• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಕಂಡದ್ದು ಕಂಡಹಾಗೆ

    ಯುಗಾದಿಗೆ ಸ್ವಾಗತ

    September 17th, 2008.


    - ಸುನಿಲ್ ಎಸ್. ಕಯ್ಯಾರು

    ಸರ್ವಜಿತು : ಸಂತಸ ತರಲಿ ಸರ್ವ‌ಋತು

    ಕಳೆದು ಕಲುಷವ ಮರೆಸಿ ದುಗುಡವ

    ತಳೆದು ನವ ಉನ್ಮೇಷವ

    ತೊಳೆದು ಮನಸಿನ ಸುತ್ತ ಸುಳಿದಿಹ

    ಕೊಳೆಯನೆಲ್ಲವ ಬಿಸುಡುತ

    ಮರಳಿ ಬರುತಿಹ ಹೊಸಯುಗಾದಿಗೆ

    ಹೊಸತನದ ಸುಸ್ವಾಗತ |

    ಮುದ್ದು ಮಾತಿನ ಸಹನೆ ತುಂಬಲಿ

    ಬಿದ್ದು ಹೋಗಲಿ ದರ್ಪವು

    ಪೆದ್ದುತನ ಅಜ್ಞಾನ ತೊರೆಯಲಿ

    ಎದ್ದು ಹೊಮ್ಮಲಿ ಜ್ಞಾನವು

    ಸದ್ದುಗದ್ದಲವಿರದೆ ಬರುತಿಹ

    ಹೊಸ ಯುಗಾದಿಗೆ ಸ್ವಾಗತ |

    ಸುತ್ತಮುತ್ತಲ ಮೌಢ್ಯ ತೊಲಗುತ

    ಎತ್ತಿ ಬಿಸುಡುತ ಮಿಥ್ಯವ

    ನಿತ್ಯ ಸ್ಪೂರ್ತಿಯ ಸೆಲೆಯು ಹೊಮ್ಮಲಿ

    ವ್ಯಕ್ತಗೊಳಿಸುತ ಸತ್ಯವ

    ಸ್ವಾಭಿಮಾನದ ನವಯುಗಾದಿಗೆ

    ಸ್ಫೂರ್ತಿ ಹೃದಯದ ಸ್ವಾಗತ

    ದುಃಖ, ಭಯ, ಕೋಪ, ಅಜ್ಞಾನಗಳನ್ನು ಹೋಗಲಾಡಿಸುವುದು, ಬದುಕು ಹಸನಾಗಿಸುವುದು, ಹಾಗೂ ಅವಿರತ ದುಡಿಮೆಯಿಂದ ಸ್ವಲ್ಪ ವಿಶ್ರಾಂತಿ ಪಡೆದು ಸಂಭ್ರಮಿಸುವುದು ಹಬ್ಬಗಳ ಆಚರಣೆಯ ಹಿಂದಿನ ಉದ್ದೇಶ. ಇದೇ ಹಿನ್ನೆಲೆಯಲ್ಲಿ ಯುಗದ ಆದಿಯನ್ನು, ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸುವ ಹಬ್ಬ ಯುಗಾದಿ. ಯುಗಾದಿ ಕಹಿ ಸಿಹಿಗಳ ಸಮರಸದ ಸಂಕೇತ. ಬೇವು ಬೆಲ್ಲಗಳ ಹಬ್ಬ. ಬದುಕಿನಲ್ಲಿ ಕಹಿಗೆ ಹೆಚ್ಚು ಕೊರಗದೆ, ಸಿಹಿಗೆ ಅತಿಯಾಗಿ ಸಂಭ್ರಮಿಸದೆ ಎರಡನ್ನೂ ಸಮನಾಗಿ, ಸಮನ್ವಯದಿಂದ ಸ್ವೀಕರಿಸ ಬೇಕೆಂಬ ಸಂದೇಶ ಸಾರುವ ಹಬ್ಬ. ಅಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿ ವಿಶೇಷ. ಈ ದಿನದಂದು ಶ್ರೀರಾಮನು ರಾವಣಾಸುರನನ್ನು ಸಂಹರಿಸಿ ಅಯೋಧ್ಯೆಗೆ ತೆರಳಿ ರಾಮರಾಜ್ಯವನ್ನು ಆಳಲು ಆರಂಭಿಸಿದ. ಅದರ ಜ್ಞಾಪಕಾರ್ಥವಾಗಿ ಇಂದಿಗೂ ಹಬ್ಬದ ದಿನ ಮನೆಯ ಮುಂದೆ ಧ್ವಜ ಹಾರಿಸಿ ಸಂತೋಷಿಸುವ ಪದ್ಧತಿಯುಂಟು. ಇದರಿಂದ ಅದಕ್ಕೆ ಗುಡಿಪಾಡ್ಯ (ಬಾವುಟಪಾಡ್ಯ) ಎಂಬ ಹೆಸರೂ ಇದೆ ಎಂದು ಮಹಾಭಾರತದಲ್ಲೂ ಉಲ್ಲೇಖವಿದೆ. ಹಾಗೆಯೇ ಶಾಲಿವಾಹನನೆಂಬ ಚಕ್ರವರ್ತಿ ನಮ್ಮ ದೇಶದ ಮೇಲೆ ದಾಳಿ ಮಾಡಿದ ಶಕರೆಂಬ ಪರಕೀಯರನ್ನು ಸೋಲಿಸಿದ ವಿಜಯದ ಸಂಕೇತವಾಗಿ .ಶಾಲಿವಾಹನ ಶಕ. ವರ್ಷವೆಂದು ಆಚರಣೆಗೆ ಬಂದಿತೆಂಬ ಐತಿಹ್ಯವಿದೆ. ಈ ಯುಗಾದಿಗೆ ಪ್ರಪಂಚ ಸೃಷ್ಟಿಯಾಗಿ ೧೯೫೫೮೮೫೧೦೮ ವರ್ಷಗಳು ಮತ್ತು ಕಲಿಯುಗ ಪ್ರಾರಂಭವಾಗಿ ೫೧೦೮ ವರ್ಷಗಳು ಕಳೆದವು ಎಂಬ ನಂಬಿಕೆಯೂ ಇದೆ.

    ಪ್ರತಿಯೊಂದು ಹಬ್ಬಹರಿದಿನಗಳ ಹಿಂದೆಯೂ ತನುಮನದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಕೆಲವೊಂದು ಪದ್ಧತಿಗಳನ್ನು ಆಚರಣೆಗೆ ತರಲಾಗಿದೆ.ಹಾಗಾಗಿಯೇ ಯುಗಾದಿಯಂದು ಬೇವು- ಬೆಲ್ಲ ಸವಿಯುವ ಆಚರಣೆಯಿದೆ. ವಸಂತ ಋತುವಿನ ಆಗಮನದ ಈ ಸಮಯದಲ್ಲಿ ಸೂರ್ಯನ ತೀಕ್ಷ ಕಿರಣಗಳಿಂದಾಗಿ ಹಲವು ರೀತಿಯ ವ್ಯಾಧಿಗಳು ಬರುವ ಸಾಧ್ಯತೆ ಇರುತ್ತದೆ. ಸುಸ್ತು, ಸಂಕಟ, ಬಾಯಾರಿಕೆ ಸರ್ವೇಸಾಮಾನ್ಯ. ಚಳಿಗಾಲದಲ್ಲಿ ಹೆಪ್ಪುಗಟ್ಟಿದ ಕಫ ನೀರಾಗಿ ಹರಿಯುತ್ತದೆ. ಇದನ್ನು ನಿವಾರಿಸಲು ಆಯುರ್ವೇದದ ಪ್ರಕಾರ ಬೇವು-ಬೆಲ್ಲದ ಸೇವನೆ ಅತ್ಯಂತ ಪ್ರಯೋಜನಕಾರಿ. ಹಾಗಾಗಿಯೇ ಯುಗಾದಿ ಆರೋಗ್ಯದ ಹಾದಿ. ಪ್ರಕೃತಿಮಾತೆ ಹಸಿರುಟ್ಟು ನಲಿವ ಈ ಸಂಭ್ರಮದ ಕ್ಷಣಗಳಲ್ಲಿ ಆಕೆಯ ಮಕ್ಕಳಾದ ನಾವು ಅವಳನ್ನು ಉಳಿಸುವ, ಪರಿಸರವನ್ನು ರಕ್ಷಿಸುವ ಪ್ರತಿಜ್ಞೆ ಮಾಡೋಣ. ನಮ್ಮ ಮನಸ್ಸುಗಳನ್ನು ಅತಿಕ್ರಮಿಸಿರುವ ಕೀಳು ಅಭಿರುಚಿಯ ವಿಷಯಗಳನ್ನು ಕಿತ್ತೆಸೆಯೋಣ. ’ಸರಳ ಜೀವನ,ಉನ್ನತ ಚಿಂತನೆ’ ನಮ್ಮದಾಗಲಿ. ನವ್ಯ ಭಾವನೆಗಳು ಹರಿದು ಬರಲಿ. ಸರ್ವಜಿತು ಸಂತಸ ತರಲಿ. ಸೃಜನಶೀಲತೆಯ ಹುಡುಕಾಟ ಸದಾ ಸರ್ಜನಶೀಲವಾಗಿಯೇ ಇರಲಿ. ಚೈತ್ರರಶ್ಮಿ ಬಳಗದ ಮಿತ್ರರಿಗೆ, ಹಿತೈಷಿಗಳಿಗೆ, ಆತ್ಮೀಯರೆಲ್ಲರಿಗೂ ಹೊಸವರ್ಷದ ಶುಭಾಷಯಗಳು.

    ಪ್ರತಿಕ್ರಿಯಿಸಿ :