ಯುವಚಿಂತನೆ ಮಾನವೀಯ ಮೌಲ್ಯಗಳ ಪರಿಶೋಧನೆ ಯುವಜನರಿಂದಾಗಲಿ
September 16th, 2008.
- ಚಿತ್ರಾ ಕರ್ಕೇರಾ ದೋಳ್ಪಾಡಿ, ಪುತ್ತೂರು
’ಉಕ್ಕಿನಂತಹ ಯುವಕರಿಂದ ದೇಶ ಕಟ್ಟಲು ಸಾಧ್ಯ’-ಸ್ವಾಮಿ ವಿವೇಕಾನಂದರ ಮಾತಿದು. ದೇಶದ ಸರ್ವಾಂಗೀಣ ಅಭಿವೃದ್ದಿ ಯುವಕರಿಂದಲೇ ಸಾಧ್ಯ ಎಂಬುದನ್ನು, ಯುವ ಹೃದಯದಲ್ಲಿ ಧೈರ್‍ಯದ ಕಿಚ್ಚನ್ನು ತುಂಬಿದ ಮಹಾನ್ ಚೇತನ ವಿವೇಕಾನಂದರು. ಆದರೆ ಇಂದಿನ ಯುವ ಪೀಳಿಗೆಯನ್ನು ನೆನೆದಾಗಲೆಲ್ಲಾ ಮನ ಮರುಕ ಪಡುತ್ತದೆ. ಹೃದಯದ ಮೂಲೆಯಲ್ಲಿ ನೋವಿನಲೆಗಳು ಹುಟ್ಟಿಕೊಳ್ಳುತ್ತಿದೆ. ಯಾಕೆ ಹೀಗೆ ?
ಬೆಂಕಿ ಮತ್ತು ಬೆಳಕಿನ ನಡುವಿನ ವ್ಯತ್ಯಾಸವನ್ನು ತಿಳಿಯದೆ ಅಂಧಾನುಕರುಣೆಯ ಮಬ್ಬಿನಲ್ಲಿ ಬದುಕು ಸಾಗಿಸುತ್ತಿದ್ದಾರೆ. ನೈತಿಕತೆ ಮರೆಯಾಗಿ ಮಾನವೀಯ ಮೌಲ್ಯಗಳು ಮೌಢ್ಯದ ಕೊಚ್ಚೆಯಲ್ಲಿ ಕೊಚ್ಚಿಹೋಗುತ್ತಿವೆ. ದೇಶಕಟ್ಟಬೇಕಾದ ಯುವಕರಿಂದಲೇ ದೇಶದ ದುರಂತ ಅಧ್ಯಾಯಕ್ಕೆ ಮುನ್ನುಡಿ ಬರೆಯಲಾಗುತ್ತಿದೆ ಎಂದರೆ ತಪ್ಪಾಗದು. ನಾಡ ಕವಿಯಾದ ಅಡಿಗರು ಒಂದೆಡೆ ’ಇರುವೆಲ್ಲವನ್ನು ಎಲ್ಲ ಜಗಕೆ ತೆರವಾಗಿಸುವ ಸಮ ಬಗೆಯ ಸಮ ದುಃಖದ ಸಮಸುಖದ ಸಾಮಗಾನ ಲಹರಿಯ ಮೇಲೆ ತೇಲಿ ಬರಲಿದೆ ನೋಡು ಈ ನಮ್ಮ ನಾಡು’ ಎನ್ನುತ್ತಾರೆ. ದೇಶ ಕಟ್ಟುವ ಮನೋಭಾವವನ್ನು ಹಾಡಿನ ಮುಖಾಂತರ ಯುವ ಜನತೆಯಲ್ಲಿ ಬಿತ್ತಿದ್ದಾರೆ. ಆದರಿಂದು ಯುವಶಕ್ತಿ-ರಾಷ್ಟ್ರ ಶಕ್ತಿ ಎನ್ನುವಷ್ಟು ಎದೆಗಾರಿಕೆ ನಮ್ಮಲ್ಲಿದೆಯೇ?
ನಮ್ಮ ಆದರ್ಶಗಳ ಬಗ್ಗೆ ನೆನೆದಾಗ ನನಗೆ ಛತ್ರಪತಿ ಶಿವಾಜಿಯ ಕತೆಯೊಂದು ನೆನಪಾಗುತ್ತಿದೆ ಒಂದು ಬಾರಿ ಶಿವಾಜಿಯ ಅರಮನೆಗೆ ಸೇನಾನಿಯೊಬ್ಬ ಯುದ್ದದಲ್ಲಿ ಸೆರೆಹಿಡಿದ ಪರರಾಜ್ಯದ ಕನ್ಯೆಯೊಬ್ಬಳನ್ನು ತಂದನಂತೆ ಅಪೂರ್ವ ಸೌಂದರ್‍ಯವತಿಯಾದ ಆಕೆಯನ್ನು ನೋಡಿದ ಶಿವಾಜಿ ಹೆಣ್ಣೇ ಎಷ್ಟೊಂದು ಸುಂದರವಾಗಿರುವೆ? ಒಂದು ವೇಳೆ ನಾನು ನಿನ್ನ ಮಗನಾಗಿ ಹುಟ್ಟುತ್ತಿದ್ದರೆ ಅದೆಷ್ಟು ಸುಂದರವಾಗಿರುತ್ತಿದ್ದೆ? ಎಂದನಂತೆ. ಹೀಗಂದ ರಾಜ ಹೆಣ್ಣನ್ನು ಜೋಪಾನವಾಗಿ ಹೆತ್ತವರ ಬಳಿ ಬಿಟ್ಟನಂತೆ ಎಂಥಹ ಆದರ್ಶಗಳು ನಮ್ಮಲ್ಲಿವೆ. ಭಾರತ ಮಣ್ಣಿನ ಸಂಸ್ಕೃತಿಯನ್ನೆ ಜಗತ್ತಿನೆಲ್ಲೆಡೆ ಹಬ್ಬಿಸಿದ ಯುವಸ್ಪೂರ್ತಿ ವಿವೇಕಾನಂದರ ಆದರ್ಶ ನುಡಿಗಳನ್ನು ನಾವೆಷ್ಟು ಪಾಲಿಸುತ್ತೇವೆ ? ಸಂಸ್ಕೃತಿ, ಸದಾಚಾರಗಳಿಗೆ ಹೆಸರಾದ ಭಾರತ ನೆಲದಲ್ಲಿ ಸಂಸ್ಕೃತಿಯ ಪಾಠ ಹೇಳಿಕೊಡಬೇಕಾದ ಅನಿವಾರ್ಯತೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋದ ಯುವಜನತೆ ಅತ್ತ ವಿದೇಶಿಯರೂ ಅಲ್ಲದೆ, ಇತ್ತ ಭಾರತೀಯರೂ ಅಲ್ಲದೆ ಮಹಾಎಡಬಿಡಂಗಿಗಳಾಗುತ್ತಿದ್ದಾರೆ. ಮಾತೃದೇವೊಭವ ಪಿತೃದೇವೂಭವ | ಗುರುದೇವೋಭವ | ಪೂಜಿಸುವ ನಮ್ಮಲ್ಲಿ ತಾಯಿಯ ಕೊಲೆ, ತಂದೆಯಿಂದಲೇ ಮಗಳ ಅತ್ಯಾಚಾರ, ಗುರುವಿನಿಂದಲೇ ವಿದ್ಯಾರ್ಥಿನಿಯ ಲೈಂಗಿಕ ಶೋಷಣೆ ಕತೆ ಕೇಳಿಬರುತ್ತಿದೆ. ಇಂಥಹ ದುಷ್ಕೃತ್ಯಗಳನ್ನು ವಿರೋಧಿಸಬೇಕಾದ ಯುವಶಕ್ತಿ ದೇಶವನ್ನು ಕೊಳ್ಳೆಹೊಡೆಯುವ ಭಯೋತ್ಪಾದಕ ಶಕ್ತಿಯಾಗಿ ರೂಪು ಗೊಳ್ಳುತ್ತಿವೆ. ಮಹಾತ್ಮರ ಆದರ್ಶಗಳನ್ನು ಮರೆತ ನಮಗೆ ಬಾಲಿವುಡ್‌ನ ಸೆಕ್ಸ್ ಬಾಂಬುಗಳೆ ಆದರ್ಶಗಳಾಗುತ್ತಿದ್ದಾರೆ. ಇದು ಭಾರತೀಯತೆಗೆ ಅಪಾಯಕಾರಿಯಲ್ಲವಾ? ನೀವೇ ಹೇಳಿ. ಮನುಷ್ಯನಲ್ಲಿರುವ ದೌರ್ಬಲ್ಯಕ್ಕೆ ದೌರ್ಬಲ್ಯವನ್ನು ಕುರಿತು ಚಿಂತಿಸುವುದೇ ಔಷಧವಲ್ಲ. ಶಕ್ತಿಯನ್ನು ಕುರಿತು ಚಿಂತಿಸುವುದೇ ಪರಿಹಾರೋಪಾಯ; ವಿವೇಕಾನಂದರ ಮಾತು. ಪ್ರತಿ ಸಮಸ್ಯೆಗೂ ಪರಿಹಾರವಿದೆ. ಸಾಧನೆಗೆ ಬೇಕಾದ ಛಲ, ಆತ್ಮ ವಿಶ್ವಾಸ, ಎದೆಗಾರಿಕೆ ಎಲ್ಲವೂ ನಮ್ಮಲ್ಲಿದೆ. ಹೀಗಿರುವಾಗ ಸಮಾನತೆ, ಸಂಸ್ಕೃತಿ ವೈಜ್ಞಾನಿಕತೆಯ ಸ್ವಾತಂತ್ರ ಕ್ಕಾಗಿ ಹೋರಾಡಬೇಕು. ಮಾನವೀಯ ಮೌಲ್ಯಗಳ ಪರಿಶೋಧನೆ, ನಮ್ಮದಾಗಬೇಕು. ಜನಮಾನಸದಲ್ಲಿ ಸತ್‌ಚಿಂತನೆಗಳನ್ನು ತುಂಬಿ ’ಯುವಶಕ್ತಿ ರಾಷ್ಟ್ರಶಕಿ.’ ಎಂಬ ಮಾತನ್ನು ಸಾಕಾರಗೊಳಿಸಬೇಕು ಏನಂತೀರಿ?