ಯೋಧನ ಪತ್ನಿ
September 15th, 2008.
- ಕಪಿಲಾ ಶ್ರೀಧರ್, ಬೆಂಗಳೂರು
ಕಾದು ಕೂತಿಹಳವಳು
ಒಡಲನ್ನು ಹಿಡಿಮಾಡಿ
ಬಿಟ್ಟ ಬಿರುಗಣ್ಣಿನಲಿ
ಹಣತೆಯೊಂದನು ಹಚ್ಚಿ
ನಟ್ಟಿರುಳ ರಾತ್ರಿಗಳ
ಸುಟ್ಟು ಹಾಕುವ ತವಕ
ತಿದಿಯೊತ್ತಿ ಬಂದಂತೆ
ಉಸಿರಾಟವು …….
ಚಂದದ ಸಜ್ಜಿಕೆಯ ಕೈಬೆರಳ
ಮೇಲೊಂದು ಚೆನ್ನಿನ
ಪ್ರೀತಿಯುಂಗುರವಿಟ್ಟ
ಬಾಳಗೆಳೆಯ,
ಯಾವ ದುಷ್ಯಂತನ
ಶಾಪದ ಶಕುಂತಲೆಯೋ
ಕಾಯುತಿಹಳಿಂದಿಲ್ಲಿ
ವಿರಹವಾಗಿ…..
ಒಲವ ಹೂಮಂಚದಲಿ
ಭಾವನೆಯ ರಸತೇರು
ಏರುತೇರುತ ಸವಿದ
ರಮ್ಯತೆಯ ಸೊಬಗು….
ಘಮ್ಮನೆಯ ಮೊಲ್ಲೆ ಹೂ
ನನ್ನಲ್ಲಿ ಅರಳಿಹುದು
ಬರುವೆಯೆಂದಿಗೆ ನಲ್ಲ
ಎಂದು ಕಾದಿಹುದು………
ಸ್ವಪ್ನ ಬೃಂದಾವನದಿದಿರು
ವಾಸ್ತವದ ರಥವೇರಿ
ಅಕ್ರೂರನಂತೊಂದು
ನೋವ ತಿಳಿಗಾಳಿ
ಬಾರದಿಹೆ ನೀನೆಂಬ
ಕಟುಸತ್ಯ ಕಣ್ಣೆದಿರು
ಎಷ್ಟು ಜನ್ಮದಿ ವಿರಹ
ಬಂತು ಮೈದಾಳಿ?
ನಿನ್ನೊಡಲ ಕೊರೆದಂತಹುದೇ
ಒಂದು ಸಿಡಿಮಿಂಚು
ನನ್ನೊಳಗೆ ತಾಯ್ತನವ
ತುಂಬುತಿಹುದು
ಯಾರು ಹೇಳುವರಿಂದು
ನೀ ಬರುವುದಿಲ್ಲೆಂದು
ನನ್ನಾತ್ಮ ನುಡಿದಿಹುದು
ನೀ ಬರುವೆಯೆಂದು……….
ದಾರಿ ಬಲು ದೂರವಿದೆ
ಹಾದಿ ಎರಡಾಗಿದೆ
ಆದರೂ ನನ್ನಲ್ಲಿ ಏನಿಂಥ ಸೆಳವು?
ನೀನಿತ್ತ ಅಪ್ಪುಗೆಯ
ಕ್ಷಣದಾಣೆ ನನ ನಲ್ಲ
ಬಾಳ ಮುಡಿಪೆಡುವೆನು ನಾನು
ನಿನ ಧ್ಯೇಯಕೆ ……..
ನೀ ಕೊಟ್ಟ ಅನುರಾಗ
ಬಾಳ ಬೆಳಕಾಗಿಹುದು
ನೀನಿಟ್ಟ ಪ್ರೀತಿ ಸಸಿ
ಮೊಳಕೆಯೊಡೆದಿಹುದು
ಗೆದ್ದು ಬರುವೆನು ತಾಳು
ತೃಣವು ಈ ಜನುಮಗಳು
ಕಾಲದನಂತತೆಯ
ಚಿಕ್ಕ ವಿರಾಮಗಳು……