ಸಾರಿ ಕಣೆ….!
September 15th, 2008.
-ನವೀನ ಭಟ್ ಗಂಗೋತ್ರಿ
ಶೇವ್ಕಾರ
ಅವನಿರುವುದೇ ಹಾಗೆ - ಹೊಳಪು ಕಂಗಳು ……. ಆ ಕಣ್ಣುಗಳನ್ನು ಸದಾ ಮುಚ್ಚಿರುವ ಕೂಲಿಂಗ್ ಗ್ಲಾಸ್, ಹಣೆಯ ಮೇಲೆ ಅಲಕ್ಷ್ಯದಿಂದಾಡುವ ಗುಂಗುರು ಕೂದಲು. ಟೈಟ್ ಜೀನ್ಸ್, ಟೀ ಷರ್ಟ್, ದೂರದಿಂದಲೇ ಅವನಿರುವಿಕೆಯ ಬಗ್ಗೆ ಅರುಹುವ ವಿಶಿಷ್ಟ ಸೆಂಟ್….
ಕೈಯಲ್ಲಿ ಹೊಸ ಪಲ್ಸರ್ ಬೈಕ್……….
ಅವನು ನನ್ನ ಒಪ್ಪಿಕೊಳ್ತಾನಾ? ನನ್ನ ಪ್ರಥಮ ಪ್ರೇಮ……
ಕಾಲೇಜನ ಹುಲ್ಲು ಹಾಸಿನ ಹಾದಿಯ ಮೇಲೆ ಹಾದು ಬರುವ ಅವಳ ವೇಗಕ್ಕಿಂತ ನೂರ್ಮಡಿ ವೇಗದಲ್ಲಿತ್ತು ಅವಳ ಯೋಚನೆಗಳ ಸಾಲು. ………
ನಿನ್ನೆ ಅವನೇ ಕೇಳಿದನಲ್ಲ, ಅನಿತಾ ನಾಳೆ ಫೆಬ್ರವರಿ ೧೪ ನೆನಪಿದ್ಯಾ? ನಿಂದು ನಾಳೆ ಯಾವ ಕಲರ್ ಡ್ರೆಸ್ಸು? ಎಂದು ನಗುತ್ತಾ. ಅದಕ್ಕೇ ಅಲ್ವ ನಾನು ಗ್ರೀನ್ ಕಲರ್ ಡ್ರೆಸ್ ತೊಟ್ಟು ಬಂದದ್ದು. ಪ್ರಪೋಸ್ ಮಾಡ್ತಾನೇನೋ… ದೇವ್ರೆ, ಹಾಗೇ ಮಾಡ್ಲಿ…
ಕಿರುನಗೆಯ ಚಿಮ್ಮಿಸುತ್ತ ಸಾಗುತ್ತಿದ್ದಾಳೆ. ಗುಲ್ ಮೊಹರ್ ಮರಗಳ ನೆರಳಿನಲ್ಲಿ ಮತ್ತೆ ಸಾಲು ಸಾಲು ಯೋಚನೆಗಳು. ಹೌದು., ಅವನ ಹೊಸ ಬೈಕಿನ ಹಿಂಬದಿ ನಂಬರ್ ಪ್ಲೇಟ್‌ಗೆ ಅದೇನೋ ಬರೆಸಿದಾನೆ.. ನೋಡಬೇಕು…
ನನ್ನ ಹೆಸರಿರಬಹುದಾ? ಯೋಚನೆಗಳನ್ನು ತುಂಡರಿಸುವಂತೆ ದೂರದಲ್ಲಿ ನಿಂತ ಬೈಕ್ ಮೇಲೆ ಅವನಿದ್ದಾನೆ. ಪಕ್ಕದಲ್ಲಿ ಅವನ ಕ್ಲೋಸ್ ಫ್ರೆಂಡ್ ಸುಮನ ನಿಂತಿದ್ದಾಳೆ. ಬೈಕ್‌ಗಿನ್ನೂ ಕೆಲವೇ ಅಡಿ ದೂರ… ಮತ್ತೆ ಯೋಚನೆ.
ಅವರಿಬ್ಬರ ನಡುವೆ ಏನಿದೆ? ಏನಿರಬಹುದು? ಬರೀ ಫ್ರೆಂಡ್‌ಶಿಪ್ಪಾ? ಇಲ್ಲಾ… ಇನ್ನೇನಾದ್ರೂ……
ಹತ್ತಿರಾಗುತ್ತಿದ್ದಂತೆ ಅವರಿಬ್ಬರ ಕಡೆಗೆ ದೃಷ್ಟಿಸಿದಳು. ಅವರ ನಡುವೆ ಎಂಥದೋ ಆನಂದ ತುಂಬಿದ ಮೌನವಿದೆ. ಸುಮನಳ ಕೈಯಲ್ಲಿ ಒಂದು ಸುಂದರ ಚೆಂಗುಲಾಬಿಯಿದೆ. ಅವನ ಕಣ್ಣುಗಳಲ್ಲಿ ಆ ಗುಲಾಬಿಯ ಬಗ್ಗೆ. ಅವರ ಹಿಂದಿನ ಒಲವಿನ ಬಗ್ಗೆ ಅಪೇಕ್ಷೆಯಿದ್ದಂತಿದೆ.
ಅಯ್ಯೋ ಮುಗಿದೋಯ್ತು. ಕಣ್ಣಂಚಿನ ಕೊಳ ತುಂಬಿ ಹೆಜ್ಜೆ ಭಾರವಾಗಿ, ನೋಟ ಮಂಜಾಗಿ… ಎದೆಯೊಳಗೆ ಅಜ್ಞಾತವಾಗಿ ಕಟ್ಟಿಕೊಂಡಿದ್ದ ಒಂದು ಸುಂದರ ಏಕಾಂತದ ಮನೆ ಒಡೆಯಿತು. ಅವನ ಬೈಕ್‌ನ ನಂಬರ್ ಪ್ಲೇಟ್‌ನ ಕಡೆಗೆ ನೋಡಲಾರದೆ ನೋಡಿದಳು..
ಹೌದು ರೇಡಿಯಂನಿಂದ ಬರ್‍ಸಿದಾನೆ. ’ಸಾರಿ ಕಣೆ. ಆ’ ನಾನಾ?….. ಹೌದಿರಬಹುದು. ಅವನಿರುವುದೇ ಹಾಗೆ….
ಅವರಿಬ್ಬರನ್ನು ದಾಟಿ ಆಕೆ ಮುಂದೆ ಸಾಗಿದಳು.
ಕನಸೆಲ್ಲ ಕರಗಿ, ಬಯಕೆಯೆಲ್ಲ ಬತ್ತಿ.
ನಿರೀಕ್ಷೆಗಳೆಲ್ಲ ಸತ್ತ ಬರಿ ಬರಡು ಮನಸ ಹೊತ್ತು…