• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಚುಕ್ಕಿ ಚಿತ್ತಾರ

    ದೇವರಿಗೊಂದು ಕಾಗದ ಬರೆದು ಭೂಮಿಗೆ ಕರೀಬೇಕು

    September 15th, 2008.


    ಕೆಲವರ ಜೀವನವೇ ಹಾಗೆ. ದುರಂತ ಅನ್ನಬೇಕೋ, ಶಾಪಗ್ರಸ್ತ ಅನ್ನಬೇಕೋ ಅಥವಾ ಅದಕ್ಕಾಗಿ ಹೊಸದಾದ ಪದವೊಂದನ್ನೇನಾದ್ರೂ ಹುಡುಕಬೇಕೋ ತಿಳಿಯಲ್ಲ. ಜೀವನ ಪರ್‍ಯಂತ ಅದ್ಯಾವ ಪರಿ ಕಷ್ಟ ಪಡ್ತಾರೇಂದ್ರೆ, ಜನ್ಮಾಪಿ ಅವರ ಒಡನಾಡಿ ಅದೊಂದೇ ’ಕಷ್ಟ’. ಹಣದ ಮುಗ್ಗಟ್ಟನ್ನೇ ಕಷ್ಟ ಅಂದ್ಕೊಳ್ಳೋದು ಮುಠ್ಠಾಳತನ. ಅದಕ್ಕೂ ಮೀರಿದ ಆರೋಗ್ಯ, ನೆಮ್ಮದಿ, ಸ್ವಸ್ಥ ಕುಟುಂಬ ಜೀವನ…. ಇದೆಲ್ಲಾ ಮನುಷ್ಯನ ಬದುಕಿಗೆ ಅತ್ಯಾವಶ್ಯಕ. ಆದರೆ ಇದ್ಯಾವುದೂ ಅವರ ಪಾಲಿಗೆ ಲಭ್ಯವಾಗಿರುವುದಿಲ್ಲ. ಪಾಪ ಅದೃಷ್ಟ ಲಕ್ಷ್ಮಿಗೆ ಯಾಕೋ ಅವರ ಮನೆ ಅಡ್ರಸ್ಸೇ ಮರೆತು ಹೋಗಿರುತ್ತೆ. ಇನ್ನು ಕೆಲವರಿರುತ್ತಾರೆ, ಅವರದು ಇವರಿಗಿಂತ ಕನಿಷ್ಠ ಸ್ಥಿತಿ. ಜೀವನದಲ್ಲಿ ಯಾವತ್ತೂ ಮೇಲ್ಮುಖ ಬೆಳವಣಿಗೆ ಇರಬೇಕು ಅಂತಾರೆ. ಆದರಿವರದು ಉಲ್ಟಾ ಕೇಸ್. ಒಂದು ಕಾಲಕ್ಕೆ ಸುಖೀ ಜೀವನ ನಡೆಸಿಕೊಂಡು ಬಂದಿರುವವರು. ಜೀವನದ ಯಾವುದೋ ಒಂದು ತಿರುವಿನಲ್ಲಿ ಅದ್ಯಾವ ಪರಿ ಎಡವಿರುತ್ತಾರೆಂದರೆ ಕೊನೆವರೆಗೂ ಅದರಿಂದ ಸುಧಾರಿಸಿಕೊಳ್ಳಲಿಕ್ಕೇ ಅವರಿಂದ ಆಗಿರೋದಿಲ್ಲ. ಸ್ವಯಂಕೃತ ಅಪರಾಧದಿಂದಲೋ, ಮತ್ಯಾರದೋ ಮೋಸಕ್ಕೋ, ಇನ್ಯಾವುದೋ ಅವಘಡಕ್ಕೋ ಒಳಗಾಗಿ ಯಾವ ರೀತಿಯಲ್ಲಿ ನೆಲಕಚ್ತಾರೆ ಅಂದ್ರೆ……

    ಕಡೆಗೆ ಹಾಗೇ ಮಣ್ಣಾಗಿ ಹೋಗ್ತಾರೆ. ಒಂದು ಕಾಲಕ್ಕೆ ಸುಖದ ಸವಿಯನ್ನುಂಡ ಜೀವ, ಕಡೆಗೆ ಹೀನಾಯ ಸ್ಥಿತಿಯಲ್ಲಿ ಕೊನೆಗೊಳ್ಳುತ್ತೆ. ಇದೆಲ್ಲ ಕೇವಲ ಕಾದಂಬರಿ, ಸಿನಿಮಾಗಳಿಗೆ ಸೀಮಿತವಾದುದಲ್ಲ, ನಮ್ಮ ನಡುವೆಯೇ ಇಂತಹ ಅದೆಷ್ಟೋ ಕಥೆ-ವ್ಯಥೆಗಳಿವೆ. ಇಂತಹವರ ಬದುಕನ್ನು ನೋಡುವಾಗ ಮನಸ್ಸಲ್ಲಿ ಒಂದೇ ಪ್ರಶ್ನೆ - ಯಾವ ತಪ್ಪಿಗಾಗಿ ಅವರಿಗಿಂತಹ ಶಿಕ್ಷೆ? ತೀರಾ ಆ ಪ್ರಮಾಣದ ಶಿಕ್ಷೆಯನ್ನನುಭವಿಸುವಂತಹ ಅಪರಾಧವನ್ಯಾವುದನ್ನೂ ಅವರು ಮಾಡಿರುವುದಿಲ್ಲ. ಆದರೂ … ಯಾಕೆ ಹೀಗೆ?

    ಇನ್ನೊಂದು ಬಗೆಯ ಜನರಿರುತ್ತಾರೆ. ಬದುಕೆಂದರೆ ಅವರದು. ಅದೃಷ್ಟ ಲಕ್ಷ್ಮೀ ಅವರ ಮನೆಯ ಅಡಿಯಾಳು. ಹಣದ ಜೊತೆನೇ ಬೇರೆಲ್ಲ ವಿಷಯಗಳಲ್ಲೂ ಅವರು ಸುಖಿಗಳೇ. ಆದರದು ಯಾವ ಸುಕೃತ್ಯದ ಫಲ ಅನ್ನೋದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ! ಇತರರ ಒಳಿತಿಗೆನ್ನುವಂತಹ ಯಾವುದೇ ಘನಕಾರ್ಯವನ್ನೂ ಮಾಡಿರದ ಅವರು, ಕಷ್ಟದ ಅರಿವೇ ಇಲ್ಲದಂತೆ ಬದುಕುತ್ತಾರೆ. ಇದರ ಬಗ್ಗೆ ಯೋಚಿಸಿದಾಗೆಲ್ಲಾ ಏನೋ ಒಂದು ರೀತಿಯ ಅಸಮಾಧಾನ. ನೀವದನ್ನು ಹೊಟ್ಟೆಕಿಚ್ಚು ಅಂತ ಕರೆದ್ರೂ ನಂದಡ್ಡಿಯಿಲ್ಲ. ಬಯಸಿದ್ದನ್ನೆಲ್ಲಾ ಪಡೆಯುತ್ತಾ, ಅಂದು ಕೊಂಡಿದ್ದನ್ನೆಲ್ಲ ಸಾಧಿಸುತ್ತಾ .ಆನೆ ನಡೆದಿದ್ದೇ ಹಾದಿ. ಎಂಬಂತೆ ಸಾಗುವ ಅವರ ಜೀವನ ಕಂಡಾಗ ಹೆಮ್ಮೆಯ ಜೊತೆಗೇ ಹೊಟ್ಟೆಕಿಚ್ಚಾಗೋದು ಸುಳ್ಳಲ್ಲ. ಆದ್ರೆ ಈ ವಿಷ್ಯವಾಗಿ ಪ್ರಶ್ನಿಸಿದ್ರೆ ಸಿಗುವ ಅಲ್ಟಿಮೇಟ್ ಉತ್ತರ ’ಎಲ್ಲೋ ಹೋದ್ಜನ್ಮದಲ್ಲಿ ಪುಣ್ಯ ಮಾಡಿರ್‍ಬೇಕು’ !

    ಸರಿ ಮಾಡಿದ್ದುಣ್ಣೋ ಮಾರಾಯ. ಒಪ್ಪೋಣ. ಆದ್ರೆ ಮಾಡಿದ್ದೇನು? ಅನ್ನೋದು ತಿಳೀತಿಲ್ವಲ್ಲ. ಕರ್ಮಣ್ಯೇವಾಧಿಕಾರಸ್ತೆ……ಅಂತೇನೋ ಭಗವಂತ ಹೇಳಿದ್ದಾನೆ. ಆದ್ರೆ ಆ ಪ್ರಕಾರ ನಡೆಯೋದು ಅಷ್ಟು ಸುಲಭಾನಾ? ನನ್ನ ಮತ್ತೊಂದು ಕನ್‌ಫ್ಯೂಶನ್ ಏನಂದ್ರೆ, ಒಂದು ಕಡೆ .ತೇನವಿನಾತೃಣಮಪಿ ನ ಚಲತಿ. ಅಂತಾನೆ, ಮತ್ತೊಂದು ಕಡೆ ನೀನು ಮಾಡಿದ ಕರ್ಮಕ್ಕನುಗುಣವಾಗಿ ಫಲ ಅನುಭವಿಸ್ತೀಯ ಅಂತಾನೆ. ಇದ್ಯಾವ ತರ? ಅಲ್ಲಾ, ಸೃಷ್ಠಿಕರ್ತನಲ್ಲೂ ಏನಾದ್ರೂ ಪಾರ್ಶಿಯಾಲಿಟಿನಾ? ಅಥವಾ ಅವನಿಗೂ ಯಾವುದಾದ್ರೂ ಮೀಸಲಾತಿಯ ಕಟ್ಟುಪಾಡುಗಳಿವೆಯಾ? ಯಾಕೋ ಅವನ ಲೆಕ್ಕಾಚಾರದ ತಲೆಬುಡನೇ ಅರ್ಥ ಆಗಲ್ಲ. ಇದೊಂಥರಾ ನಮಗೇ ತಿಳಿಯದೆ ಮಾಡಿದ ಸಾಲಕ್ಕೆ ಬಡ್ಡಿ ಕಟ್ತಾ, ನಮಗೇ ತಿಳಿಯದೆ ಮಾಡಿದ ಉಳಿತಾಯಕ್ಕೆ ಬಡ್ಡಿ ಪಡೆದ ಹಾಗೆ ಅನ್ನಿಸಲ್ವಾ? ಕೆಲವರಿಗಿದು ಅಧಿಕ ಪ್ರಸಂಗಿತನ! ಅರ್ಥಹೀನ

    ಅನ್ನಿಸ ಬಹುದಾದ್ರೂ, ನನ್ನಂತೆ ಹಲವರನ್ನು ಕಾಡಿರುವ ಪ್ರಶ್ನೆಗಳಿವು. ಡಿ. ವಿ. ಜಿ ಯವರೂ ಒಂದು ಕಡೆ ಬರೀತಾರೆ -

    ಎಷ್ಟು ಚಿಂತಿಸಿದೊಡಂ ಶಂಕಯನೆ ಬೆಳೆಸುವೀ|

    ಸೃಷ್ಟಿಯಲಿ ತತ್ವವೆಲ್ಲಿಯೋ ಬೆದಕಿ ನರನು|

    ಕಷ್ಟ ಪಡುತಿರಲೆನುವುದೇ ಬ್ರಹ್ಮ ವಿಧಿಯೇನೋ|

    ಅಷ್ಟೆ ನಮ್ಮಯ ಪಾಡು? - ಮಂಕುತಿಮ್ಮ.

    ಹಾಗಂತ ಅವನ ಪಾಲಿಸಿ ಸಂಪೂರ್ಣ ತಪ್ಪು ಅಂತ ತಳ್ಳಿ ಹಾಕೋ ಹಾಗೂ ಇಲ್ಲ. ಒಂದು ನಿಮಿಷ ಊಹಿಸಿ ನೋಡಿ - ಒಂದು ಜನ್ಮದಿಂದ ಮತ್ತೊಂದಕ್ಕೆ ಪಾಪ / ಪುಣ್ಯಗಳು ಟ್ರಾನ್ಸ್‌ಫರ್ ಆಗುವ ಜೊತೆಗೇ ಅದರ ಹಿಂದಿನ ಕಾರಣಗಳೂ ಟ್ರಾನ್ಸ್‌ಫರ್ ಆಗಿದ್ದಿದ್ರೆ…………ರೆ?

    ನೆನೆಸಿಕೊಂಡ್ರೆ ನಗು ಬರುತ್ತೆ. ಬಹುಶಃ ನಾವೆಲ್ಲಾ ಹಳೇ ಜನ್ಮದ ಹ್ಯಾಂಗೋವರ್‌ನಲ್ಲೇ ಉಳಿದು, ಪ್ರಸಕ್ತ ಜೀವನ ಕೇವಲ ’ನಾಮ್ಕೆ ವಾಸ್ತೆ’ ಅನ್ನಿಸಿ ಬಿಡ್ತಿತ್ತೇನೋ. ಎಲ್ಲರೂ ಹಿಂದಿನ ಜನ್ಮಗಳ ಪ್ರೀತಿ, ದ್ವೇಷ, ಸಂಬಂಧ, ವ್ಯವಹಾರಗಳಲ್ಲೇ ಮುಳುಗಿ ಬಿಡ್ತಿದ್ರು. ಕೊನೆಗೆ ಸಿನಿಮಾಗಳಲ್ಲಿರುವ ಪಾರ್ಟ್ ೧,೨,೩…….. ಗಳು ನಮ್ಮ ಜೀವನಕ್ಕೂ ಅನ್ವಯಿಸಿ ಬಿಡ್ತಿತ್ತಷ್ಟೆ…..

    ಹಾಗಂತ ಈಗಿರುವ ಪಾಲಿಸಿನ ಸರಿ ಅಂತ ಒಪ್ಪಿಕೊಂಡೆ ಅಂತಲ್ಲ. ಅದು ಕೂಡ ಅಸಮರ್ಪಕವೇ. ಅದರ ಬದಲು ಆ ಜನ್ಮದ ಲೆಕ್ಕನ ಆ

    ಜನ್ಮದಲ್ಲೇ ಯಾಕೆ ಚುಕ್ತಾ ಮಾಡಬಾರದು? ಬಹುಶಃ ಆಗ ಮನುಷ್ಯ ಇನ್ನಷ್ಟು ಜಾಗೃತನಾಗಿರ್ತಿದ್ದ ಅನ್ಸುತ್ತೆ. ಆದ್ರೆ ಇದನ್ನೆಲ್ಲ ಸಂಬಂಧಪಟ್ಟವರಿಗೆ ಅರ್ಥ ಮಾಡಿಸುವುದು ಹೇಗೆ? ಅದಕ್ಕೇ ದೇವರಿಗೊಂದು ಕಾಗದ ಬರೆದು ಭೂಮಿಗೆ ಕರೀಬೇಕು ಅಂತ ಅಂದಿದ್ದು.

    ಎಲ್ಲಾ ಸರಿ, ನಾವು ಪುನರ್ಜನ್ಮನೇ ನಂಬೋಲ್ಲ ಅಂದ್ರೆ …. ಬೇಡ ಬಿಡಿ. ಆದ್ರೆ ಉತ್ತರ ಸಿಗದೇ ಉಳಿದುಹೋಗುವ ಆ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ನಿಮ್ಮದಾಗುತ್ತಷ್ಟೆ!!!

    - ಚುಕ್ಕಿ

    ಪ್ರತಿಕ್ರಿಯಿಸಿ :