ಅಂದಿನ ದಿನಗಳ ಬಣ್ಣ !! ಎಲ್ಲಿಹೋದವು ಆ ಸುಂದರ ದಿನಗಳು ?
September 17th, 2008.
- ನವೀನ್ ಭಟ್, ಗಂಗೋತ್ರಿ
ಕುವೆಂಪು ಹೀಗೆನ್ನುತ್ತಾರೆ,
“ಮಗುವು ಹುಟ್ಟುವಾಗ ವಿಶ್ವ ಮಾನವನಾಗಿ ಹುಟ್ಟುತ್ತದೆ. ಅದನ್ನು ನಾವುಗಳು ಸಾಮಾನ್ಯ ಮಾನವನನ್ನಾಗಿ ಮಾಡುತ್ತೇವೆ………”
ಎಷ್ಟೋ ಬಾರಿ - ನನಗೆ ಎಟಕುವ ಆಯಾಮಗಳಲ್ಲಿ ತುಂಬ ನಿಜ ಅನ್ನಿಸಿದ ಮಾತಿದು. ವಿಶ್ವ ಮಾನವತ್ವದ ಮೂಲವೆಂದರೆ ಅನನ್ಯವಾದ ಪ್ರೇಮ ಮತ್ತು ನಿಸರ್ಗದೊಂದಿಗೆ ಒಂದು ಉನ್ನತ ಸ್ಪಂದನ. ಪ್ರಾಯಶಃ ಪ್ರತಿಯೊಂದು ಮಾನವ ಜೀವವೂ ಧರೆಗೆ ಕಾಲಿಡುವಾಗ ವಿಶ್ವಮಾನವತೆಯ ಈ ಮೂಲ ಗುಣಗಳನ್ನು ಹೊಂದಿಯೇ ಇರುತ್ತೆ. ಭೂಮಿಯ ಮೇಲಿನ ಎಂಥ ಕ್ರೌರ್ಯವನ್ನೂ ಒಂದು ಕ್ಷಣ ಕರಗಿಸುವ ಮಗುವಿನ ದಿವ್ಯ ಮುಗುಳು ನಗೆಯ ಹಿಂದೆ ಇರುವುದೂ ಇವೇ ಗುಣಗಳು.
ಒಂದು ಚಿಟ್ಟೆ - ಕೇವಲ ಒಂದು ಚಿಟ್ಟೆ, ಮಾನವ ಮನದಲ್ಲಿ ಎಂತೆಂಥ ಸಂವೇದನೆಗಳನ್ನು ಮೂಡಿಸಬಲ್ಲದೋ, ಆ ಎಲ್ಲವಕ್ಕೂ ಮಗುವಿನ ಮನಸು ನೆಲೆಯಾಗುತ್ತದೆ. ಹಾಗೆಯೇ ಒಂದು ಅಗಾಧ ಮರ, ಸುಕೋಮಲ ಲತೆ, ಸೂರ್ಯೋದಯದಲ್ಲಿ ಮುತ್ತಾಗುವ ಇಬ್ಬನಿ, ಎಳೆ ಗುಲಾಬಿ ಹೂವು, ಅದರ ಗಂಧ ಇವಕ್ಕೆಲ್ಲ ಅತ್ಯಂತ ಆರ್ದೃವಾಗಿ ಸ್ಪಂದಿಸುವ ಹೃದಯವಂತಿಕೆ ಮಾನವ ಮಗುವಿಗೆ ಇದ್ದಿರುತ್ತದೆ. ಹಿಂದೊಮ್ಮೆ ನಾವುಗಳೂ ಅಂಥ ಮಗುವಾಗಿದ್ದ ಕಾಲವಿತ್ತು ………………
ನೋವಿನ ವಿಚಾರವೆಂದರೆ, ಮಗುವಾಗಿದ್ದ ನಾವುಗಳು ಒಬ್ಬ ವ್ಯಕ್ತಿಯಾಗಿ ಬೆಳೆಯುತ್ತಾ ಹೋದಂತೆಲ್ಲ, ಪ್ರಕೃತಿಯೊಂದಿಗಿನ ಈ ಬಗೆಯ ಸಂವೇದನೆಗಳನ್ನು, ಸ್ಪಂದನವನ್ನು ಒಂದಷ್ಟು ಕಳಕೊಂಡೆವು ಎಂಬುದು. .ನೀನು ಬದುಕಬೇಕಾದರೆ, ನೀನೊಬ್ಬ ವ್ಯಕ್ತಿಯಾಗಲೇ ಬೇಕು. ಅಂತ ಒತ್ತಡ ಹೇರುವುದು ಸಮಾಜ ಮತ್ತು ಬದುಕಿನ ಅನಿವಾರ್ಯತೆಗಳು. ಆದರೆ ಹಾಗೆ ವ್ಯಕ್ತಿಯಾಗುವ ಮಾರ್ಗದಲ್ಲಿ ಒಂದಷ್ಟು ಸಂವೇದನೆಗಳನ್ನು ಕಳಕೊಳ್ಳುವುದಿದೆಯಲ್ಲ. ಅದೇ ನಮ್ಮನ್ನು ಅತ್ಯಂತ ಸಾಮಾನ್ಯರನ್ನಾಗಿಸುತ್ತದೆ. ವ್ಯಕ್ತಿಯಾಗಿ ವ್ಯಕ್ತವಾದ ಬಳಿಕವೂ ಒಂದಷ್ಟು ಖಾಸಗಿ ಕ್ಷಣಗಳಲ್ಲಿ ತನ್ನ ’ಅಹಂ’ ಅನ್ನು ಬದಿಗಿಟ್ಟು ಪ್ರಕೃತಿ ಸಹಜತೆಯೊಂದಿಗೆ ಮುಕ್ತವಾಗಿ ಮಾತಾಡ ತೊಡಗಿದರೆ ಅವನು ಕವಿಯೋ, ಕಲಾಕಾರನೋ ಆಗದಿರಲಾರ. ಈ ಸಾಹಿತ್ಯ, ರಾಜಕೀಯ, ಮಾನವ ಸಂಬಂಧಗಳ ಗೋಜಲು ಇವೆಲ್ಲ ಅಸ್ಪಷ್ಟವಾಗಿದ್ದ ಆ ದಿನಗಳಲ್ಲಿ, ಸುತ್ತಲಿನ ನಿಸರ್ಗದೊಂದಿಗೆ ಒಂದು ನಿರ್ದಿಷ್ಟ ಸಂಬಂಧವಿರುತ್ತಿತ್ತು. ದಿನಾ ಬೆಳಿಗ್ಗೆ ಹಾದು ಹೋಗುವ ಹಾದಿಯ ಅಂಚಿನಲ್ಲಿ ನಿಂತ ಮರ, ನಿನ್ನೆ ಸಂಜೆಯ ಮಳೆಯ ಕೊನೆಯ ಹನಿಗಳು ಈ ಬೆಳಗಿನ ಮೆಲುಗಾಳಿಗೆ, ನೆಲ ಸೇರುವಾಗಿನ ತಟಪಟ ಸದ್ದು, ನೊರೆ ಹಾಲು ಕುಡಿದು ಮನೆಯ ಅಂಗಳದಲ್ಲಿ ಇನ್ನಿಲ್ಲದ ಆನಂದದಿಂದ ಕುಣಿಯುವ ಹಸುವಿನ ಎಳೆಗರು, ಆ ಕರುವಿನ ಮೈಯ ವಿಶಿಷ್ಟ ಗಂಧ, ಇವೆಲ್ಲ ಅಂದಿನ ದಿನಗಳಿಗೆ ಜೀವ ತುಂಬುತ್ತಿದ್ದ ಸಂಗತಿಗಳಾಗಿದ್ದುದು ಸುಳ್ಳಾ? ನಿಜಕ್ಕೂ ಆ ದಿನಗಳಲ್ಲಿ ಮಹಾ ಮೌನಿ ಮರಗಳೊಂದಿಗೆ, ಯಾವುದೋ ಭಾಷೆಯಲ್ಲದ ಭಾಷೆಯಲ್ಲಿ ಸಂಭಾಷಿಸಿರುತ್ತೇವೆ. ಅದು ನಮ್ಮ ಬಾಲ್ಯ, ನಮ್ಮ ವ್ಯಕ್ತಿಯಾಗಿರದ ಕೇವಲ ಮಗುವಾಗಿದ್ದ ಕಾಲ.
ಬಿರುಗಾಳಿಯಂಥ ಗಾಳಿಗೆ, ಮರದ ಕೊಂಬೆಗಳು ಮುರಿದದ್ದು ಕಂಡು, ಕಣ್ಣಂಚು ತೇವವಾಗುವಂಥ ಸೆನ್‌ಸೇಷನ್ ಇರುತ್ತಿದ್ದ ದಿನಗಳಿವು. ಪುಸ್ತಕದ ಹಾಳೆಗಳ ಮಧ್ಯೆ ಜತನದಿಂದ ಇಟ್ಟುಕೊಂಡಿದ್ದ ನವಿಲುಗರಿಯ ಎಳೆ, ಇಂದೋ ನಾಳೆಯೋ ಮರಿ ಹಾಕೀತು (!) ಎಂಬಂಥ ಮುಗ್ಧತೆಯ ಕಾಲವದು. ಇದೇ ಮುಗ್ಧತೆ ಮತ್ತು ಜೀವಗಳ ಬಗೆಗಿನ ನಿಸ್ವಾರ್ಥ ಒಲುಮೆ, ಇವತ್ಯಾಕಿಲ್ಲ ನಮ್ಮೊಳಗೆ?
ಪ್ರೌಢರಾಗುತ್ತ ಸಾಗಿದಂತೆಲ್ಲ ನಾವು ಸ್ವಾರ್ಥಿಗಳೂ ಆದೆವೇನೋ, ಮತ್ತು ಭಗವಂತ ನಮಗೆ ಕೊಟ್ಟಿದ್ದ ಅಷ್ಟು ಸೂಕ್ಷ್ಮ ಮನಸ್ಥಿತಿಯನ್ನು ಕಳಕೊಂಡೆವೇನೋ. ಹಾಗಾಗಿ ಈಗೆಲ್ಲಾ ನಾವುಗಳು ಮರಗಳೊಂದಿಗೆ ಮಾತಾಡಲಾರೆವು - ಕೇವಲ ಮಾತುಗಳೊಂದಿಗೆ ಮತ್ತು ವ್ಯಕ್ತಿಗಳೊಂದಿಗೆ ಮಾತಾಡುತ್ತೇವೆ.
December 25th, 2008 at 8:43 am
naveen bhat avare, atyanta saralavaada mugdhateyinda moodisiruva nimma barahakkagi abhinandanegaLu……