ತರುಣರಿರಾ, ಎದ್ದೇಳಿ!
September 15th, 2008.
- ಕುವೆಂಪು
’ರಾಷ್ಟ್ರೀಯ ಯುವದಿನ’ದ ಹಿನ್ನೆಲೆಯಲ್ಲಿ ರಾಷ್ಟ್ರಕವಿ ಕುವೆಂಪುರವರ ಸ್ಫೂರ್ತಿದಾಯಕ ಗೀತೆ ’ಕಾವ್ಯದೀವಿಗೆ’ಯಲ್ಲಿ
ಹೋಗುತಿದೆ ಹಳೆಕಾಲ, ಹೊಸಕಾಲ ಬರುತಲಿದೆ
ಬರುತಲಿದೆ ಹೊಸದೃಷ್ಟಿ ಹೊಸ ಬಯಕೆಗಳಲಿ
ಹೋಗುತಿದೆ ಹಳೆಬಾಳು, ಹೊಸಬಾಳು ಬರುತಲಿz
ಬರುತಲಿದೆ ಕುದಿಗೊಂಡು ತರುಣರೆದೆಗಳಲಿ
ತರುಣರಿರಾ, ಎದ್ದೇಳಿ! ಎಚ್ಚರಗೊಳ್ಳಿ! ಕೇಳಿ!
ಬೀಸುತಿದೆ ಪಶ್ಚಿಮದ ರಸಪೂರ್ಣ ಹೊಸಗಾಳಿ
ಭಾರತದ ಬಣಗು ಬಾಳ್ಮರವನಲುಗಾಡಿ
ಉದುರುತಿದೆ ಮುದಿಕಡ್ಡಿ ತರಗು ಹಣ್ಣೆಲೆಗಳೆಲ್ಲ
ನಲಿಯುತಿವೆ ನಳನಳಿಸಿ ಹೊಸ ಚಿಗುರು ಮೂಡಿ
ತರುಣರಿರ, ಎದ್ದೇಳಿ! ಎಚ್ಚರಗೊಳ್ಳಿ! ನೋಡಿ!
ಹಳೆಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯ
ಕೊಚ್ಚಿ ಹೋಗಲಿ : ಬರಲಿ ವಿಜ್ಞಾನ ಬುದ್ಧಿ
ವೇದಪ್ರಮಾಣತೆಯ ಮರುಮರೀಚಿಕೆಯಲ್ಲಿ
ನೀರರಸಿ ಕೆಡದಿರಲಿ ಸ್ವಾತಂತ್ರ್ಯ ಸಿದ್ಧಿ.
ತರುಣರಿರ, ಎದ್ದೇಳಿ! ಎಚ್ಚರಗೊಳ್ಳಿ! ಬಾಳಿ!
ಹೊಸ ಬಾಳ ಗೀತೆಯನು ದಿಕ್ಕುದೆಸೆ ಬಿರಿವಂತೆ
ಕೊರಳೆತ್ತಿ ಕೈಯೆತ್ತಿ ದನಿಯೆತ್ತಿ ಹಾಡಿ
ಸೇರಿ ನಡೆದರೆ ನಿಮ್ಮ ತಡೆಯುವವರಾರಿಲ್ಲ:
ಜಗವೆ ಹಿಂಜರಿಯುವುದು ನಿಡುದಾರಿ ನೀಡಿ
ತರುಣರಿರ, ಎದ್ದೇಳಿ! ಎಚ್ಚರಗೊಳ್ಳಿ! ಮೂಡಿ!