• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಮುಖಪುಟ >> ಸಂಪಾದಕೀಯ

  ‘ಪ್ರಹಸನ ಪಿತಾಮಹ’ನಿಗೆ ನಮಿಸುತ್ತಾ…..

  September 5th, 2008.


  ೧೯೧೭-೧೮ ರ ಸಮಯ. ಚಿಕ್ಕಲಾಲ್‌ಬಾಗ್ ಬಳಿಯ ತುಳಸಿ ತೋಟದ ನಾಟಕ ಮಂದಿರವೊಂದರಲ್ಲಿ ಅಮೆಚೂರ್ ನಾಟಕ ಸಂಘದಿಂದ ನಾಟಕವೊಂದು ನಡೆಯುತ್ತಿತ್ತು. ನಾಟಕ ಮಂದಿರದ ಆಸನಗಳು ಭರ್ತಿಯಾಗಿ ನಿಂತಿದ್ದ ಜನ ಗದ್ದಲ ಆರಂಭಿಸಿದ್ದರು. ಆಗ ನಾಟಕದವರನ್ನು ಪ್ರೆತ್ಸಾಹಿಸಲು ನಾಟಕಕ್ಕೆ ಹೋದವರೊಬ್ಬರು ಅಲ್ಲೇ ಪಕ್ಕದಲ್ಲಿದ್ದ ಮನೆಗೆ ತೆರಳಿ ಸಮಸ್ಯೆಯನ್ನು ವಿವರಿಸಿ ಬೆಂಚು ಕುರ್ಚಿಗಳಿದ್ದರೆ ನೀಡುವಂತೆ ಕೇಳಿಕೊಂಡರಂತೆ.

  ಆಗ ಮನೆಯಾಕೆ ಬೆಂಚು ಕುರ್ಚಿಗಳು ಮಹಡಿಯ ಮೇಲಿದೆಯೆಂದೂ, ಅದನ್ನು ಇಳಿಸಲು ಆಳು-ಕಾಳು ಯಾರೂ ಇಲ್ಲವೆಂದು ಹೇಳಿದಾಗ ಆ ವ್ಯಕ್ತಿ ತಾನಿರುವಾಗ ಆಳು ಕಾಳೇಕೆ ಎಂದು ಹೇಳಿ ತಾವೇ ಹಗ್ಗ ತಂದು ಮಹಡಿಯ ಮೇಲಿಂದ ಬೆಂಚುಗಳನ್ನು ಇಳಿಸಿ ಎರಡು ಬೆಂಚು, ಮೂರು ಕುರ್ಚಿಗಳನ್ನು ಹಗ್ಗದಿಂದ ಕಟ್ಟಿ ಹೆಗಲಿಗೇರಿಸಿಕೊಂಡು ನಾಟಕ ಮಂದಿರಕ್ಕೆ ತಂದು ಸಮಸ್ಯೆಯನ್ನು ನಿವಾರಿಸಿದರಂತೆ. ನಂತರ ಮನೆಯಾಕೆ ಅವರಾರೆಂದು ವಿಚಾರಿಸಿದಾಗ ತಿಳಿದದ್ದು ಅವರೇ ಕನ್ನಡಕ್ಕೊಬ್ಬನೇ ಕೈಲಾಸಂ ಎಂದು ಹೆಸರಾದ ಟಿ.ಪಿ. ಕೈಲಾಸಂ ಅವರು ಎಂದು.

  ಸ್ವರ್ಗೀಯ ಶ್ರೀ ತಿ.ತಾ ಶರ್ಮರ ಪತ್ನಿ ಭಾರತಿ ತಮ್ಮ .ಆರ್ಯಕೈಲಾಸಂ. ಪುಸ್ತಕದಲ್ಲಿ ಇದನ್ನು ದಾಖಲಿಸಿದ್ದಾರೆ. ಹೀಗೆ ಕನ್ನಡ ರಂಗಭೂಮಿ ಹಾಗೂ ನಾಟಕ ಕ್ಷೇತ್ರ ಏಳಿಗೆಗಾಗಿ ಅಕ್ಷರಶಃ .ದುಡಿದವರು. ಕೈಲಾಸಂ. ರಂಗಭೂಮಿಗೆ ಅವರು ನೀಡಿದ ಅನುಪಮ ಸೇವೆಗಾಗಿ ಆಧುನಿಕ ರಂಗಭೂಮಿಯ ಹರಿಕಾರರೆಂದೇ ಪ್ರಸಿದ್ಧರಾದವರು. ತಮಿಳು ಮೂಲದವರಾದರೂ ಕನ್ನಡವನ್ನು ಎತ್ತಿ ಹಿಡಿದು ಕನ್ನಡಕ್ಕಾಗಿ ಶ್ರಮಿಸಿದವರು ಕೈಲಾಸಂ.

  ಅವರು ಉನ್ನತ ಮಟ್ಟದ ಮನೆತನದಿಂದ ಬಂದವರು. ಅವರ ತಂದೆ ಜಸ್ಟೀಸ್ ಪರಮಶಿವ ಅಯ್ಯರ್ ಆಗಿನ ಕಾಲಕ್ಕೆ ಬಹುದೊಡ್ಡ ಹೆಸರು ಮಾಡಿದ್ದರು. ಕೈಲಾಸಂ ಕೂಡ ಉನ್ನತ ಮಟ್ಟದ ಶಿಕ್ಷಣ ಪಡೆದು ಇಂಗ್ಲೆಂಡಿಗೆ ತೆರಳಿ ಅಲ್ಲಿ ಭೂಗರ್ಭಶಾಸ್ತ್ರದಲ್ಲಿ ಚಿನ್ನದ ಪದಕ ಗಳಿಸಿದ ಸಾಧನೆ ಮಾಡಿದವರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸರ್ಕಾರಿ ಹುದ್ದೆಯಲ್ಲಿ ಹೆಸರು ಮಾಡಿದವರು. ಇಂಗ್ಲೆಂಡಿನಲ್ಲಿ ವ್ಯಾಸಂಗ ಮಾಡುವಾಗ ಜಾರ್ಜ್ ಬರ್ನಾಡ್ ಶಾ ರ ನಾಟಕಗಳು ಅವರ ಮೇಲೆ ಪ್ರಭಾವ ಬೀರಿದ್ದವು. ಸರ್ಕಾರಿ ಕೆಲಸ ಬಿಟ್ಟು ಕನ್ನಡ ರಂಗಭೂಮಿಗೆ ತಮ್ಮ ಬಹುಪಾಲು ಜೀವನವನ್ನು ಧಾರೆಯೆರೆದ ಕೈಲಾಸಂ ಬರೆದ ನಾಟಕಗಳು ಅನೇಕ. .ಟೊಳ್ಳುಗಟ್ಟಿ., ಕಾಳಮ್ನ ಐಕ್ಳು, ಒಲವಿನ ಕೊಲೆ, ನಂಬಾಯ್ಸು, ಮೊಮ್ಮಗಳ ಮುಯ್ಯಿ, ಹೋಂರೂಲು, ಗಂಡಸ್ಕತ್ರಿ, ವೈದ್ಯನ ವ್ಯಾಧಿ, ಬಂಡ್ವಾಳಿಲ್ಲದ ಬಡಾಯಿ, ಅಮ್ಮಾವ್ರ ಗಂಡ, ಸೀಕರ್ಣೆ ಸಾವಿತ್ರಿ, ಸತ್ತವನ ಸಂತಾಪ ಮುಂತಾದವು ಕೈಲಾಸಂರ ಜನಪ್ರಿಯ ನಾಟಕಗಳು.

  ಜುಲೈ ೨೯ ಕೈಲಾಸಂ ಜನ್ಮದಿನ. ಆಧುನಿಕ ರಂಗಭೂಮಿಯ ಹರಿಕಾರನಿಗೆ, ಪ್ರಹಸನ ಪಿತಾಮಹ ಕೈಲಾಸಂರಿಗೆ ನಮ್ಮ ನಮನ.

  ‘ಪ್ರಹಸನ ಪಿತಾಮಹ’ನಿಗೆ ನಮಿಸುತ್ತಾ….. :- ಈವರೆಗೆ 3 ಪ್ರತಿಕ್ರಿಯೆಗಳು

  1. suma

   Could you please clarify if T.P.Kailasam’s name is Tyagaraja Paramashiva Kailasam OR Tanjavore Paramashiva Kailasam?

  2. ಸಂಪಾದಕ

   ನಮಸ್ತೆ ಸುಮಾ ಅವರಿಗೆ, ತುಂಬಾ ಚಿಂತನಾರ್ಹ ಪ್ರಶ್ನೆ ಕೇಳಿದ್ದೀರಿ. ನನಗೆ ಇದರ ಬಗ್ಗೆ ಸ್ವಲ್ಪ ಮಾಹಿತಿ ಇದ್ದರೂ ಮತ್ತೊಮ್ಮೆ ಕೈಲಾಸಂ ಅವರ ಕುರಿತ ಕೆಲವು ಪುಸ್ತಕಗಳನ್ನು ಮತ್ತೆ ತಿರುವು ಹಾಕಿದೆ. ಅದರ ಪ್ರಕಾರ:

   ಕೈಲಾಸಂ ಅವರ ಸರಿಯಾದ ಹೆಸರು : ತಂಜಾವೂರು ಪರಮಶಿವಂ ಕೈಲಾಸಂ.

   ಆದರೆ ಅಂತರ್ಜಾಲದಲ್ಲಿ ಅಲ್ಲದೆ ಬಹುತೇಕ ಕಡೆ ‘ತ್ಯಾಗರಾಜ ಪರಮಶಿವಂ ಕೈಲಾಸಂ’ ಎಂದೇ ಬಳಸಲಾಗುತ್ತಿದೆ. ಇದಕ್ಕೆ ಇರಬಹುದಾದ ಪ್ರಮುಖ ಕಾರಣವೆಂದರೆ ಕೈಲಾಸಂ ಅವರ ಅಜ್ಜನ (ತಂದೆಯ ತಂದೆ) ಹೆಸರು ‘ತಂಜಾವೂರು ತ್ಯಾಗರಾಜ ಅಯ್ಯರ್’ . ಬಹುಷಃ ಕೈಲಾಸಂ ಅವರ ಹೆಸರಿನ ಜತೆಗೆ ಅವರ ತಾತನ ಹೆಸರು ‘ತ್ಯಾಗರಾಜ’ ಎಂಬುದನ್ನೂ ಸೇರಿಸಿ ಬಳಸುತ್ತಿರಬಹುದು ಎಂದೆನಿಸುತ್ತದೆ. ಆದರೆ ಕೈಲಾಸಂ ಅವರ ತಂದೆಯ ಹೆಸರು ‘ತಂಜಾವೂರು ಪರಮಶಿವಂ ಅಯ್ಯರ್’ ಅಂತಲೇ ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಹುಷಃ ಎರಡೂ ಸರಿಯಿರಬಹುದು. ಆದರೆ ಕೈಲಾಸಂ ಅವರ ಕುರಿತ ಅನೇಕ ಪುಸ್ತಕಗಳಲ್ಲಿ ಮತ್ತು ಅವರ ಸಮಕಾಲೀನರ ಕೆಲವು ಪುಸ್ತಕಗಳಲ್ಲಿ ಕೈಲಾಸಂ ಅವರ ಹೆಸರು ‘ತಂಜಾವೂರು ಪರಮಶಿವಂ ಕೈಲಾಸಂ’ ಎಂದಿದೆ. (ಹೆಚ್ಚಿನ ಮಾಹಿತಿಗೆ: ‘ಕನ್ನಡಕ್ಕೊಬ್ಬನೇ ಕೈಲಾಸಂ’ -ಶ್ರೀ ಬಿ.ಎಸ್. ಕೇಶವ ರಾವ್ ).
   ಈ ಕುರಿತು ಇನ್ನಷ್ಟು ಮಾಹಿತಿ ತಿಳಿಯುವ ಪ್ರಯತ್ನ ಮಾಡುವೆ ಮತ್ತು ಮತ್ತೊಮ್ಮೆ ಈ ಕುರಿತು ನಿಮಗೆ ಉತ್ತರ ನೀಡುವೆ. ನೀವು ಈ ಪ್ರಶ್ನೆ ಎತ್ತಿದ್ದರಿಂದ ತುಂಬಾ ಸಹಾಯವಾಯಿತು. ನಾನು ಮತ್ತೆ ಕೈಲಾಸಂ ಅವರ ಕುರಿತ ಮರು ಓದಿಗೆ ತೊಡಗಿಕೊಂಡೆ ಅಲ್ಲದೆ ಕೈಲಾಸಂ ಕುರಿತು ಅನೇಕ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಇದರಿಂದ ಸಹಾಯವಾಯಿತು. ನಿಮಗೆ ಧನ್ಯವಾದಗಳು. –ರಾಚಂ

  3. roopa eli

   If you can publish T P Kailasam natakas in your chaitra rashmi it would be great .
   As i stay in Maharashtra i cant buy kannada books ,i tried getting them in Blore but i couldnt get.
   Please tell where can i get T P Kailasam books?

   Thanks

   Roopa

  ಪ್ರತಿಕ್ರಿಯಿಸಿ :