• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಲೇಖನಗಳು

    ನಮಗಿಂತ ಪೂರ್ವಜರೇ ಸುಖಿಗಳು

    September 17th, 2008.


    -ವಿನುತಾ ಎಸ್. ಸಿದ್ದಾಪುರ

    ಹಗಲು ಇರುಳು ಜಾರುತಿದೆ, ದಿನ ದಿನಗಳು ಉರುಳುತಿದೆ

    ವರುಷ ವರುಷ ತೆರಳುತಿದೆ, ಹರುಷ ಮರೆಯಾಗುತಿದೆ !

    ನಾವೆಲ್ಲಾ ಇಂದು ೨೧ ನೇ ಶತಮಾನದಲ್ಲಿದ್ದೇವೆ. ತುಂಬಾ ಆಧುನಿಕತೆಯಲ್ಲಿ ಮುಂದುವರಿದಿದ್ದೇವೆ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಮನೆಯಲ್ಲೇ ಕುಳಿತು ಮಾತನಾಡುವಷ್ಟು ವಿಜ್ಞಾನ ಮುಂದುವರಿದಿದೆ. ಯಾವುದೇ ಕಂಪನಿಗಳಲ್ಲಿ, ಯಾವುದೇ ಆಸ್ಪತ್ರೆಗಳಲ್ಲಿ, ಯಾವುದೇ ಸಂಘ-ಸಂಸ್ಥೆಗಳಲ್ಲಿ ಅಲ್ಲಿಯ ವಿಷಯ ವಿಚಾರಗಳನ್ನು ಶೇಖರಿಸಿಟ್ಟುಕೊಳ್ಳುವಂತಹ ಕಂಪ್ಯೂಟರ್‌ಗಳು ಇಂದು ತಯಾರಾಗಿದೆ. ಅಂದರೆ ನಮ್ಮ ನೆನಪಿನ ಶಕ್ತಿ ಮಾಡುವ ಕೆಲಸವನ್ನು ಇಂದು ಆ ಕಂಪ್ಯೂಟರ್ ಮಾಡುತ್ತದೆ. ಪ್ರತಿಯೊಂದರಲ್ಲೂ ಮುಂದುವರೆಯುತ್ತಿರುವ ನಮಗೆ ಇರುವ ಒಂದೇ ಒಂದು ಕೊರತೆ ಎಂದರೆ ’ಮಾನಸಿಕ ನೆಮ್ಮದಿ’.

    ಇಂದು ಪ್ರತಿಯೊಬ್ಬರಿಗೂ ತುಂಬಾ ಗಡಿಬಿಡಿ. ನಿಂತು ನೋಡುವ ಕುಳಿತು ಕೇಳುವ ತಾಳ ಯಾರಲ್ಲೂ ಇಲ್ಲ. ದಿನದ ೨೪ ಘಂಟೆ ಕೂಡ ಜಗತ್ತು ಎಚ್ಚರವಾಗಿರುತ್ತದೆ. ನಮ್ಮಲ್ಲಿರುವ .ಸಂತಸ. ಮಾತ್ರ ಮಲಗಿ ನಿದ್ರಿಸುತ್ತದೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ಶರೀರ ಮತ್ತು ಮನಸ್ಸು ಓಡುತ್ತಲೇ ಇರುತ್ತದೆ. ಆದರೂ ತೃಪ್ತಿಯಿಂದ ವಿಶ್ರಾಂತಿ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಂತಹ ಬದುಕು ನಮ್ಮದು? ಕಷ್ಟ-ಸುಖ ಹಂಚಿಕೊಂಡು ಒಳ್ಳೆಯ ಬದುಕನ್ನು ನಡೆಸುವ ಕಾಲ ಎಲ್ಲಿ ಮರೆಯಾಯಿತು? ಈ ಸಮಸ್ಯೆಯನ್ನು ಬಗೆಹರಿಸುವ ಯಂತ್ರವನ್ನು ಯಾರೂ ತಯಾರಿಸಿಲ್ಲವೆ? ಇದಕ್ಕೇನು ಮಾಡುವುದು? ನಮಗಿಂತ ಪೂರ್ವಜರೇ ಸುಖಿಗಳೆ? ನನ್ನ ಪ್ರಕಾರ ಇಂದಿನ ಆಧುನಿಕ ಬದುಕೇ ಈ ಅಶಾಂತಿಗೆ ಕಾರಣ. ವಿದ್ಯಾವಂತರೇ ತುಂಬಿಕೊಂಡ ಈ ಸಮಾಜ ಕಾರಣ. ಒಂದು ತರಹದಲ್ಲಿ ಮನುಷ್ಯತ್ವ, ಮಾನವೀಯತೆ ಇವೆಲ್ಲ ಸತ್ತು ಸಮಾಧಿಯಾಗಿದೆ. ತುಂಬಾ ಬೇಸರ ತರುವಂತಹ ವಿಚಾರ ಇದು. ನಾವಾದರೂ, ನಮ್ಮ ಪೂರ್ವಜರ ಹಿಂದಿನ ಬದುಕಿನ ವಿಚಾರವನ್ನು ಕೇಳಿದ್ದೇವೆ. ನಾವು ಬಾಲ್ಯದಲ್ಲಿ, ಈಗಿನವರ ಚಿಕ್ಕ ಮಕ್ಕಳ ಬಾಲ್ಯಕ್ಕಿಂತಲೂ, ಸಂತಸದಿಂದ ಕಳೆದಿದ್ದೇವೆ. ಅಲ್ಲಲ್ಲಿ ಹರುಷದ ನದಿಯನ್ನು ದಾಟಿದ್ದೇವೆ. ಆದರೆ ಇಂದಿನ ಮಕ್ಕಳು ಮಾತ್ರ ಆ ವಿಚಾರದಲ್ಲಿ ತುಂಬಾ ನತದೃಷ್ಟರೇ ಸರಿ. ಇಂದಿನ ಮಕ್ಕಳು ಹುಟ್ಟುವಾಗಲೇ, ಪಾಲಕರ ಕಾನೂನಿನ ಚೌಕಟ್ಟಿನೊಳಗೆ ಇರುತ್ತಾರೆ. ಇಂದಿನ ಮಕ್ಕಳಿಗೆ ೨ವರ್ಷ ಆಯಿತೆಂದರೆ ಮುಗಿಯಿತು. ಅವರನ್ನು ಓದು, ಬರಹ, ಸಂಗೀತ ಅದು, ಇದು ಎಂದು ಮಕ್ಕಳಿಗೆ ಅವರು ಹೊರಲಾರದಷ್ಟು ಒತ್ತಡವನ್ನು ಹೊರಿಸುತ್ತಾರೆ. ಅದು ತಪ್ಪು ಎಂದಲ್ಲ. ಆದರೆ ಅವರಿಗೆ ಸಾಧ್ಯವಾದಷ್ಟು ಮಾತ್ರ ಕಲಿಸಿದರೆ ಆ ಮಕ್ಕಳು ತಮ್ಮ ಬಾಲ್ಯವನ್ನಾದರೂ ಸಂತಸದಿಂದ ಕಳಯಬಹುದು. ಈ ಕಲಿಯುವಂತಹ ಕಾಲದಲ್ಲಿ ಮಕ್ಕಳಿಗೆ ಬೇರೆಯ ಕಡೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಗುಡ್ಡ ಬೆಟ್ಟಗಳನ್ನು ಹತ್ತಿ ಇಳಿಯುವ ಆಸಕ್ತಿ ಇಲ್ಲ. ಬಿಸಿಲಿನಲ್ಲಿ ಆಟವಾಡುವ ಮಕ್ಕಳಿಲ್ಲ. ಶಾಲೆಗೆ ಸಂಬಂಧಿಸಿದ್ದನ್ನು ಬಿಟ್ಟರೆ, ಇನ್ಯಾವುದೇ ಪುಸ್ತಕವನ್ನಾಗಲಿ , ಪತ್ರಿಕೆಗಳನ್ನಾಗಲೀ ಓದುವ ಹವ್ಯಾಸವೇ ಇಲ್ಲ. ಹೋಗಲಿ, ಮನೆಗೆ ಅತಿಥಿಗಳು ಬಂದರೆ ಅವರೊಟ್ಟಿಗೆ ಕುಳಿತು ಮಾತನಾಡುವ ಅಭ್ಯಾಸವೂ ಇಲ್ಲ. ಕೇವಲ ಟಿ.ವಿ ನೋಡುವುದೊಂದೆ ಮಕ್ಕಳಿಗೆ ಮನರಂಜನೆಯಾಗಿದೆ. ಓಡಿ, ಆಡೋ ವಯಸ್ಸಿನಲ್ಲಿ, ನೆಮ್ಮದಿಯೇ ಇಲ್ಲದ ಮೇಲೆ ಬದುಕುವುದು ಹೇಗೆ? ಕುಣಿದಾಡುವ ಮಕ್ಕಳ ಗತಿ ಏನು?

    ಹಾಗೆ ನೋಡಿದರೆ ಕೊರತೆ ಇಲ್ಲದ ಮನುಷ್ಯನಿಗೆ ಬೇಡಿಕೆಯೂ ಇರಲಾರದು. ಬೇಡಿಕೆ ಇಲ್ಲದವನಿಗೆ, ಆಸೇನೂ ಇಲ್ಲ. ಆಸೆ ಇಲ್ಲದ ಮನುಷ್ಯ ಮನುಷ್ಯನೇ ಅಲ್ಲ. ಏಕೆಂದರೆ, ಆಸೆಯ ಈಡೇರಿಕೆಗಾಗಿ ಆ ಮನುಷ್ಯ ಕಷ್ಟ ಪಡಬೇಕು. ಕಷ್ಟಪಟ್ಟರೆ ಮಾತ್ರ ಅವನಿಗೆ ಆಸೆ ಈಡೇರಿದ ಸಂತಸದ ಅನುಭವ ಆಗುತ್ತದೆ. ಆದರೆ ಈಗಿನವರಿಗೆ ಆಸೇನೂ ಇಲ್ಲ. ಅದಕ್ಕಾಗಿ ಕಷ್ಟಪಟ್ಟು, ಬೆವರು ಸುರಿಸುವ ಅನುಭವವೂ ಇಲ್ಲ. ಒಂದು ವಸ್ತು ಬೆಳಿಗ್ಗೆ ಬೇಕು ಎನಿಸಿದರೆ ಸಂಜೆಯ ಒಳಗೆ ಆ ವಸ್ತು ನಮ್ಮ ಕೈಲಿ ಇರುತ್ತದೆ. ಈ ರೀತಿಯ ವೇಗದ ಬದುಕಿನಲ್ಲಿ ನಾವು ಸಾಗುತ್ತಿರುವಾಗ, ನಮಗೆಲ್ಲಿ .ಹರುಷ. ಸಿಗಲು ಸಾಧ್ಯ?

    ಆಧುನಿಕತೆಯ ವಿರೋಧಿ ನಾನಲ್ಲ. ವಿಜ್ಞಾನದ ಬೆಳವಣಿಗೆ ಆಗಿರುವುದು ನಿಜಕ್ಕೂ ಸಂತೋಷದ ವಿಚಾರ. ಒಂದು ಸಾವಿರ ಜನ ಮಾಡುವ ಕೆಲಸವನ್ನು ಇಂದು ಒಂದು ’ಮಿಶನ್’ ಮಾಡುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಹೊಸ ಹೊಸ ಆಧುನಿಕ ಆವಿಷ್ಕಾರಗಳಿಂದ ತುಂಬಾ ಲಾಭದಾಯಕವಾಗಿದೆ ಮತ್ತು ಉಪಕಾರವೂ ಆಗಿದೆ. ಅದು ತುಂಬಾ ಸರಳವಾದ ರೀತಿಯಲ್ಲಿ ಯಾವುದೇ ಕೆಲಸವನ್ನು ಮಾಡಬಹುದು. ಆದರೆ ಈ ಶರವೇಗದ ಬದುಕಿನಲ್ಲಿ ಭಾವನೆಗಳು ಸಾಯುತ್ತಿವೆ. ಈಗ ತಾನೆ ಹುಟ್ಟಿದ ಮಕ್ಕಳಿಗೆ ಸಂತಸದ ಕ್ಷಣದಿಂದ ವಂಚನೆಯಾಗುತ್ತಿದೆ. ದಯವಿಟ್ಟು ನಮ್ಮ ಬದುಕನ್ನು ಒಂದು ಆದರ್ಶದೆಡೆಗೆ ಕೊಂಡೊಯ್ಯೋಣ. ಆಸ್ತಿ, ಹಣ, ಸಂಪತ್ತು ಯಾವುದೇ ಇದ್ದರೂ, ಅವನಿಗೆ ಮಾನಸಿಕವಾಗಿ ಸಂತೋಷವಿದ್ದರೆ ಮಾತ್ರ ಅವನ ಬದುಕು ಹಸನಾಗಿರುತ್ತದೆ. ಬೇರೆಯವರ ಕಷ್ಟವನ್ನು ಅರ್ಥ ಮಾಡಿಕೊಳ್ಳುವ ಮನಸ್ಸು, ಸಹನೆ, ತಾಳ್ಮೆ ಇದ್ದರೆ ಅವನು ನೆಮ್ಮೆದಿಯಿಂದ ಇರಲು ಸಾಧ್ಯ. ಅಂತಹ ಬದುಕು ನಮ್ಮದಾಗಿರಲಿ. ನಮ್ಮ ಬಾಳು ಕೇವಲ ಮೂರು ದಿನದ್ದು. ಅದರಲ್ಲಿ ಈಗಾಗಲೇ ಒಂದೂವರೆ ದಿನ ಕಳೆದುಹೋಗಿದೆ. ಇನ್ನು ಇರುವ ದಿನಗಳನ್ನಾದರೂ ಸಂತೋಷದಲ್ಲಿ ಬೇರೆಯವರೊಂದಿಗೂ ಸಂತೋಷವನ್ನು ಹಂಚಿಕೊಂಡು ಆನಂದದಿಂದ ಬದುಕೋಣ. ಈ ನೆಮ್ಮದಿ ಆನಂದ ಎಲ್ಲವೂ ನಮ್ಮಲ್ಲಿಯೆ ಒಂದು ಮೂಲೆಯಲ್ಲಿ ಇದೆ. ಅವನ್ನು ಹುಡುಕಿಕೊಂಡು ಬದುಕುವುದು ನಮ್ಮ ಕೈಲಿದೆ. ಆನಂದದ ಬದುಕು ನಮ್ಮದಾಗಿರಲಿ, ಆದರ್ಶದಿಂದ ಕೂಡಿರಲಿ, ಮುಂದಿನ ಜನಾಂಗಕ್ಕೆ ಮಾದರಿಯಾಗಲಿ. ಹಿಂದಿನವರ ಮಾರ್ಗದರ್ಶನ ನಮಗಿರಲಿ.

    ಪ್ರತಿಕ್ರಿಯಿಸಿ :