• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಮುಖಪುಟ >> ಕಥಾ ರಶ್ಮಿ

  ರಾವ್ ತಂದೆ

  September 15th, 2008.


  – ರೋಹಿಣಿ ಸತ್ಯ,  ಬೆಂಗಳೂರು

  ಶ್ರೀಮತಿ ರೋಹಿಣಿ ಸತ್ಯ ಮೂಲತಃ ಅನಂತಪುರಂ ಜಿಲ್ಲೆಯವರು. ಶಿಕ್ಷಣ ಪಡೆದಿದ್ದು, ಬರೆದಿದ್ದು ಎಲ್ಲವೂ ತೆಲುಗು
  ಭಾಷೆಯಲ್ಲಿ. ತಮ್ಮ ೨೪ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದ ನಂತರ ವಿಶೇಷ ಆಸಕ್ತಿ ಮತ್ತು ಸತತ ಪರಿಶ್ರಮಗಳಿಂದ ಕನ್ನಡ
  ಕಲಿತದ್ದು ಇವರ ಹೆಗ್ಗಳಿಕೆ. ಅಷ್ಟೇ ಅಲ್ಲದೆ ನಂತರ ಕನ್ನಡ ಸಾಹಿತ್ಯ ರಚನೆಯಲ್ಲಿ ತೊಡಗಿ ತಮ್ಮ ಮೊದಲ ಕನ್ನಡ ಕವನ ಸಂಕಲನ
  ಕಡಲು ಹೊರ ತಂದಿದ್ದು ವಿಶೇಷ. ಚೈತ್ರರಶ್ಮಿಯ ನವೆಂಬರ್ ೨೦೦೫ ರ ಸಂಚಿಕೆಯಲ್ಲಿ ಇವರನ್ನು ಬಳಗಕ್ಕೆ ಪರಿಚಯಿಸಲಾಗಿತ್ತು.
  ಈ ಬಾರಿ ಶ್ರೀಮತಿ ರೋಹಿಣಿ ಸತ್ಯ ಕಥೆಯೊಂದನ್ನು ಬಿಚ್ಚಿಟ್ಟಿದ್ದಾರೆ ಕಥಾರಶ್ಮಿಯಲ್ಲಿ.

  ಅಂದು ನೆಂಟರೊಬ್ಬರ ಮನೆಯಲ್ಲಿ ವೈಕುಂಠ ಸಮಾರಾಧನೆ. ಊಟಕ್ಕೆ ಕುಳಿತಿದ್ದ ಬ್ರಾಹ್ಮಣರಲ್ಲಿ ರಾವ್ ತಂದೆ ಇದ್ದರು, ಆಶ್ಚರ್ಯವಾಯಿತು! ಇಲ್ಲಿಗೆ ರಾವ್ ತಂದೆ ಹೇಗೆ ಬಂದರು? ಅದೂ ಆಹ್ವಾನವಿಲ್ಲದೇ!? ಒಂದು ಕ್ಷಣ ಜಿಗುಪ್ಸೆ ಉಂಟಾಯಿತು. ಈ ಮುದುಕರೆಲ್ಲಾ ಅಷ್ಟೇ ವಯಸ್ಸಾದಂತೆ ಜಿಹ್ವಚಾಪಲ್ಯ ಹೆಚ್ಚಾಗುತ್ತೆ ಅಂದುಕೊಂಡೆ.

  ರಾವ್ ನನ್ನ ಸಹೋದ್ಯೋಗಿ. ಒಳ್ಳೆಯ ಉದ್ಯೋಗದಲ್ಲಿದ್ದ. ಹಾಗಿರುವಾಗ ಈತ ಹೀಗೆ ಬ್ರಾಹ್ಮಣಾರ್ಥಕ್ಕೆ ಬರೋದಂದ್ರೆ ಏನು? ರಾವ್‌ಗೆ ಈ ವಿಷಯ ತಿಳಿದ್ರೆ, ಅವನೆಷ್ಟು ತಲೆ ತಗ್ಗಿಸಬೇಕು? ಆತನನ್ನು ನೋಡಿದ್ರೆ ನನಗೆ ಮೈ ಉರಿಯಲಾರಂಭಿಸಿತು. ಇಂತಹವರಿಂದಲೇ ತಾನೇ ಗಂಡು

  ಮಕ್ಕಳಿಗೆ ಕೆಟ್ಟ ಹೆಸರು ಬರೋದು. ಮನೆಯಲ್ಲಿ ಎಷ್ಟು ಚೆನ್ನಾಗಿ ನೋಡಿಕೊಂಡ್ರೂ ಅದೇನು ಅವಸ್ಥೆಯೋ – ಹೀಗೆ ಬೀದಿಗೆ ಬಂದು ಅವರಿವರ ಮನೆಗೆ ಕರೆಯದೇ ಇದ್ದರೂ ಬಂದು ಮೂಗಿನವರೆಗೆ ತಿಂದು ಹೋಗ್ತಾರೆ ಎಂದುಕೊಂಡೆ. ಆದರೆ ಆತನ ವರ್ತನೆ ನನ್ನ ಅನಿಸಿಕೆಯನ್ನು ಬುಡಮೇಲಾಗಿಸಿತು ಆತ ಊಟ ಮಾಡುತ್ತಿದ್ದಾಗ ಗಮನಿಸಿ ನೊಡಿದೆ. ಒಂದು ಸ್ವೀಟನ್ನೂ ತಿನ್ನಲಿಲ್ಲ. ಎಲೆಯಲ್ಲಿ ಬಡಿಸಿದ್ದ

  ಪದಾರ್ಥಗಳೆಲ್ಲವೂ ಹಾಗೆಯೇ ಇತ್ತು. ಬರೀ ತಿಳಿಸಾರು, ಮೊಸರನ್ನ ಮಾತ್ರ ತಿಂದ ಆತನ ವೈಖರಿ ನನಗರ್ಥವಾಗಲಿಲ್ಲ. ಏನು ಈತನ ರೀತಿ? ಯಾಕೆ ಈತ ಊಟಕ್ಕೆ ಬಂದದ್ದು? ನನ್ನ ಸಂದೇಹ ತೀರಿಸಿಕೊಳ್ಳಬೇಕೆಂದು ಊಟವಾದ ನಂತರ ಆತನೊಡನೆ ಮಾತು ಪ್ರಾರಂಭಿಸಿದೆ.

  ನೀವು ರಾವ್ ಅವರ ತಂದೆ ಅಲ್ವಾ! ನಾನು ನಿಮ್ಮ ಮಗ ರಾವ್ ಅವರೂ ಒಂದೇ ಆಫೀಸಿನಲ್ಲಿ ಕೆಲಸ ಮಾಡ್ತೀವಿ. ನಾವು ಕೋಲಿಗ್ಸ್ ಎಂದೆ ಆತನನ್ನು ಗಮನಿಸುತ್ತಾ ನಿಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆಯ ದಿವಸ ನಿಮ್ಮನ್ನು ನೋಡಿದ ಜ್ಞಾಪಕ ಎಂದಾಗ ಆತನ ಮುಖ ಬಾಡಿತು. ಸಾವರಿಸಿಕೊಂಡು ಹೌದು ಎನ್ನುತ್ತಾ ಮುಖ ತಿರುಗಿಸಿಕೊಂಡರು. ಅಷ್ಟರಲ್ಲಿ ಯಾರೋ ನನ್ನನ್ನು ಕರೆದಿದ್ದರಿಂದ ನಾನು

  ಅಲ್ಲಿಂದ ಹೊರಟುಹೋದೆ. ನಂತರ ಒಂದು ವಾರ ರಾವ್ ಕಾಣಿಸಿರಲಿಲ್ಲ. ಆಫೀಸಿಗೆ ಬಂದಾಗ ಏಕೆ ಆಫೀಸಿಗೆ ಬರಲಿಲ್ಲವೆಂದು

  ಪ್ರಶ್ನಿಸಿದೆ. ಮೈ ಸರಿ ಇರಲಿಲ್ಲವಾ? ಎಂದೆ ಸ್ನೇಹಪೂರ್ವಕವಾಗಿ. ’ನನಗೇನೂ ಆಗಿಲ್ಲಾರೀ, ನಮ್ಮ ತಂದೆಯವರಿಗೆ

  ಮೈ ಸರಿಯಿರಲಿಲ್ಲ. ಅವರಿಗೆ ಷುಗರ್, ಬಿ.ಪಿ ಇದೆ, ಸ್ವಲ್ಪ ಹೆಚ್ಚಾಯ್ತು. ಅದಕ್ಕೆ ರಜೆ ಹಾಕಬೇಕಾಯ್ತು. ಹೇಗೂ ರಜೆನೂ ಇತು’ ಎಂದು ಹೇಳಿದರು. ಆತನ ಬಾಯಿಂದ ಹೊರಬಂದ ಮಾತುಗಳು ಕೇಳಿ ನನಗೆ ಅಯ್ಯೋ! ಅನಿಸಿತು. ಇಂತಹ ಮುಗ್ಧ ಮಗನ ನೋವನ್ನು ಹರಾಜಿಗಿಟ್ಟು ಈತನ ತಂದೆ ಅಹ್ವಾನವಿಲ್ಲದೇ ಅವರಿವರ ಮನೆಯ ಕಾರ್ಯಗಳಿಗೆ ಹೋಗುತ್ತಿದ್ದಾರೆಂದು ತಿಳಿದರೇ ಅವನ ಪರಿಸ್ಥಿತಿ

  ಹೇಗಿರಬೇಡ. ಆ ಮುದುಕನ ಮೇಲಿನ ಸಿಟ್ಟು ಮತ್ತಷ್ಟು ಹೆಚ್ಚಾಯ್ತು. ವಿಷಯವನ್ನೂ ರಾವ್‌ಗೆ ತಿಳಿಸಬೇಕೆಂದೆನಿಸದರೂ ಇಂತಹ ವಿಷಯಗಳನ್ನು ಚರ್ಚೆಮಾಡುವುದು ಬಹಳ ಇರುಸುಮುರುಸಿನ ಕೆಲಸ. ಹಾಗಾಗಿ ಆ ವಿಷಯವನ್ನೂ ಅಲ್ಲಿಗೇ ಬಿಟ್ಟೆ. ನಾನು ಆ ರೀತಿ ರಾವ್ ಪಕ್ಷವನ್ನೇ ವಹಿಸಲು ಒಂದು ಕಾರಣವಿದೆ. ರಾವ್‌ಗೆ ಆಫೀಸಿನಲ್ಲಿ ಒಳ್ಳೆಯ ಹೆಸರಿದೆ. ಬಹಳ ಸಂಕೋಚ ಪ್ರವೃತ್ತಿಯವನು. ಯಾರೊಂದಿಗೂ ಹೆಚ್ಚಿಗೆ ಮಾತನಾಡುತ್ತಿರಲಿಲ್ಲ. ತನ್ನ ಕೆಲಸವೆಷ್ಟೋ ಅಷ್ಟು. ಆದ್ದರಿಂದ ತಪ್ಪು ರಾವ್ ತಂದೆಯದೇ ಇರಬೇಕೆನ್ನುವ ಅಭಿಪ್ರಾಯ.

  ಈ ವಿಷಯ ಕೇಳಿದೊಡನೆ ಮತ್ತಷ್ಟು ಬಲವಾಯಿತು. ದಿನಗಳು ಕಳೆಯುತ್ತಿದ್ದವು. ದುರಾದೃಷ್ಟ ನನ್ನ ಭಾವಮೈದುನನ ಮನೇಲಿ ಅಂಥಹ ಸಂದರ್ಭವೇ ಒದಗಿ ರಾವ್ ತಂದೆ ಇನ್ನೊಮ್ಮೆ ನನ್ನ ಕಣ್ಣಿಗೆ ಬೀಳಬೇಕೆ?! ಏನೂ ತಿಳಿಯದಂತೆ ದೀನತೆಯಿಂದ ಕೂಡಿದ ಆತನ ಮುಖ ಕಣ್ಣಿಗೆ ಬಿದ್ದೊಡನೇ ನನ್ನ ಕೋಪ ನೆತ್ತಿಗೇರಿತು. ನನ್ನನ್ನು ಗುರುತು ಹಿಡಿದ ಆತನ ಮುಖದಲ್ಲಿನ ಭಯ ನನ್ನ ಕಣ್ಣಿಗೆ ಬೀಳದಿರಲಿಲ್ಲ.

  ಈವತ್ತು ಏನಾದರಾಗಲೀ ಊಟ ಮುಗಿದ ನಂತರ ಈ ಮುದುಕನ ವಿಷಯ ತೀರ್ಮಾನವಾಗಲೇಬೇಕು ಎಂದುಕೊಂಡು ಊಟಕ್ಕೆ ಕುಳಿತೆ. ಓರೆಗಣ್ಣಿನಿಂದ ಆತನನ್ನು ಗಮನಿಸಿದೆ. ಅಂದಿನ ದಿನದಂತೆಯೇ ತಿಳಿಸಾರು ಅನ್ನ ಮೊಸರನ್ನಗಳ ವಿನಃ ಬೇರೇನನ್ನೂ ತಿನ್ನಲಿಲ್ಲ.

  ಇಷ್ಟು ಮಾತ್ರ ತಿನ್ನಲು ಮಗನ ಮರ್ಯಾದೆಯನ್ನು ನೀರಿನ ಪಾಲು ಮಾಡುತ್ತಾ ಹೀಗೆ ಬರೋದು ಏಕೆ ಅನ್ನಿಸದೇ ಹೋಗಲಿಲ್ಲ.

  ನಮಸ್ಕಾರ ರೀ, ದಾನ ತೆಗೆದುಕೊಂಡಿದ್ದ ಪಂಚೆಗಳನ್ನು ಚೀಲದಲ್ಲಿಡುತ್ತಿದ್ದ ಮುದುಕ ಬೆಚ್ಚಿದ. ಕಳ್ಳತನ ಮಾಡುತ್ತಿರುವಾಗ ಸಿಕ್ಕಿ ಬಿದ್ದ ಕಳ್ಳನಂತೆ ನನ್ನ ಕಡೆ ನೋಡುತ್ತಿದ್ದ ಆತನೊಂದಿಗೆ ’ಸ್ವಲ್ಪ ಈ ಕಡೆ ಬರ್‍ತೀರಾ?!’ ಎಂದೆ.

  ನನ್ನ ಎದುರಿಗೆ ಮೌನವಾಗಿ ನಿಂತಿದ್ದ ಆತನನ್ನು ನೋಡುತ್ತಾ ನೋಡಿ! ನೀವು ನನಗಿಂತ ವಯಸ್ಸಿನಲ್ಲಿ ಹಿರಿಯರು. ನಿಮಗೆ ಹೇಳೋ ಯೋಗ್ಯತೆ ನನಗಿಲ್ಲ. ನೀವೇನೂ ತಿಳ್ಕೊಳ್ಳೋ ದಿಲ್ಲಾಂದ್ರೆ, ಒಂದು ವಿ?ಯ ಕೇಳಬೇಕು. ಇರೋ ವಿಷಯ ಹೇಳಿ. ನಿಮ್ಮ ಮಗನೊಂದಿಗೆ ಉದ್ಯೋಗ ಮಾಡ್ತಿರೋ ನನಗೆ ನಿಮ್ಮ ಮಗನ ಪೊಜಿಷನ್ ಚೆನ್ನಾಗಿ ಗೊತ್ತು. ಹಾಗಿರುವಾಗ ನೀವು ಇಂತಹ ಜಾಗಗಳಿಗೆ ಕರೆಯದೇ ಹೋಗ್ತಿದ್ದೀರೆಂದು ಗೊತ್ತಾದರೇ ನಿಮ್ಮ ಮಗನಿಗೆ ನೋವಾಗುತ್ತೆ. ಹೋಗಲಿ, ಮನೇಲಿ ಆಗಾಗ್ಗೆ ಭಕ್ಷ್ಯಗಳನ್ನು ಮಾಡೋದಿಲ್ಲ, ತಿನ್ನಬೇಕು ಎನ್ನುವ ಆಸೆಯಿಂದ ಬಂದಿದ್ದೀರೇನೋ ಅಂದ್ರೆ, ನೀವು ತಿಂದದ್ದನ್ನು ನಾನು ಗಮನಿಸಿದ್ದೇನೆ. ನೀವು ಈ ರೀತಿ ಬರಲು ಜಿಹ್ವಾ ಚಾಪಲ್ಯ ಕಾರಣ ಅಲ್ಲಾಂತ ಅನ್ನಿಸುತ್ತೆ. ನೀವು ತಿನ್ನೋ ತಿಳಿ ಸಾರು-ಅನ್ನ ಮನೇಲಿ ಇಡಲಾಗದಂತಹ ಹೀನ ಸ್ಥಿತಿಯಲ್ಲಿಲ್ಲ ನಿಮ್ಮ ಮಗ

  ಎಂದು ನಿಲ್ಲಿಸಿದೆ ಆತನ ಜವಾಬು ಕೇಳಲೆಂದು. ಮುದುಕರು ಕನ್ನಡಕ ಸವರಿಸಿಕೊಳ್ಳುತ್ತಾ ’ಈ ವಿಷಯವನ್ನು ಹೀಗೆ ಹೇಳ್ಕೋಬೇಕಾಗಿ ಬಂದದ್ದಕ್ಕೆ ನನಗೂ ಸಂಕಟ ಆಗ್ತಿದೆ, ನಿನಗೆ ನನ್ನ ಮೇಲಿರುವ ದುರಭಿಪ್ರಾಯ ಹೋಗಲಾಡಿಸಲು ಈ ವಿಷಯ ಹೇಳದೇ ವಿಧಿ ಇಲ್ಲ.

  ನಾನು ಒಂದು ಸುಮಾರಾದ ಉದ್ಯೋಗದಲ್ಲಿದ್ದು ರಿಟೈರಾದವನು. ರಿಟೈರ್ ಆದ ಮೇಲೆ ಬಂದ ಹಣದಿಂದ ಮಗನ ಮಾತು ಕೇಳಿ ಮನೆಕಟ್ಟಿ, ಈಗ ಕೇವಲ ಪೆನ್‌ಷನ್ ಮೇಲೆ ಜೀವನ. ಈ ಪೆನ್‌ಷನ್ ಹಣದಲ್ಲಿ ಸ್ವಲ್ಪ ಮನೆಗೆ ಕೊಡಬೇಕು. ಹೆತ್ತ ತಪ್ಪಿಗೆ, ಮನೆ ಕಟ್ಟಿದ ತಪ್ಪಿಗೆ, ಸ್ವಲ್ಪ ಹಂ ಕೊಡ್ತಿರೋದರಿಂದ ಎರಡು ಹೊತ್ತು ಸ್ವಲ್ಪ ಊಟ, ನಿಲ್ಲಲು ಸ್ವಲ್ಪ ನೆರಳು ಇದೆ ಮಗೂ! ಆದರೆ ಪಂಚೆಗಳು ಹರಿದು ಹೋದರೆ, ಹೊಸದನ್ನು ಕೊಳ್ಳೋದಕ್ಕೆ ಶಕ್ತಿ ಇಲ್ಲ. ಬರೀ ಖಾಯಿಲೆಗಳಿಗೆ ನನ್ನಲ್ಲಿರೋ ಹಣ ಸಾಲದು. ಅದರಿಂದ ಇಂತಹ ಸಂದರ್ಭಗಳಲ್ಲಿ ದಾನ ಹಾಕಿ ಕೊಡೋ ಪಂಚೆಗಳನ್ನು ಸೇರಿಸಿ ಇಟ್ಟುಕೊಳ್ಳುತ್ತೇನೆ. ಹಣ ಸೇರಿಸಿಕೊಂಡು ಔಷಧಿಗಳನ್ನು ಕೊಂಡ್ಕೋತೀನಿ ಎಂದು ಹೇಳುತ್ತಿದ್ದಾಗ ದುಃಖದಿಂದ ಅವರ ಧ್ವನಿ ಗದ್ಗದಿತವಾಯಿತು.

  ಕೇಳುತ್ತಾ ಇದ್ದ ನನಗೆ ಹೊಟ್ಟೆ ಕಿವಿಚಿದಂತಾಯಿತು. ಆದರೆ ಏನೋ ಸಂಶಯ ಮತ್ತೆ ನಿಮ್ಮ ಮಗ ನಿಮಗೆ ಷುಗರ್ ಜಾಸ್ತಿ ಆಯಿತೆಂದು ಒಂದು ವಾರ ರಜೆ ಹಾಕಿದ್ದು…….

  ಹೌದಪ್ಪ, ನನಗೆ ಆಗ ಷುಗರ್ ಹೆಚ್ಚಾದದ್ದು ನಿಜ. ಅದರಿಂದಲೇ ಒಂದು ವಾರ ಅಡಿಗೆ ಕೆಲಸ, ಮಕ್ಕಳ ಸ್ಕೂಲ್ ಇತ್ಯಾದಿ ಮಾಡಲು ಸಾಧ್ಯವಾಗಲಿಲ್ಲ. ಸೊಸೆ ಬೆಳಿಗ್ಗೇನೆ ಕೆಲಸಕ್ಕೆ ಹೋಗೋದರಿಂದ ಹೇಗೂ ಅವನಿಗೆ ರಜೆ ಇದ್ದುದರಿಂದ ಅವನೇ ಲೀವ್ ತೆಗೊಂಡ. ಮಗ ಇರೋದರಲ್ಲಿ ಸ್ವಲ್ಪ ಪರವಾಗಿಲ್ಲ. ಆದರೆ ದಿನಾ ಹೆಂಡತಿ ಹತ್ರ ಜಗಳ ಆಡೋದಕ್ಕಾಗುವುದಿಲ್ಲವಲ್ಲಾ. ಆದರಿಂದಲೇ ಏನೋ ಅಂಟದ ಹಾಗೆ ಇರ್‍ತಾನೆ. ಆದರೂ ಸೊಸೆನ ಅಂದೇನು ಪ್ರಯೋಜನ, ಎಲ್ಲಾ ನನ್ನ ಕರ್ಮ ಎಂದರು ಆತ. ದೀನನಾಗಿ ಕಾಣುತ್ತಿದ್ದ ಆತನನ್ನು ನೊಡಿದರೇ ನನಗೆ ಉಂಟಾದದ್ದು ಅಂತ್ಯವಿಲ್ಲದ ಅನುಕಂಪ. ಸಹಾನುಭೂತಿ ತೋರಿಸುವುದು ವಿನಃ ನಾನೇನು ಮಾಡಬಲ್ಲೆ? ಕೊನೆಗೆ ನನಗನ್ನಿಸಿದ್ದು…..

  ಇದು ತುಂಬಾ ಅತಿರೇಕ, ಹೆತ್ತ ತಂದೆಯನ್ನು ಇಷ್ಟು ಅನ್ಯಾಯದಿಂದ ಯಾರು ಟ್ರೀಟ್ ಮಾಡ್ತಾರೆ ಅಂದ್ಕೊಳ್ಳೋರಿಗೆ, ಇಂತಹ ಪರಿಸ್ಥಿತಿಗಳನ್ನು ಅನುಭವಿಸುವ ತಂದೆಯರೇ ಉತ್ತರ ನೀಡಬೇಕು. ಮಗ ಹುಟ್ಟಬೇಕೆಂದು ತಪಸ್ಸು ಮಾಡಿ, ಮಗ ಹುಟ್ಟಿದರೇ ಅತ್ಯಂತ ಸಂತೋಷಪಟ್ಟು, ಮಗನ ತಪ್ಪು ಹೆಜ್ಜೆಗಳಲ್ಲಿ ತನ್ನ ಭವಿಷ್ಯವನ್ನೂ ಕಾಣುವ ತಂದೆಗೆ ಯಾರು ಹೇಳಲು ಸಾಧ್ಯ, ತಾನು ಹಾಕುತ್ತಿರುವುದು

  ತಪ್ಪು ಹೆಜ್ಜೆ ಎಂದು. ಅನುಬಂಧ ಆತ್ಮೀಯತೆ ಎಲ್ಲಾ ಬೂಟಾಟಿಕೆ, ಆತ್ಮತೃಪ್ತಿಗಾಗಿ ಮನುಷ್ಯರು ಆಡುವ ನಾಟಕ ಎಂದು ಯಾರೋ ಒಬ್ಬ ಕವಿ ಹೇಳಿರುವ ಮಾತು ಅಕ್ಷರಶಃ ನಿಜ ಎನ್ನಿಸಿತು.

  ಕೇವಲ ಉಟ್ಟುಕೊಳ್ಳುವ ಬಟ್ಟೆಗಳಿಗಾಗಿ ಗೆದ್ದಲಿನಂತೆ ಶರೀರವನ್ನೂ ಶಿಥಿಲಗೊಳಿಸುವ ರೋಗಗಳ

  ಉಪಶಮನಕ್ಕಾಗಿ ಯಾಚಕನ ಸ್ಥಾನವನ್ನು ಆಕ್ರಮಿಸಿದ ಆತನ ಸ್ಥಿತಿ ಮುಂಜಾಗ್ರತೆ ಇಲ್ಲದ ತಂದೆಯರಿಗೆ

  ಒಂದು ಪಾಠ. ಈ ಕಂಪ್ಯೂಟರ್ ಯುಗದಲ್ಲಿ ಅಭಿಮಾನಗಳೂ, ಅಪ್ಯಾಯತೆಗಳು ಎಲ್ಲದಕ್ಕೂ ಅಳತೆಗೋಲು

  ಹಣವೇ!? ಅದನ್ನು ಇಟ್ಟುಕೊಳ್ಳದಿದ್ದ ಯಾವ ತಂದೆಯಾದರೂ ಸರಿ ರಾವ್‌ನ ತಂದೆಯಂತೆಯೇ

  ಜೀವನ ನಡೆಸಬೇಕಾಗುತ್ತದೆ.

  ಹೆತ್ತ ತಪ್ಪಿಗೆ ಸಾಕುವುದು ತಾಯಿ-ತಂದೆಯರ ಜವಾಬ್ದಾರಿ. ಅಷ್ಟು ಹೊರತು ಅದಕ್ಕೆ ಪ್ರತಿಫಲ

  ಅಪೇಕ್ಷಿಸುವುದು ಅವರ ತಪ್ಪು ಎಂಬ ವಾದದ ಮುಸುಕಿನೊಳಗೆ, ತಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳುವ

  ಗಂಡು ಮಕ್ಕಳು ಈ ವಿಷಯದ ಬಗ್ಗೆ ಸ್ವಲ್ಪ ವಿವೇಚನೆಯಿಂದ ಯೋಚನೆ ಮಾಡಿದರೇ…………….

  ಪ್ರತಿಕ್ರಿಯಿಸಿ :