ಅಂತರಂಗವ ತಿದ್ದು ಮಂಕುತಿಮ್ಮ
September 15th, 2008.
- ಮಹಾಬಲ ಭಟ್, ಗೋವಾ
ಅಂತಾನು ಮಿಂತಾನುಮೆಂತೊ ನಿನಗಾದಂತೆ
ಶಾಂತಿಯನು ನೀನರಸು ಮನ ಕೆರಳಿದಂದು
ಸಂತವಿಡುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು
ಸ್ವಾಂತಮಂ ತಿದ್ದುತಿರು - ಮಂಕುತಿಮ್ಮ ||
ಒಳ್ಳೆಯದಕ್ಕೆ ನಮ್ಮನ್ನೇ, ಕೆಟ್ಟದ್ದಕ್ಕೆ ಬೇರೆಯವರನ್ನು ಹೊಣೆಗಾರರನ್ನಾಗಿ ಮಾಡುವುದು ನಮ್ಮ ಅಭ್ಯಾಸ. ನಮ್ಮ ಜೀವನದಲ್ಲಿ ನಾವು ಎಡವಿದಾಗ ನಮಗೆ ವಿದ್ಯೆ ಕಲಿಸಿದ ಗುರುಗಳನ್ನೋ, ಬುದ್ಧಿ ಕಲಿಸಿದ ತಂದೆ ತಾಯಿಗಳನ್ನೋ ನಿಂದಿಸುತ್ತೇವೆ. ನಮ್ಮ ಎಡವಟ್ಟಿಗೆ ನಾವೇ ಕಾರಣ ಎಂಬುದನ್ನು ಮರೆಯುತ್ತೇವೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ-
ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ |
ಆತ್ಮೆ ವ ಹ್ಯಾತ್ಮನೋ ಬಂಧು: ಆತ್ಮೆ ವ ರಿಪುರಾತ್ಮನ: ||
ನಮ್ಮ ಆತ್ಮೋದ್ಧಾರ ನಮ್ಮಿಂದಲೇ ಸಾಧ್ಯ. ನಮ್ಮ ಮಿತ್ರ ಹಾಗೂ ಶತ್ರು ಎರಡೂ ನಾವೇ. ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ. ನಮ್ಮ ಒಳಿತು ಕೆಡಕು ಎರಡಕ್ಕೂ ನಾವೇ ಹೊಣೆಯೇ ಹೊರತು ಅನ್ಯರಲ್ಲ. ನಮಗೆ ದು:ಖವಾದಾಗ ಬೇರೆಯವರು ಬಂದು ನಮ್ಮನ್ನು ಸಾಂತ್ವನಗೊಳಿಸಲಿ ಎಂದು ಆಶಿಸುವುದು ಮಾನವಸಹಜ ಸ್ವಭಾವ. ಬಾಯಾರಿದ ಕುದುರೆಯನ್ನು ನೀರಿನೆಡೆಗೆ ತೆಗೆದುಕೊಂಡು
ಹೋಗುವಂತೆ ಅವರ ಸಾಂತ್ವನ ನಮ್ಮ ಮನಸ್ಸಿನೆಡೆಗೆ ಹರಿದುಬರಬಹುದು. ಆದರೆ ಕುದುರೆಯೆ ಸ್ವತ: ನೀರ್ಕುಡಿದರೆ ಮಾತ್ರ ಬಾಯಾರಿಕೆ ಕಳೆವಂತೆ ನಾವು ಸ್ವತ: ಮನಸ್ಸನ್ನು ಶಾಂತಗೊಳಿಸಿದರೆ ಮಾತ್ರ ಸಮಾಧಾನ ದೊರೆಯಲು ಸಾಧ್ಯ. ಮನವೆಂಬುದು ಮರ್ಕಟದಂತೆ ಎಂಬುದನ್ನು ಶ್ರೀ ಕೃಷ್ಣನೂ ಒಪ್ಪುತ್ತಾನೆ. ಅಂತಹ ಮನಸ್ಸನು ಅಭ್ಯಾಸದಿಂದ ನಿಗ್ರಹಿಸಬೇಕು ಎನ್ನುತ್ತಾನೆ. ಕೆಲವೊಮ್ಮೆ ಶಿಕ್ಷೆಯು ಶಿಕ್ಷಣದ ಅವಿಭಾಜ್ಯ ಅಂಗವಾಗುತ್ತದೆ ಶಿಶುವೊಂದು ತಪ್ಪು ಮಾಡಿದಾಗ ಮೊದಲು ಸಾಮದಿಂದ ತಿದ್ದಬಹುದು. ತಿದ್ದಿಕೊಳ್ಳದಿದ್ದರೆ ದಂಡದಿಂದಾದರೂ ತಿದ್ದಲೇಬೇಕು. ಅದಿಲ್ಲದಿದ್ದರೆ ಆ ಶಿಶು ಮುಂದೆ ಕಳ್ಳನೋ, ದರೋಡೆಕೋರನೊ ಆಗಬಹುದು. ಅದರಂತೆ ನಮ್ಮ ಮನಸ್ಸು. ನಮ್ಮ ಪಾಲಿಗೆ ನಮ್ಮ ಮನಸ್ಸು ಹಸಿ ಮಣ್ಣೇ ಯಾವಾಗಲೂ ಯಾವಾಗಬೇಕಾದರೂ ಅದನ್ನು ನಾವು ತಿದ್ದಬಹುದು. ನಮ್ಮ ಮನಸ್ಸನ್ನು ನಾವೇ ತಿದ್ದಬೇಕೇ ಹೊರತು ಅನ್ಯರಲ್ಲ. ನಮ್ಮ ಮನಸ್ಸಿಗೆ ನಮ್ಮ ವಿವೇಕದಷ್ಟು ಒಳ್ಳೆಯ ಗುರು ಬೇರಾರಿಲ್ಲ. ಅದು ನಮ್ಮಂತರಂಗವನ್ನು ಶುದ್ಧಗೊಳಿಸಬಲ್ಲದು. ಅದು ನಮ್ಮ ಮನಸ್ಸು ಕೆರಳಿದಾಗ ಸಾಂತ್ವನದ ಮೂಲ ಶಾಂತಿಯನ್ನು ನೀಡಬಲ್ಲದು ಇಲ್ಲವೆ ಶಿಕ್ಷೆಯ ಮೂಲಕ ತಿದ್ದಬಲ್ಲದು. ಜೀವನದಲ್ಲಿ ಒದಗುವ ಕಷ್ಟ-ಸುಖದ ಸನ್ನಿವೇಶಗಳಲ್ಲಿ ಶಿಲ್ಪಿಯು ಶಿಲೆಯನ್ನು ಮೂರ್ತಿಯಾಗಿಸುವ ರೀತಿಯಲ್ಲಿ ನಮ್ಮ ಅಂತರಂಗವನ್ನು ತಿದ್ದಿ-ತೀಡಿ ಅದನ್ನು ಶ್ರೇಷ್ಠತೆಯತ್ತ ಒಯ್ಯಬೇಕು.
September 8th, 2009 at 12:05 am
nanage mankutimmana kagga andre esta
July 2nd, 2010 at 5:12 am
ಮಾನ್ಯ ಭಟ್ ಅವರೇ,
ಏಕೋ ಬಹಳ ಬೋರ್ ಆಗಿ ಅಂತರ್ಜಾಲದಲ್ಲಿ ಹೀಗೆ ಸುತ್ತಾಡುತ್ತಿದ್ದಾಗ ನಿಮ್ಮ ಈ ಲೇಖನ ಕಣ್ಣಿಗೆ ಬಿಟ್ಟು.
ಬಹಳ ಚೆನ್ನಾಗಿದೆ ..
ಧನ್ಯವಾದಗಳು
- ಶ್ರೀ
July 4th, 2010 at 10:59 am
dhanyavaada