ಪ್ರೀತಿ - ಜೀವನದ ಧರ್ಮ
September 17th, 2008.
- ಸುಂಕಸಾಳ ವಿಶ್ವನಾಥ, ಶಿರಸಿ.
’ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಎಲ್ಲವೂ ಸುಳ್ಳು ಎಲ್ಲವೂ ಶೂನ್ಯ’ ಎಂದೆಲ್ಲಾ ಬಡಬಡಿಸುವ, ಹಲುಬುವ ವ್ಯಕ್ತಿಗಳನೇಕರನ್ನು ನಮ್ಮ ನಿತ್ಯ ಜೀವನದ ಸುತ್ತಮುತ್ತಲೂ ಕಾಣುತ್ತೇವೆ. ಹಾಗೆಲ್ಲಾ ಹೇಳುತ್ತಾ ತಾವು ನೊಂದುಕೊಂಡು ಬೇರೆಯವರನ್ನೂ ಬೇಸರದ ಕೂಪಕ್ಕೆ ನೂಕುವ ಅಂತಹ ಜನ ಒಂದೋ ಅಸಹಾಯಕ ವೃದ್ಧರಾಗಿರಬೇಕು ಅಥವಾ ಯಾರಿಂದ ಲಾದರೂ ಮೋಸ ಹೋಗಿ ನಿರಾಶರಾದವರಾಗಿರಬೇಕು.
ಇಲ್ಲದಿದ್ದಲ್ಲಿ ಅಂದುಕೊಂಡ ಕಾರ್ಯದಲ್ಲಿ ಪುನಃ ಪುನಃ ಸೋತು ಆಶಾವಾದವನ್ನೇ ಕಳೆದುಕೊಂಡವರಾಗಿರಬೇಕು. ಎಲ್ಲರ ಜೀವನದಲ್ಲೂ ಈ ರೀತಿಯ ಕ್ಷಣಿಕ ವೈರಾಗ್ಯ ಬಂದೇ ಬರುತ್ತದೆ. ಅದರಲ್ಲೂ ಇಂದಿನ ಸ್ಪರ್ಧಾತ್ಮಕವೂ ಸಂಕೀರ್ಣವೂ ಆದ ಜಗತ್ತಿನಲ್ಲಿ ಒಮ್ಮೆಯಾದರೂ ಹೀಗನಿಸದೇ ಇರದು. ಆದರೆ ಈ ರೀತಿಯಾದ ಮನೋಭಾವನೆ ಯಾರಲ್ಲೂ ಬಹುಕಾಲ ಉಳಿಯಕೂಡದು. ಸೋತ ಮನಸ್ಸಿಗೊಮ್ಮೆ ಆಶಾವಾದದ ತಂಪು ನೀರನ್ನು ಚುಮುಕಿಸಬೇಕು. ಮತ್ತೆ, ಮತ್ತೆ ಕಾರ್ಯಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ನಮ್ಮ ಮನೋಬುದ್ಧಿಗಳಿಗೆ ಉತ್ಸಾಹದ ಪುನಶ್ಚೇತನ ನೀಡಬೇಕು. ಯಾಕೆ ಈ ಮಾತೆಂದರೆ, ಜೀವನದಲ್ಲಿ ಮತ್ತೆ ಮತ್ತೆ ಸಂಭವಿಸಬಹುದಾದ ದುಃಖ, ಸೋಲು, ನಿರಾಸೆ, ಖಿನ್ನತೆ ಇತ್ಯಾದಿಗಳಿಂದ ಕಂಗೆಟ್ಟು ಜೀವನದ ಮಾರ್ಗಕ್ಕೇ ವಿಮುಖರಾಗಿ, ಹತಾಶ ಮನೋಭಾವನೆ ಉಳ್ಳವರಾಗಿ ಮುಂದಿನ ಮಾರ್ಗವೇ ಇಲ್ಲವೋ ಎಂಬಂತೆ ತಿಳಿದು ಬರುವ ವಿಘ್ನಗಳನ್ನು ಎದುರಿಸುವ ಸ್ಥೆ ರ್‍ಯ ಕಳೆದುಕೊಂಡು ಅದಕ್ಕೆ ಅಂಜಿ ಆತ್ಮಹತ್ಯೆಯಂಥಹ ಘಾತುಕ ಕೆಲಸಗಳಿಗೆ ಮುಂದಾಗುತ್ತಿರುವ ಅಂಶ ಇಂದು ಬಹುವಾಗಿ ಕೇಳಿ ಬರುತ್ತಿದೆ. ಜಗತ್ತು ಎಷ್ಟೇ ಅಭಿವೃದ್ಧಿ ಹೊಂದಿದರೂ, ದೇಶ ಎಷ್ಟೇ ಶ್ರೀಮಂತವಾಗುತ್ತಿದ್ದರೂ ಮನುಜ ಮಾತ್ರ ಆತ್ಮಶಾಂತಿಯನ್ನೂ, ತೃಪ್ತಿಯನ್ನೂ ಹೊಂದುತ್ತಿಲ್ಲ. ಸ್ನೇಹ, ಸೌಹಾರ್ದ, ಪ್ರೀತಿಯಂತೂ ಬರವಣಿಗೆಯ ವಿಷಯ ಮಾತ್ರವಾಗಿದೆ. ಜೀವನವನ್ನು ವಿಶಾಲ ದೃಷ್ಟಿಯಿಂದ ನೋಡುವ ವ್ಯಕ್ತಿತ್ವದ ಕೊರತೆಯೇ ಇದಕ್ಕೆಲ್ಲ ಕಾರಣ. ಜೀವನವೆಂದರೆ, ಹಿರಿಯರು ಹೇಳುವಂತೆ ಜನನ-ಮರಣದ ನಡುವಿನ ಅವಧಿ, ಅದೇ ಸಂಸಾರ. ಈ ಜೀವನವು ಸುಖ-ದುಃಖ ನೋವು-ನಲಿವು, ಸರಸ- ವಿರಸ ಖಿನ್ನತೆ, ಸಂತೋಷ, ಪ್ರೀತಿ ದ್ವೇಷ ಸ್ನೇಹ ಇವನ್ನೆಲ್ಲ ಒಳಗೊಂಡಿದೆ. ಇವೆಲ್ಲ ಚಕ್ರದಂತೆ ಸುತ್ತುತ್ತ ಒಮ್ಮೆ ದುಃಖ ಮತ್ತೊಮ್ಮೆ ಸುಖ, ಒಮ್ಮೆ ನಿರಾಸೆ ಮಗದೊಮ್ಮೆ ಆಶಾವಾದ ಹೀಗೆ ನಮ್ಮ ಸುತ್ತಲೂ ಸುತ್ತುತ್ತ ಬಳಿಸಾರುತ್ತಲೇ ಇರುತ್ತವೆ. ಇಂತಹ ವೈಪರೀತ್ಯಗಳ ಸಂಕಲನವೇ ಆದ ಜೀವನದಲ್ಲಿ ತನ್ನತನವನ್ನು ಕಾಪಾಡಿಕೊಂಡು ಪರರಿಗಾಗಿಯೇ ಬದುಕುತ್ತಾ ಬರುವ ಸವಾಲುಗಳನ್ನು ಸ್ವೀಕರಿಸುತ್ತಾ, ದುಃಖವನ್ನು ಎದುರಿಸುತ್ತಾ, ಸುಖವನ್ನು ಅನುಭವಿಸುತ್ತಾ ಜೀವನವನ್ನು ’ಪ್ರೀತಿಸುತ್ತಾನೋ’ ಅವನೇ ನಿಜವಾದ ವ್ಯಕ್ತಿ ಅಥವಾ ಸಾಧಕ. ಆದರೆ ಇಂದಿನ ಸಮಾಜದಲ್ಲಿ ವ್ಯಕ್ತಿ ಅಭದ್ರತೆಯ ಕೊರಗಿನಲ್ಲಿ ನರಳುತ್ತಿದ್ದಾನೆ. ತನ್ನವರು ಸುತ್ತಲೂ ಇದ್ದರೂ ಯಾರೂ ಇಲ್ಲವೋ ಎಂಬಂತೆ ಒಂಟಿತನ ಕಾಡುತ್ತಿದೆ. ಲಕ್ಷೆಪಲಕ್ಷ ಸಂಬಳ ಗಿಟ್ಟಿಸುತ್ತಿದ್ದರೂ ’ಒಂದು ಪೈಸೆ’ ಸುಖಶಾಂತಿಯಿಲ್ಲ. ಅಂದರೆ ಮನುಷ್ಯ ಯಂತ್ರವಾಗುತ್ತಿದ್ದಾನೆ. ಅವನ ಭಾವನೆಗಳು ಮರಗಟ್ಟುತ್ತಿದೆ.ಮನಸ್ಸು ಮರಳುಗಾಡಾಗುತ್ತಿದ್ದರೆ ವ್ಯಕ್ತಿ ಶುಷ್ಕನಾಗುತ್ತಿದ್ದಾನೆ. ಈ ರೀತಿಯ ಅನಿಶ್ಚಿತತೆಯಿಂದ ಹೊರಬರಬೇಕಾದಲ್ಲಿ ಮಾನವನಿಗೆ ಪ್ರೀತಿ ಮತ್ತು ಸ್ನೇಹವೇ ಅನಿವಾರ್ಯ ಸಂಗತಿಗಳಾಗಿವೆ. ಈ ಪ್ರಪಂಚದ ತಳಹದಿ ಪ್ರೀತಿಯೇ ಎಂಬುದನ್ನು ಅರಿತುಕೊಳ್ಳಬೇಕು. ಈ ಪ್ರೀತಿಯೊಂದಿದ್ದರೆ ಜೀವನವೇ ಸುಖಯಾನವಿದ್ದಂತೆ. ಈ ಪ್ರೀತಿ ಗೆಳೆಯರಲ್ಲಿ ಸ್ನೇಹ ತಂದೆ ತಾಯಂದಿರಲ್ಲಿ ವಾತ್ಸಲ್ಯ, ಸಹೋದರರಲ್ಲಿ ಭ್ರಾತೃತ್ವ, ಪ್ರೇಯಸಿಯರಲ್ಲಿ ಪ್ರೇಮ ಹೀಗೆ ಅನೇಕ ಮುಖಗಳಿಂದ ತೋರಿಕೊಂಡು ಪ್ರಕಟಗೊಳ್ಳುತ್ತದೆ. ಮನುಷ್ಯನಿಗೆ ಅದರಲ್ಲೂ ದುಃಖಾರ್ತಿಗಳಿಗೆ, ಪ್ರೀತಿಯಿಲ್ಲದೇ ದೀನರಾದವರಿಗೆ, ಸಮಾಜದ ಅಸಮಾನತೆಯಿಂದ ನೊಂದವರಿಗೆ ಬೇಕಾಗಿರುವುದು ಸಂಪತ್ತಲ್ಲ, ಒಂದು ಹಿಡಿ ಶುದ್ಧ ಪ್ರಾಮಾಣಿಕ ಪ್ರೀತಿ. ನಾವು ನೀವೆಲ್ಲ ಕೈಗೊಳ್ಳಬೇಕಾದದ್ದು, ಪ್ರೀತಿಯಿಂದ ಪ್ರೀತಿಯನ್ನು ಹಂಚುವ ಪ್ರೀತಿಯ ಅಭಿಯಾನವನ್ನು. ಎಲ್ಲ ಹದಿಹರೆಯದವರ ಸೂಕ್ಷ ಮನಸ್ಸಿನ ಅಗತ್ಯತೆಗಳಲ್ಲೊಂದಾದ ಈ ಪ್ರೀತಿಯೆಂಬ ಮಾಧ್ಯಮದಿಂದಲೇ ನಾವೆಲ್ಲ ಬಂಧಿಸಲ್ಪಟ್ಟಿದ್ದೇವೆ. ಈ ಅಕ್ಷರ ಪ್ರೀತಿ ಇನ್ನೂ ಬೃಹದಾಕಾರವಾಗಿ ಬೆಳೆದು ಮುಂದೆ ಹುಟ್ಟುವ ಸಣ್ಣ ಗಿಡಗಳಿಗೆ ನೆರಳನ್ನು ನೀಡಬೇಕಾಗಿದೆ. ಇದಕ್ಕೆ ನಿಮ್ಮೆಲ್ಲರ ಬೆಂಬಲ ಮತ್ತು ಅಭಿಪ್ರಾಯವನ್ನು ಅಪೇಕ್ಷಿಸುತ್ತೇನೆ.