’ಬೇಲಿ’ಗವನಗಳು
September 15th, 2008.
-ಎನ್ವೀ ವೈದ್ಯ ಹೆಗ್ಗಾರ್,ಶಿರಸಿ
ಬೀಸುಗಾಳಿಗೆ
ಬೇಲಿ ಕಟ್ಟಿ
ನನ್ನ ಪಾಲಿನದಷ್ಟನ್ನು
ಮಾರಿ ಬಿಡಬೇಕು
ಬಂದ ಹಣದಲ್ಲಿ
ನನ್ನ ಉಸಿರಿಗೆ
ಮೂಗುತಿ
ತೊಡಿಸಬೇಕು!
—————
ನಿನ್ನ ತೋಳ್ತೆಕ್ಕೆ
ಹಿತ ಕೊಡುತ್ತದೆ
ನಿಜ…….
ನನ್ನ ಸುತ್ತ
ಬೇಲಿಯಾಗುತ್ತದೆ !
———–
ಯಾರೋ
ನೆಟ್ಟುಹೋದರು
ಕಂಬಗಳನ್ನು
ತಂತಿಯೆಳೆದು
ಸಂಬಂಧ ಬೆಸೆದೆ
ಪರಸ್ಪರ…..
ಈಗ ಹೊರಬರುವ
ದಾರಿ ಹುಡುಕುತ್ತಿದ್ದೇನೆ
ಕತ್ತು ಹಿಚುಕಿದೆ
ಅಪಸ್ವರ!
———
ಯಾವುದೋ
ಉಮೇದಿಯಲ್ಲೊಮ್ಮೆ
ಬೇಲಿ ಕಟ್ಟಲು ಶುರುವಿಟ್ಟಿದ್ದೆ
ಈಗ ನೋಡಿದರೆ
ನನ್ನ ಸುತ್ತ
ಎಷ್ಟೊಂದು ಬೇಲಿಗಳು!