• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಹಳ್ಳಿಮನೆ ಮಾತು

    ನಾಡಹಬ್ಬಕ್ಕೊಂದು ಚಿಂತನೆ

    September 17th, 2008.


    -ಪ್ರಿಯಾ ಎಂ., ಕಲ್ಲಬ್ಬೆ

    ನಾಡ ದೇವಿಯ ಗುಡಿಯ ಮುಂಗಡೆ ಹಾಡುತಿರುವುದು ಕೋಗಿಲೆ

    ಕಾಳ ಕತ್ತಲೆ ಕಳೆದು ಬೆಳಗಿನ ಕೋಳಿ ಕೂಗಿತು ಆಗಲೇ

    ನಮ್ಮ ನಾಡದೇವಿಯ ಮುಂದೆ ಕೋಗಿಲೆ ಹಾಡುತ್ತಿದೆ. ಆದರೆ ಅದರ ದನಿಯ ಇಂಪು ತಾಯಿಯ ಕಿವಿಯನ್ನು ತಲುಪಲು ನಾವು ಬಿಡುತ್ತಿಲ್ಲ ಮುಂಜಾನೆಯಿಂದ ಸಂಜೆಯವರೆಗೂ ಕರ್ಕಶದನಿ ಯಿಂದಲೇ ತುಂಬಿದೆ ಇಂದು ನಾಡದೇವಿಯ ಮಡಿಲು. ಅಬ್ಬರದ ಸ್ಟೀರಿಯೋಗಳ ಗಬ್ಬು ಹಾಡುಗಳಲ್ಲಿ ಕನ್ನಡ, ಕನ್ನಡ ಅಂತ ನವೆಂಬರ್ ತಿಂಗಳಿಡೀ ಕೂಗಿದರೆ ಮುಗಿದು ಹೋಯಿತೆ ನಾಡಹಬ್ಬ? ಈ ಪರಿಯ ಹಬ್ಬ ದೇವಿಯ ಮುಂಗಡೆ ಬೆಳ್ಳನೆಯ ಮುಂಜಾನೆಯ ಬೆಳಕಿನ ಕಿರಣಗಳ ತಂಪು ಬೆಳ್ಳಗೆಯನ್ನು ತರಬಲ್ಲದೆ? ನಾಡದೇವಿ ಈ ಶ್ರೀ ಗಂಧದ ನಾಡಿನಲ್ಲಿ, ಸಹ್ಯಾದ್ರಿಯ ಸಾಲಿನಲ್ಲಿ ಕರಾವಳಿಯ ಅಲೆಗಳಲ್ಲಿ ಬಯಲ ಹಸಿರಿನ ಸೆರಗಿನಲ್ಲಿ ಮೈ ದುಂಬಿ ನಲಿವಂತಾಗದೇ ಅವಳ ಹಬ್ಬ ಆಚರಿಸಿ ಏನು ಪ್ರಯೋಜನ? ನದಿಗಳನ್ನೆಲ್ಲ ಬರಿದಾಗಿಸಿ, ಕಾಡುಗಳನ್ನೆಲ್ಲ ನೆಲ ಸಮವಾಗಿಸಿ, ರೈತನ ಆತ್ಮಹತ್ಯೆಗಿಳಿಸಿ, ನಾಡ ಕಟ್ಟ ಹೊರಟಿರುವ ನಾವು. ಈ ಮಣ್ಣಿನ ಮಕ್ಕಳು! ಬೆಂಗಳೂರು, ಮತ್ತು ಕಂಪ್ಯೂಟರ್ ನಮಗೆ ಕಾಣುವ ಅದ್ಭುತ ವಿಶ್ವ. ನಿಜವೇ, ಆದರೆ ತಿನ್ನುವ ಅನ್ನ ಕಂಪ್ಯೂಟರ್ ಬೆಳೆಯಲಾರದಲ್ಲ! ಯಾವ ಉದ್ಯಮಗಳು ರಾಜ್ಯದ ಉನ್ನತಿಗೆ ಪೂರಕವೋ ಅವು ರಾಜ್ಯದ ಪರಿಸರಕ್ಕೆ ಜನರ ಬದುಕಿಗೆ, ಈ ಮಣ್ಣಿಗೆ ಮಾರಕವಾಗಬಾರದಲ್ಲ? ಉದಾಹರಣೆಗೆ ನಾಗಾರ್ಜುನ ಮತ್ತು ತದಡಿ ಉ? ಸ್ಥಾವರಗಳು, ಗಣಿಗಾರಿಕೆಯಿಂದ ತತ್ತರಿಸಿದ ಬಳ್ಳಾರಿಯ ಮಡಿಲು! ಹೇಳುತ್ತ ಹೋದರೆ ಪ್ರತೀ ಜಿಲ್ಲೆಗೂ ಒಂದೊಂದು ಮಾರಕ ಯೋಜನೆಗಳು. ಅಭಿವೃದ್ಧಿಯ ಕನಸು ಯಾರಿಗೆ ಮತ್ತು ಪರಿಸರ, ಜನರ ಕಂಬನಿ ಯಾರಿಗೆ ಅನ್ನುವ ಗುಟ್ಟು ಮಾತ್ರ ಇಂದಿಗೂ ಅರಿವಾಗದ ಪ್ರಶ್ನೆ! ನಮ್ಮ ಉತ್ತರ ಕನ್ನಡವನ್ನೇ ತೆಗೆದುಕೊಂಡರೆ ಇಲ್ಲಿ ದೇಶದ ನಾನಾ ಯೋಜನೆಗಳು ಬಂದು ತಳವೂರಿವೆ. ವಿದ್ಯುತ್ ಸ್ಥಾವರಗಳಿವೆ. ಕರಾವಳಿಯ ಸಂಪದ್ಭರಿತ ತೀರಗಳಿವೆ. ಸಹ್ಯಾದ್ರಿಯ ಸೆರಗಿದೆ. ಮಲೆನಾಡಿನ ಮಡಿಲಿದೆ, ನದಿಗಳಿವೆ, ಕಾಡಿದೆ. ಆದರೆ ಇಲ್ಲಿಯ ಜನ ಮಾತ್ರ ಕರೆಂಟ್‌ಗೆ ಪರದಾಡುತ್ತಾರೆ. ರಸ್ತೆ, ಹೊಂಡಗಳಲ್ಲಿ ಪ್ರತೀದಿನ ಸಾಯುತ್ತಾರೆ. ಬೆಳೆಗಾರ ಬೆಳೆಗಳಿಗೆ ಮಾರುಕಟ್ಟೆಯಿಲ್ಲದೇ ಆತ್ಮಹತ್ಯೆಗಿಳಿಯುತ್ತಾನೆ. ಮೀನುಗಾರ ದಿನಗೂಲಿಯಿಂದ ಮೇಲೇಳಲಾರ. ಯಾವುದು ಅಭಿವೃದ್ಧಿ? ಯಾವುದು ನಾಡದೊರೆಗಳ ಕನಸು? ಯಾವುದು ಕರ್ನಾಟಕದ ಗುರಿ? ಒಂದು ಜಿಲ್ಲೆಯ, ಸಂಪದ್ಭರಿತ ಮುಂದುವರೆದ ಜಿಲ್ಲೆಯ ಸ್ಥಿತಿಯೇ ಇದಾದರೆ ಈ ನಾಡಿನ ಉಳಿದ ಜಿಲ್ಲೆಗಳ ಪಾಡೇನಿರಬಹುದು? ದೋಚುವುದಕ್ಕೆ ಇದೆಯೆಂದು ಬೇಕಾಬಿಟ್ಟಿ ದೋಚಿದರೆ ಪ್ರಕೃತಿ ಮುನಿಯದಿರು ತ್ತಾಳೆಯೇ? ಇದೆಲ್ಲ ಮೌನವಾಗಿ ಸಹಿಸುವ ನಾವು ನಾಡಿನ ಕುರಿತಾದ ಉದ್ದುದ್ದ ಭಾಷಣ ಮಾಡಿ ರಾಜ್ಯೋತ್ಸವ ಆಚರಿಸಿದರೆ ಅದಕ್ಕೆ ಅರ್ಥವಿದೆಯೇ? ಕನ್ನಡದ ಮನಸಿಲ್ಲದವ, ಕರ್ನಾಟಕದ ಹೃದಯವಿಲ್ಲದವ ಗತವೈಭವವ ಕೊಂಡಾಡಿ ಏನು ಪ್ರಯೋಜನ? ಈ ಕತ್ತಲೆಯ ಪರಿಣಾಮವೇ ಮಲೆನಾಡಿನ ಸೆರಗಿನಲ್ಲಿ ಬುಗಿಲೆದ್ದ ನಕ್ಸಲೈಟ್. ಯಾವ ಕಾಡಿನಲ್ಲಿ ಪ್ರಾಣಿಗಳೂ, ಮನುಷ್ಯರೂ ಸೌಹಾರ್ದಯುತರಾಗಿ ತಲೆತಲಾಂತರದಿಂದ ಬಾಳುತ್ತ ಬಂದಿದ್ದಾರೋ. ಅಲ್ಲೀಗ ಮನುಷ್ಯರು ಮನುಷ್ಯರ ಭಯದಿಂದ ಬದುಕಬೇಕಾಗಿದೆ! ಕೇವಲ ಯೋಜನೆಗಳ ಮಾಡಿದರೆ ಖಂಡಿತ ರಾಜ್ಯ, ಉದ್ಧಾರ ವಾಗುವುದಿಲ್ಲ. ಅದರ ಪರಿಣಾಮಗಳ ಯೋಚಿಸ ದಿದ್ದಲ್ಲಿ ಅದು ರಾಜ್ಯಕ್ಕೆ ಮತ್ತಷ್ಟು ಮಾರಕವಾಗುತ್ತದೆ.

    ನಾಡದೇವಿಯ ಕುರಿತಾದ ಹಾಡುಗಳು ಕೇವಲ ಸಿ.ಡಿ ಕ್ಯಾಸೆಟ್‌ಗಳಲ್ಲಿ ಮಾತ್ರ ಉಳಿದು ಹೋದರೆ ಸಾಕೆ? ನಮ್ಮ ತಾಯಿಯ ಅಮೃತಭಾಷೆ ನಮಗೆ ಮರೆಯುತ್ತಿದೆಯೇ? ಕೇಳಬೇಕಾದದ್ದು ಯಾರನ್ನೋ ಅಲ್ಲ. ನಮ್ಮ ನಮ್ಮ ಮನಸ್ಸನ್ನ. ಆ ಕುರಿತು ಕ್ಷಣ ಯೋಚಿಸಿದರೂ ಸಾಕು ಅದು ನಾಡದೇವಿಗೆ ನಮ್ಮ ನಮನವಾಗುತ್ತದೆ. ಅಂತಹ ಸಂಕಲ್ಪ ನಾವು ಮಾಡೋಣ. ಈ ನಾಡು, ನೆಲ, ನುಡಿ, ನಮ್ಮದು, ನಮಗಾಗಿರುವುದು. ಅದನ್ನ ಉಳಿಸಲು ನಮ್ಮ ಕೈಲಾದ ಪ್ರಯತ್ನ ಮಾಡೋಣ. ನಮ್ಮ ನಲ್ನುಡಿ ಕನ್ನಡ ಮಾತ್ರ ಎಲ್ಲಿ ಹೋದರೂ ಮರೆಯದಿರೋಣ.

    ನಾಡಹಬ್ಬಕ್ಕೊಂದು ಚಿಂತನೆ :- ಈವರೆಗೆ ೧ ಪ್ರತಿಕ್ರಿಯೆ

    1. veeranna

      ನಾಡ ದೇವಿಯ ಗುಡಿಯ ಮುಂಗಡೆ ಹಾಡುತಿರುವುದು ಕೋಗಿಲೆ

      ಕಾಳ ಕತ್ತಲೆ ಕಳೆದು ಬೆಳಗಿನ ಕೋಳಿ ಕೂಗಿತು ಆಗಲೇ

      we use to sing this song in our school days.
      Veeranna

    ಪ್ರತಿಕ್ರಿಯಿಸಿ :