ಜೇನುಗೂಡು
September 17th, 2008.
- ಅಕ್ಷಯ ರಾಮ ಕೆ. ,ಕಾವಿನಮೂಲೆ ದ.ಕ.
’ಛೇ! ಯಾವಾಗಲೂ ಇದೇ ಗೋಳು. ಎಲ್ಲರ ಕೈಯಲ್ಲೂ ದಂಡಪಿಂಡ ಅಂತ ಬೈಸಿಕೊಂಡಾಯಿತು. ನನ್ನ ಹಣೆ ಬರಹವೇ ಇಷ್ಟು’ ಗೊಣಗಿಕೊಂಡು ಹೆಜ್ಜೆ ಹಾಕಿದ ಸುರೇಶ. ಪಿ.ಯು.ಸಿ ಪಾಸಾಗದಿದ್ದರೂ ಸುರೇಶ ದಡ್ಡನೇನೂ ಅಲ್ಲ. ಅವನಿಗೆ ಅವನದೇ ಆದ ಹತ್ತು ಹಲವು ಕಲ್ಪನೆ, ಕನಸುಗಳಿದ್ದವು. ವಿದ್ಯೆ ನೈವೇದ್ಯವಾದರೂ ಪ್ರಕೃತಿ ಪ್ರಿಯ. ಚಾರಣ, ಅಲೆದಾಟಗಳೇ ಅಚ್ಚುಮೆಚ್ಚು. ೬ ನೆರೆಹೊರೆಯವರ, ನೆಂಟರಿಷ್ಟರ ಬಾಯಿಗೆ ಸುರೇಶ ಸದಾ ಆಹಾರವಾಗಿದ್ದ. ಆತನ ಬಗ್ಗೆ ಚುಚ್ಚು ಮಾತು ಆಡದೇ ಇದ್ದರೆ ಅವರ ಕಣ್ಣಿಗೆ ನಿದ್ರೆ ಹತ್ತದು. ಅದೊಂದು ದಿನ, ಯಾವುದೋ ಕೆಟ್ಟ ಘಳಿಗೆಯಲ್ಲಿ ಸುರೇಶನ ತಂದೆ ತಾಯಿ ರೌದ್ರಾವತಾರ ತಾಳಿದರು. ’ಯಾಕಾದರೂ ನಿನ್ನನ್ನು ಹೆತ್ತೆವೋ?’ ಎಂಬ ನೊಂದ ಮಾತು ಸುರೇಶನ ಎದೆಗೆ ನಾಟಿತು. ತೋಟದ ಅಂಚಿನಲ್ಲಿದ್ದ ಕೆರೆಯತ್ತ ಸಾಗಿದ. ಕೊನೆಯ ಬಾರಿಗೆ ಎಂಬಂತೆ ಸುತ್ತಲೂ ನೋಡಿದ ಸುರೇಶನಿಗೆ ಬೇಲಿ ಬದಿಯಲ್ಲಿನ ಕಾಸರಕನ ಮರದಲ್ಲಿ ಕಟ್ಟಿದ್ದ ಜೇನಿನ ಗೂಡು ಕಾಣಿಸಿತು. ಪದೇ ಪದೇ ಅದನ್ನು ದಿಟ್ಟಿಸಿ ನೋಡಿದ. .ಕಹಿ ಮರದಲ್ಲಿ ಸಿಹಿ ಜೇನು!. ಮಿಂಚೊಂದು ಸುರೇಶನ ಚಿತ್ತದಲ್ಲಿ ಹರಿಯಿತು, ’ನಾನೇಕೆ ನಿರುದ್ಯೋಗಿಯಾಗಿಯೇ ಉಳಿಯಬೇಕು?’ ಇಂದು ಸುರೇಶ ಒಬ್ಬ ಪ್ರಗತಿಪರ ಜೇನು ಕೃಷಿಕ. ಐದಾರು ಜೇನು ಕುಟುಂಬಗಳನ್ನು ಸಾಕಿದ್ದಾನೆ. ಅವುಗಳ ಲಾಲನೆ ಪಾಲನೆಯೇ ಅವನಿಗೆ ಸರ್ವಸ್ವ. ಕೈ ತುಂಬ ಹಣ. ಮನಸ್ಸಿನ ಸಮಾಧಾನ - ಸಂತೃಪ್ತನಿಗೆ ಇನ್ನೇನು ಬೇಕು?