• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಕಂಡದ್ದು ಕಂಡಹಾಗೆ

    ಅವರು ಕಿರಿ ’ಕೆಟ್’ ಕೋಡಂಗಿಗಳು, ನಾವು ತಲೆಕೆಟ್ ಈರಭದ್ರರು !!

    September 17th, 2008.


    -ಚಂದ್ರಕಾಂತ್ ಆರ್. ತಾಳಗುಪ್ಪ

    ’ಟೀಂ ಇಚಿಡಿಯಾ’ ಎಂಬ ಹನ್ನೊಂದು ಮಂದಿ ಜಾಹೀರಾತು ವೀರರ ಪಡೆ ವಿಶ್ವಕಪ್ ಅಭಿಯಾನದ ಪ್ರಾಥಮಿಕ ಪರೀಕ್ಷೆಯಲ್ಲೇ ಸೋತು ಮನೆಗೆ ಮರಳಿದ್ದು ಈಗ ಹಳೆಯ ಸುದ್ದಿ. ಅದರ ಜತೆ ಅಭಿಮಾನಿಗಳ ಅತಿರೇಕವೂ ಗೊತ್ತಲ್ಲ. ಇದರ ಮೂಲಕ ’ಕ್ರಿಕೆಟ್ ತಂಡ ಬೆಂಬಲಿಸುವುದೇ ದೇಶಪ್ರೇಮ’ ಎಂಬ ಸಾಮಾನ್ಯರ ನಂಬಿಕೆಗೆ ಕಿಂಚಿತ್ತೂ ಬೆಲೆಕೊಡದೆ ’ಇಲ್ಲ, ನಾವು ದೇಶಕ್ಕಾಗಿ ಆಡುತ್ತಿಲ್ಲ, ದುಡ್ಡಿಗಾಗಿ ಮಾತ್ರ’ ಎಂಬ ಸತ್ಯವನ್ನು ದಾಂಡಿಗರು ನಿಜವಾಗಿಸಿದ್ದಾರೆ. ಇನ್ನೊಂದು ದೃಷ್ಟಿಯಲ್ಲಿ ಪರೀಕ್ಷೆಯನ್ನೇ ಮರೆತು ಟಿವಿ ಮುಂದೆ ಕೂರುತ್ತಿದ್ದ ಮಕ್ಕಳನ್ನು ಮತ್ತೆ ಪುಸ್ತಕದೆಡೆಗೆ ಮರಳುವಂತೆ ಮಾಡಿ ಲಕ್ಷಾಂತರ ತಂದೆ ತಾಯಂದಿರಿಗೆ ಉಪಕಾರ ಮಾಡಿದ್ದಾರೆ. ರಾತ್ರಿ ಮ್ಯಾಚ್ ನೋಡುತ್ತಾ ನಿದ್ದೆಗೆಟ್ಟು ಮರುದಿನ ಆಫೀಸ್‌ನಲ್ಲಿ ನಿದ್ರೆಗೆ ಜಾರುವವರ ಚಿಂತೆ ದೂರಾಗಿದೆ. ಕೋಟಿಗಟ್ಲೆ ಯೂನಿಟ್ಸ್ ಕರೆಂಟ್ ಉಳಿದಿದೆ. ಎಲ್ಲಕ್ಕಿಂತ ಹೆಚ್ಚಾಗಿ ದೇಶ ದೋಚುವ ಬಹುರಾಷ್ಟ್ರೀಯ ಕಂಪನಿಗಳಿಗೆ ಟೋಪಿ ಬಿದ್ದಿದೆ. ದಂಡವಾದ ಜಾಹೀರಾತುಗಳ ಮೂಲಕ ಅವರ ತಿಜೋರಿಗಳಿಗೆ ಕನ್ನ ಬಿದ್ದು ದೇಶಕ್ಕೆ ಉಪಕಾರವಾಗಿದೆ.

    ’ಒಂದು ಕ್ರೀಡೆಯಲ್ಲಿ ಸೋತರೆ ಇಷ್ಟೆಲ್ಲ ಬರೆಯಬೇಕಾ?’ ಎಂಬ ಪ್ರಶ್ನೆ ಸಹಜವೇ. ಈ ದೇಶದಲ್ಲಿ ’ಕ್ರಿಕೆಟ್ ಒಂದು ಕ್ರೀಡೆಯಾಗಿಯೇ ಉಳಿದಿದೆಯಾ?’ ಎಂಬುದು ಮರುಪ್ರಶ್ನೆ. ಯೋಚಿಸಿ ನೋಡಿ, ಈ ದೇಶದಲ್ಲಿ ಕ್ರಿಕೆಟ್ ಒಂದು ರಾಜಕೀಯ, ಒಂದು ಮೋಸ, ಒಂದು ವಂಚನೆ, ಒಂದು ವ್ಯವಹಾರ. ಲಾಲೂ ಯಾದವ್, ಶರದ್ ಪವಾರ್‌ರಂತಹ ತಿಮಿಂಗಿಲಗಳ ವಿಶ್ರಾಂತಿಧಾಮ, ಮ್ಯಾಚ್ ಫಿಕ್ಸಿಂಗ್ ಭೂತದ ಜನ್ಮಭೂಮಿ, ದೇಶದ ಉಳಿದೆಲ್ಲ ಕ್ರೀಡೆಗಳನ್ನು ಬಲಿತೆಗೆದುಕೊಂಡ ಬಕಾಸುರ. ಈ ಒಂದು ಮೋಜಿನಾಟಕ್ಕಾಗಿ ಸರ್ಕಾರ ಸುರಿವ ಹಣವಾದ್ರೂ ಎಷ್ಟು ಗೊತ್ತಾ?. ಅದೆಲ್ಲ ಹೋಗ್ಲಿ, ಮೊನ್ನೆ ಶ್ರೀಲಂಕಾ ಮೇಲೆ ಸೋತರೆ ದೇಶದ ಅದೆಷ್ಟು ಜನರ ನಂಬಿಕೆದ್ರೋಹ ಮಾಡಿದಂತೆ ಎಂಬ ಕನಿಷ್ಠ ಪ್ರಜ್ಞೆಯೂ ಈ ಹನ್ನೊಂದು ಮೂರ್ಖರಿಗೆ ಇರಲಿಲ್ಲವಾ? ನಾವು ನಮ್ಮೆಲ್ಲ ಕೆಲ್ಸ ಬಿಟ್ಟು, ಇವರು ಗೆಲ್ಲಲಿ ಅಂತ ಕಂಡ ಕಂಡ ದೇವಸ್ಥಾನದಲ್ಲೆಲ್ಲಾ ಪೂಜೆ ಮಾಡಿಸ್ತೀವಲ್ಲಾ, ನಮ್ಮ ಭಾವನೆಗಳಿಗೆ ಬೆಲೇನೇ ಇಲ್ವಾ? ಗ್ರೆಗ್ ಚಾಪೆಲ್ ಎಂಬ ವಿದೇಶಿ ತರಬೇತುದಾರನ ಸಂಬಳ ವರ್ಷಕ್ಕೆ ಒಂದು ಕೋಟಿ. ಪ್ರತಿಯೊಬ್ಬ ಆಟಗಾರನೂ ಪ್ರತಿಪಂದ್ಯಕ್ಕೆ ಸರಾಸರಿ ೨ ಲಕ್ಷ ಪಡೆಯುತ್ತಾರೆ. ಇನ್ನು ಪೆಪ್ಸಿ-ಕೋಲಾದಂತಹ ಮಾರಿಗಳ ಬೂಟುನೆಕ್ಕಿ ನಮಗೆ ಟೋಪಿ ಹಾಕಿ ಗಳಿಸೋದು ಲೆಕ್ಕವೇ ಇಲ್ಲ. ಈ ದೇಶದಲ್ಲಿ ಒಬ್ಬ ಸಾಮಾನ್ಯ ಕಾರ್ಮಿಕ ದಿನವಿಡೀ ಬೆವರು ಸುರಿಸಿ ದುಡಿದರೂ ದಿನಕ್ಕೆ ನೂರು. ರೂ. ಸಿಕ್ಕುವುದಿಲ್ಲ. ನಮ್ಮದೇ ದುಡ್ಡನ್ನು ಇವರ ಮೇಲೆ ಇಷ್ಟೆಲ್ಲಾ ಸುರಿತೀವಲ್ಲಾ ? ಇವರಿಂದ ದೇಶಕ್ಕೆ ನಿರೀಕ್ಷಿಸೋದ್ರಲ್ಲಿ ತಪ್ಪೇನಿದೆ?. ಉಳಿದದ್ದೇನೂ ಬೇಡ, ಪ್ರಾಮಾಣಿಕವಾಗಿ ಆಡಿ ದೇಶಕ್ಕೊಂದು ವಿಶ್ವಕಪ್ ತರ್‍ತಾರೆಂದರೆ ತಂದರಲ್ಲ ಖಾಲಿಚಿಪ್ಪು !, ಅದೂ ಬಾಂಗ್ಲಾದಂತಹ ಶಿಶುವಿಹಾರದ ಮಕ್ಕಳಿಂದ ಹೊಡೆಸ್ಕೊಂಡು!. ಮೊನ್ನೆ ಮೊನ್ನೆ ಒಬ್ಬ ವಿಶ್ವನಾಥನ್ ಆನಂದ್ ವರ್ಲ್ಡ್ ಚಾಂಪಿಯನ್ ಆದದ್ದು, ಪಕ್ಕದ ಹೈದರಾಬಾದಿನ ಹುಡುಗಿ ಜೆ.ಜೆ.ಶೋಭಾ ತೀವ್ರ ಪೆಟ್ಟಾದಾಗಲೂ ಒಲಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕಾಗಿ ಓಡಿ ಮೆಚ್ಚುಗೆ ಗಳಿಸಿದ್ದು, ತೀರಾ ಮೊನ್ನೆ ಪಂದ್ಯವೊಂದರಲ್ಲಿ ಗೆದ್ದ ಲಿಯಾಂಡರ್ ಪೇಸ್ ಭಾರತದ ಧ್ವಜ ಸುತ್ತಿ ಕೊಂಡು ಆನಂದಾಶ್ರು ಸುರಿಸಿದ್ದು ನಮಗೆ ಕಾಣೋದೆ ಇಲ್ವಲ್ಲಾ ! ಈ ಜಾಹೀರಾತು ಶೂರರಿಗಿಂತ ಹತ್ತುಪಟ್ಟು ಕಡಿಮೆ ದುಡಿವ ರಾಷ್ಟ್ರಭಕ್ತ ಬ್ಯಾಡ್ಮಿಂಟನ್ ಆಟಗಾರ ಪುಲ್ಲೇಲ ಗೋಪಿಚಂದ್ ಪೆಪ್ಸಿ- ಕೋಲಾ ಕಂಪನಿ ತನ್ನ ಜಾಹೀರಾತಿನಲ್ಲಿ ಭಾಗವಹಿಸಲು ಭಾರಿ ಆಮಿಷ ಒಡ್ಡಿದಾಗಲೂ ಆತ ರಾಷ್ಟ್ರವಿರೋದಿ -ಜನವಿರೋದಿ ವಿಷಕಾರಿ ಪಾನೀಯಗಳ ಜಾಹೀರಾತನ್ನು ತಿರಸ್ಕರಿಸಿದ್ದ. ಅಂತಹ ಎದೆಗಾರಿಕೆ, ರಾಷ್ಟ್ರಭಕ್ತಿ, ಸಾಮಾಜಿಕ ಕಾಳಜಿ ಈ ಜಾಹೀರಾತು ಶೂರರಿಗಿದೆಯಾ? ಕನಿಷ್ಟ ೫ ವರ್ಷ ಈ ಜಾಹೀರಾತು ಶೂರರನ್ನು ಜಾಹೀರಾತುಗಳಿಂದ ನಿಷೇಧಿಸಿದರಷ್ಟೆ ಕ್ರಿಕೆಟ್ ಉದ್ದಾರವಾದೀತು. ಇನ್ನು ಈ ಅಭಿಮಾನಿ ಜನರ ಆಕ್ರೋಶವೂ ಅತಿರೇಕದ್ದು. ಸೋತರು ಅಂತ ಮನೆಮೇ ಕಲ್ಲು ಹೊಡೆವ, ಬೆಂಕಿ ಹಚ್ಚುವ, ಎದೆ ಬಡಿದುಕೊಳ್ಳುವ, ಆತ್ಮಹತ್ಯೆಗೆ ಶರಣಾಗುವ ಹುಚ್ಚುತನಕೆ ಅರ್ಥವೇ ಇಲ್ಲ. ಮುಂದೊಮ್ಮೆ ಗೆದ್ದಾಗ ಮತ್ತೆ ಮೆರೆಸುವವರೇ ಇವರು. ಗೆದ್ದಾಗ ಹೊಗಳಿ ಅಟ್ಟಕ್ಕೇರಿಸಿ ಸೋತಾಗ ಮನೆ ಮೇಲೆ ಕಲ್ಲು ಹೊಡೆಯೋದ್ರಿಂದ ಏನೂ ಪ್ರಯೋಜನವಿಲ್ಲ. ಕ್ರಿಕೆಟ್ ಎಂಬ ದಂಧೆಯ ಹುನ್ನಾರಗಳನ್ನರಿತು ಅದನ್ನು ಕ್ರೀಡೆಯಾಗಿ ಅಷ್ಟೇ ನೋಡಿದರೆ ನಾವೂ ನೆಮ್ಮದಿಯಿಂದಿದ್ದೇವು,ದೇಶವೂ ಉಳಿದೀತು.

    ಪ್ರತಿಕ್ರಿಯಿಸಿ :