ಸ್ನೇಹದ್ದೊಂದು ಹೊಸಮುಖ……..
September 17th, 2008.
- ನವೀನ ಭಟ್ ಗಂಗೋತ್ರಿ ಸಾಲ್ಕಣಿ, ಶಿರಸಿ.
ಈ ಪ್ರಪಂಚದಲ್ಲಿ ಅತ್ಯಂತ ಸುಂದರವಾದದ್ದು, ಆಸ್ವಾದನೀಯ ಆದದ್ದು ಮತ್ತು ಹೆಚ್ಚಿನ ಮೌಲ್ಯಯುತ ವಾದದ್ದು ಸ್ನೇಹ. ಒಂದು ನಿಚ್ಚಳ, ನಿರ್ಮಲ ಸ್ನೇ ಕೊಡುವ ಆನಂದ ಬದುಕಿನ ಉಳಿದ ಆನಂದಗಳಿಗಿಂತ ಹೆಚ್ಚು ಅಪೇಕ್ಷಣೀಯವಾಗಿ ತೋರುತ್ತದೆ. ಈ ಭೂಮಿ ಮೇಲೆ ಎಷ್ಟು ಜೊತೆ ಹೃದಯಗಳಿವೆಯೋ ಅಷ್ಟು ಬಗೆಯ ವಿಭಿನ್ನ ಸ್ನೇಹಗಳಿವೆ.
’ಸಮಾನ ಗುಣ ವ್ಯಸನೇಷು ಸಖ್ಯಂ’ ಎನ್ನುತ್ತದೆ.
ಸಂಸ್ಕೃತ ಸುಭಾಷಿತದ ಒಂದು ಸಾಲು. ಸಮಾನ ಗುಣ ಮತ್ತು ಒಂದೇ ಬಗೆಯ ಹವ್ಯಾಸ (ವರ್ತನೆ) ಗಳಿರುವಲಿ ಸಖ್ಯ ಮೂಡುತ್ತದೆಯಂತೆ. ಆದರೆ ಈ ವಿಷಯದಲಿ ನನ್ನದೊಂದು ಬಗೆಯ ವಿಭಿನ್ನ ಧೋರಣೆ. ಅದೇನೆಂದರೆ ಸ್ನೇಹಿತರಿಬ್ಬರ ನಡುವಿನ ಸ್ನೇಹಕ್ಕೆ ಆಧಾರವಾಗಿ ಕೇವಲ ಒಂದೇ ಬಗೆಯ ಗುಣ ಮತ್ತು ಹವ್ಯಾಸಗಳು ಮಾತ್ರ ಇರುವುದು ಉಚಿತವಲ್ಲ. ಬದಲಿಗೆ, ಸ್ನೇಹಿತರಿಬ್ಬರ ಸೈದ್ಧಾಂತಿಕ ನಿಲುವಿನಲ್ಲಿ ವೈಚಾರಿಕ ದೃಷ್ಟಿಕೋನದಲ್ಲಿ ನಂಬುಗೆಯ ನೆಲೆಗಳಲ್ಲಿ ಕೊಂಚ ವೈರುದ್ಧ್ಯವೂ ಅಂತರವೂ ಇರಬೇಕು. ಈ ಮಾತು ಬರಿಯ ಮೋಜಿನದಲ್ಲ.
ಎರಡು ವ್ಯಕ್ತಿಗಳು ಕೇವಲ ಭೌತಿಕ, ಮಾನಸಿಕ ಅವಲಂಬನೆಗೋಸ್ಕರ ಒಂದಾಗಿರುವುದು ಸ್ನೇಹದ ಪರಿಪೂರ್ಣ ಲಕ್ಷಣವಲ್ಲ. ಇವುಗಳ ಹೊರತಾಗಿ ಒಂದಷ್ಟು ಬೌದ್ಧಿಕ ಬೆಳವಣಿಗೆಯ ಬಯಕೆ, ಮುಂದುವರಿ ಯುವಿಕೆಯ ಹಂಬಲ, ಹೊಸದೊಂದ ಹುಡುಕ ಬೇಕೆಂಬ ತುಡಿತ ಇವೆಲ್ಲ ಸ್ನೇಹ ಒಳಗೊಂಡಿರ ಬಹುದಾದ ಅಂಶಗಳೇ. ಆದರೆ ಬಹುತೇಕ ಸ್ನೇಹಗಳು, ಭಾವ ವಿನಿಮಯ ಮತ್ತು ಪರಸ್ಪರ ಮಾನಸಿಕ ಅವಲಂಬನೆಯ ವಿಷಯಕ್ಕೆ ಮಾತ್ರ ಸೀಮಿತ ವಾಗಿರುತ್ತವೆ. ಬಹುತೇಕ ಸ್ನೇಹಗಳು ಕಷ್ಟ-ಸುಖ ವಿನಿಮಯಕ್ಕೇ ಅಂಟಿಕೊಂಡು, ವಿಚಾರ ವಿನಿಮಯ ಎನ್ನುವ ಅಂಶವನ್ನು ಮರೆತೇ ಬಿಟ್ಟಿರುತ್ತವೆ. ಹಾಗಾಗಬಾರದು. ಒಂದಿಡೀ ಬದುಕನ್ನು ಮತ್ತು ವ್ಯಕ್ತಿತ್ವವನ್ನು ರೂಪಿಸಿಬಿಡುವಂತಹ ಶಕ್ತಿಯಿದೆ ಸ್ನೇಹಕ್ಕೆ. ಅಂಥ ಸ್ನೇಹ ಮನೆ-ಮನೆ ಮಾತುಗಳಿಗೆ ಸೀಮಿತವಾಗ ಬಾರದಾದರೆ, ಸ್ನೇಹವೆಂಬುದು ವಿಚಾರ - ವೈಶಿಷ್ಟ್ಯಗಳಿಗೆ ವೇದಿಕೆಯಾಗಬೇಕು. ಹೀಗೊಂದು ವೇದಿಕೆಯಂಥ ಸ್ನೇಹ ಸ್ನೇಹಿತ ರಿಬ್ಬರ ನಡುವಿನ ಪರಿಪೂರ್ಣ ಸಾಮ್ಯತೆಯನ್ನು ಬಯಸುವುದಿಲ್ಲ. ಒಂದಷ್ಟು ಸಾಮ್ಯತೆಯ ಜತೆಗೆ ವೈರುದ್ಧ್ಯವನ್ನೂ, ವೈಭಿನ್ನವನ್ನೂ ಬೇಡುತ್ತದೆ. ಎರಡು ವಿಭಿನ್ನ ವಿಚಾರಗಳ ನಡುವಿನ ಮಂಥ ಅದಾವುದೋ ಹೊಸದೊಂದು ನಿಲುವಿಗೆ ಕಾರಣವಾಗುತ್ತ ಸ್ನೇಹದ ಮೌಲ್ಯವನ್ನು ಮತ್ತು ಸಾರ್ಥಕತೆಯನ್ನು ವೃದ್ಧಿಗೊಳಿಸುತ್ತದೆ. ಒಂದು ಸ್ನೇಹ, ಇಬ್ಬರ ಬದುಕಿನ ಹಾದಿಯ ನಡುವಿನ ಪ್ರಕಾರವಾಗಿ ಬೆಳಗಬೇಕಾದರೆ ಅಲ್ಲಿನ ಸಾಮ್ಯತೆ ಯೊಂದೇ ತೈಲವಾಗಿ ಕೆಲಸ ಮಾಡಬಾರದು. ಎರಡು ಮನೋಭಾವನೆಗಳು, ದೃಷ್ಟಿಕೋನಗಳು, ವಿಚಾರ ಪಥಗಳು, ತಮ್ಮ ತಮ್ಮ ನಿಲುವುಗಳನ್ನು ಸಾಧಿಸುತ್ತ ಸಮರ್ಥಿಸುವುದರ ಜತೆಗೇ ಒಂದಾಗಿ ಚರ್ಚಿಸುವ, ವಿಮರ್ಶಿಸುವ ನಿರ್ಧರಿಸು ಮನಃಸ್ಥಿತಿ ಬೇಕು ಸ್ನೇಹಕ್ಕೆ. ಹಾಗೆಂದ ಮಾತ್ರಕ್ಕೆ, ಭಾವ ವಿನಿಮಯ ಸ್ನೇಹದ ಒಂದು ಅವಶ್ಯಕತೆಯಲ್ಲ ಎಂಬುದು ಇಲ್ಲಿನ ವಿಚಾರವಲ್ಲ. ಮುಂದುವರೆಯುವಿಕೆಯ, ಬದಲಿಕೆಯ, ಬೆಳವಣಿಗೆಯ, ಬಯಕೆಯಿರುವಂಥ ಮನಸುಗಳಿಗೆ ಮತ್ತು ಒಂದಷ್ಟು ಜಿಜ್ಞಾಸು ಹೃದಯಗಳಿಗೆ ಸ್ನೇಹಿತರ ನಡುವಿನ ವಿಚಾರ ವೈರುದ್ಧ್ಯಗಳು. ಚರ್ಚೆಯ ಮಟ್ಟದಲಿ ಮುಂದುವರೆದಲ್ಲಿ ತಂಪೆರೆಯಬಲ್ಲವು. ಅಂತಹ, ಜಿಜ್ಞಾಸೆಗಳು, ಭಾವನೆಗಳು, ನೋವುಗಳು ಮತ್ತು ನಲಿವುಗಳು ನಿಮ್ಮ ಹೊರಗೆ ಒಂದು ನೆಲೆಯನ್ನು ಮಡಿಲನ್ನು ಅರಸುತ್ತಿದ್ದರೆ, ನೇರವಾಗಿ ನನಗೆ ಪತ್ರಿಸಿ. ನಮ್ಮ ಸ್ನೇಹ ಅಂತಹ ಒಂದು ವಿಭಿ ವೇದಿಕೆಯಾಗಲಿ.