• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಮುಖಪುಟ >> ಹಳ್ಳಿಮನೆ ಮಾತು

  ನಮ್ಮದಾಗಲಿ ಸಾರ್ಥಕತೆಯ ಬದುಕು

  December 4th, 2008.


  ’ಏ ಸುಬ್ಬಯ್ಯನ ಮನೆ ಮಾಣಿ ಬೆಟ್ಟದ ಮ್ಯಾಲೆ ಹೋಗಿ ಸಿಗರೇಟು ಸೇದ್ತಾ ಇದ್ದಿದ್ದನಂತೆ ! ಅದನ್ನ ವೆಂಕಟೇಶ ನೋಡಿದ್ದನಂತೆ !’ “Breaking News”

  ಸಂಜೆ ಆಗುವುದರೋಳಗಾಗಿ ಅಂತಹ ದೊಂದು ಸುದ್ದಿ ಸುತ್ತಮುತ್ತಲಿನ ಹತ್ತೂರುಗಳಲ್ಲಿ ಬಿತ್ತರಗೊಂಡಿತ್ತು. ಬಿತ್ತರಿಸಿದ್ದು ಆಜ್‌ತಕ್ಕೊ, ಓ.ಆ.ಖಿ.ಗಿ ನೋ ಅಲ್ಲಾ. ಬಾಯಿಂದ ಬಾಯಿಗೆ ಹರಡಿದ ಸುದ್ದಿ ಅದು ! ೧೫ ದಿನ ಊರು ಕೇರಿ ಗಳಲ್ಲೆಲ್ಲಾ ಅದೇ ಸಮಾಚಾರ ! ಊರುಮನೆ ಯಾವುದೇ ಕಾರ್ಯಕ್ರಮವಾದರೂ ಹಳ್ಳಿ ಹೆಂಗಸರಿಗೆ ಸುಬ್ಬಯ್ಯನ ಮನೆ ಎಲ್ಲರ ಚರಿತ್ರೆಯ ಪುಟಗಳನ್ನು ತಿರುವುವುದೇ ಕಾರ್ಯ ! ಇಂತಹ ದೊಂದು ಘಟನೆ ನಡೆದದ್ದು ೫ ವರ್ಷದ ಹಿಂದೆ ನಮ್ಮ ಊರಿನಲ್ಲಿ. ಹಾಗಂತ ಹಳ್ಳಿಗಳಿಗೆ ಇಂತಹ ಸುದ್ದಿ ಸಮಾಚಾರಗಳು ಹೊಸತೇನು ಅಲ್ಲ. ದಿನ ಬೆಳಗಾದ್ರೆ ಹಳ್ಳಿಗರು ಚಿಟ್ಟೆ ಮೇಲೆ ಕುಳಿತು ಪಟ್ಟಾಂಗ ಹೊಡೆಯುವುದು ಇಂತಹ ಸಮಾಚಾರಗಳನ್ನೇ ! ಅದೆಲ್ಲಾ ಸರಿ, ಸುಬ್ಬಯ್ಯನ ಮನೆ ಕಥೆ ಹೇಳಿದ್ದರಿಂದ ನಿಮಗೇನು ಬಂತು? ಅಂತ ನಾನು ಹಲವರಲ್ಲಿ ಪ್ರಶ್ನಿಸಿದ್ದೆ. ಹಳ್ಳಿ ಹೆಂಗಸರೆಲ್ಲಾ ಆಚೀಚೆ ಮನೆ ಸುದ್ದಿ ಹೇಳಿಯೇ ಕಾಲಕಳೆಯಬೇಕು ಎಂಬುದು ಹಳ್ಳಗಳಲ್ಲಿನ ಅಲಿಖಿತ ನಿಯಮವಾ? ಅಂತಾ ನನ್ನಲ್ಲೆ ಗೊಣಗಿದ್ದೆ. ಆದ್ರೆ ನನ್ನ ಪ್ರಶ್ನೆಗೆ ಉತ್ತರವೇನೂ ಸಿಕ್ಕಿರಲಿಲ್ಲ. ಅಂದಹಾಗೆ ಇವತ್ತು ನಮ್ಮ ಹಳ್ಳಿಗಳು ಸ್ವಲ್ಪ ಸುಧಾರಿಸಿವೆ. ಆಚೀಚೆ ಮನೆ ಸುದ್ದಿ ಬಿಟ್ಟು ಟಿ.ವಿ. ಧಾರಾವಾಹಿ ಕಥೆಗಳ ವಿಮರ್ಶೆಗಳತ್ತ ತೊಡಗಿದೆ. ಅಡಿಕೆ ಸುಲಿಯುವಾಗ, ಹೋಳಿಗೆ ಬೇಯಿಸು ವಾಗಲೆಲ್ಲಾ ಧಾರವಾಹಿಯ ವಿಚಾರಧಾರೆಗಳೇ! ನಮ್ಮ ಹಳ್ಳಿಗರು ಕಾದಂಬರಿ, ವಿಮರ್ಶೆ ಅಂತಾ ಬರೆಯಲಿಕ್ಕೆ ಆರಂಭಿಸಿದ್ದರೆ ಕನ್ನಡದ ಕಾದಂಬರಿ ಕಾರರೆಲ್ಲಾ ಬದಿಗೆ ನಿಲ್ಲಬೇಕಿತ್ತು ಅಂತಹದೊಂದು ಕ್ರಿಯಾಶೀಲತೆ ನಮ್ಮ ಹಳ್ಳಿ ಗರಲ್ಲಿದೆ ಅಂತಾ ನನ್ನಲ್ಲಿ ನಾನೇ ಎಷ್ಟೋ ಬಾರಿ ಅಂದುಕೊಂಡಿದ್ದೆ. ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತು ಅಂದ್ರೆ ನಮಗೆ ಓದಲು ಎಷ್ಟೋ ಪುಸ್ತಕಗಳಿವೆ. ತಿಳಿದು ಕೊಳ್ಳಲು ಎಷ್ಟೋ ವಿಚಾರಗಳಿವೆ. ಅದನ್ನೆಲ್ಲಾ ಬದಿಗೊತ್ತಿ ಹಳ್ಳಿಗರು ಅನಾವಶ್ಯಕವಾಗಿ ಸಮಯ ವ್ಯಯಮಾಡುತ್ತಿರುವುದರ ಬಗ್ಗೆ ನನ್ನ ಚಿಂತನೆ ಅಷ್ಟೇ. ಸೂಜಿ ಬಿದ್ದರೂ ದೊಡ್ಡ ಸುದ್ದಿ ಮಾಡೋ ಹಳ್ಳಿಗರ ನಾಗರೀಕತೆಯತ್ತ ನನ್ನ ಚಿತ್ತ ಹಾದು ಹೋಗಿದೆ. ಅಂತಹದೊಂದು ಕ್ರಿಯಾಶೀಲತೆ ’ವಿಚಾರವಂತರಾಗಿ ಪಟ್ಟಣ ಸೇರಿಸುವ ಹಳ್ಳಗರಲ್ಲಿ ಅದೇ ಪ್ರೀತಿ ವಿಶ್ವಾಸ, ಭಾವನಾತ್ಮಕ ಸಂಬಂಧ ಇದೆಯಾ ಮಗಾ? ಹಾಗಾಗಿ ನಮ್ಮ ಹಳ್ಳಿಗಳು ಹೀಗೆ ಇದ್ದರೆ ಚೆಂದಾ, ಅವಕ್ಕೆ ವಿಚಾರ ಏನೂ ಬೇಡ’ ಅಂತ ಯಾರೋ ಹಿರಿಯರು ಬೇಸರದಿಂದ ಹೇಳಿದ್ದರು. ಅವರು ಹೇಳಿದಂತೆ ಹಳ್ಳಿಗರು ಪಟ್ಟಣಸೇರಿ ಹಳ್ಳಿಗಳಲ್ಲಿನ ಆತ್ಮೀಯತೆ ಕಳೆದುಕೊಂಡು ಕಮರ್ಷಿಯಲ್ಲಾಗಿ ಬದುಕುತ್ತಿರುವುದೇನೋ ನಿಜ. ಆದರೆ ಪ್ರೀತಿ, ಸಂಸ್ಕೃತಿ ಉಳಿಸಿಕೊಂಡು ಹಳ್ಳಿಗರು ಕ್ರಿಯಾಶೀಲರಾಗಿ ಬದುಕಬಹುದು ಅಲ್ವಾ? ಪುಸ್ತಕ ಓದಿದಾಕ್ಷಣ ಭಾವನಾತ್ಮಕತೆಯನ್ನು ಕಳೆದುಕೊಳ್ಳಬೇಕು ಅಂತಾ ಇಲ್ಲ ಅಲ್ವಾ? ಖಂಡಿತವಾಗಿಯೂ ಹೌದು ಹಳ್ಳಿಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಸಾಹಿತ್ಯದ ಕೃಷಿ ಮಾಡ್ತಾ ಇರೋ ಕೆಲ ಹಳ್ಳಿಗರು ಇದ್ದಾರೆ. ಅವರಂತೆ ನಾವು ಕೂಡಾ ಆಚೀಚೆ ಮನೆ ಸುದ್ದಿ ಬಿಟ್ಟು ಟಿ.ವಿ. ಬದಿಗೊತ್ತಿ, ಸಾಹಿತ್ಯದಲ್ಲೋ, ಪೂಜೆ ಪುನಸ್ಕಾರಗಳಲ್ಲೋ, ವಿಚಾರ ಸಂಗ್ರಹದಲ್ಲೋ ತಲ್ಲೀನರಾಗೋಣ ನಮ್ಮ ಮಕ್ಕಳಿಗೂ ಸಂಸ್ಕಾರಗಳನ್ನು ಹೇಳಿಕೊಡೋಣ. ಅಮ್ಮ ರಾತ್ರಿ ಭಜನೆ ಮಾಡಿದರೆ ಮಗೂನೂ ಭಜನೆ ಮಾಡತ್ತೆ, ಅಪ್ಪ ಪೇಪರ್ ಓದಿದರೆ ಮಗೂನೂ ಆ ಅಪ್ಪನನ್ನು ೧೦ ದಿನ ನೋಡಿ ಹನ್ನೊಂದನೆ ದಿನ ತಾನು ಏನಾದ್ರೂ ಓದಲು ಶುರುವಿಡತ್ತೆ. ಹಾಗೇನೆ ಅಪ್ಪ, ಅಮ್ಮ ಟಿ.ವಿಯಲ್ಲಿ ಗುಪ್ತಗಾಮಿನಿ ನೋಡ್ತಾ ಇದ್ದರೆ ಓದುತ್ತಿರೋ ಮಗುವೂ ಬಂದು ಅವರ ಜೊತೆ ಕೂರುತ್ತೆ. ಇದು ಸೈಕಾಲಜಿಕಲ್ ಫ್ಯಾಕ್ಟ್. ಇದೆಲ್ಲ ನಮ್ಮ ಹಳ್ಳಗರಿಗೆ ಅರ್ಥ ಆಗ್ತಿಲ್ಲ. ನಮ್ಮ ಇಂದಿನ ಯುವಕರು ಸರಿಯಿಲ್ಲ ಅಂತಾ ಮಾತ್ರ ದೂರುತ್ತಾರೆ. ಆದ್ರೆ ನಿಮ್ಮ ಮನೆ ಮಕ್ಕಳಿಗೆ ಇಂತಹದೊಂದು ಸಂಸ್ಕಾರ ಬೆಳೆಸಿ ಆಮೇಲೆ ಇನ್ನೊಬ್ಬರನ್ನು ದೂರಿ. ಪ್ರತಿಯೊಬ್ಬರಿಗೂ ಬೆಳೆಯುವ ವಾತಾವರಣದ ಅಂಶಗಳು ಬಂದೇ ಬರುತ್ತೆ. ಅಂತಹದೊಂದು ಸ್ವಸ್ಥ ವಾತಾವರಣ ಕಲ್ಪಸಿಕೊಡಿ.

  ಹಾಗಾಗಿಯೇ ಹೇಳಿದ್ದು ಸುಮ್ನೆ ಆಚೀಚೆ ಮನೆ ಸುದ್ದಿಯನ್ನು ದಿನ ಬೆಳಗಾದ್ರೆ ನಮ್ಮ ಮನೆ ಚಿಟ್ಟೆ ಮೇಲೆ ಪಂಚಾಯ್ತಿಕೆ ಮಾಡೋದಕ್ಕಿಂತ ಆ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸೋಣ ಅಂತ. ಆ ಮನೆ ಮಾಣಿ ಸಿಗರೇಟು ಸೇದಿದ್ದರ ಬಗ್ಗೆ ಚಿಂತಿಸದೇ ನಮ್ಮನೆ ಮಾಣಿ ಸಿಗರೇಟು ಸೇದದಿರಲು ನಾವೇನು ಮಾಡ್ಬೇಕು ಅನ್ನೋದರ ಬಗ್ಗೆ ಚಿಂತಿಸೋಣ. ಸಾರ್ಥಕತೆಯ ಬದುಕನ್ನು ನಮ್ಮದಾಗಿಸಿಕೊಳ್ಳೋಣ. ಏನಂತೀರಾ?

  ಪ್ರತಿಕ್ರಿಯಿಸಿ :