ಮನೆಗೆ ಸೊಬಗು ಮನಕೆ ಮೆರುಗು…. ರಂಗು ರಂಗಿನ ರಂಗೋಲಿ
September 17th, 2008.
- ರೋಹಿಣಿ ಸತ್ಯ, ಬೆಂಗಳೂರು
ಭವ್ಯವಾದ ಬಂಗಲೆಯಾಗಲಿ, ಚಿಕ್ಕದಾದ ಚೊಕ್ಕದಾದ ಪುಟ್ಟ ಮನೆಯಾಗಿರಲಿ ಅಥವಾ ಸಣ್ಣ ಗುಡಿಸಲೆ ಆಗಿರಲಿ ಅದರ ಅಂಗಳದಲ್ಲಿ ಸೂರ್ಯೋ ದಯಕ್ಕೆ ಮನಮೋಹಕವಾದ ರಂಗೋಲಿ ಇರುವುದು ನಮ್ಮ ಭಾರತೀಯ ಸಂಪ್ರದಾಯ.
ಮನೆಯೊಳಗಿನ ಸೌಂದರ್‍ಯವು ಒಳಗಿನ ವಿನ್ಯಾಸಕಲೆ ಮತ್ತು ಪೀಠೋಪಕರಣಗಳಿಂದ ಅಳೆಯಬಹುದಾಗಿದೆ. ಒಂದು ಮನೆಯ ಅಂದ ಚೆಂದ ಕೇವಲ ಇಷ್ಟಕ್ಕೆ ಸೀಮಿತವಲ್ಲ. ಆ ಮನೆಯ ಪರಿವಾರದ ಮನದೊಳಗಿನ ಮೈತ್ರೀಭಾವ, ಸಂಸ್ಕಾರ ಅವರ ನಡೆನುಡಿಗಳು ಸೌಹಾರ್ದತೆಯು ಆ ಮನೆಗೆ ಸೊಬಗನ್ನು ನೀಡುವಲ್ಲಿ ತಮ್ಮ ಪಾಲನ್ನು ಹಂಚಿಕೊಳ್ಳುತ್ತವೆ. ಹಾಗೆಯೇ ಮನೆಯಂಗಳದಿ ರಂಗುರಂಗಿನ ಮುದ್ದಾದ ಎಳೆಗಳಿಂದ ಕೂಡಿದ ಅಥವಾ ಚುಕ್ಕೆಗಳಿಂದ ಶೋಭಿತವಾದ ರಂಗೋಲಿ ಅಥವಾ ನಮ್ಮ ಭಾರತೀಯ ಸಂಸ್ಕೃತಿಗನು ಗುಣವಾಗಿ ಶಂಖ, ಚಕ್ರ, ಗಧಾ, ಪದ್ಮ, ಗೋಪದ್ಮ, ಕಲಶ, ಸ್ವಸ್ತಿಕ, ಸೂರ್ಯ, ಚಂದ್ರ, ಧನುಸ್ಸು, ಓಂಕಾರ, ನಕ್ಷತ್ರ, ಜ್ಯೋತಿಗಳಂತಹ ಚಿಹ್ನೆಗಳಿಂದ ಕೂಡಿದ ರಂಗವಲ್ಲಿಯಿಂದಲೂ ಆ ಮನೆಯ ಅಂದ ಪರಿವಾರದ ಅಂತಃಸೌಂದರ್‍ಯ ನಮಗೆ ಗೋಚರವಾಗುತ್ತದೆ. ಹೀಗೆ ಎಳೆಎಳೆಯಾಗಿ ಹೆಂಗಳೆಯರ ಬೆರಳಿನ ನಡುವೆ ಜಾರಿ ಹಲವಾರು ಆಕೃತಿಗಳನ್ನು ಪಡೆವ ರಂಗೋಲಿ ನಮ್ಮ ಭವ್ಯ ಸಂಸ್ಕೃತಿಯ ಪ್ರತೀಕವಾಗಿದೆ.
ಹಿಂದೆ ಮನೆಯ ಮುಂದೆ ಮಣ್ಣಿನ ಅಂಗಳವಿದ್ದು ಅದನ್ನು ಗೋಮಯದಿಂದ ಹಚ್ಚಹಸಿರಾಗಿ ಸಾರಿಸುವುದು ವಾಡಿಕೆಯಾಗಿತ್ತು. ಆ ಮಣ್ಣಿನ ನಡುವೆ ಅಲ್ಲಲ್ಲಿ ಮನೆಮಾಡಿಕೊಂಡು ರಂಧ್ರಗಳಿಂದ ಹೊರ ಬರುವ ಇರುವೆಯ ಸಾಲಿಗೆ ಆಹಾರ ನೀಡುವ ಉದ್ದೇಶದಿಂದ ಅಲ್ಲಿಯ ಹಿಟ್ಟನ್ನು ರಂಗವಲ್ಲಿ ಬಿಡಿಸಲು ಬಳಸಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಮನೆಯ ಮುಂದೆ ಕಲ್ಲು ಚಪ್ಪಡಿಗಳು, ಮೊಜಾಯಿಕ್ ಫಲಕಗಳು, ಅಮೃತ ಶಿಲೆಗಳು ಆ ಜಾಗವನ್ನು ಭರ್ತಿ ಮಾಡಿವೆ. ಹೀಗಾಗಿ ರಂಗೋಲಿಯನ್ನು ಕೇವಲ ಅಕ್ಕಿಯ ಹಿಟ್ಟಿನಿಂದ ಮಾತ್ರವಲ್ಲದೆ, ರಂಗೋಲಿ ಪುಡಿ, ಉಪ್ಪು, ಧಾನ್ಯಗಳು, ಹೂವಿನ ಎಸಳುಗಳು, ತರಕಾರಿ ಮತ್ತು ಬಣ್ಣದ ಪುಡಿಗಳಿಂದ ಅಲಂಕರಿಸುವುದರಿಂದ ಇತ್ತೀಚೆಗೆ ಇದನ್ನು ಭೂ ಅಲಂಕರಣಾ ಎಂದೂ ಕರೆಯುತ್ತಿದ್ದಾರೆ. ಬಹುಮಹಡಿಯ ಕಟ್ಟಡಗಳು ಉಗಮ ವಾದಾಗಿನಿಂದಲು ಮನೆಯ ಮುಂದಿನ ಅಂಗಳ ಸ್ವಲ್ಪ ಜಾಗಕ್ಕೆ ಸೀಮಿತವಾಗಿದೆ. ಹಾಗಾದಾಗ್ಯೂ ಆ ಜಾಗದಲ್ಲಿಯೇ ಅವರವರಿಗೆ ತೋಚಿದ ರೀತಿಯಲ್ಲಿ ರಂಗವಲ್ಲಿ ಬಿಡಿಸುವ ಪದ್ಧತಿ, ತೀರ್ಥಸ್ಥಳಗಳು, ಹಳ್ಳಿಯ ಮನೆ ಗುಡಿಸಲುಗಳ ಮುಂದೆ ಇನ್ನು ರಂಗೋಲಿ ತಮ್ಮ ಅಸ್ತಿತ್ವನ್ನು ಉಳಿಸಿಕೊಂಡಿದೆ. ರಂಗೋಲಿಯು ಪ್ರಾಚೀನ ಕಲೆಯೆಂಬುವುದಕ್ಕೆ ಪುರಾವೆ ಇದು ವಾತ್ಸಾಯನ ಕಾಮಸೂತ್ರದಲ್ಲಿ ೬೪ ಕಲೆಗಳಲ್ಲಿ ಇದೂ ಒಂದು ಎನ್ನುವ ಉಲ್ಲೇಖವಿದೆ.
ಇದೀಗ ಬದಲಾಗುತ್ತಿರುವ ಜನಜೀವನದಲ್ಲಿ ಹೊಸ್ತಿಲ ಮೇಲೆ ಖಾಯಂ ಆಗಿ ರಂಗೋಲಿಯನ್ನು ಪೈಂಟ್ ಮೂಲಕ ಬಿಡಿಸುವುದು ಹಾಗೆಯೇ ಪ್ಲಾಸ್ಟಿಕ್‌ನ ಸ್ಟಿಕರ್ ಸಾಂಪ್ರದಾಯಿಕ ರಂಗೋಲಿಯ ಸ್ಥಾನವನ್ನು ಆಕ್ರಮಿಸಿವೆ. ಇಂತಹ ಸಮಯದಲ್ಲಿ ಸಂಸ್ಕಾರ ಭಾರತಿಯು ಈ ಸಾಂಪ್ರದಾಯಿಕ ಕಲೆಯಾದ ಭೂ ಅಲಂಕರಣೆಯನ್ನು ಉಳಿಸಿ, ಬೆಳೆಸಿ ಕಲಿಸುವುದರಲ್ಲಿ ದೇಶದುದ್ದಗಲಕ್ಕೂ ಮಹತ್ವಪೂರ್ಣ ಪಾತ್ರವಹಿಸುತ್ತಿದೆ. ರಂಗೋಲಿ ಶಿಬಿರಗಳನ್ನು ನಡೆಸುವುದು, ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವಂತಹ ಯಾವುದೇ ಕಾರ್ಯಕ್ರಮ ಸಂಸ್ಕಾರಭಾರತೀಯ ಹೆಸರಿನಡಿ ನಡೆದಾಗ ಅದರ ಮೊದಲ ಅಂಗ ರಂಗೋಲಿಯ ರಚನೆಯಾಗಿರುತ್ತದೆ.
ಇಲ್ಲಿ ರಂಗೋಲಿ ಕಲೆಯನ್ನು ಉಚ್ಛ ಮಟ್ಟದಲ್ಲಿ ನಿಲ್ಲಿಸಿರುವ ಸಂಸ್ಕಾರಭಾರತಿಯ ಬಗ್ಗೆ ಎರಡು ಮಾತುಗಳು ಉಲ್ಲೇಖಿಸುವುದು ಅತ್ಯಾವಶ್ಯಕ. ಅಖಿಲಭಾರತ ಸಂಸ್ಥೆಯಾಗಿ ದೇಶದ ನಾಲ್ಕೂ ನಿಟ್ಟಿನಲ್ಲಿ ಕಲೆಯ ಸುಗಂಧವನ್ನು ಗಾಳಿಯ ಜೊತೆ ಬೆರೆಸಿ ಉಸಿರಲ್ಲಿ ಉಸಿರಾಗಿಸುವ ಪಣತೊಟ್ಟ ಹೆಮ್ಮೆ ಸಂಸ್ಕಾರಭಾರತಿಯದು. ಬಳಕೆಯಾದಷ್ಟು ವೃದ್ಧಿಯಾಗುವುದು ಕಲೆ. ಕಲಾಕಾರನು ಎಂದಿಗೂ ಸುಸಂಪನ್ನನೇ. ಇಂತಹ ಲಲಿತಕಲೆಯನ್ನು ಜೀವನದಿಯಾಗಿಸುವ ಪ್ರಯತ್ನ ಸಂಸ್ಕಾರಭಾರತಿಯದು. ಇದರ ಸುಮಾರು ಶಾಖೆಗಳು ಬೇರೆಬೇರೆ ಸ್ಥಳಗಳಲ್ಲಿ ಕಾರ್ಯನಿರತವಾಗಿದೆ. ಸಾವಿರಾರು ಸೇವಾಮನೋಭಾವವುಳ್ಳ ಕಾರ್ಯಕರ್ತರು ಫಲಾಪೇಕ್ಷೆಯಿಲ್ಲದೆ ಇದರಲ್ಲಿ ದುಡಿಯುತ್ತಿದ್ದಾರೆ. ಇಂತಹ ಸಂಸ್ಕಾರಭಾರತಿಯ ಧ್ಯೇಯಗಳಲ್ಲಿ ರಂಗೋಲಿ ಕಲೆಯನ್ನು ಉಳಿಸುವುದು, ಬೆಳೆಸುವುದು ಸೇರಿದೆ.
ಇಡೀ ಭಾರತದಲ್ಲಿ ರಂಗೋಲಿಯು ೪೦೦ ರವರೆಗೂ ಭಿನ್ನ ಹೆಸರುಗಳಿಂದ ಕರೆಯಲ್ಪಡುತ್ತಿದೆ. ದಕ್ಷಿಣ ಭಾರತದ ತಮಿಳು ಸಂಪ್ರದಾಯದ ಜನರು ’ಕೋಲಮ್’ ಎಂದು, ಆಂಧ್ರsದಲ್ಲಿ ’ಮುಗ್ಗು’, ಕೇರಳದಲ್ಲಿ ’ಓಣಂ’, ಒರಿಸ್ಸಾದಲ್ಲಿ ’ಓಸಾ’, ಉತ್ತರಪ್ರದೇಶದಲ್ಲಿ ’ಸೋನಾರಚನಾ’, ಗುಜರಾತಿನಲ್ಲಿ ’ಸಾಥಿಯಾ’ ಹಹೀಗೆ ಹಲವಾರು ಪ್ರದೇಶಗಳಲ್ಲಿ ರಂಗೋಲಿಯು ಹಲವಾರು ಹೆಸರುಗಳಿಂದ ಸೂಚಿತವಾಗುತ್ತಿದೆ. ರಂಗೋಲಿಯು ಕೇವಲ ದಿನನಿತ್ಯದ ಸಾಮಾನ್ಯ ಕಾರ್ಯಕ್ರಮ ಆಗಿರದೆ ಹಬ್ಬಹರಿದಿನಗಳಲ್ಲಿ ವಿಶೇಷ ಸ್ಥಾನವನ್ನು ಪಡೆದಿರುತ್ತದೆ. ಹಾಗೆಯೇ ರಂಗೋಲಿಯು ಪ್ರಧಾನವಾಗಿ ಸ್ತ್ರೀಯರ ಕಲೆಯೆಂದು ಪರಿಗಣಿಸಲ್ಪಟ್ಟಿದ್ದರೂ ಕೆಲವು ಯಜ್ಞಯಾಗಾದಿಗಳ ತಾಂತ್ರಿಕ ಪೂಜೆಯ ಸಮಯದಲ್ಲಿ ಪುರುಷರೂ ಸಹ ಮಂಡಲವೆಂಬ ಹೆಸರಿನಿಂದ ಭೂ ಅಲಂಕರಣೆ ಮಾಡುತ್ತಾರೆ.
ಕೇವಲ ವ್ಯಕ್ತಿಯೊಬ್ಬನಿಗೇ ಸೀಮಿತವಾಗದೆ ಪರಂಪರಾನುಗತವಾಗಿ ಸಾಗಿ ಬಂದಂತಹ ಕಲೆ ರಂಗೋಲಿ. ಭಾಷಾ ಭೇದವನ್ನರಿಯದೆ ಎಲ್ಲರೂ ಕಲಿಯಬಹುದಾದ ಕಲೆ, ಭಾಷೆಗೆ ನಿಲುಕದ ಭಾವಪೂರ್ಣ ಸಾಕಾರ ಚಿಹ್ನೆಗಳ ಸಮೂಹವೇ ರಂಗುರಂಗಿನ ಈ ರಂಗೋಲಿ. ಹೀಗೆ ರಂಗೋಲಿಯು ಕೇವಲ ಅಲಂಕಾರಿಕ ವಸ್ತು ಆಗಿರದೆ, ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ನಮ್ಮ ಸಂಸ್ಕೃತಿಯ ಮನೋಭಾವ, ಸಂಸ್ಕಾರ, ಕಲಾದರ್ಶನದ ವಿಶ್ವರೂಪವನ್ನು ನಮ್ಮ ಮುಂದಿಡುತ್ತದೆ.
March 22nd, 2011 at 3:49 am
different verity rangoli
June 1st, 2011 at 2:59 am
Rangoli tumba chennagide. Innu hechchu hechchu upload maadi.
September 22nd, 2011 at 9:16 am
rangoli tumba sundaravagi ede kaliyodake tumba anukula agute
October 3rd, 2011 at 11:24 pm
Innu chennagiro rangoli idre up load maadi