ಶರನ್ನವರಾತ್ರಿಯ ಸೊಬಗು…..
September 17th, 2008.
-ಪ್ರಿಯಾ ಎಂ.ಭಟ್ ಕಲ್ಲಬ್ಬೆ, ಕುಮಟಾ
ಯಾದೇವಿ ಸರ್ವ ಭೂತೇಷು ಮಾತೃರೂಪೇಣ ಸಂಸ್ಥಿತಾ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ
ಶಕ್ತಿ ರೂಪಿ ಜಗನ್ಮಾತೆಯನ್ನು ನವವಿಧರೂಪದಲ್ಲಿ ನವದಿನಗಳು, ನವ ಪಾರಾಯಣ ಮಾಡಿ ಆರಾಧಿಸುವ ದಿನಗಳು ನಮ್ಮನ್ನು ಯಾವುದೋ ಭಕ್ತಿರಸದಲ್ಲಿ ಓಲಾಡಿಸುವುದಂತೂ ನಿಜ. ಮನುಷ್ಯ ತನ್ನ ಪಾಪಕರ್ಮಗಳ ಕಳೆದುಕೊಳ್ಳಲು ದೇವರ ಮೊರೆ ಹೋಗುವುದು ನಿಜವಾದರೂ, ನವರಾತ್ರಿ ಮಾತ್ರ ದುಷ್ಪಸಂಹಾರದ ಸಂಕೇತವಾಗಿಯೂ, ತಾಯಿಯನ್ನು ಆರಾಧಿಸುವ ಭಕ್ತಿಯ ಇನ್ನೊಂದು ಮುಖವೂ ಆಗಿದೆ. ದಸರಾದ ಸಾಂಸ್ಕೃತಿಕ ಮೆರಗು ಹೆಚ್ಚಿಸಿದ ಕೀರ್ತಿ ಮೈಸೂರು ರಾಜರುಗಳದ್ದು. ಮತ್ತು ಅದರ ವೈಭವ ಉಳಿಸಿಕೊಂಡದ್ದು ನವರಾತ್ರಿಯನ್ನು ನಾಡಹಬ್ಬವಾಗಿ ಆಚರಿಸುತ್ತಿರುವುದು. ಈ ನಾಡಹಬ್ಬದ ಕುರಿತು ಹೇಳಹೊರಟರೆ ಇದರೊಂದಿಗೆ ನನ್ನದೊಂದು ಅವಿನಾಭಾವದ ಸಂಬಂಧ. ಎಲ್ಲ ಸಾಹಿತ್ಯ ಮಿತ್ರರಿಗೂ ಸರಸ್ವತಿಯ ಆರಾಧನೆಯ ಈ ದಿನಗಳು ವಿಶೇಷವೆಂದೇ ನನ್ನ ಭಾವನೆ. ನವರಾತ್ರಿಯ ಶಾರದಾ ಸ್ಥಾಪನೆಯ ದಿನ ಮನೆಯಲ್ಲಿದ್ದಬದ್ದ ಎಲ್ಲಾ ಪುಸ್ತಕಗಳ ತಂದು ಪೇರಿಸಿ, ಶಾರದಾ ಮೂರ್ತಿಯನ್ನು ದಿನವಿಡೀ ಉಜ್ಜೀ ಉಜ್ಜೀ ತೊಳೆದು, ಅದಕ್ಕೆ ಬಣ್ಣ ಹಚ್ಚಿ ಸಿಂಗರಿಸಿ, ಮನೆಯೆಲ್ಲಾ ಓಡಾಡಿ ರಂಗವಲ್ಲಿ ಇಟ್ಟು ಸಂಭ್ರಮಿಸಿದ ಆ ದಿನಗಳು…. ಶಾರದೆಗೆಂದೇ ಸಿಂಗರಿಸಿದ ಎಡೆಗೆ ಅಣ್ಣಂದಿರ ಬಳಿ ಜಗಳಾಡಿದ್ದು. ಅವರೆಲ್ಲಾ ಶಾರದೆ ಬಾಳೆ ಗಂಡು ಮಕ್ಕಳಿಗೆ ಮಾತ್ರ ಅಂದಾಗ ಅತ್ತು ರಂಪಾಟ ಮಾಡಿದ್ದು… ದೇವರೆದುರು ಕುಳಿತು ಅಮ್ಮಾ ತಾಯೇ ಇವರೆಲ್ಲ ಅಂದಂತೆ ನೀನು ಹೆಣ್ಣು ಮಕ್ಕಳಿಗೆ ಒಲಿಯೋದಿಲ್ವಾ? ನಾನು ತುಂಬಾ ಓದಬೇಕು. ಕೃಪೆಮಾಡು ಅಂತ ಬೇಡಿಕೊಂಡಿದ್ದು ಎಲ್ಲವೂ ನಿನ್ನೆ ಮೊನ್ನೆಯ ಹಾಗಿದೆ. ಇದೀಗ ಒಂಬತ್ತು ದಿನದ ನವರಾತ್ರಿ ಆಚರಣೆ ನಮ್ಮ ಹಳ್ಳಿಗಳಲ್ಲೇ ಬೆರಳಣಿಕೆಯಷ್ಟಿದೆ. ಪೇಟೆಯವರಿಗೆ ಬಹುಶಃ ದಸರಾ ಎಂದರೆ ಮೈಸೂರು ಮಾತ್ರ ನೆನಪಾಗಬಹುದು. ನವರಾತ್ರಿಯ ಆಚರಣೆ ಸಾಮಾನ್ಯವೇನೂ ಅಲ್ಲ. ಒಂಭತ್ತು ದಿನ ವ್ರತ ನಿರತರಾದವರು ಒಪ್ಪತ್ತು ಊಟ ಮಾತ್ರ ಮಾಡಿ ಫಲಹಾರ ಸೇವಿಸಿಕೊಂಡಿರಬೇಕು. ಪತಿ ಪತ್ನಿಯರಿಬ್ಬರೂ ವ್ರತದಲ್ಲಿ ಸಮಾನಭಾಗಿಗಳಾಗಬೇಕು. ಪ್ರತೀ ದಿನವೂ ಮನೆಯಲ್ಲಿ ಮುತ್ತೈದೆ/ ದುರ್ಗಿಯರ ಪೂಜೆಯಾಗಬೇಕು. ದಿನವೂ ಬರುವ ನೆಂಟರಿಸ್ಟರಿಗೆ ಊಟೋಪಚಾರವಾಗಬೇಕು. ನವದುರ್ಗೆಯರಿಗೆ ಪ್ರತೀ ದಿನವೂ ಪಾರಾಯಣ, ಪಂಚಾಮೃತ ಪೂಜೆ, ಹಾಗೂ ಪಾಯಸ ಪರಮಾನ್ನಗಳಾಗಬೇಕು. ಇದನ್ನೆಲ್ಲ ನಿರ್ವಹಿಸಲು ಸ್ವತಃ ನಿಲ್ಲುವ ಮನೆಯವರಿಗೆ ದೇವಿ ರಕ್ಷಣೆ ನೀಡುವುದರಲ್ಲಿ ಸಂದೇಹವಿಲ್ಲ. ನಮ್ಮ ಹಿಂದೂ ಹಬ್ಬಗಳೇ ಹಾಗೆ. ಅದರ ಆಚರಣೆಯಲ್ಲಿ ಎಂಥವರ ಮನಸ್ಸೂ ಪರಿಶುದ್ಧಗೊಳ್ಳುತ್ತದೆ. ಮಂತ್ರಗಳಿಂದ, ಪೂಜೆಗಳಿಂದ, ಮಂಗಳಾರತಿಯ ಧೂಪಕ್ಕೆ, ವಾತಾವರಣವೇ ಪರಿಶುದ್ಧಗೊಳ್ಳುವುದರಲ್ಲಿ ಸಂದೇಹವಿಲ್ಲ. ಮನುಷ್ಯರ ಶ್ರಮ, ಪರಿಶುದ್ಧತೆ, ಎಲ್ಲವನ್ನು ಬೇಡುವ ಹಬ್ಬಗಳು ಮನುಷ್ಯರೊಳಗಿನ ದುಷ್ಟರನ್ನು ಸಂಹರಿಸುವುದರಲ್ಲಿ ಆಶ್ಚರ್ಯವಿಲ್ಲ ಅಲ್ಲವಾ?
ಇಂದು ನಾವು ಆ ಸಾಂಪ್ರದಾಯಿಕ ಭಕ್ತಿಯಿಂದ, ಅಂದಿನ ಆ ವೈಭವ ದಿನಗಳಿಂದ ದೂರವಾಗುತ್ತಿದ್ದೇವೆ. ಅದಕ್ಕೆ ನೂರಾರು ಕಾರಣಗಳಿರಬಹುದು. ಆದರೆ ನಮ್ಮ ಮಕ್ಕಳಿಗೆ ಅದರ ಕಂಪೂ ತಾಕದಷ್ಟು ದೂರವಾಗುತ್ತಿದ್ದೇವಾ? ರಜೆ ಬಂದರೆ ಯಾವ ಯಾವ ಕ್ಲಾಸಿಗೆ ಹಾಕಬೇಕು ಎಂಬ ಚರ್ಚೆಯಾಗುತ್ತದೆಯೋ ವಿನಃ ಊರಲ್ಲಿ ಹಳ್ಳಿಗಳಲ್ಲಿ ಇಂದಿಗೂ ನಮ್ಮ ಸಂಬಂಧದ ಎಳೆಯಿರುವ, ಮನೆಗಳಲ್ಲಿ ನಡೆಯುವ ಇಂತಹ ಹಬ್ಬಗಳ ಸೊಬಗು ತೋರಿಸೋಣ ಅಂದುಕೊಳ್ಳುವುದಿಲ್ಲ. ಅಂತಹ ಬಾಂಧವ್ಯಗಳನ್ನು ಹಳ್ಳಿ ಜನರ ಜೊತೆ ಇಟ್ಟುಕೊಳ್ಳಲು ಬಯಸುವುದಿಲ್ಲ. ನನ್ನ ನಮ್ರ ವಿನಂತಿಯಿಷ್ಟೇ. ಅವಕಾಶವಿದ್ದಲ್ಲಿ ಮಕ್ಕಳಿಗೆ ಜೀವನದಲ್ಲಿ ಒಮ್ಮೊಮ್ಮೆಯಾದರೂ ನಮ್ಮ ಸಾಂಪ್ರದಾಯಿಕ ಹಬ್ಬಗಳ ಪರಿಚಯ ಮಾಡಿಸಿ. ಆಚರಣೆಗಳ ಬಗ್ಗೆ ತಿಳಿಸಿಕೊಡಿ. ನೀವು ಹಾಗೆ ಮಾಡಿದಲ್ಲಿ ಅದು ನಮ್ಮ ಮಕ್ಕಳಿಗೆ ನಾವು ಕೊಡುವ ಅತ್ಯುತ್ತಮ ಸಂಸ್ಕಾರಗಳಲ್ಲಿ ಒಂದು. ನವರಾತ್ರಿ, ದೀಪಾವಳಿಯಂತ ಹಬ್ಬಗಳೂ ಬರೀ ಹಬ್ಬಗಳಲ್ಲ ಶುಭ ಸಮಯದಿ ಶುದ್ಧಮನದಿ ಆರಾಧಿಸುವ ಎಲ್ಲರಿಗೂ ದೇವರು ಸಾಕ್ಷಾತ್ಕರಿಸುವ ಹಬ್ಬಗಳು. ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಕೃಪೆಯಿಂದಾಗಿ ನಮ್ಮ ಮಹಿಳೆಯರು ಇದೀಗ ಕೋಟಿ ಕುಂಕುಮಾರ್ಚನೆ ಮುಗಿಸಿ ಶ್ರೀ ಲಲಿತಾ ಸಹಸ್ರ ನಾಮಾವಳಿಯನ್ನು ಮನೆ ಮನೆಯಲ್ಲೂ ಪಠಿಸಿ ಧನ್ಯರಾಗಿದ್ದಾರೆ. ಇದೀಗ ದೇವಿಯ ಕುರಿತಾದ ಇನ್ನೊಂದು ಶ್ಲೋಕ ಶ್ರೀ ಶಂಕರಾಚಾರ್‍ಯ ವಿರಚಿತ ಸೌಂದರ್ಯಲಹರಿಯ ಪಠಣಕ್ಕೆ ಆರಂಭಿಸಿದ್ದಾರೆ. ವೀಣಾಪಾಣೀ ಪುಸ್ತಕಧಾರಿಣೀ ಮಂಜುಳಭಾಷಿಣೀ ಶಾರದೆಯಲ್ಲಿ ಶರಣಾಗಿ ಸನ್ಮಂಗಳವನ್ನು ಪಡೆಯೋಣ.