ಹಾರೈಕೆ ಯುವ ಚೇತನಕೆ
September 15th, 2008.
- ಕಮಲಾ ಜಿ.ಹೆಗಡೆ, ಕೊಂಡದ ಕುಳಿ.
ಅದುಮಿಟ್ಟ ಭಾವಗಳ ಬಂಧಿಸದೆ ತೆರೆದುಬಿಡು
ಹರಿದುಬರಲಿ, ಧುಮ್ಮಿಕ್ಕಿ ಪ್ರೀತಿ ಸುಧೆಯು.
ಬಯಲ ಉಸಿರೊಡನೆ ಉಸಿರಾಗಿ ಬೆರೆತು ಬಿಡು
ತೊಳೆದು ಹೋಗಲಿ ಜಗದ ಎಲ್ಲ ಕಶ್ಮಲವು
ಮನೆಮನೆಯ ರಂಗೋಲಿ ಕೆಂಪು ಕೆಂಪಿನ ಬಣ್ಣ
ಹಸಿದ ಹೊಟ್ಟೆಯ ನಡುವೆ ಚೀರಿ ಚಿಮ್ಮಿದ ಬಣ್ಣ
ಪೊರೆವ ತಾಯಿಯ ಮರೆತು ಕೊರಳ ಸೀಳಿದ ಬಣ್ಣ
ಗಡಿಕಾಯ್ವ ಯೋಧರಾ ಬಿಸಿನೆತ್ತರಾ ಬಣ್ಣ
ಕೋಮುದಳ್ಳುರಿಯಲ್ಲಿ ಬೆಂದು ಕರಗಿದ ಬಣ್ಣ
ವ್ಯೋಮಧೂಮದಿ ನೋಡು ಚಿಗುರು ಕಮರಿದ ಬಣ್ಣ
ಬಣ್ಣದೋಕುಳಿಯಲ್ಲಿ ಮುಳುಗಿ ನಾರುವ ಬದಲು
ಉಸಿರೆಲ್ಲ ವಿಷವಾಗಿ ಜೀವತೆಗೆಯುವ ಮೊದಲು
ಬಿಗಿದ ಸಂಕೋಲೆಯನು ಕಿತ್ತೊಗೆದು ಹೊರಟುಬಿಡು
ಶಾಂತಿ, ಪ್ರೀತಿಯ ಜ್ಯೋತಿ ಅನವರತ ಬೆಳಗಲಿಡು
ನಿಶಾಂಧ ಭುವಿಯಿಂದ ದಿಕ್-ದಿಶಾಂತದೆಡೆಯಲ್ಲೂ
ಮೊಳಗಲಿ ಬೆಳಗಲಿ ನವ್ಯತೆಯ ಕಹಳೆ
ನೆಲೆಸಲಿ ಎಲ್ಲರಲಿ ದಿವ್ಯತೆಯ ಸಮಬಾಳ್ವೆ