ಬರ ಕಾಲು ಮೆಟ್ಟಿ ಕೂಗಿದರೂ ಧ್ವನಿ ಕೇಳದಷ್ಟು ಗಲಾಟೆ, ಉಸಿರು ಕಟ್ಟಿಸುವಂತಹ ಒತ್ತಡ. ಒಂದೊಂದು ಸ್ಟಾಪ್‌ಗಳಿಂದಲೂ ಜನಪ್ರವಾಹವೇ ಹರಿದು ಬರುತ್ತಿತ್ತು. ಇನ್ನು ಬಸ್‌ನೊಳಗೆ ತೂರಲು ಸಾಧ್ಯವಿಲ್ಲ ಎಂದಾದ ಮೇಲೆ ಬಾಗಿಲು ಕಿಟಕಿ ಗಳನ್ನು ಹಿಡಿದು ೭-೮ ಜನ ನೇತಾಡಲು ಪ್ರಾರಂಭಿಸಿದ್ದರು. ಕಂಡಕ್ಟರ್ ಕೂಡ ಟಿಕೆಟ್ ತಲುಪಿಸಲು ಹರಸಾಹಸ ಮಾಡುತ್ತಿದ್ದ. ಇದರ ನಡುವೆ ಕಂಡಕ್ಟರ್‌ಗೆ ’ಪಾಸ್’ ಎಂದು ಸುಳ್ಳು ಹೇಳಿ ಮೋಸ ಮಾಡುವ ನಿಪು ಣರು, ಪಕ್ಕದಲ್ಲಿ ಹುಡುಗಿಯರಿದ್ದರೆ ತಮ್ಮ ಕೈ-ಚಳಕಗಳನ್ನು ತೋರಿಸುತ್ತಾ ಕಿರಿ-ಕಿರಿ ಕೊಡುತ್ತಾ ಆನಂದ ಅನುಭವಿಸುವ ವಿಕೃತರು, ಮೊಬೈಲ್‌ನಲ್ಲಿ ಎಫ್.ಎಂ. ಕಿವಿಗೆ ಹಾಕಿಕೊಂಡು ಪ್ರಪಂಚ ದೊಡನೆ ಸಂಪರ್ಕವೇ ಕಡಿದು ಹೋದಂತೆ ವರ್ತಿಸುವ ಮೊಬೈಲ್ ಮಾನವರು, ಇಲ್ಲವೇ ಬಸ್‌ನಲ್ಲಿ ನೇತಾಡುತ್ತಾ ಸಾಹಸ ಮಾಡುತ್ತಲೇ ear-phone ಹಾಕಿಕೊಂಡು ಮಾತನಾಡುವ ಹರಟೆಕೋರರು, ಈ ಜಂಜಾಟದಲ್ಲಿ ಮರೆತು ಒಂದು ರೂಪಾಯಿ ಚಿಲ್ಲರೆ ಕೊಡದದ್ದಕ್ಕೆ ತನ್ನ ಶಕ್ತಿಮೀರಿ ಗಂಟಲೇರಿಸಿ ಕಂಡಕ್ಟರ್ ಜೊತೆ ಜಗಳ ಆಡುವ ವಿಕೃತ ಪ್ರವೃತ್ತಿಯವರು.. ದೇವರೇ! ಒಂದು ರೀತಿಯಲ್ಲಿ ನಮ್ಮ ಪಾಪಗಳೆಲ್ಲವಕ್ಕೂ ಯಮನು ನರಕದಲ್ಲಿ ಶಿಕ್ಷೆ ನೀಡುವ ಬದಲಾಗಿ ಸಿಟಿ ಬಸ್‌ನಲ್ಲಿ ಪ್ರಾಯಶ್ಚಿತ್ತ ಮಾಡಿಕೊಳ್ಳಿ ಎಂದೇ ಕಳುಹಿಸುತ್ತಾನೇನೋ? ಎಂದೆನಿಸಿ ಬಿಡುತ್ತದೆ. ಹೀಗೇ… ಎಲ್ಲ ತೆರನಾದ ಶಿಕ್ಷೆಗಳನ್ನು ಅನುಭವಿಸುತ್ತಾ ಹೋಗುತ್ತಿದ್ದಾಗ ಒಬ್ಬ ಹಸಿ-ಹಸಿ ಬಾಣಂತಿ ಬಸ್ ಹತ್ತಿದಳು. ಕೈಯ್ಯಲ್ಲಿ ಕತ್ತು ಕೂಡ ನಿಲ್ಲದ ಪುಟ್ಟ ಮಗು, ಹೆಗಲಿಗೊಂದು ಭಾರದ ಕೈಚೀಲ ಸಿಕ್ಕಿಸಿಕೊಂಡು ಕಂಬಿಗಳ ಸಹಾಯದಿಂದ ಮೆಲ್ಲನೆ ಬಸ್ ಒಳಗೆ ಬಂದಳು. ಯಾರಿಗಾ ದರೂ ಅವಳ ಆ ಸ್ಥಿತಿ ಮರುಕ ಉಂಟು ಮಾಡುವಂತಿತ್ತು. ಆದರೆ, ಬಸ್‌ನ ಮುಂಭಾಗದಲ್ಲಿ ಮಹಿಳೆಯರಿಗಾಗಿ ಮೀಸಲಿರಿಸಿದ್ದ ಜಾಗಗಳಲ್ಲಿ ತಮ್ಮನ್ನು ತಾವೇ ಪ್ರತಿಷ್ಠಾಪಿಸಿ ಕೊಂಡಿದ್ದ ಒಬ್ಬೇ ಒಬ್ಬ ಮಹಿಳಾಮಣಿ ಸಹ ಆಕೆಯ ಕುರಿತು ಚಿಂತಿಸಲೇ ಇಲ್ಲ. ಬದಲಾಗಿ ಆಕೆ ತನ್ನ ಬ್ಯಾಗ್ ಇಟ್ಟುಕೊಳ್ಳಲು ಹೇಳಿದರೆ ನನ್ನ ಕಾಲ್ ಮೇಲೆ ಇಷ್ಟೊಂದು ಬ್ಯಾಗಿರೋದು ಕಾಣ್ಸೋದಿ ಲ್ವೇನ್ರಿ? ಎಂಬ ನಿಷ್ಠುರ ನುಡಿ. ಆ ಹೆಂಗಸು ಕೈಯಲ್ಲಿ ಹಸುಗೂಸನ್ನು ಎತ್ತಿಕೊಂಡು ನೇತಾ ಡುತ್ತಾ ಆ ಜನಸಂದಣಿಯಲ್ಲಿ ಕನಿಷ್ಠ ಪಕ್ಷ ನಿಲ್ಲಲಾದರೂ ಸ್ವಲ್ಪ ಜಾಗ ಸಿಗುತ್ತದೇನೋ ಎಂದು ಬಸ್ಸಿನ ಮಧ್ಯಭಾಗದತ್ತ ಬರುತ್ತಿದ್ದಳು. ಅಲ್ಲೇ ನಿಂತಿದ್ದ ಮಧ್ಯ ವಯಸ್ಸಿನ ಗಂಡಸರೊಬ್ಬರು ಆಕೆಯ ದಯನೀಯ ಸ್ಥಿತಿ ಕಂಡು ಸ್ತ್ರೀಯರಿಗೆ ಮೀಸಲಾಗಿದ್ದ ಆಸನದಲ್ಲಿ ಮಂಡಿತಳಾಗಿದ್ದ ಒಬ್ಬ ಕಾಲೇಜ್ ವಿದ್ಯಾರ್ಥಿನಿಗೆ. ಪಾಪು ಇದೆ, ಸ್ವಲ್ಪ ಜಾಗ ಬಿಡಮ್ಮ ಎಂದು ಬಿನ್ನವಿಸಿದರು… ಊಹ್ಞುಂ, ಆ ಹುಡುಗಿ ಆ ಹೆಂಗಸನ್ನು ತಿರುಗಿ ಸಹ ನೋಡದೆ ಕಿಟಕಿಯತ್ತ ಮುಖ ಮಾಡಿದಳು. ತಕ್ಷಣ ಅಲ್ಲೇ ಹಿಂದಿದ್ದ ಒಬ್ಬ ಕಾಲೇಜ್ ವಿದ್ಯಾರ್ಥಿ ಅಮ್ಮ, ಬಂದು ಕುಳಿತುಕೊಳ್ಳಿ ಎಂದು ತಾನು ಎದ್ದು ನಿಂತು ಆಕೆಗೆ ಕೂರಲು ಸ್ಥಳಾವಕಾಶ ಮಾಡಿಕೊಟ್ಟ. ಭೇಷ್ ಎನಿಸಿತು ಮನಸಿಗೆ, ಆ ಹುಡುಗನನ್ನು ಮತ್ತು ಆ ಗಂಡಸನ್ನು ಮನದಲ್ಲೇ ನಮಸ್ಕರಿಸಿದೆ. ಅವರು ಆ ಕ್ಷಣದಲ್ಲಿ ಮೆರೆದ ಮಾನವೀಯತೆಗೆ ನನ್ನ ಹೃದಯ ಆದರಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿತು. ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತಿದೆ. ’ಹೆಂಗರುಳು’ ಎನ್ನುತ್ತಾರೆ. ಹೆಣ್ಣು ಕರುಣಾಮಯಿ, ಮಮತಾಮಯಿ ಎಂದೆಲ್ಲಾ ಹೇಳ್ತಾರೆ. ಆದರೆ ಒಬ್ಬ ಬಾಣಂತಿಗೆ ಜಾಗ ಬಿಟ್ಟುಕೊಡಲು ಕೂಡ ನಿರಾಕರಿಸುವವರನ್ನು ಏನೆನ್ನಬೇಕು? ತನ್ನಂತೆಯೇ ಆಕೆಯೂ ಒಂದು ಹೆಣ್ಣು, ಮಗುವಿದೆ ಕೈಯ್ಯಲ್ಲಿ, ಆಕೆಗೆ ಮಗು ಮತ್ತು ಬ್ಯಾಗನ್ನು ಹಿಡಿದುಕೊಂಡು ಚಲಿಸುವ ಬಸ್ಸಿನಲ್ಲಿ ನಿಲ್ಲಲು ಸಾಧ್ಯವಾಗುವುದಿಲ್ಲ. ಸ್ವಲ್ಪ ಹೊತ್ತು ನಿಂತರೇನಂತೆ ಆಕೆಗೆ ಕುಳಿತು ಕೊಳ್ಳಲು ಅನುವು ಮಾಡಿಕೊಡೋಣ ಎಂಬ ಕನಿಷ್ಠ ಮಾನವೀಯತೆಯೂ ಇಲ್ಲದೆ ಬರಡಾಗಿ ಹೋಯಿತೆ ಹೆಣ್ಣಿನ ಹೃದಯ? ಛ್ಛೆ!! ಗಂಟೆಗಟ್ಟಲೆ ನಿಂತು ಭಾಷಣ ಮಾಡುತ್ತಾರೆ. ಪುಟಗಟ್ಟಲೆ ಲೇಖನಗಳನ್ನು ಮಂಡಿಸುತ್ತಾರೆ. ಸ್ತ್ರೀ|ತ್ವ, ಸ್ತ್ರೀ|ವಾದ, ಸ್ತ್ರೀಶಕ್ತಿ, ಮಹಿಳಾ ಮೀಸಲಾತಿ, ಮಹಿಳಾ ಸಂಘ ಎಂದೆಲ್ಲಾ. ಆದರೆ ಹೆಣ್ಣು ತಾನು ಗಂಡಿಗಿಂತ ಯಾವ ವಿಷಯದಲ್ಲಿ ಹೆಚ್ಚಿನವಳಾಗಿರಬೇಕು ಎಂಬುದನ್ನು ಮಾತ್ರ ತಿಳಿಸಿಕೊಡುವುದೇ ಇಲ್ಲ. ಪ್ರಾಕೃತವಾಗಿ ಅವಳು ಶ್ರೇಷ್ಠಳೇ, ಅದರಲ್ಲಿ ಎರಡು ಮಾತಿಲ್ಲ. ಆದರೆ ಆ ಶ್ರೇಷ್ಠತೆಯನ್ನು ಅವಳು ಮೈಗೂಡಿಸಿ ಕೊಂಡಾಗ ಮಾತ್ರ ಆಕೆ ಶ್ರೇಷ್ಠ ಸ್ತ್ರೀ ಆಗುತ್ತಾಳೆ ಅಲ್ಲವೇ? ಅದನ್ನು ಬಿಟ್ಟು ಕೇವಲ ಆರ್ಥಿಕ ಅಥವಾ ದೈಹಿಕ ಸ್ವಾವಲಂಬನೆಯನ್ನೇ ಸ್ತ್ರೀತ್ವದ ಪರಿಪೂರ್ಣತೆ ಎಂದರೆ ಹೇಗೇ? ಆಕೆ ಮಾನಸಿಕವಾಗಿ, ಬೌದ್ಧಿಕವಾಗಿ ಹೆಚ್ಚಾಗಿ ಹಾರ್ದಿಕವಾಗಿ ಆಕೆ ಸ್ತ್ರೀ ಆಗಬೇಕು. ಆಗ ಆಕೆ ಪರಿಪೂರ್ಣ ಅಲ್ಲವೇ?
ಹಾಗೆ ನೋಡಿದರೆ ಪುರುಷರ ದೌರ್ಜನ್ಯ ವೆಂದೆಲ್ಲಾ ಪದಗಳನ್ನು ಬಳಸುವ ನಾವು ಆ ಗಂಡಸು ಅವತ್ತು ತೋರಿಸಿದ ಅನುಕಂಪವನ್ನು ಏನೆಂದು ಕರೆಯಬೇಕು? ತಾನು ಕೂತ ಸ್ಥಳವನ್ನು ಬಿಟ್ಟುಕೊಟ್ಟ ಆ ಕಾಲೇಜ್ ವಿದ್ಯಾರ್ಥಿಗೆ ಏನೆನ್ನಬೇಕು? ಹಾಗಾದರೆ ಅವರಿಗೆಲ್ಲಾ ಮಾನವೀಯತೆ ಇಲ್ಲವೇ? ಹೆಣ್ಣಿನ ಕುರಿತು ಗೌರವವಿಲ್ಲವೇ? ಅನುಕಂಪ ವಿಲ್ಲವೇ? ವಿಷಯ ಚಿಕ್ಕದೇ ಇರಬಹುದು. ಆದರೆ ಇಂದಿನ ಸ್ತ್ರೀ ತಾನು ಸಬಲಳಾಗುವ ಹಂಬಲದಲ್ಲಿ ಯಾವ ದಾರಿಯಲ್ಲಿ ಹೆಜ್ಜೆ ಇಡುತ್ತಿದ್ದಾಳೆ ಎಂಬ ಜಿಜ್ಞಾಸೆ ಉಂಟಾಗುತ್ತದೆ. ಆ ಬಾಣಂತಿಯ ಮೇಲೆ ಹೋಗಲಿ ಆ ಪುಟಾಣಿ ಮಗುವನ್ನು ಕಂಡೂ ಕನಿಕರ ಹುಟ್ಟಿದ ಆ ಹೆಣ್ಣು ಹೃದಯಗಳಲ್ಲಿ ಅದೆಷ್ಟು ಕಠೋರತೆ ತುಂಬಿರಬಹುದು? ಗಂಡಸರಷ್ಟೂ ಮಿಡಿಯದಂಥ ಹೃದಯವನ್ನು ಆಕೆ ಪೋಷಿಸಿಕೊಂಡಿದ್ದಾದರೂ ಹೇಗೆ? ಉತ್ತರ ದೂರದಲ್ಲೆಲ್ಲೋ ತೋರುತ್ತಿದೆ. ಆಕೆಯ ಕಠೋರತೆಗೆ, ನಿರ್ದಯೆಗೆ ಕಾರಣ ಅಲ್ಲೆಲ್ಲೋ ಅಸ್ಪಷ್ಟವಾಗಿ ಗೋಚರವಾಗುತ್ತಿದೆ. ಪ್ರಕೃತಿಯ ಸಮತೋಲನ ತಪ್ಪಿಸಿದ್ದೇವೇನೋ? ಮುಂಚೆ ಗಂಡು ತಾನು ಹೆಣ್ಣಿಗಿಂತ ಶಕ್ತನೆಂದು ವರ್ತಿಸಿದಾಗ ಇದೇ ಪ್ರಕೃತಿ ಅದನ್ನು ವಿರೋಧಿಸಿತ್ತು. ಈಗ ಸ್ತ್ರೀ ತಾನು ಪುರುಷನಿಗೆ ಸಮಳಾಗುವ ಬದಲಾಗಿ ಅವನನ್ನು ಮೀರಿ ಬೆಳೆಯಲು ಎಲ್ಲಾ ಕೋನಗಳಿಂದಲೂ ಪ್ರಯತ್ನಿಸುತ್ತಿರುವುದಕ್ಕೆ ಹೀಗಾಗುತ್ತಿದೆಯೇನೋ? ಹೀಗೆಯೋ ಯೋಚಿಸುತ್ತಿರುವಾಗ ಅಲ್ಲೆಲ್ಲೋ ಒಂದು ಹೆಣ್ದನಿ ಕೂಗಿ-ಕೂಗಿ ಹೇಳುತ್ತಿರುವಂತೆ ಕಿವಿಗೆ ಕೇಳುತ್ತಿದೆ… ಹೇ ಸ್ತ್ರೀ, ನೀನೆಂದೂ ಸರ್ವಶಕ್ತಳು, ಸರ್ವಪೂಜಿತೆ. ಆದರೆ ಆ ಪವಿತ್ರ ಸ್ಥಾನವನ್ನು ನೀನಾಗಿ ನೀನೇ ಕಳೆದುಕೊಳ್ಳಬೇಡ, ಪುರುಷನಾಗಲು ಯೋಚಿಸಬೇಡ. ಸ್ತ್ರೀ ಆಗುವ ನಿಟ್ಟಿನಲ್ಲಿ ಮುಂದುವರೆ. ಪರಿಪೂರ್ಣ ನಾರಿಯಾಗು, ಪರಿಪೂರ್ಣಳಾಗು. ನಿನ್ನೆದೆಯಲ್ಲಿ ಅಮೃತ ಹರಿಯಲಿ, ಅದೊಂದೇ ಸಾಕು ನಿನ್ನನ್ನು ದೈವತ್ವಕ್ಕೊಯ್ಯಲು, ಏಕೆಂದರೆ ಪುರುಷ ಜೀವವನ್ನು ಬಿತ್ತಬಲ್ಲ. ಸೃಷ್ಟಿಸಲಾರ, ಪೋಷಿಸಲಾರ. ಆ ಪವಿತ್ರ ಕಾರ್ಯ ನಿನ್ನೊಬ್ಬಳಿಂದ ಮಾತ್ರ ಸಾಧ್ಯ. ನೀನು ಮಾತ್ರ ಮಮತೆ ವಾತ್ಸಲ್ಯಗಳನ್ನು ತನ್ನೆದೆಯಿಂದ ಪ್ರವಾಹದಂತೆ ಹರಿಸಿ ನೆಲವನ್ನು, ನೆಲೆಯನ್ನು ಹಸಿರಾಗಿಸಲು ಶಕ್ತಳು. ನಿನ್ನೆದೆ ತೇವವಾಗಿರಲಿ, ದಯಾ ಪೂರ್ಣವಾಗಿರಲಿ, ಕ್ಷಮಯಾ ಧರಿತ್ರಿಯಾಗಿರಲಿ, ಬದಲಿಗೆ ಬರಡಾಗಲು ಕೊಡದಿರು, ವಿಷವೂಡಲು ಬಿಡದಿರು. ಕಟುವಾಗಲು ಕೊಡದಿರು. ಮಗು ಜೋರಾಗಿ ಅಳತೊಡಗಿತು. ಆಕೆ ಸೆರಗು ಮುಚ್ಚಿ ಹಾಲೂಡಿಸತೊಡಗಿದಳು.. ಮಗು ಅಳು ವುದನ್ನು ನಿಲ್ಲಿಸಿತ್ತು. ಕಾಲೇಜು ಹತ್ತಿರ ಬಂದೊಡನೆ ಯಾಂತ್ರಿಕವಾಗಿ ಇಳಿದೆ. ಆ ಮಗುವಿನ ಮುಗ್ಧ ನಗು, ಆ ತಾಯಿಯ ವಾತ್ಸಲ್ಯಪೂರ್ಣ ನಗು ನನ್ನ ಮನಸ್ಸನ್ನು ತುಂಬಿದ್ದವು. ಕಣ್ಣು ತೇವಗೊಂಡಿತ್ತು. ಹೃದಯವೇಕೋ ಜೋರಾಗಿ ಬಡಿದುಕೊಳ್ಳುತ್ತಿತ್ತು. ಮನಸ್ಸು ಪದೇ ಪದೇ ರಾಷ್ಟ್ರಕವಿ-ಜಿ.ಎಸ್.ಶಿವರುದ್ರಪ್ಪನವರ ಪದ್ಯವನ್ನು ಗುನುಗುತ್ತಿತ್ತು… ಮನೆ ಮನೆಯಲಿ ದೀಪ ಮುಡಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ ತಂದೆ ಮಗುವ ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ? ಸ್ತ್ರೀ ಎಂದರೆ ಅಷ್ಟೇ ಸಾಕೇ?
October 20th, 2010 at 3:59 am
super
October 24th, 2011 at 8:04 am
hsnmkjudBnmmvj ,,lkjabxjdhg bzca