ಸದ್ದಿಲ್ಲದೆ “ಭಾರತ” ಕಟ್ಟುತ್ತಿರುವ ಅಂತಹ ಮಹನೀಯರಿಗೆ ನಮನ
November 29th, 2008.
ಡಾ|| ಹರೀಶ್ ಹಂದೆ.
ಈ ಹೆಸರು ನಮ್ಮಲ್ಲಿ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಸದ್ದಿಲ್ಲದೆ, ಯಾವ ಸುದ್ದಿಯ ಹಂಗಿಗೂ ಬೀಳದೆ ನಿಶ್ಯಬ್ದವಾಗಿ ’ಭಾರತ’ ಕಟ್ಟುತ್ತಿರುವ ಲಕ್ಷಾಂತರ ಮಹನೀಯರಲ್ಲಿ ಡಾ|| ಹರೀಶ್ ಹಂದೆ ಕೂಡಾ ಒಬ್ಬರು.
ಐಐಟಿ ಕರಗ್‌ಪುರದಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಹರೀಶ್ ಹಂದೆ ನಂತರ ಮೆಸಾಚುಸೆಟ್ಸ್ ವಿ.ವಿಯಲ್ಲಿ ಪಿ.ಎಚ್.ಡಿ ಅಧ್ಯಯನ ಆರಂಭಿಸಿದರು. ಈ ನಡುವೆ ಪ್ರವಾಸಕ್ಕೆ ತೆರಳಿದಾಗ ಭಾರತಕ್ಕಿಂತಲೂ ಹೆಚ್ಚು ಬಡಜನರನ್ನು ಹೊಂದಿರುವ ಡೊಮಿನಿಯನ್ ರಿಪಬ್ಲಿಕ್‌ನಲ್ಲಿ ಸೌರಶಕ್ತಿಯ ಬಳಕೆ, ಪ್ರಯೋಜನಗಳನ್ನು ಕಂಡು ಅಚ್ಚರಿಗೊಂಡ ಅವರು ಮುಂದೆ ಸೌರಶಕ್ತಿಯ ಕುರಿತು ವಿಶೇಷ ಅಧ್ಯಯನ ನಡೆಸಿ ಅದೇ ವಿ?ಯದಲ್ಲಿ ಡಾಕ್ಟರೇಟ್ ಪದವಿ ಪಡೆದರು. ವಿದೇಶದಲ್ಲಿ ಡಾಕ್ಟರೇಟ್ ಗಳಿಸಿದರೂ ಬಹುತೇಕರಂತೆ ಅಲ್ಲೇ ಉಳಿದುಹೋಗದೆ ಭಾರತಕ್ಕೆ ಮರಳಿದ ಹಂದೆ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸೌರಶಕ್ತಿಯಿಂದ ವಿದ್ಯುತ್ ಮತ್ತು ಇತರ ಉಪಯೋಗಗಳ ಕುರಿತು ಸಂಶೋಧನೆ ಆರಂಭಿಸಿದರು. ಅವರ ಹಲವು ವರ್ಷಗಳ ಸಂಶೋಧನೆ, ಕನಸುಗಳ ಪರಿಣಾಮವಾಗಿ ಆರಂಭಗೊಂಡಿದ್ದು ಅವರ ’ಸೆಲ್ಕೊ ಇಂಡಿಯಾ ಕಂಪನಿ’. ದೇಶದ ಬಡಜನರ ಕುರಿತ ಅವರ ಕಾಳಜಿ ವಿಶೇಷವಾದದ್ದು, ಹಾಗಾಗಿಯೇ ಸೆಲ್ಕೊ ಬಡಜನರಿಗಾಗಿಯೇ ಅತ್ಯಂತ ಕಡಿಮೆ ವೆಚ್ಚದ ಸೌರ ವಿದ್ಯುತ್ ಉಪಕರಣಗಳನ್ನು ಉತ್ಪಾದಿಸುತ್ತಿದೆ. ಸೌರಶಕ್ತಿಯ ವಿದ್ಯುತ್ ಅನ್ನು ಬಡವರಿಗೆ ತಲುಪಿಸುವುದು, ಅದಕ್ಕೆ ಹಲವಾರು ಬ್ಯಾಂಕ್‌ಗಳು ಹಾಗೂ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸಹಾಯ ನೀಡುವುದು, ಆ ಆರ್ಥಿಕ ಸಹಾಯ ತೀರುವವರೆಗೂ ಅದು ಅವರಿಗೆ ಹೊರೆಯಾಗದಂತೆ ಬೆಂಬಲ ನೀಡುವುದು, ಒಟ್ಟಾರೆಯಾಗಿ ಭಾರತದ ಬಡ ಗ್ರಾಮೀಣ ರೈತರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸೌರವಿದ್ಯುತ್‌ನ ಪ್ರಯೋಜನಗಳು ತಲುಪುವಂತೆ ಮಾಡುವುದು ಸೆಲ್ಕೊನ ಪ್ರಮುಖ ಉದ್ದೇಶ.
ಡಾ||ಹರೀಶ್‌ರ ದೂರದೃಷ್ಟಿತ್ವದಿಂದಾಗಿ ಸೆಲ್ಕೊ ಈ ಕಾರ್ಯದಲ್ಲಿ ಅಪರಿಮಿತ ಯಶಸ್ಸು ಗಳಿಸಿದೆ. ಕರ್ನಾಟಕ, ಕೇರಳ, ಗುಜರಾತ್ ರಾಜ್ಯಗಳ ೮೦ ಸಾವಿರಕ್ಕೂ ಅಧಿಕ ಬಡ ಹಾಗೂ ಮಧ್ಯಮ ವರ್ಗದ ಗ್ರಾಮೀಣ ರೈತರು ಸೌರಶಕ್ತಿಯ ವಿದ್ಯುತ್ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ೨೦೦೫ ರ ’ಆಶ್‌ಡೆನ್ ಅವಾರ್ಡ್’ ಪ್ರಶಸ್ತಿಗೆ ಭಾಜನರಾಗಿರುವ ಡಾ|| ಹರೀಶ್ ಹಂದೆ ದೇಶದ ೧೦ ಲಕ್ಷಕ್ಕೂ ಅಧಿಕ ಮಂದಿಗೆ ಈ ಪ್ರಯೋಜನಗಳನ್ನು ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸದ್ದಿಲ್ಲದೆ ’ಭಾರತ’ ಕಟ್ಟುತ್ತಿರುವ ಇಂತಹ ಲಕ್ಷಾಂತರ ಮಹನೀಯರಿಗೆ ನಮ್ಮ ನಮನ.
May 17th, 2009 at 8:46 pm
ಉತ್ತಮ ವಿಚಾರವನ್ನು ತಿಳಿಸಿದ್ದೀರಿ, ಧನ್ಯವಾದಗಳು.
August 19th, 2009 at 12:09 am
ಚಿಕ್ಕ ಚೊಕ್ಕ ಬರಹ! ಇದು ಸುದ್ದಿ. ಕೆಳಗಿನ ಸಾಲುಗಳು ಸ್ಫೂರ್ತಿದಾಯಕ:
“ವಿದೇಶದಲ್ಲಿ ಡಾಕ್ಟರೇಟ್ ಗಳಿಸಿದರೂ ಬಹುತೇಕರಂತೆ ಅಲ್ಲೇ ಉಳಿದುಹೋಗದೆ ಭಾರತಕ್ಕೆ ಮರಳಿದ ಹಂದೆ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸೌರಶಕ್ತಿಯಿಂದ ವಿದ್ಯುತ್ ಮತ್ತು ಇತರ ಉಪಯೋಗಗಳ ಕುರಿತು ಸಂಶೋಧನೆ ಆರಂಭಿಸಿದರು.”
ಇಂತಹವರ ಸಂತತಿ ಸಾವಿರವಾಗಲಿ!