ವೃದ್ಧಾಪ್ಯವು ಅಷ್ಟೊಂದು ದಯನೀಯವಾಗಿರಬೇಕೇ?
September 17th, 2008.
- ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು, ಕೊಡಗು
ಬದುಕಿನ ಕೊನೆಯ ಘಟ್ಟವೂ ಬಾಲ್ಯ, ಹರೆಯದಷ್ಟೇ ಆನಂದದಾಯಕವಾಗಿರಬೇಕು ಎನ್ನುವುದು ಎಲ್ಲರಲ್ಲೂ ಸರ್ವಥಾ ಅಪೇಕ್ಷಣೀಯವಾಗಿದೆ. ಏಕೆಂದರೆ ಬಾಲ್ಯ, ಹರೆಯಗಳು ಎಂದೂ ಶಾಶ್ವತವಲ್ಲ. ಅಪಮೃತ್ಯುವನ್ನು ಹೊರತುಪಡಿಸಿದಲ್ಲಿ, ಜನಿಸಿದವರೆಲ್ಲರೂ ಕಾಲರಾಯನ ತುಳಿತಕೆ ಸಿಲುಕಿ ಕೊನೆಗೆ ವೃದ್ಧಾಪ್ಯವನ್ನು ಹೊಂದಲೇ ಬೇಕು. ಇದು ಪ್ರಕೃತಿಯ ನಿಯಮ. ಹಾಗಿರುವಾಗ ದಯನೀಯ ಅಂತ್ಯಕ್ಕೆ ತಿಲಾಂಜಲಿ ಹಾಕುವುದು ಪ್ರಸಕ್ತ ಪೀಳಿಗೆಯ ಕರ್ತವ್ಯ
ನಾವು ವಿಹಾರಕ್ಕೆಂದೋ ಅಥವಾ ಮತ್ತಾವುದೋ ಘನಕಾರ್ಯಕ್ಕಾಗಿಯೋ ಹೊರಗೆ ಹೋಗಿದ್ದಾಗ ಬಾಗಿದ ಬೆನ್ನು, ಬಕ್ಕ ತಲೆ ಅಥವಾ ನೆರೆತ ತಲೆಕೂದಲು, ಬೊಜ್ಜು ಬಾಯಿಯೊಂದಿಗೆ ಚೈತನ್ಯರಹಿತ ಕೃಶಕಾಯದ ಆಧಾರಕ್ಕಾಗಿ ಊರುಗೋಲಿನ ಆಸರೆಯೊಂದಿಗೆ ನಿಧಾನವಾಗಿ ನಡೆದಾಡುವ ವೃದ್ಧರನ್ನು ಕಂಡಾಗ ನಮ್ಮಲ್ಲಿ ಅನುಕಂಪದ ಭಾವನೆ ಮೂಡುವುದು ಸಾಮಾನ್ಯ. ಹೌದು, ಕಾಲರಾಯ ಯಾವುದೇ ವ್ಯಕ್ತಿಯಲ್ಲೂ ತಾರುಣ್ಯ ಕಳೆದೊಡನೆಯೇ ಅವರಲ್ಲಿ ತನ್ನ ಛಾಪನ್ನು ಮೂಡಿಸಿ, ವೃದ್ಧಾಪ್ಯವು ಅದೆಷ್ಟು ಅಸಹನೀಯ ಮತ್ತು ಅನಪೇಕ್ಷಣೀಯ ಎಂಬುದನ್ನು ತೋರಿಸಿಕೊಡುತ್ತಾನೆ. ಆದರೆ ಯಾರನ್ನೂ ಬೆಂಬಿಡದೆ ಕಾಡುವ ವೃದ್ಧಾಪ್ಯವು ನಿಜಕ್ಕೂ ಅದೆಷ್ಟು ಕ್ರೂರವಾಗಿರಬೇಕೇ, ಅವರೂ ಎಳೆಯರಷ್ಟೇ ಸೊಗಸಾಗಿ ಜೀವನದ ಸಂಧ್ಯೆಯನ್ನು ಸ್ವೀಕರಿಸಿ ಆನಂದಿಸಬಾರದೇಕೆ ಎನ್ನುವ ಪ್ರಶ್ನೆ ನಮ್ಮಲ್ಲಿ ಕೆಲವೊಮ್ಮೆ ಏಳುತ್ತದೆ. ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಸಮಸ್ಯೆಗಳ ಬಗ್ಗೆ ಚಿಂತನೆ ಹರಿಸಲು ಪ್ರತಿವರ್ಷ ಅಕ್ಟೋಬರ್ ಒಂದರಂದು ಅಂತರ್ರಾಷ್ಟ್ರೀಯ ಹಿರಿಯ ನಾಗರಿಕರ ದಿನವನ್ನಾಗಿ ಘೋಷಿಸಲಾಗಿದ್ದು ಆ ಸಂದರ್ಭದಲ್ಲಿ ವಯಸ್ಕರ ಸಮಸ್ಯೆಗಳು ಮತ್ತು ಅವುಗಳ ಪರಿಹಾರದ ಬಗ್ಗೆ ಚಿಂತನೆ ಹರಿಸಲು ಸಕಾಲವಾಗಿದೆ. ವೃದ್ಧರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಅನೇಕ ಸಮಸ್ಯೆಗಳಿಂದ ಬಳಲುತ್ತಾರೆ. ಹರೆಯದಲ್ಲಿತಮ್ಮಿಚ್ಚೆಯಂತೆ ಬಳುಕುತ್ತಿದ್ದ ಕೈಕಾಲುಗಳು ವಯಸ್ಸಾದಂತೆ ನಿಯಂತ್ರಣ ಕಳೆದುಕೊಳ್ಳುತ್ತಾ ಹೋಗುತ್ತವೆ. ತುಸು ನಡೆದಾಡಿದರೂ ಸಂದುಗಳಲ್ಲಿ ನೋವು, ಹಾಗೆಂದು ಕುಳಿತೇ ಇದ್ದರೆ ಬೆನ್ನಿನಲ್ಲಿ ಸೆಳೆತ, ಕೆಲಸ ಮಾಡುವ ಹುಮ್ಮಸ್ಸು ಇದ್ದರೂ ಮನಸ್ಸಿನ ಆಜ್ಞೆಯನ್ನು ಪಾಲಿಸದ ದೇಹದ ಅಂಗಾಂಗಗಳು, ರಕ್ತದೊತ್ತಡದ ಜೊತೆಗೆ ಮಧುಮೇಹರೋಗ ಹೀಗೆ ಹಲವು ರೋಗಗಳು ಕಾಯವನ್ನು ಹಿಂಡಿ ಹಿಪ್ಪೆಯನ್ನಾಗಿಸುತ್ತವೆ. ಇದಕ್ಕೆ ಕಳಸವಿಟ್ಟಂತೆ ಮರೆವಿನ ಕಾಯಿಲೆ (ಅಜ್ನಿಮರ್ಸ್ ಡಿಸೀಸ್)ಯೂ ಬೆರೆತು ತಾವು ಕನ್ನಡಕವನ್ನೆಲ್ಲಿ ಇಟ್ಟಿದ್ದೇವೆ, ತಮ್ಮ ಶ್ರವಣಸಾಧನವೆಲ್ಲಿ ಕಣ್ಮರೆಯಾಯಿತು ಎಂಬ ತೊಳಲಾಟವೂ ಅವರಿಗುಂಟಾಗುತ್ತದೆ . ಬಚ್ಚಲಿನಲ್ಲಿ ಬಿದ್ದದ್ದೇ ನೆಪವಾಗಿ ಮೂಳೆಮುರಿತಕ್ಕೊಳಗಾಗಿ ತಿಂಗಳುಗಟ್ಟಲೆ ಹಾಸಿಗೆಯಲ್ಲೇ ಮಲಗಬೇಕಾಗಬಹುದು.
ಮಾನಸಿಕವಾಗಿಯೂ ವೃದ್ಧರು ಆಘಾತಕ್ಕೊಳಗಾಗುತ್ತಾರೆ.ಇದುವರೆಗೂ ತಮ್ಮ ಯಜಮಾನಿಕೆಯಲ್ಲಿಯೇ ಮನೆಯ ಸಾರಥ್ಯ ನಡೆಯುತ್ತಿದ್ದು ಇದೀಗ ತರುಣ ಪೀಳಿಗೆ ಅದನ್ನು ತಮ್ಮ ವಶಕ್ಕೆ ತೆಗೆದುಕೊಂಡದ್ದು ಅವರಿಗೆ ಅಸಹನೀಯವೆನಿಸುತ್ತದೆ.ತರುಣರು ಜಟಿಲ ವಿಷಯಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸರಿಯಿರಲಾರದು, ಅವರು ತಮ್ಮ ಸಲಹೆಯನ್ನೂ ಕೇಳಬಹುದಿತ್ತೆಂದು ವೃದ್ಧರಿಗೆ ಅನಿಸುತ್ತದೆ. ಪೈಪೋಟಿಯೇ ಪ್ರಧಾನವಾಗಿರುವ, ಬದಲಾಗುತ್ತಿರುವ ಪ್ರಸಕ್ತ ಸನ್ನಿವೇಶಗಳಲ್ಲಿ ಬದುಕಿನ ತಮ್ಮ ಹಳೆಯ ಸೂತ್ರಗಳೆಲ್ಲವೂ ಈಗ ಅನರ್ಹ, ಅಪ್ರಸ್ತುತ ಹಾಗೂ ಅಪ್ರಯೋಜಕ ಎಂಬ ಸರಳವಾದ ಸತ್ಯದ ಅರಿವು ವೃದ್ಧರಿಗಾಗುವುದಿಲ್ಲ. ಜೊತೆಗೆ ತಮ್ಮನ್ನು ಯುವಜನಾಂಗವು ತೀರಾ ಅವಗಣನೆ ಮಾಡುತ್ತಿದೆಯೆಂಬ ನೋವು ಅವರನ್ನು ಕಾಡುತ್ತಿರುತ್ತದೆ. ವೈವಾಹಿಕ ಜೀವನದ ಅನೇಕ ವರ್ಷಗಳನ್ನು ಕಳೆದ ವಯಸ್ಕರಲ್ಲಿ ತಮ್ಮ ಸಂಗಾತಿ ನಿಧನರಾದಮೇಲಂತೂ ತಾನಿನ್ನು ಒಬ್ಬಂಟಿ ಎಂಬ ದುಮ್ಮಾನದಿಂದ ತೀರಾ ಹತಾಶರಾಗುತ್ತಾರೆ. ತಮ್ಮ ಅಳಲು, ಕ್ಷೋಬೆ ಹಾಗೂ ಮನದಾಳದ ವಿಚಾರಗಳನ್ನು ಹಂಚಿಕೊಳ್ಳಲು ಜೊತೆ ದೊರೆಯ ದಾದಾಗ ಬದುಕು ಅದೆಷ್ಟೋ ಬರ್ಬರ ವೆಂದೆನಿಸುತ್ತದೆ. ಬದುಕಿನುದ್ದಕ್ಕೂ ತಮ್ಮ ಮಕ್ಕಳಿಗಾಗಿ ದುಡಿದು, ತಮಗಾಗಿ ಏನನ್ನೂ ಇರಿಸಿಕೊಳ್ಳದೆ ಈಗ ಆರ್ಥಿಕವಾಗಿಯೂ ದುರ್ಬಲರಾದ ವಯಸ್ಕರ ಬದುಕಿನ ಬವಣೆ ಮತ್ತಷ್ಟೂ ಶೋಚನೀಯ ವಾಗಿರುತ್ತದೆ.ತಮ್ಮ ಕನಿಷ್ಠ ಅಗತ್ಯಗಳಿಗೂ ಮಕ್ಕಳಲಿ ಯಾಚಿಸಬೇಕಾದಾಗ ಮನಸ್ಸು ಮತ್ತಷ್ಟು ಕುಗ್ಗುತ್ತದೆ. ಹಣಕಾಸಿನ ಲಭ್ಯತೆ ಕಗ್ಗಂಟಾಗಿ ಉಳಿದು ಅಭಿಮಾನವೇ ಈಗ ಏಕೈಕ ಆಸ್ಥಿಯಾಗಿ ಉಳಿದಿರುವ ಈ ವಯಸ್ಕರಲ್ಲಿ ಈಗ ಅದಕ್ಕೂ ಕುತ್ತು ಬಂದಾಗ ಅವರಿಗೆ ಆಡಲೂ ಆಗದೆ, ಅನುಭವಿಸಲೂ ಆಗದೆ ಉಳಿದಿರುವ ಬದುಕಿನ ಪಯಣದ ಕಾಠಿಣ್ಯ ಅವರನ್ನು ತಬ್ಬಿಬ್ಬುಗೊಳಿಸುತ್ತದೆ.
ಬದುಕಿನ ಸಂಧ್ಯಾಕಾಲದಲ್ಲಿರುವ ಈ ವಯೋವೃದ್ಧರ ಉಳಿದಿರಬಹುದಾದ ಪಯಣದ ಹಾದಿ ಸುಗಮವಾಗಿರಿಸಲು ಸಮಾಜವಾಗಲೀ ಸ್ವಯಂ ಸಂಘಗಳಾಗಲೀ ಸರಕಾರವಾಗಲೀ ಅನೇಕ ಯೋಜನೆ ಗಳನ್ನು ಹಮ್ಮಿಕೊಂಡು ಅವರ ಬಾಳನ್ನು ಸುಗಮ ಗೊಳಿಸಬಹುದು. ಮೊದಲನೆಯದಾಗಿ ಈಗಿನ ತರುಣ ಪೀಳಿಗೆಗಳು ಹರೆಯವೆಂಬುದು ಶಾಶ್ವತವಲ್ಲ, ನಾಳೆ ತಮಗೂ ವೃದ್ಧಾಪ್ಯವೆಂಬುದು ಕಟ್ಟಿಟ ಬುತ್ತಿ ಎಂಬ ಸತ್ಯವನ್ನು ಅರ್ಥಮಾಡಿಕೊಂಡು ವೃದ್ಧರಲ್ಲಿ ಸಹಾನುಭೂತಿ ತೋರಿಸಬೇಕು. ಅವರಿಗೆ ಗೌರವ ತೋರಿಸಿ ಬಾಳಿನ ದೀರ್ಘ ಹಾದಿಯನ್ನು ಕ್ರಮಿಸಿ ಅಪಾರ ಅನುಭವದ ಸಾರವನ್ನು ಹೊಂದಿದ ಅವರ ಮಾರ್ಗದರ್ಶನವು ಕೆಲವೊಮ್ಮೆ ಈಗಲೂ ಸಮಯೋಚಿತ ಎಂಬುದನ್ನು ಮನಗಾಣಬೇಕು. ಒಂದಿಷ್ಟು ಕಾಸನ್ನು ಚೆಲ್ಲಿ ವೃದ್ಧಾಶ್ರಮಕ್ಕೆ ಅವರನ್ನು ದೂಡುವುದಕ್ಕಿಂತಲೂ ತಮ್ಮ ಮನೆಗಳಲೆ ಅವರಿಗಿರಲು ಸೂಕ್ತ ಅವಕಾಶವನ್ನು ನೀಡಿ ಅವರು ತಮಗೆಂದೂ ಭಾರವಲ್ಲ, ಅವರ ಸಾಂಗತ್ಯವು ಮನೆಮಂದಿಗೆಲ್ಲ ಅತಿ ಅಗತ್ಯ ಎಂಬ ಧೋರಣೆ ಯನ್ನು ತಾಳಬೇಕು. ಅವರ ಏಕಾಂಗಿತನವನ್ನು ಮರೆಸಿ ಅವರಿಗೆ ಸಾಂತ್ವನ ಹೇಳಬೇಕು. ಸರಕಾರವೂ ವೃದ್ಧಾಪ್ಯವೇತನಕ್ಕಿರುವ ಕೆಂಪು ಪಟ್ಟಿಯನ್ನು ಸರಳಗೊಳಿಸಿ ಈ ಹಿರಿಯ ನಾಗರಿಕರ ಬವಣೆಯನ್ನು ಶಮನಗೊಳಿಸ ಬೇಕು. ಬಸ್‌ಗಳಲಿ ಸ್ಥಳ ಕಾಯ್ದಿರಿಸುವಿಕೆ, ಸರಣಿ ನಿಲ್ಲುವಲಿ ಆದ್ಯತೆ,ತೀರ್ಥ ಯಾತ್ರೆಯಂತಹ ಪ್ರಯಾಣಗಳಲಿ ರಿಯಾಯತಿ ಮುಂತಾದ ಕ್ರಮಗಳನ್ನು ಜಾರಿಗೊಳಿಸಿ ಮಾನವೀಯತೆಯನ್ನು ಮೆರೆಯ ಬೇಕು. ಸ್ವಯಂಸಂಘ ಸಂಸ್ಥೆಗಳೂ ಅಗಿಂದಾಗೆ ಅಲ್ಲಲ್ಲಿ ಶಿಬಿರಗಳನ್ನು ಏರ್ಪಡಿಸಿ ಉಚಿತ ಆರೋಗ್ಯ ತಪಾಸಣೆ, ಔಷಧಿಗಳ ಪೂರೈಕೆ, ಆಪ ಸಮಾಲೋಚನೆ ಮುಂತಾದವುಗಳನ್ನು ಮಾಡಬೇಕು. ಬದುಕಿನ ಕೊನೆಯ ಘಟ್ಟವೂ ಬಾಲ್ಯ, ಹರೆಯದಷ್ಟೇ ಆನಂದದಾಯಕವಾಗಿರಬೇಕು ಎನ್ನುವುದು ಎನ್ನುವುದು ಎಲ್ಲರಲ್ಲೂ ಸರ್ವಥಾ ಅಪೇಕ್ಷಣೀಯವಾಗಿದೆ. ಏಕೆಂದರೆ ಬಾಲ್ಯ, ಹರೆಯಗಳು ಎಂದೂ ಶಾಶ್ವತವಲ್ಲ. ಅಪಮೃತ್ಯು ವನ್ನು ಹೊರತುಪಡಿಸಿದಲ್ಲಿ, ಜನಿಸಿದವರೆಲ್ಲರೂ ಕಾಲರಾಯನ ತುಳಿತಕ್ಕೆ ಸಿಲುಕಿ ಕೊನೆಗೆ ವೃದ್ಧಾಪ್ಯವನ್ನು ಹೊಂದಲೇ ಬೇಕು. ಇದು ಪ್ರಕೃತಿಯ ನಿಯಮ. ಹಾಗಿರುವಾಗ ದಯ ನೀಯ ಅಂತ್ಯಕ್ಕೆ ತಿಲಾಂಜಲಿ ಹಾಕುವುದು ಪ್ರಸಕ್ತ ಪೀಳಿಗೆಯ ಕರ್ತವ್ಯವಲ್ಲವೇ?