ಬರಿಯ ಓದು ವ್ಯರ್ಥ-ಒಳ್ಳೆಯ ಕೆಲಸ ಮಾಡಿದರಷ್ಟೇ ಅದಕ್ಕೊಂದು ಅರ್ಥ
September 17th, 2008.
-ರಾಘವೇಂದ್ರ ಬಿ. ಅಗರ್ಖೇಡ್, ಬೆಂಗಳೂರು
“ಎಷ್ಟು ಓದಿದರೆ ಏನು ಪ್ರಯೋಜನ? ಒಂದು ಚಿಕ್ಕ ಒಳ್ಳೆ ಕೆಲಸವನ್ನು ನಾನು ಪ್ರಾಯೋಗಿಕವಾಗಿ ಮಾಡದೆ ಹೋದರೆ, ಆ ಪುಸ್ತಕ ಬರೆದವನ ಉದ್ದೇಶ ಖಂಡಿತ ಸಾರ್ಥಕವಾಗುವುದಿಲ್ಲ. ಆ ಲೇಖಕನಿಗೆ ಅಥವ ಕವಿಗೆ ನಾವು ಸಲ್ಲಿಸುವ ಉನ್ನತವಾದ ಗೌರವ ಅಂದರೆ ಅವನ ಉದ್ದೇಶದ ಒಂದಂಶವನ್ನಾದರೂ ಕಾರ್ಯರೂಪಕ್ಕೆ ತರುವುದು ಮಾತ್ರ.
ಒಬ್ಬನಿದ್ದ ಒಂದು ಊರಲ್ಲಿ. ಅವನಿಗೆ ಓದೋ ಗೀಳು ಚಿಕ್ಕ ವಯಸ್ಸಿನಿಂದ. ಪುಸ್ತಕಕ್ಕೋಸ್ಕರ ಒಂದೂರಿಂದ ಮತ್ತೊಂದೂರಿಗೆ ಪ್ರಯಾಣ ಬೆಳೆಸಿ ಓದಿಕೊಂಡು ಅಥವಾ ಕಡಿಮೆ ಬೆಲೆಯದ್ದಾದರೆ ಕೊಂಡು ತಂದು ಓದುತ್ತಿದ್ದ. ಇಷ್ಟೊತ್ತಿಗೆ ನಿಮಗೆ ಅರ್ಥವಾಗಿರಬೇಕು ಅವನ ಪುಸ್ತಕ ಪ್ರೀತಿ. ಆಯ್ತು ಅವನ ವಿದ್ಯಾಭ್ಯಾಸ ಅವನ ೨೧ನೆಯ ವಯಸ್ಸಿನಲ್ಲಿ. ಕೆಲಸ ಸಿಕ್ತು ಒಳ್ಳೆ ಕಡೆ. ಸಂಬಳ ಬರೋದಕ್ಕೆ ಶುರುವಾಯ್ತು ಕೈತುಂಬ. ಒಳ್ಳೆ ಕೆಲಸ, ಒಳ್ಳೆ ಸಂಬಳದ ನಡುವೆ ಅವನ ಹಳೆಯ ಗೀಳಾದ ಓದುವುದನ್ನು ಮರೆತಿರಲಿಲ್ಲ ಅವನು. ಆದರೆ ಓದುವ ಪುಸ್ತಕಗಳ ಆಯ್ಕೆ ಬದಲಾಯಿತು. ದೇಶೋದ್ಧಾರ, ವ್ಯಕ್ತಿತ್ವ ವಿಕಸನ ಈ ರೀತಿಯ ವಿಷಯಗಳನ್ನೊಳಗೊಂಡ ಪುಸ್ತಕಗಳನ್ನು ಓದಲಾರಂಭಿಸಿದ. ಏನೋ ಒಂದು ರೀತಿಯ ವಿಶೇಷವಾದ, ಹಿಂದೆಂದೂ ಯಾವ ಪುಸ್ತಕ ಓದಿದಾಗಲೂ ಆಗಿರದ ಅನುಭವ ಆಗತೊಡಗಿತು ಅವನಿಗೆ. ನಾನು ಎಷ್ಟೋ ವಿಷಯಗಳ ಬಗ್ಗೆ ಓದ್ತಾನೇ ಬಂದಿದ್ದೀನಿ, ಹಾಗೆ ಮಾಡಬೇಕು, ಹಾಗೆ ಮಾಡಿದರೆ ದೇಶಕ್ಕೆ, ಇಡೀ ವಿಶ್ವಕ್ಕೆ ಒಳ್ಳೆಯದಾಗುತ್ತದೆ ಅಂತ ಪುಸ್ತಕಗಳಲ್ಲಿ ಬರ್ದಿತ್ತಾರೆ, ಆದರೆ ಯಾವತ್ತಾದರೂ ನಾನು ಆ ರೀತಿ ಮಾಡೋದಕ್ಕೆ ಪ್ರಯತ್ನ ಪಟ್ಟೀದೀನಾ? ಓಹ್ ಎಂಥಾ ಮೂರ್ಖ ನಾನು, ಸುಮ್ಮನೆ ಓದಿ ಖುಷಿಪಟ್ಕೊಂಡು, ಮನಸ್ಸನ್ನು ಉಲ್ಲಾಸ ಗೊಳಿಸುವುದರಲ್ಲೇ ನನ್ನ ಬುದ್ಧಿಶಕ್ತಿ ಸೀಮಿತವಾಗಿ ಹೋಗಿದೆ ಯಲ್ಲಾ? ಇನ್ನು ಮೇಲೆ ಸುಮ್ಮನೆ ಓದಿಕೊಂಡು ಹೋಗಲ್ಲ. ಅದು ಎಷ್ಟೇ ಚಿಕ್ಕ ಕೆಲಸವಾಗಲಿ, ಆ ಪುಸ್ತಕದ ಮೊದಲ ಪುಟದಲ್ಲೇ ನನ್ನ ಜೀವನ ಪೂರ್ತಿ ಕಳೆದರೂ ಪರವಾಗಿಲ್ಲ, ನಾನು ಮಾತ್ರ ಆ ಪುಸ್ತಕದಲ್ಲಿ ಕೊಟ್ಟಿರುವ ಮೊದಲ ಚಿಕ್ಕ ಕಾರ್ಯ ನಿರ್ವಹಿಸುವ ಜವಾಬ್ದಾರಿ ಹೊರುತ್ತೇನೆ. ನಂತರದ ಪುಟಗಳು ನಂತರಕ್ಕೆ ಇರಲಿ ಎಂದು ಪುಸ್ತಕ ಮುಚ್ಚಿಟ್ಟ. ಈ ನಿರ್ಧಾರ ಮಾಡಿ, ಕಾರ್ಯ ಪ್ರವೃತ್ತನಾಗಿ ಹಲವು ವರ್ಷಗಳೇ ಕಳೆದಿವೆ. ಈಗಲೂ ಹೇಳ್ತಾನೆ. ಇನ್ನೂ ಆ ಮೊದಲ ಪುಟದಲ್ಲೇ ಇದ್ದೀನಿ. ಶ್ರದ್ಧೆಯಿಂದ ಒಳ್ಳೆ ಕೆಲಸ ಶುರು ಮಾಡಿ ನಡೆಸಿಕೊಂಡು ಬರುತ್ತಾ ಇದ್ದೇನೆ. ಏನೋ ಒಂದು ಸಾಧಿಸಿದ ತೃಪ್ತಿ ಇದೆ. ನಾನು ಸುಮ್ಮನೆ ನೂರಾರು ಪುಸ್ತಕಗಳನ್ನು ಓದುತ್ತಾ ಇದ್ದು ಬಿಟ್ಟಿದ್ದರೆ ಈ ತೃಪ್ತಿ ಸಿಗುತ್ತಿರಲಿಲ್ಲವೇನೋ?. ಅವನ ಮಾತುಗಳನ್ನು ಕೇಳಿ ನನಗೂ ಅನ್ನಿಸಿತು. ಎಷ್ಟು ಓದಿದರೆ ಏನು ಪ್ರಯೋಜನ? ಒಂದು ಚಿಕ್ಕ ಒಳ್ಳೆ ಕೆಲಸವನ್ನು ನಾನು ಪ್ರಾಯೋಗಿಕವಾಗಿ ಮಾಡದೆ ಹೋದರೆ, ಆ ಪುಸ್ತಕ ಬರೆದವನ ಉದ್ದೇಶ ಖಂಡಿತ ಸಾರ್ಥಕವಾಗುವುದಿಲ್ಲ. ಆ ಲೇಖಕನಿಗೆ ಅಥವ ಕವಿಗೆ ನಾವು ಸಲ್ಲಿಸು ಉನ್ನತವಾದ ಗೌರವ ಅಂದರೆ ಅವನ ಉದ್ದೇಶದ ಒಂದಂಶವನ್ನಾದರೂ ಕಾರ್ಯರೂಪಕ್ಕೆ ತರುವುದು ಮಾತ್ರ. ಇಷ್ಟು ಜನ ವಿದ್ಯಾವಂತರಿದ್ದರೂ ಸಹ ಏಕೆ ಈ ದುಃಸ್ಥಿತಿಯಲ್ಲಿದ್ದೇವೆ ನಾವು ಅಂತ ಯೋಚನೆ ಮಾಡಿದಾಗಲೆಲ್ಲ ನನಗೆ ಈ ಅಂಶ ಬೆಳಕಿಗೆ ಬರುತ್ತದೆ.
ಏನೋ ಒಂದು ನಿರಾಶಾಭಾವ ಮೂಡುತ್ತದೆ ಈ ರೀತಿಯ ವಿದ್ಯಾವಂತರನ್ನು ನೋಡಿದಾಗ. ನಮಗೆ ಕೆಲ ಮಾಡುವವರು ಬೇಕು, ಕೆಲಸ ಹೇಗೆ ಮಾಡಬೇಕು ಎಂದು ನಿರ್ದೇಶನ ಮಾಡುವವರೇ ಎಲ್ಲರೂ ಆಗಿಬಿಟ್ಟರೆ ಕಾರ್ಯಗತಗೊಳಿಸುವರಾರು? ನಮಗೆ ಮೇಲಿನ ಕಥೆಯಲ್ಲಿ ಇರುವ ಅವನಂಥವರು ಬೇಕು ಪುಸ್ತಕ ಓದಿ ಮುಗಿಸದೇ ಇದ್ದರೂ ಪರವಾಗಿಲ್ಲ.
November 15th, 2010 at 11:32 pm
very nice article. thanks