ಮೊದಲ ನೋಟದ ಪ್ರೇಮ, ಬದುಕಾದೀತೇ ಸುಗಮ?
September 15th, 2008.
’ಅವಳೊಮ್ಮೆ ಸಿಕ್ಕಳು, ನನ್ನ ನೋಡಿ ನಕ್ಕಳು, ನಮಗೀಗ ಎರಡು ಮಕ್ಕಳು’ - ಇದು ಬಹಳ ಪ್ರಸಿದ್ಧ ಹನಿಗವನ. ಒಂದಿಡೀ ಪ್ರೇಮ ಪ್ರಕರಣವನ್ನು ಈಗಿನ ಮೆಗಾ ಸೀರಿಯಲ್‌ಗಳಂತೆ ಎಳೆದೆಳೆದು ಎಳೆದೆಳೆದು ವರ್ಣಿಸದೆ ಎಷ್ಟು ಸರಳವಾಗಿ, ಚುಟುಕಾಗಿ ಚಿತ್ರಿಸಿದ್ದಾರೆ ಅಲ್ವಾ? ಆದ್ರೆ ಸ್ವಲ್ಪ ಗಂಭೀರವಾಗಿ ಯೋಚಿಸಿದಾಗ ಅನುಮಾನ ಬರುತ್ತೆ . ಪ್ರೇಮಿಸೋದು ಅಷ್ಟು ಸುಲಭನಾ.? ಅಂತ.
ಪ್ರೇಮದಲ್ಲಿ ಆರು ವಿಧಗಳಿವೆ ಅಂತ ಹಿಂದೊಮ್ಮೆ ಯಾವುದೋ ಪುಸ್ತಕದಲ್ಲಿ ಓದಿದ ನೆನಪು. ಅದರಲ್ಲಿ ಒಂದು ವಿಧ .ಲವ್ ಎಟ್ ಫಸ್ಟ್ ಸೈಟ್. ಅಂದ್ರೆ ಮೊದಲ ನೋಟದ ಪ್ರೇಮ. ನಮ್ಮ ಸಿನಿಮಾ ನಿರ್ದೇಶಕರಿಗೆ ಬಹಳ ಪ್ರಿಯವಾದ ವಿಷಯ. ಸುಮ್ನೆ ಒಂದ್ನಿಂಷ ಯೋಚಿಸಿ ನೋಡಿ. ಈ ಒಂದು ಥೀಮ್ ಇಟ್ಕೊಂಡು ಅದೆಷ್ಟು ಸಿನಿಮಾಗಳು ಬಂದಿವೆಯೋ…. ಬಿಡಿ ಅದೇನಿದ್ರೂ ಒಂದು ಕಾಲ್ಪನಿಕ ಪ್ರಪಂಚ. ಆದ್ರೆ ವಿಚಿತ್ರ ಹಾಗೂ ವಿಷಾದ ಅನ್ನಿಸೋದು ಕೆಲವೊಂದು ಜನರು ಅದಕ್ಕೂ ವಾಸ್ತವಕ್ಕೂ ಇರುವ ವ್ಯತ್ಯಾಸವನ್ನೇ ಮರೆತು ತಮ್ಮನ್ನು ತಾವು ಶಾರುಖ್ ಖಾನೋ, ರಮೇಶೋ ಅಂದ್ಕೊಂಡು ವರ್ತಿಸುವಾಗ. ಹುಡುಗಿಯರೂ ಇದಕ್ಕೆ ಹೊರತಲ್ಲ. ಆದ್ರೆ ಪ್ರೇಮ ಅನ್ನುವುದು ಆ ರೀತಿಯಲ್ಲ. ಇದ್ದಕ್ಕಿದ್ದಂತೆ ಧುತ್ತನೆ ಸಂಭವಿಸಲು ಅಪಘಾತನಾ?. ಇಲ್ಲ ಪ್ರೇಮ ಒಂದು ಅನುಭವ. ಅದು ಲೋಕಾಯುಕ್ತರಂತೆ ದಿಢೀರ್ ದಾಳಿ ಮಾಡುವುದಿಲ್ಲ. ತಾನು ಬರುವ ಮೊದಲು ವಾರೆಂಟ್ ಜಾರಿ ಮಾಡಿಯೇ ಬರುತ್ತೆ. ಯಾವುದೇ ಜವಾಬ್ದಾರಿಯುತ ಹುಡುಗಿ / ಗನಿಗಾಗಲೀ ತಾನು ಪ್ರೇಮಿಸಲೇಬೇಕೆಂಬ ಹಠವಾಗಲಿ, ಚಟವಾಗಲಿ ಇರಲ್ಲ. ಅದೇನಿದ್ರೂ ತನಗೆ ಸರಿಹೊಂದುವಂತಹ ಸಮಾನ ಮನಸ್ಕ ವ್ಯಕ್ತಿ ಸಿಕ್ಕಾಗ ಪರಿಚಯ, ಆಕರ್ಷಣೆ, ಗೆಳೆತನ ಎಂಬ ಹಂತಗಳನ್ನು ದಾಟಿದ ನಂತರವಷ್ಟೇ ಸಿಕ್ಕುವ ಅಮೂಲ್ಯವಾದ ನಿಧಿ. ಅದು ಬಿಟ್ಟು ಮೊದಲ ನೋಟಕ್ಕೆ ಮನಸೋತು, ಅದಕ್ಕೆ .ಪ್ರೇಮ. ಅನ್ನುವ ಲೇಬಲ್ ಹಚ್ಚಿಕೊಳ್ತಾರಲ್ಲ, ಅಂತಹವರ ಪ್ರೇಮವೇ pre-matured baby ತರಹ. ಒಂದೋ ಆಯಸ್ಸು ಕಮ್ಮಿ ಇಲ್ಲವೇ ಜೀವನ ಪರ್ಯಂತ ಬವಣೆ. ಅಪರೂಪಕ್ಕೆಲ್ಲೋ ಅದೃಷ್ಟ ಚೆನ್ನಾಗಿದ್ರೆ ಅದು success, ಆಗಬಹುದೇ ಹೊರತು, ಅದನ್ನ ಸಮರ್ಥಿಸಿ ಮಾತನಾಡುವುದೇನಿದ್ರೂ ಮೂರ್ಖತನ ಅನ್ನಿಸುತ್ತೆ. ಅಲ್ಲ ನೀವೇ ಹೇಳಿ..
ನಾವು ದಿನನಿತ್ಯ ಬಳಸುವ ತರಕಾರಿಯಿಂದ ಹಿಡಿದು ಅಪರೂಪಕ್ಕೆ ಕೊಳ್ಳುವ ಬಟ್ಟೆ ಅಥವಾ ಇನ್ನಿತರ ವಸ್ತುಗಳನ್ನೇ ಆಗಲಿ ತೆಗೆದುಕೊಳ್ಳುವಾಗ ಅದರ ಕ್ವಾಲಿಟಿ ಚೆನ್ನಾಗಿದೆಯಾ? ಬಾಳಿಕೆ ಬರುತ್ತಾ? ಅಷ್ಟು ಬೆಲೆಗೆ ಅದು ಯೋಗ್ಯನಾ? ಅಂತೆಲ್ಲ ಅಳೆದು ತೂಗಿ ನೋಡ್ತೀವಿ. ಅಂತದ್ದರಲ್ಲಿ ಜೀವನ ಪರ್ಯಂತ ನಮ್ಮ ಸಂಗಾತಿಯಾಗಿ ಬಾಳಬೇಕಾದ ವ್ಯಕ್ತಿಯನ್ನ ಆರಿಸುವಾಗ ಏನೊಂದನ್ನೂ ಪರಾಮರ್ಶಿಸದೆ, ಮೊದಲ ನೋಟದಲ್ಲೇ ನಿರ್ಧಾರಕ್ಕೆ ಬರಲು ಸಾಧ್ಯನಾ? ಅದೇನಿದ್ರೂ ಅವಿವೇಕತನ, ಬೇಜವಾಬ್ದಾರಿ ಅಷ್ಟೇ ಅನ್ನಿಸಲ್ವಾ? ಈ ಬಗೆಯ ಪ್ರೇಮವನ್ನು ಸಮರ್ಥಿಸಿ ಮಾತಾಡುವವರು, ಇದಕ್ಕಿರುವ ದೀರ್ಘ ಹಿನ್ನೆಲೆ ಬಗ್ಗೆ ಮಾತಾಡುತ್ತ ದುಶ್ಯಂತ - ಶಾಕುಂತಲೆಯ ಉದಾಹರಣೆ ಕೊಡ್ತಾರೆ. ಇದರ ಇತಿಹಾಸ ದೊಡ್ಡದೆನ್ನುವುದು ಹೌದಾದರೂ, ಇದರ ಫಲವಾಗಿ ಶಾಕುಂತಲೆ ಅನುಭವಿಸಿದ ಕಷ್ಟಗಳನ್ನೂ ಮರೆಯುವಂತಿಲ್ಲ. ಪ್ರೇಮ ಅನ್ನುವುದು ಆ ರೀತಿಯಲ್ಲಿ ಸಿಕ್ಕಸಿಕ್ಕಲೆಲ್ಲ ಹುಟ್ಟಿಬಿಡಲು ಪಾರ್ಥೆನಿಯಂ ಗಿಡವಲ್ಲ. ಅದು ಹುಟ್ಟಲು ಅದಕ್ಕೆ ಪೂರಕವಾದ ವಾತಾವರಣವಿರಬೇಕು. ಅದಕ್ಕೆ ಅದರದೇ ಆದ ಅಗತ್ಯಗಳಿವೆ, ಬೇಡಿಕೆಗಳಿವೆ. ಅದು ಬಿಟ್ಟು ನೋಡಿದ ಮರುಕ್ಷಣದಿಂದಲೇ I am in love ಅಂತ ಭಾವಿಸುವುದೇನಿದ್ರೂ ಸೌಂದರ್ಯದ ಮೋಡಿಯಷ್ಟೇ. ಸ್ನೇಹಿತರೆ ಮೊದಲ ನೋಟದ ಪ್ರೇಮ ಅನ್ನುವುದೇನಿದ್ರೂ ಒಂದು ಸುಂದರ ಕಲ್ಪನೆ. ಅದನ್ನೇನಿದ್ರೂ ಸಿನಿಮಾಗಳಲ್ಲಿ ನೋಡಿ, ಪುಸ್ತಕಗಳಲ್ಲಿ ಓದಿ ಆನಂದಿಸಬೇಕೇ ಹೊರತು, ಅದನ್ನ ನಿಜವೆಂದು ಭ್ರಮಿಸಿ ನಾನೂ ಣಡಿಥಿ ಮಾಡಿನೋಡ್ತೀನಿ ಅಂತ ಹೊರಟರೆ ದುರಂತ ಖಂಡಿತ. ಒಂದರ್ಥದಲ್ಲಿ ಹೇಳುವುದಾದರೆ, infatuation, love at first sight ಅನ್ನುವ ಈ ರೀತಿಯ ಪ್ರೇಮವಲ್ಲದ ಪ್ರೇಮ ಮಾಡುವ ಅನಾಹುತಗಳಿಂದಾಗಿಯೇ ನಿಜವಾದ ಪ್ರೇಮವೂ ಜನರ ವಕ್ರದೃಷ್ಟಿಗೆ ಗುರಿಯಾಗಿದೆ.
ಕೊನೆಯದಾಗಿ, ಯಂಡಮೂರಿಯವರು ಒಂದು ಕಡೆ ಇದರ ಬಗ್ಗೆ ಈ ರೀತಿ ಬರೆಯುತ್ತಾರೆ. ನಿನಗೆ ಹತ್ತು ಜನರೊಂದಿಗೆ ಬೆರೆಯುವ ಅವಕಾಶವಿದ್ದು, ಅದರಲ್ಲಿ ಪ್ರತ್ಯೇಕವಾಗಿ ಒಬ್ಬರೇ ಹಿಡಿಸಿದರೆ ಅದು ಪ್ರೇಮ! ಆ ಸಮಯದಲ್ಲಿ ನೀನು ಪೂರ್ಣ ಪ್ರಜ್ಞೆಯಲ್ಲಿದ್ದರೆ ಅದು ಪ್ರೇಮ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ನೀನು ಒಬ್ಬ ವ್ಯಕ್ತಿಯನ್ನು ಭೇಟಿಯಾಗುವ ಮೊದಲ ಹತ್ತು ಸಲ (ಕೊನೆ ಪಕ್ಷ) ಪ್ರೇಮ ಪಾಶಕ್ಕೆ ಸಿಲುಕದಿದ್ದರೆ ಅದು ಪ್ರೇಮ!.
December 28th, 2008 at 3:49 pm
bahala chennagide
April 11th, 2009 at 6:14 am
ಬಹಳಸೊಗಾಸದ ಬರಹ. ನೋಡಿ ನಕ್ಕಳು ಇಬ್ಬರೂ …., ಆದಾಗಲೇ ಮಕ್ಕಳು.