’ನಾಗಾರ್ಜುನ’ ಇನ್ನೂ ಮುಗಿಯದ ಹೋರಾಟ
September 17th, 2008.
- ಶ್ರೀನಿಧಿ ಅಡಿಗ
ಎರಡು ದಶಕಗಳಿಗೂ ಮೀರಿದ ಸತತ ಹೋರಾಟಗಳ ನಂತರವೂ ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ನಂದಿಕೂರಿನಲ್ಲಿ ’ನಾಗಾರ್ಜುನ’ ಬೃಹತ್ ಉಷ್ಣ ಸ್ಥಾವರ ತನ್ನ ಕಾರ್‍ಯಾಚರಣೆ ಆರಂಭಿಸಿದೆ. ಜನರ ಪ್ರಬಲ ವಿರೋಧದ ನಡುವೆಯೂ ಹಣ, ಅಧಿಕಾರದಿಂದ ಅವರನ್ನು ಸಂಕಷ್ಟಗಳಿಗೆ ಗುರಿಯಾಗಿಸಿ ಭೂಮಿ ಕಸಿಯುವ ಯತ್ನ ಇಲ್ಲಿ ನಿರಂತರವಾಗಿ ಸಾಗಿದೆ.
ನಾಗಾರ್ಜುನ ವಿರೋಧಿ ಹೋರಾಟದಲ್ಲಿ ಭಾಗವಹಿಸಿ ಬಂದಿರುವ ಪತ್ರಿಕಾ ಬಳಗದ ಸೋದರಿ ಶ್ರೀನಿಧಿ ಅಡಿಗ ನೀಡಿರುವ ಪ್ರತ್ಯಕ್ಷ ವರದಿ.
ನಂದಿಕೂರು, ಎಲ್ಲೂರು, ಸಾಂತೂರು ಪ್ರದೇಶದ ಮೇಲೆ ೧೯೯೬ ರಲ್ಲೇ ಕಣ್ಣಿಟ್ಟಿದ್ದ ನಾಗಾರ್ಜುನ ಪವರ್ ಕಂಪನಿ ೪,೨೯೯ ಕೋಟಿ ರೂ. ವೆಚ್ಚದ ೧,೦೧೫ ಮೆಘಾವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರವನ್ನು ಇಲ್ಲಿ ಸ್ಥಾಪಿಸಲು ಆಲೋಚಿಸಿತ್ತು. ಇದಕ್ಕೂ ಮೊದಲೇ ಇಲ್ಲಿ ಅಮೆರಿಕಾ ಮೂಲದ ಕೊಜೆಂಟ್ರಿಕ್ಸ್, ಎನ್.ಟಿ.ಪಿ.ಸಿ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯ ಪ್ರಸ್ತಾಪಗಳೂ ಬಂದು ಹೋಗಿವೆ. ನಂದಿಕೂರು ಜನಜಾಗೃತಿ ಸಮಿತಿಯೂ ಅಂದಿನಿಂದ ಇಂದಿನವರೆಗೆ ಪರಿಸರಕ್ಕೆ ಹಾನಿಯೊಡ್ಡಲಿರುವ ಎಲ್ಲಾ ಯೋಜನೆಗಳ ವಿರುದ್ಧ ಹೋರಾಡುತ್ತಲೇ ಇದೆ. ಎಲ್ಲಾ ಯೋಜನೆಗಳು ಈ ಸ್ಥಳವನ್ನೇ ಏಕೆ ಆಯ್ಕೆ ಮಾಡುತ್ತಿವೆ ಎಂಬುದಕ್ಕೆ ಇಲ್ಲಿನ ಭೌಗೋಳಿಕ ಪರಿಸರವೇ ಕಾರಣ. ಉಷ್ಣ ವಿದ್ಯುತ್ ಸ್ಥಾವರಕ್ಕೆ ವಿದೇಶದಿಂದ ಆಮದು ಮಾಡಿಕೊಳ್ಳಲಾಗುವ ಕಲ್ಲಿದ್ದಲಿಗೆ ಹತ್ತಿರದಲ್ಲಿಯೇ ನವಮಂಗಳೂರು ಬಂದರು ಇದೆ. ಜೊತೆಗೆ ಬಂದರಿನಿಂದ ಕಲ್ಲಿದ್ದಲ್ಲನ್ನು ರೈಲ್ವೆ ಮೂಲಕ ಸಾಗಿಸಲು ಅನುಕೂಲಕರವಾಗುವಂತೆ ಯೋಜನಾ ಸ್ಥಳದ ಸಮೀಪದಲ್ಲೇ ಕೊಂಕಣ ರೈಲ್ವೇ ಹಳಿ ಹಾದು ಹೋಗಿದೆ. ವಿಮಾನ ನಿಲ್ದಾಣ ರಾಷ್ಟ್ರೀಯ ಹೆದ್ದಾರಿಯೂ ಪಕ್ಕದಲ್ಲಿಯೇ ಇವೆ. ಯೋಜನೆಯ ಕೇಂದ್ರ ಸ್ಥಳದಿಂದ ೩-೪ ಕಿ.ಮೀ. ಗಳಷ್ಟೇ ದೂರದಲ್ಲಿರುವ ಸಮುದ್ರ ಸ್ಥಾವರಕ್ಕೆ ಬೇಕಾದ ನೀರನ್ನು ಪಡೆಯಲು ಹಾಗು ಪುನಃ ಹಿಂದಕ್ಕೆ ಬಿಡಲು ಅನುಕೂಲಕರವಾಗಿದೆ. ಮತ್ತು ಸುತ್ತಮುತ್ತಲಿರುವ ಸರ್ಕಾರೀ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಸುಲಭವಾಗಿ ಒದಗುವಂಥದ್ದು.
ಪ್ರಸ್ತುತ ಪರಿಸ್ಥಿತಿ:
ಈಗಾಗಲೇ ಎಲ್ಲೂರು ಪರಿಸರದಲ್ಲಿ ಖಾಸಗೀ ಭೂಮಿಯನ್ನೂ ಒಳಗೊಂಡಂತೆ ೪೫೦ ಎಕರೆ ಜಾಗದ ಸುತ್ತಲೂ ನಾಗಾರ್ಜುನ ಕಂಪನಿ ಬೇಲಿ ಹಾಕಿದೆ. ಜನರಿನ್ನೂ ಜಾಗ ಬಿಟ್ಟುಕೊಡದೆ ಇಲ್ಲೇ ವಾಸವಿದ್ದರೂ ಸುತ್ತಲೂ ಬೇಲಿ ಹಾಕಿ ಪೋಲಿಸರ ಹಾಗೂ ಸೆಕ್ಯೂರಿಟಿಗಾರ್ಡ್‌ಗಳ ಸರ್ಪಗಾವಲಿನೊಂದಿಗೆ ಕಾರ್‍ಯಾರಂಭಗೊಂಡಿದೆ. ನವೆಂಬರ್ ೧೭ ರಿಂದ ಫೆಬ್ರವರಿ ೧೪ ರವರೆಗೆ ಇಲ್ಲಿ ನಿಷೇಧಾಜ್ಞೆ ಜಾರಿಯಲ್ಲಿತ್ತು. ಈ ಜಾಗದಲ್ಲಿ ಸುಮಾರು ೫೦ ಮನೆಗಳಿವೆ. ಇದರಲ್ಲಿ ಈಗಾಗಲೇ ೮ ಮನೆಯವರು ಜಾಗ, ಮನೆ ಎಲ್ಲ ಬಿಟ್ಟು ಕೊಟ್ಟು ಹೋಗಿದ್ದಾರೆ. ಮತ್ತೆ ಉಳಿದಿರುವ ೨೮ ಮನೆಯವರು ಜಾಗ ಈಗಾಗಲೇ ಕೊಟ್ಟಿದ್ದಾರೆ. ಆದರೆ ನಾಗಾರ್ಜುನ ಕಂಪನಿ ಈಗ ಕೊಳ್ಳುತ್ತಿರುವ ಜಾಗಕ್ಕೆ ಈ ಮೊದಲೇ ನಿಗದಿ ಪಡಿಸಿರುವ ಹಣಕ್ಕಿಂತಲೂ ಹೆಚ್ಚು ಹಣ ಕೊಡುತ್ತಿರುವ ಕಾರಣ. ’ನಮ್ಮ ಭೂಮಿಗೂ ಹೆಚ್ಚಿಸಿದ ದರವನ್ನು ಕೊಡದೇ ಹೋದರೆ ಜಾಗ ಬಿಟ್ಟು ಹೋಗುವುದಿಲ್ಲ’ ಎಂದು ಪಟ್ಟು ಹಿಡಿದಿದ್ದಾರೆ. ಉಳಿದ ೧೨ ಮನೆಯವರು ’ನಮ್ಮ ಜಾಗವನ್ನು ನಿಮಗೆ ಕೊಡುವುದಿಲ್ಲ. ಹಣವೂ ಬೇಡ, ನಿಮ್ಮ ಕಂಪನಿಯೂ ಬೇಡ’ ಹೇಳಿ ಹಟದಿಂದ ನಿಂತಿದ್ದಾರೆ.
ಅಧ್ಯಯನಗಳ ಪ್ರಕಾರ:
ಕರಾವಳಿಯ ಈ ಪರಿಸರದಲ್ಲಿ ಬೃಹತ್ ಕೈಗಾರಿಕಾ ಸ್ಥಾಪನೆ ಬೇಕೇ ಬೇಡವೇ ಎಂಬುದರ ಬಗ್ಗೆ ವಿವರಗಳನ್ನು ತಿಳಿಯಲು ಸರಕಾರವೇ ಐದು ಅಧ್ಯಯನ ವರದಿಗಳನ್ನು ಸಿದ್ಧಪಡಿಸಿದೆ. ಈ ಎಲ್ಲಾ ವರದಿಗಳು ಕರಾವಳಿಗೆ, ಇಲ್ಲಿನ ಸೂಕ್ಷ್ಮ ಪ್ರದೇಶಕ್ಕೆ ಬೃಹತ್ ಕೈಗಾರಿಕೆಗಳು ಪ್ರತಿಕೂಲ ಪರಿಣಾಮವನ್ನು ಒಡ್ಡಲಿವೆ ಎಂಬುದನ್ನು ದೃಢಪಡಿಸಿವೆ. ಜತೆಗೆ ಪ್ರಸಿದ್ಧ ವಿಜ್ಞಾನಿ ಡಾ|| ಸಾಗರ್‌ಧಾರಾ ಅವರ ವೈಜ್ಞಾನಿಕ ವರದಿಯೂ ಇದನ್ನೇ ಹೇಳುತ್ತಿದೆ. ಬೃಹತ್ ಕೈಗಾರಿಕೆಗೆ ಮೊದಲು ಧಾರಣಾ ಸಾಮರ್ಥ್ಯವನ್ನು ಅಧ್ಯಯನ ಮಾಡಬೇಕು ಎಂದು ಈ ವರದಿಗಳು ಹೇಳಿವೆ. ಆದರೆ ಅದನ್ನು ಈವರೆಗೆ ಮಾಡಲಾಗಿಲ್ಲ. ಜತೆಗೆ ಈ ಯಾವ ವರದಿಗಳನ್ನೂ ಪರಿಗಣಿಸಲಾಗಿಲ್ಲ.
ಹಾರುಬೂದಿ, ತಳಬೂದಿಗಳು ಆಕ್ರಮಿಸಲಿರುವ ಸಾಂತೂರು..
ನಾಗಾರ್ಜುನ ಸ್ಥಾವರದಿಂದಾಗಿ ಉತ್ಪತ್ತಿಯಾಗುವ ತಳಬೂದಿ ವಿಲೇವಾರಿಗಾಗಿ ಸಾಂತೂರು ಗ್ರಾಮದ ೨೦೦ ಎಕರೆಗಳಷ್ಟು ಭೂ ಪ್ರದೇಶ ವಶಪಡಿಸಿಕೊಳ್ಳಲಾಗುತ್ತಿದೆ. ತಳಬೂದಿ ಹಾಕಲು ನಿಗದಿ ಪಡಿಸಿರುವ ಪ್ರದೇಶದಲ್ಲಿ ೨ ಕೆರೆಗಳಿವೆ. ಅದರ ಆಸುಪಾಸಿನಲ್ಲಿರುವ ೫೦ ಮನೆಯ ಕೃಷಿಗೆ, ದಿನಬಳಕೆಗೆ, ಜಾನುವಾರುಗಳಿಗೆ ಆ ನೀರನ್ನು ಉಪಯೋಗಿಸಲಾಗುತ್ತಿದೆ. ಏಪ್ರಿಲ್, ಮೇ ವರೆಗೂ ಇಲ್ಲಿ ನೀರಿರುತ್ತದೆ. ಗ್ರಾಮ ಪಂಚಾಯತ್ ’ಸ್ವಜಲ ಯೋಜನೆ’ಯಡಿಯಲ್ಲಿ ಈ ಕೆರೆಯನ್ನು ಉತ್ತಮಗೊಳಿಸಲು ೩೦ ಲಕ್ಷ ರೂ. ಹಣ ಮಂಜೂರು ಮಾಡಿದೆ.
ಈ ಕೆರೆಯನ್ನು ಅಭಿವೃದ್ಧಿ ಪಡಿಸಿ ಸಾಂತೂರು, ಪಿಲಾರು ಗ್ರಾಮದ ಸುಮಾರು ೧,೫೦೦ ಮನೆಗಳಿಗೆ ನೀರು ಸರಬರಾಜು ಮಾಡುವ ಯೋಜನೆ ತಯಾರಿಸಲಾಗಿದೆ. ಅಲ್ಲಿನ ೧೦,೦೦೦ ಜನರ ಉಪಯೋಗಕ್ಕೆ ಈ ನೀರು ಬರಲಿದೆ. ಈ ಕೆರೆಗಳನ್ನು ಬಿಟ್ಟು ಅಷ್ಟು ನೀರಿನ ಒರತೆ ಇರುವ ಜಾಗ ಬೇರೆಲ್ಲೂ ಇಲ್ಲ. ಈಗ ನೀರಿನ ಆಕರಕ್ಕೇ ಬೂದಿ ಹಾಕಿದರೆ ನೀರಿಗೇನು ಮಾಡುವುದು ಎನ್ನುವುದು ಜನರ ಸಮಸ್ಯೆ. ತಳಬೂದಿ ಹಾಕಲಿರುವ ಪ್ರದೇಶದಿಂದ ೪ ಕಿ.ಮೀ. ದೂರದಲ್ಲಿ ರಕ್ಷಿತಾರಣ್ಯವಿದೆ. ಕಾಯ್ದೆಯ ಪ್ರಕಾರ ಈ ಅಭಯಾರಣ್ಯಗಳಿಗೇನೂ ತೊಂದರೆ ಆಗಬಾರದು. ಆದರೆ ತಳಬೂದಿ ಹಾಗು ಹಾರುಬೂದಿ ಅಲ್ಲಿರುವ ಹಸಿರನ್ನೆಲ್ಲ ನಾಶಗೊಳಿಸಲಿದೆ. ಜತೆಗೆ ಇಲ್ಲಿಯವರ ಮುಖ್ಯ ಉಪಕಸುಬು ಮಲ್ಲಿಗೆ ಕೃಷಿ. ಹೆಚ್ಚಿನವರ ಮನೆಯಲ್ಲಿ ಮಲ್ಲಿಗೆ ಕೃಷಿ ಮಾಡುತ್ತಾರೆ. ಹಲವರ ಆದಾಯದ ಮೂಲ ಕೂಡ ಇದೇ. ಆದರೆ ಈ ಹಾರುಬೂದಿಯಿಂದಾಗಿ ಮಣ್ಣಿನ ಫಲವತ್ತತೆ ನಾಶವಾಗಿ ಕೃಷಿಭೂಮಿ ಸಾರಕಳೆದುಕೊಳ್ಳಲಿದೆ.
ಪರಿಸರದ ಮೇಲಾಗಲಿರುವ ದುಷರಿಣಾಮಗಳು : ಕರಾವಳಿಯ ಈ ಪ್ರದೇಶ ಜಗತ್ತಿನ ೧೮ ಸೂಕ್ಷ್ಮ ಪ್ರದೇಶಗಳಲ್ಲೊಂದು. ಇಲ್ಲಿನ ಪರಿಸರ ವಿಷಕಾರಿ ಉದ್ದಿಮೆಗಳ ಮಾಲಿನ್ಯವನ್ನು ತಡೆಯಲಾರದು. ಜತೆಗೆ ಇಲ್ಲಿನ ಅಂತರ್ಜಲವೂ ಒಂದಕ್ಕೊಂದು ಸಂಕೋಲೆಯ ರೀತಿಯಲ್ಲಿದೆ. ಹಾಗಾಗಿ ಉದ್ದಿಮೆಗಳು ಹೊರಸೂಸುವ ಕಲುಷಿತ ನೀರು ಸುತ್ತಮುತ್ತಲಿನ ಗ್ರಾಮದ ಕುಡಿಯುವ ನೀರಿನ ಆಕರಗಳನ್ನು ಕಲುಷಿತಗೊಳಿಸಲಿದೆ.
ಕಲ್ಲಿದ್ದಲನ್ನೂ ಭಾರೀ ಪ್ರಮಾಣದಲ್ಲಿ ಆಮದು ಮಾಡಿಕೊಂಡು ಸಂಗ್ರಹಿಸಬೇಕಾಗುತ್ತದೆ. ಮಳೆಗಾಲದಲ್ಲಿ ಇದರ ಮೇಲೆ ಬೀಳುವ ಮಳೆಯ ನೀರು ಇಂಗಿ ಅಂತರ್ಜಲವನ್ನು ಕಲುಷಿತಗೊಳಿಸುವ ಸಾಧ್ಯತೆಯೂ ಇದೆ. ಕರಾವಳಿಯಲ್ಲಿ ಗಾಳಿಯ ವೇಗ ಕಡಿಮೆ ಆದ ಕಾರಣ, ಹಾರುಬೂದಿಯಂತಹ ಮಾಲಿನ್ಯ ಪದಾರ್ಥಗಳು ದೂರ ಪಸರಿಸದೆ ಜಲಮೂಲಗಳಿಗೆ, ಕೃಷಿಯೋಗ್ಯ ಭೂಮಿಗೆ, ಆರೋಗ್ಯಕ್ಕೆ ಹಾನಿಯೊಡ್ಡಲಿದೆ. ಸ್ಥಾವರದಿಂದ ಹೊರಬರುವ ಗಂಧಕದ ಆಕ್ಸೈಡ್ ಈಗಾಗಲೇ ವಾತಾವರಣದಲ್ಲಿರುವ ಮಳೆನೀರಿನೊಂದಿಗೆ ಸೇರಿ ಆಮ್ಲಮಳೆ ಬರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಇದು ಕೃಷಿ, ತೋಟಗಾರಿಕೆ, ಪಶ್ಚಿಮ ಘಟ್ಟಗಳಿಗೆ ಎಲ್ಲವುದಕ್ಕೂ ಹಾನಿಯೊಡ್ಡುವುದು ಖಚಿತ.
ಸಮಸ್ಯೆ ಎದುರಿಸಲಿರುವ ಮೀನುಗಾರಿಕೆ
ಇಲ್ಲಿ ಬಿಸಿಗೊಂಡ ಯಂತ್ರೋಪಕರಣಗಳನ್ನು ತಣ್ಣಗಾಗಿಸಲು ಸಮುದ್ರದ ನೀರಿನಿಂದ ಲವಣಾಂಶಗಳನ್ನು ಬೇರ್ಪಡಿಸಿ ತೆಗೆದುಕೊಳ್ಳಲಾಗುತ್ತದೆ. ಯಂತ್ರಗಳನ್ನು ತಣಿಸಿದ ನಂತರ ಸತ್ವರಹಿತ ನೀರನ್ನು ಮರಳಿ ಸಮುದ್ರಕ್ಕೆ ಬಿಡಲಾಗುತ್ತದೆ. ಈ ಸತ್ವರಹಿತವಾದ ೩-೫ ಡಿಗ್ರಿ ಉಷ್ಣತೆಯುಳ್ಳ ನೀರಲ್ಲಿ ಮತ್ಸ್ಯ ಸಂತತಿ ಬೆಳೆಯುತ್ತದೆಯೇ ಎಂಬುದು ಮೀನುಗಾರರ ಸಮಸ್ಯೆಯಾಗಿದೆ.
ನಾಗಾರ್ಜುನ ಕಂಪನಿ ಏನು ಹೇಳುತ್ತಿದೆ….
ಉಡುಪಿ ಜಿಲ್ಲೆಯಲ್ಲಿ ಅಭಿವೃದ್ಧಿ ಏನೇನು ಆಗಿಲ್ಲ. ಉದ್ಯೋಗಾವಕಾಶಗಳೂ ಇಲ್ಲ. ಹಾಗಾಗಿ ಇಲ್ಲಿನ ಯುವಜನತೆ ಗಲ್ಫ್ ರಾಷ್ಟ್ರಗಳಿಗೆ, ಹೊರ ರಾಜ್ಯಗಳಿಗೆ ಉದ್ಯೋಗವ್ನನರಸಿ ಹೋಗುತ್ತಿದ್ದಾರೆ. ಈಗ ನಾಗಾರ್ಜುನ ಬಂದರೆ ಇಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಇಲ್ಲಿಯವರು ಇಲ್ಲಿಯೇ ಇರಬಹುದು. ವಾಹನಗಳು, ಸೂಪರ್ ಬಜಾರ್‌ಗಳು, ಹೋಟೆಲ್‌ಗಳು ಹೀಗೆ ಪರೋಕ್ಷವಾಗಿಯೂ ಅನೇಕ ಉದ್ಯೋಗಗಳು ಸಿಗುತ್ತವೆ ಎಂದು ನಾಗಾರ್ಜುನರ ಸಾರ್ವಜನಿಕ ಸಂಪರ್ಕಾಧಿಕಾರಿ ವೀಣಾಶೆಟ್ಟಿ ಹೇಳುತ್ತಾರೆ. ಭೂಮಿ ಕಳೆದುಕೊಳ್ಳುವವರಿಗೆ ಭೂಮಿ ಬೇರೆಡೆ ಕೊಡಲಾಗುತ್ತದೆ. ವಿದೇಶೀ ಕಲ್ಲಿದ್ದಲು ಉಪಯೋಗಿಸುವ ಕಾರಣ ಹೆಚ್ಚು ತಳ ಬೂದಿ ಉತ್ಪಾದನೆ ಆಗುವುದಿಲ್ಲ. ೧೦೦ ಕ್ಕೆ ೧೦೦% ತಳಬೂದಿ ಉಪಯೋಗಿಸಿ ಇಟ್ಟಿಗೆ ತಯಾರಿಸುವ ಯೋಜನೆ ತಯಾರಿಸಲಾಗುತ್ತಿದೆ. ಇಲ್ಲಿ ಪರಿಸರ ನಾಶದ ಬಗ್ಗೆ ಹೇಳುತ್ತಿರುವವರು ಯಾರೂ ವೈಜ್ಞಾನಿಕವಾಗಿ ಅಭ್ಯಸಿಸಿದ ಪರಿಸರವಾದಿಗಳಲ್ಲ ಎಂಬುದು ಅವರ ಅಭಿಪ್ರಾಯ.
ಹೀಗೆನ್ನುತ್ತಾರೆ ಊರಿನವರು….
ಊರಿನವರು ಎಂಕ್ಲೆಗ್ ದುಡ್ಡ್ ಬೊಡ್ಚಿ, ಭೂಮಿ ಬೋಡು. ಹೇಗಾದರೂ ಮಾಡಿ ನಮ್ಮ ಭೂಮಿ ಉಳಿಸಿಕೊಡಿ ಎಂದು ಗದ್ಗದಿತರಾಗುತ್ತಾರೆ. ಬೇರೆಲ್ಲ ಕಡೆ ಹೋಗುವ ಮುಖ್ಯಮಂತ್ರಿ ನಮ್ಮಲ್ಲಿಗೆ ಗ್ರಾಮವಾಸ್ತವ್ಯಕ್ಕೆ ಬರಲಿ. ನಮ್ಮ ಕಷ್ಟ ನೋಡಲಿ ಎಂದು ಹೇಳುತ್ತಿದ್ದಾರೆ. ನಾಗಾರ್ಜುನ ಎಷ್ಟಕ್ಕೂ ಬೇಡ. ನಾವು ಅದನ್ನು ಬರಗೊಡುವುದಿಲ್ಲ ಹೋರಾಡುತ್ತೇವೆ ಎಂದು ಊರಿನವರು ಪಣ ತೊಟ್ಟು ನಿಂತಿದ್ದಾರೆ.
ಮಾರ್ಚ್ ೧೭ ರಂದು ರಾಷ್ಟ್ರೀಯ ಹೆದ್ದಾರಿ ೧೭ (ಎನ್.ಹೆಚ್.೧೭) ಯಲ್ಲಿ ರಸ್ತೆ ತಡೆಯನ್ನೂ ಮಾಡಿ ವಿದ್ಯುತ್ ಸ್ಥಾವರಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಕೋರ್ಟ್ ಕೂಡ ಇಲ್ಲಿನ ಕಾಮಗಾರಿಗೆ ತಡೆಯಾಜ್ಞೆಯೊಡ್ಡಿದೆ. ಆದರೂ ದಿನನಿತ್ಯ ಇದು ಒಂದಲ್ಲ ಒಂದು ವಿವಾದದಲ್ಲಿ ಇದ್ದೇ ಇರುತ್ತದೆ. ಈಗ ಇಲ್ಲಿನ ಜನಜಾಗೃತಿ ಸಮಿತಿಯ ಮುಖ್ಯ ಹೋರಾಟಗಾರ ಲಕ್ಷ್ಮಣಶೆಟ್ಟರನ್ನು ಪೋಲೀಸರು ಬಂಧಿಸಿದ್ದಾರೆ. ಜನರು ಇನ್ನೂ ತಮ್ಮ ಹಟ ಬಿಟ್ಟಿಲ್ಲ. ಹಣ, ಅಧಿಕಾರದ ವಿರುದ್ಧ ಜನರ ಹೋರಾಟ ಏನಾಗುವುದೋ ಕಾದು ನೋಡಬೇಕಷ್ಟೆ.
September 20th, 2008 at 12:23 am
ಕೇವಲ ನಾಗಾರ್ಜುನವನ್ನು ವಿರೋಧಿಸಿದರೆ ನಮ್ಮ ಪರಿಸರದ ಸಮಸ್ಯೆ ಪರಿಹಾರವಾಗುವುದಿಲ್ಲ. ನಮ್ಮ ನಮ್ಮ ಮನೆಗಳಲ್ಲಿ ನಾವು ಎಷ್ಟು ಪರಿಸರ ಉಳಿಸಿಕೊಂಡಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಂದರೆ ಇದಕ್ಕೆ ಪರಿಹಾರ ಸುಲಭ.