• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಹಳ್ಳಿಮನೆ ಮಾತು

    ’ಪ್ಲೀಸ್ ಪ್ರೀತ್ಸು’ ಅನ್ನುವ ದೈನೇಸಿತನ…

    September 17th, 2008.


    - ನವೀನ್ ಭಟ್, ಗಂಗೋತ್ರಿ

    ಹರೆಯ ಒಂದು ನವ ವಸಂತ. ಶಿಶಿರನ ಬೇಗೆಯನ್ನು ಸಹಿಸಿ ಮುಗಿದಬಳಿಕ ಬರುವ ಪ್ರಾಕೃತಿಕ ವಸಂತ ಮಾಸದಲ್ಲಿನ ಅನುಭವಪೂರ್ಣ ಆಸ್ವಾದವಾಗಲಿ. ಸಿಂಹ ಸದೃಶ ಸೌಂದರ್ಯವಾಗಲಿ, ಬದುಕಿನ ಹರೆಯ ಅನ್ನುವ ವಸಂತ ಕಾಲಕ್ಕೆ ಇಲ್ಲ. ಬಾಲ್ಯ ಕೌಮಾರ್‍ಯವೆಂಬ ಅನನುಭವಿ ಘಟ್ಟಗಳ ನಂತರ ಒಮ್ಮೆಲೇ ಎದುರಾಗುವ ಸ್ವಾತಂತ್ರ್ಯ ಪೂರ್ಣ ತಾರುಣ್ಯಕ್ಕೆ ನಿರ್ದಿಷ್ಟತೆ ಇಲ್ಲದೆ ಹೋದರೂ ಒಂದಷ್ಟು ವೈಶಿಷ್ಟ್ಯತೆಗಳಂತೂ ಇದ್ದೇ ಇವೆ.

    ಹರೆಯ ಕಾಲಿಟ್ಟಲ್ಲೆಲ್ಲ ಎದ್ದು ಕಾಣುವ ಒಂದು ಪಾದ ಮುದ್ರೆ ’ಪ್ರೀತಿ’ಯದ್ದು. ಹರೆಯದಲ್ಲಿ ತೋರಿ ಬರುವ ಈ ಬಗೆಯ ಭಾವ ಸಮೂಹಕ್ಕೆ ಸಮಾಜ ’ಪ್ರೀತಿ’ ಅನ್ನುವ ಹೆಸರು ಕೊಟ್ಟಿದೆಯೇ ವಿನಾ ಈ ಬಗೆಯ ಪ್ರೀತಿ ಒಂದು universal truth ಆಗಿರುವುದಿಲ್ಲ. ವಿವರಣೆಗೆ ನಿಲುಕದ ತರ್ಕಕ್ಕೆ ಎಟುಕದ ಈ ಅಗ್ರಾಹ್ಯ ಭಾವಕ್ಕೆ ಇಡೀ ಭೂಮಿಯನ್ನೆಲ್ಲ ಯಾರೋ ನಮಗಾಗಿಯೇ ನಿರ್ಮಿಸಿದ್ದಾರೆ. ಇವೆಲ್ಲ ನನ್ನದೇ, ಈ ಬದುಕು ಪೂರ್ತಿ ಹೂವಿನ ಹೆದ್ದಾರಿ ಎಂಬಂಥ ಅವಾಸ್ತವಿಕ ವಿಚಾರಗಳನ್ನೇ ನಿಜವೆಂದು ಭ್ರಮಿಸುವಂತೆ ಮಾಡುವ ತಾಕತ್ತಿದೆ. ಬದುಕಿನ ಆದಿಯಿಂದ ಅಂತ್ಯದವರೆಗೂ ಜೀವ-ಜೀವಗಳ ಮಧ್ಯೆ ಜೀವಂತ ಸ್ರೋತಲಾಗಿ ಹರಿಯುವ ಮತ್ತು ಹಾಗೆ ಹರಿಯಲೇಬೇಕಾದ ಈ ಪ್ರೀತಿ, ಹರೆಯದ ಜೀವಗಳಿಗೆ ತೋರಿಬರುವ, ಅನುಭವಕ್ಕೆ ಬರುವ ಆಯಾಮ ಮಾತ್ರ ತೀರಾ ವಿಭಿನ್ನವಾದುದು. ಅನಿರ್ದೇಶ್ಯವಾಗಿ ಹುಟ್ಟುವ ಹೊಮ್ಮುವ ಒಂದು ವಯೋ ಸಹಜ ಸೃಜನಿಕೆಯೆಂಬಂತೆ, ಹೆಣ್ಣು-ಗಂಡಿನ ನಡುವಣ ಪ್ರೀತಿ ತೀರಾ ಸಾಮಾನ್ಯವಾಗಿ ಬಿಟ್ಟಿದೆ. ಹೌದು ನಾನು ಹೇಳಹೊರಟಿರುವುದು ಹೆಣ್ಣು-ಗಂಡುಗಳ ಮಧ್ಯೆ, ಬದುಕಿನ ಒಂದು ಹಂತದಲ್ಲಿ ಇದ್ದಿರಬಹುದಾದ ಪ್ರೀತಿಯಂಥ (!!) ಸಂಬಂಧದ ಬಗ್ಗೆ. ಬದುಕಿನ ಬಗೆಗಿನ ಮುಂದಾಲೋಚನೆಗಳೇ ಇಲ್ಲದೆ, ಬದುಕಿಗೊಂದು ಬದ್ಧತೆಯ ಭರವಸೆಯಿಲ್ಲದೆ, ’ನೀ ಇಲ್ಲದಿದ್ದರೆ ನಾನಿಲ್ಲ’ ಅಥವಾ ’ನೀ ಇದ್ದರೆ ಸಾಕು, ನಂಗೇನೂ ಬೇಡ’ ಅನ್ನುವ ಮಟ್ಟಕ್ಕೆ ಒಬ್ಬ ವ್ಯಕ್ತಿಯನ್ನು ತಳ್ಳುವ ಪ್ರೀತಿಯನ್ನು ವಿವರಿಸುವುದು ನಿಜಕ್ಕೂ ಕಷ್ಟ. ಎಲ್ಲಾ ಬಗೆಯ ಸೈದ್ಧಾಂತಿಕ ನಿಲುವುಗಳು, ಸಾಮಾಜಿಕ ನಿಯಮಗಳು, ಬಂಧ-ಸಂಬಂಧಗಳು, ಇದರ ಎದುರಿನಲ್ಲಿ ತೀರಾ ಸಪ್ಪೆ ಸಪ್ಪೆ. ಕೊನೆ ಕೊನೆಗೆ ಬದುಕು ಮತ್ತು ಪ್ರೀತಿಗಳೇ ಬೇರೆಯಾಗಿ ಬದುಕಿಗಿಂತ ಪ್ರೇಮವೇ ಹಿರಿದಾಗಿ, ಮತ್ತು ಅದೊಂದು ಆದರ್ಶವಾಗಿ ನಿಂತುಬಿಡುವ ನೂರಾರು ಜೀವಂತ ನಿದರ್ಶನಗಳಿವೆ. ವಿಪರ್ಯಾಸವೆಂದರೆ, ಈ ಭೂಮಿಯ ಮೇಲಿನ ಈ ಬಗೆಯ ಬಹುತೇಕ ಪ್ರೀತಿಗಳು ಅರ್ಧದಲ್ಲೇ ಸತ್ತಿವೆ, ದುರಂತ ಕಂಡಿವೆ, ಕೆಲವು ಜೀವಗಳ ಆನಂದವನ್ನೂ, ಜೀವನೋತ್ಸಾಹವನ್ನೂ ಕೊಂದು ಬಿಟ್ಟಿವೆ.

    ಹಾಗೆ ಯೋಚಿಸಿದರೆ ಪ್ರೀತಿಯೇನೂ ಖಂಡನಾರ್ಹ ವಿಷಯವೇನಲ್ಲ. ಹೆಚ್ಚೇಕೆ, ಇಂಥ ಕೆಲವು ಭಾವಗಳನ್ನು ಹಾಗೆಲ್ಲ ಒಣ-ಒಣ ವಿಚಾರಗಳ ಗಾಣಕ್ಕೆ ಕೊಟ್ಟು ಸಪ್ಪೆಯೆಂದು ಬದಿಗಿಡಲೂ ಬಾರದು. ಪ್ರೀತಿ ನಿಜಕ್ಕೂ ಸ್ವಯಂ ಪರಿಪೂರ್ಣವೇ ಇರಬಹುದು. ಆದರೆ ಒಂದಿಡೀ ವ್ಯಕ್ತಿತ್ವ ಕದಡಿಬಿಡುವ ಬದುಕನ್ನೇ ಅನಿಶ್ಚಿತಗೊಳಿಸುವ, ಕುರುಡು ಕುರುಡು ಪ್ರೀತಿಯ ಬಗ್ಗೆ ವಿಚಾರ ಪ್ರವೃತ್ತಿ ಅಪೇಕ್ಷಣೀಯವೇ. ಗಂಡು-ಹೆಣ್ಣುಗಳ ನಡುವಿನ ಭಾವ ತರಂಗಗಳಿಗೆ ಪ್ರೀತಿಯೆಂದು ಕರೆದುಕೊಂಡು ಅದನ್ನೇ ಮಹಾನ್ ಎಂದು ಭ್ರಮಿಸತೊಡಗಿದರೆ ಅಲ್ಲಿಗೆ ಒಂದು ವ್ಯಕ್ತಿತ್ವದ ಕೊನೆಗಾಲ ಸಮೀಪಿಸಿತೆಂದೇ ಲೆಕ್ಕ. ಈ ಬಗೆಯ ಪ್ರೀತಿಗಳೆಲ್ಲ ಎಲ್ಲಾ ಕಾಲಕ್ಕೂ ಎಲ್ಲ ರೀತಿಯ ಬದುಕುಗಳಿಗೂ ಅನ್ವಯವಾಗೋದಿಲ್ಲ.

    ಪ್ರೀತಿ ಮಾತ್ರವೇ ಬದುಕು ಅನ್ನುವ ಭ್ರಮೆಯಲ್ಲಿ ಹೊರಟವರ ಬದುಕುಗಳು, ದಾರುಣವಾಗಿ, ಹೀನಾಯವಾಗಿ ಸತ್ತಂತೆಯೇ ಬದುಕುವುದನ್ನು ಕಂಡಾಗ, ಪ್ರೀತಿ ಅನ್ನುವುದು ಅರ್ಥವಾಗದಿದ್ದರೆ ಬದುಕೋದು ಎಷ್ಟೊಂದು ಕಷ ಅನ್ನಿಸಿಬಿಡುತ್ತದೆ. ವಾಸ್ತವದಲ್ಲಿ ಪ್ರೀತಿ ಕ್ರೂರಿಯಲ್ಲ, ಅಜ್ಞಾನವಲ್ಲ, ವರ್ಜ್ಯವಲ್ಲ, ಆದರೆ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಆವೇಗಕ್ಕೆ ಒಳಗಾಗಿ ಬದುಕು ಕಳೆದುಕೊಂಡರೆ ಅದಕ್ಕೆ ಪ್ರೀತಿ ಹೊಣೆಯಲ್ಲ. ಪ್ರೀತಿಗೊಂದು ನೈಸರ್ಗಿಕ ಹುಟ್ಟುವಿಕೆ ಇದೆ. ಅದನ್ನು ಕೃತಕವಾಗಿ ಹುಟ್ಟಿಸಲಾರೆವು. ಒತ್ತಾಯದಿಂದ ಪ್ರೀತಿ ಹುಟ್ಟದು. ಪ್ರೀತಿ ಒಂದು ಕ್ರಿಯೆಯಲ್ಲ. ಒಂದು ಅಭಿವ್ಯಕ್ತಿ ಅಷ್ಟೆ. ಆದರೆ ’ಪ್ಲೀಸ್ ಪ್ರೀತ್ಸು’, ಎಂದು ಮೊಣಕಾಲೂರಿ ಇನ್ನೊಂದು ವ್ಯಕ್ತಿತ್ವದ ಎದುರಿಗೆ ವ್ಯಕ್ತಿಯೊಬ್ಬ ಕೂತರೆ ಅದು ಶುದ್ಧಾಂಗ ಮೂರ್ಖತನ. ಕಣ್ಣಂಚಿನ ನೀರಿಗೆ, ಹೊಮ್ಮುವ ಸೆಂಟಿನ ಘಮಕ್ಕೆ, ಅಥವಾ ’ಪ್ಲೀಸ್ ಒಮ್ಮೆ ನಮ್ಮ ಪ್ರೀತ್ಸು’ ಅನ್ನುವ ದೈನೇಸಿತನಕ್ಕೆ ಮರುಳಾಗಿ, ಬೆರಗಾಗಿ ಹುಟ್ಟಿಕೊಂಡ ಪ್ರೀತಿಯ ಆಯಸ್ಸು ಬಹಳ ಕಡಿಮೆ. ಅದು ಪ್ರೀತಿ ಅಲ್ಲ ಕೂಡ. ’ಪ್ರೀತಿಗೆ ಸಾವಿಲ್ಲ, ಪ್ರೀತಿ ಶಾಶ್ವತ ಸತ್ಯ’ ಅನ್ನುವಂಥ ವಾಕ್ಯಗಳನ್ನು ಜಗತ್ತಿನ ಮಹಾ ಮಹಾ ಮೇಧಾವಿಗಳು ಹೇಳಿದ್ದು ಈ ರೀತಿಯ ವಯಃ ಪ್ರಭಾವಿತ ಅನಿರ್ದಿಷ್ಟ ಭಾವಗಳನ್ನು ಗಮನದಲ್ಲಿಟ್ಟುಕೊಂಡಲ್ಲ. ಅವರೆಲ್ಲ ಹೇಳಿದ್ದು ’ಭಕ್ತಿ’ಯಂಥ ಉನ್ನತ ಪ್ರೇಮಕ್ಕೆ ಸಂಬಂಧಿಸಿದಂತೆ. ಅದೇನೇ ಇರಲಿ, ಒಟ್ಟಿನಲ್ಲಿ ಪ್ರೀತಿ ಎನ್ನುವ ಭಾವದ ಹಿಂದೆ ಒಂದ? ಸಕಾಲಿಕ ಮತ್ತು ಸಮರ್ಪಕ ಚಿಂತನೆಗಳಿದ್ದರೆ, ಪ್ರೀತಿ ಹೆಚ್ಚು ಅರ್ಥಪೂರ್ಣ ಎಂಬುದಂತೂ ಸತ್ಯ. ಕೊನೆಗೊಂದು ವಿಚಾರ ಹೇಳಲೇಬೇಕು, ಪ್ರೀತಿಯ ಬಗ್ಗೆ ಈ ಬರಹ ಹೇಳುವುದು ಒಂದು ಮುಖದ ಭಾಗಶಃ ವಿವರಣೆಯನ್ನು ಮಾತ್ರ ಇದರ ಹೊರತಾಗಿ ಪ್ರೀತಿಗೆ ಇನ್ನೂ ಹತ್ತೆಂಟು ಮುಖಗಳಿವೆ.

    ಪ್ರತಿಕ್ರಿಯಿಸಿ :