ಅಪ್ರತಿಮ ದಾರ್ಶನಿಕ ಡಿ. ವಿ. ಜಿ.
September 15th, 2008.
- ಮಹಾಬಲ ಭಟ್, ಗೋವಾ
ಡಿ.ವಿ.ಜಿ. ಎಂಬ ಮೂರಕ್ಷರಗಳಿಂದಲೇ ಪ್ರಸಿದ್ಧರಾದ ಡಾ| ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕನ್ನಡ ಸಾಹಿತ್ಯಕ್ಷೇತ್ರದ
ಧ್ರುವ ನಕ್ಷತ್ರ. ತಮ್ಮ ಸರಳ ಸಾರ್ಥಕ ಜೀವನದಿಂದಲೂ, ಜೀವಂತವಾದ ಬರವಣಿಗೆಯಿಂದಲೂ, ತಮ್ಮ ದಾರ್ಶನಿಕ ದೃಷ್ಟಿಯಿಂದಲೂ ಕರ್ನಾಟಕದ ಇತಿಹಾಸದಲ್ಲೊಂದು ಅಚ್ಚಳಿಯದ ಸ್ಥಾನ ಪಡೆದುಕೊಂಡ ಮೇರುವ್ಯಕ್ತಿ ಇವರು. ಜೀವನದ ಅಮೂಲ್ಯ ಮರ್ಮವನ್ನು ಹೊರಗೆಡಹುವ, ಸಾಮಾನ್ಯ ಮಾನವನನ್ನೂ ಚಿಂತನೆಯ ಹಾದಿಯಲ್ಲಿ ನಡೆಸುವ ಅನುಪಮ ಸಾಹಿತ್ಯದ ನಿರ್ಮಾತೃವಾದ ಡಿ.ವಿ.ಜಿ.ಗೆ ಅವರೇ ಸಾಟಿ. ಜೀವನವನ್ನೇ ವ್ರತವಾಗಿಟ್ಟುಕೊಂಡು, ಜೀವನಾನುಭವವನ್ನೆಲ್ಲ ಬರವಣಿಗೆಯ ರೂಪದಲ್ಲಿ ಸಂಗ್ರಹಿಸಿದ ಅವರ ತಪಸ್ಸು ಯಾವ ಋಷಿಗೂ ಕಡಿಮೆಯದೇನಲ್ಲ. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ದಾರ್ಶನಿಕ ಗ್ರಂಥಗಳ ಏಕೈಕ ನಿರ್ಮಾತೃ ಡಿ.ವಿ.ಜಿಯವರು ಎಂದರೂ ತಪ್ಪಾಗಲಾರದು. ’ಕನ್ನಡದ ಭಗವದ್ಗೀತೆ’ಯೆಂದೇ ಖ್ಯಾತವಾಗಿರುವ ಮಂಕುತಿಮ್ಮನ ಕಗ್ಗ, ’ಮರುಳು ಮುನಿಯನ ಕಗ್ಗ’ ಜೀವನಧರ್ಮಯೋಗ, ಉಮರನ ಒಸಗೆ ಮುಂತಾದ ಗ್ರಂಥಗಳು ಸಾರ್ವಕಾಲಿಕ ಶ್ರೇಷ್ಟ ಗ್ರಂಥಗಳ ಸಾಲಿಗೆ ಸೇರುವಂಥವು.
೧೮೮೭ರ ಮಾರ್ಚ್ ೧೭ರಂದು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿದ ಡಿ.ವಿ.ಜಿ. ಮೈಸೂರು ಕೋಲಾರಗಳಲ್ಲಿ ವಿದ್ಯಾಭ್ಯಾಸ ಮಾಡಿದರು.
ಖಾಸಗಿಯಾಗಿ ಸಂಸ್ಕೃತಾಭ್ಯಾಸವನ್ನು ಮಾಡಿದ ಅವರಿಗೆ ಸಂಸ್ಕೃತ-ಇಂಗ್ಲೀಷ್ ಭಾಷೆಗಳು ಕರಗತವಾಗಿದ್ದವು. ಮೆಟ್ರಿಕ್ಯುಲೇಶನ್‌ನಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಅನುತ್ತೀರ್ಣರಾಗಿ ವಿದ್ಯಾಭ್ಯಾಸಕ್ಕೆ ಇತಿಶ್ರೀ ಹಾಡಿ ವೃತ್ತಿ ಪ್ರಪಂಚಕ್ಕೆ ಕಾಲಿರಿಸಿದರು. ಅಲ್ಲಲ್ಲಿ ಕೆಲಸಕ್ಕಾಗಿ ಅಲೆದಾಡಿ, ಹಂಗಾಮಿ ಶಿಕ್ಷಕನಾಗಿ, ಗುಮಾಸ್ತನಾಗಿ, ಪತ್ರಿಕಾಬಾತ್ಮೀದಾರನಾಗಿ ಹೀಗೆ ಹತ್ತು-ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದರು. ಇದೇ ಅವರಿಗೆ ಜೀವನಾನುಭವವನ್ನು ತಂದಿತ್ತಿತು.ಅವರಿಗೆ ಕೀರ್ತಿಯನ್ನು ತಂದಿದ್ದು ಪತ್ರಿಕೋದ್ಯಮ. ಸೂರ್ಯೋದಯ ಪ್ರಕಾಶಿಕಾ, ಇವನಿಂಗ್ ಮೈಲ್, ಭಾರತೀ, ನಡೆಗನ್ನಡಿ, ದ ಹಿಂದೂ, ಮುಂತಾದ ಪತ್ರಿಕೆಗಳಲ್ಲಿ ಬರೆಬರೆದು ಕೈಪಳಗಿಸಿಕೊಂಡ ಡಿವಿಜಿಯವರು ’ಕರ್ನಾಟಕ’ ಎಂಬ ಸ್ವತಂತ್ರ ಪತ್ರಿಕೆಯನ್ನೂ ಆರಂಭಿಸಿದರು. ಅಲ್ಲಿಂದಲೇ ಅವರ ವ್ಯವಸ್ಥಿತ ಬರವಣಿಗೆ ಆರಂಭವಾದುದು. ’ದಿವಾನ್ ರಂಗಾಚಾರ್ಲು’ ಎನ್ನುವುದು ಅವರ ಪ್ರಥಮ ಹೊತ್ತಿಗೆ. ಅನಂತರ ಪುಂಖಾನುಪುಂಖವಾಗಿ ಹರಿದುಬಂದ ಅವರ ಸಾಹಿತ್ಯ ಮಾಲೆಯಲ್ಲಿ ಕಾವ್ಯ, ಅನುವಾದ, ಪ್ರಬಂಧ, ಜೀವನ ಚರಿತ್ರೆ, ತತ್ವಶಾಸ್ತ್ರ ಧಾರ್ಮಿಕ, ರಾಜಕೀಯ ಹೀಗೆ ಎಲ್ಲ ತೆರನಾದ ಸಾಹಿತ್ಯರತ್ನಗಳೂ ಶೋಭಿಸುತ್ತಿವೆ. ಡಿ.ವಿ.ಜಿ.ಯವರ ಕೃತಿಗಳಲ್ಲಿ ಮೂಡಿದ ಅವರ ಚಿಂತನ ಶೈಲಿ ನಮ್ಮ ಪ್ರಾಚೀನ ಮಹಾಮುನಿಗಳ ಚಿಂತನ ಶೈಲಿಗೆ ಸಮನಾಗಿ ನಿಲ್ಲುತ್ತದೆ. ಅವರ ಸರಳ ಜೀವನ, ನಿಸ್ವಾರ್ಥ ಬದುಕಿಗೆ ಪ್ರತಿಬಿಂಬ ಸ್ವರೂಪ ವಾಗಿರುವ ಅವರ ಕೃತಿಗಳಲ್ಲಿ ಮೂಡಿರುವ ಜೀವನಾದರ್ಶ ಎಲ್ಲ
ಕಾಲಗಳಿಗೂ ಅನ್ವಯಿಸುವಂಥದ್ದು. ಅವರು ತಮ್ಮ ’ಮಂಕುತಿಮ್ಮ’ನ ಕಗ್ಗದಲ್ಲಿ ಹೇಳುವಂತೆ
ವಿಶದಮಾದೊಂದು ಜೀವನಧರ್ಮದರ್ಶನವ |
ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು ||
ನಿಸದವಂ ಗ್ರಂಥಾನುಭವಗಳಿಂದಾರಿಸುತ |
ಹೊಸೆದನೀ ಕಗ್ಗವನು - ಮಂಕುತಿಮ್ಮ ||
ಜೀವನದಲ್ಲಿ ಕಷ್ಟ-ಸುಖ, ಒಳ್ಳೆಯದು ಕೆಟ್ಟದ್ದು ಎಲ್ಲವೂ ಇರುತ್ತವೆ. ಕಷ್ಟವನ್ನು ಸುಖವನ್ನಾಗಿ, ಕೆಟ್ಟದ್ದನ್ನು ಒಳ್ಳೆಯದನ್ನಾಗಿ ಪರಿವರ್ತಿಸುವ ಪ್ರಯತ್ನವೇ ಜೀವನದ ಜೀವಾಳ. ಡಿ.ವಿ.ಜಿಯವರ ಬದುಕಿನ ದೃಷ್ಟಿ ಅದೇ.
ಬೀಳುವುದ ನಿಲ್ಲಿಪುದು, ಬಿದ್ದುದನು ಕಟ್ಟುವುದು |
ಹಾಲೊಡೆಯೆ ಕಡೆದದನು ತಕ್ರವಾಗಿಪುದು ||
ಹಾಳ-ಹಾಳಾಗಿಪುದು, ಹಳದ ಹೊಸತಾಗಿಪುದು |
ಬಾಳಿಗಿದೆ ಚಿರಧರ್ಮ - ಮಂಕುತಿಮ್ಮ ||
ಬಾಳಿಗೊಂದು ನಂಬಿಕೆಯಿರಬೇಕು-ಛಲವಿರಬೇಕು. ಆದರೆ ಸಂಸಾರದಲ್ಲಿ ನೀರಿನಲ್ಲಿರುವ ಕಮಲದಂತಿರಬೇಕು. ಆಸೆಯೇ ದುಃಖಕ್ಕೆ ಮೂಲ. ವಾಸನಾಕ್ಷಯವೇ ಮೋಕ್ಷ ಎಂಬ ಉಪನಿಷದ್ವಚನಗಳೇ ಡಿ.ವಿ.ಜಿಯವರ ಶೈಲಿಯಲ್ಲಿ ಕಾವ್ಯರೂಪವಾಗಿ ಹೊರಹೊಮ್ಮಿದೆ.
ದಾಸರೋ ನಾವೆಲ್ಲ ಶುನಕದಂದದಿ ಜಗದಿ |
ವಾಸನೆಗಳೆಳೆತಕ್ಕೆ ದಿಕ್ಕು ದಿಕ್ಕಿನಲಿ ||
ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹವು |
ವಾಸನಾಕ್ಷಯ ಮೋಕ್ಷ - ಮಂಕುತಿಮ್ಮ ||
ಭಗವದ್ಗೀತೆಗೆ ಡಿ.ವಿ.ಜಿ ಬರೆದ ಭಾಷ್ಯ ’ಜೀವನ ಸದ್ಧರ್ಮಯೋಗ’ ಎಂದೇ ಖ್ಯಾತವಾಗಿದೆ. ಅರ್ಜುನನನ್ನು ನೆಪವಾಗಿಟ್ಟುಕೊಂಡು ಸಕಲ ಮನುಜ ಲೋಕಕ್ಕೆ ಕೃಷ್ಣ ನೀಡಿದ ಧರ್ಮಯೋಗ ಇದು ಎಂಬುದು ಅವರ ಅಭಿಪ್ರಾಯ. ಡಿ.ವಿ.ಜಿಯವರ ಜೀವನವೇ ಒಂದು ಸದ್ಧರ್ಮಯೋಗ. ಅವರು ದಿವಂಗತರಾದ ಮೇಲೆ ಅವರ ಪುಸ್ತಕಗಳ ಮಧ್ಯೆ ಸಿಕ್ಕ ವಿಶ್ವೇಶ್ವರಯ್ಯನಂಥವರಿಂದ, ಸರಕಾರದಿಂದ ಕೊಡಲ್ಪಟ್ಟಿದ್ದ ನೂರಾರು ಚೆಕ್‌ಗಳು (ಎನ್‌ಕ್ಯಾಶ್ ಮಾಡಿಸದವು) ಅವರ ಜೀವನದ ಸಾರಳ್ಯವನ್ನು ಸಾರಲು ಸಾಕು. ಮೆಟ್ರಿಕ್ಯುಲೇಶನ್ ಪಾಸಾಗದಿದ್ದರೂ ಗೌರವ ಡಾಕ್ಟರೇಟ್ ಪಡೆದ ಹಿರಿಮೆ ಅವರದ್ದು. ಗಣಿತ ವಿಜ್ಞಾನಗಳಲ್ಲಿ ಶೂನ್ಯರಾದರೂ ಸರ್. ಎಂ. ವಿಶ್ವೇಶ್ವರಯ್ಯನಂಥವರ ಸಹವಾಸದಿಂದ ಜೀವನದಲ್ಲಿ ಅನಂತತೆಯೆಡೆಗೆ ಸಾಗಿದವರು. ಇವರಿಗೆ ಯಾರೂ ಗಾಡ್ ಫಾದರ್ ಇರಲಿಲ್ಲ. ಹೇಳಿಕೊಳ್ಳುವಂತಹ ಗುರುವೂ ಯಾರೂ ಇರಲಿಲ್ಲ. ಆದರೂ ತಾನೇ ಲೋಕಗುರುವಾಗುವಷ್ಟೆತ್ತರಕ್ಕೆ ಬೆಳೆದರು. ಅದಕ್ಕೆ ಕಾರಣ ಅವರೇ ಎನ್ನುವಂತೆ
ಗುರುವಿಲ್ಲವೆನಬೇಡ ಜಗವೇ ಜಗದ್ಗುರುವು |
ಅರಿಮಿತ್ರ ವಿಭುಭೃತ್ಯ ಸತಿಪುತ್ರವರ್ಗ ||
ಪರಿಪರಿಯಲಿ ನಿನಗೆ ಕಲಿಸುತಿರ್ಪುದು ಜಗದಿ
ಅರಿತುಕೊಳಲನುವಾಗು - ಮರುಳುಮುನಿಯ ||
ಖ್ಯಾತ ಸಾಹಿತಿ ಡಾ. ಹಾ. ಮಾ. ನಾಯಕರು ಹೇಳುವಂತೆ ’ಡಿ.ವಿ.ಜಿ. ಆಧುನಿಕ ಭಾರತೀಯ ಸಾಹಿತ್ಯದ ಒಂದು ಅಶ್ವತ್ಥ ವೃಕ್ಷ. ಪೂರ್ಣ ಪುರುಷರೆನಿಸಿದ್ದ ಗುಂಡಪ್ಪನವರು ವಿದ್ವತ್ತು ಮತ್ತು ರಸಿಕತೆಗಳ ಅಪೂರ್ವ ಸಂಗಮವಾಗಿದ್ದರು’. ’ಜೀವನವನ್ನು ನಗುನಗುತ್ತಾ ಅನುಭವಿಸಬೇಕು. ಕಷ್ಟಗಳು ದೇವರು ನೀಡುವ ಜೀವನ ಶೋಧನೆಯ ಅವಕಾಶ: ಅಲ್ಲಿ ನಿಷ್ಕಾಮಕರ್ಮವೆಸಗುತ್ತ ಜೀವನವನ್ನು
ಸಾರ್ಥಕಪಡಿಸಿಕೊಳ್ಳಬೇಕು’ ಎಂಬ ತತ್ವವನ್ನು ತಮ್ಮ ಎಲ್ಲ ಕೃತಿಗಳಲ್ಲೂ ಬಿಂಬಿಸಿದ ಡಿ.ವಿ.ಜಿ.ಯವರು ತಮ್ಮ ಜೀವನದಲ್ಲಿಯೂ ಅದನ್ನೇ ಆಚರಿಸಿದವರು. ಅವರ ಕಾಯ ಅಳಿದರೂ ಉಪದೇಶ ಮಾತ್ರ ಕನ್ನಡಿಗರ ಕಿವಿಯಲ್ಲಿ ಗುಂಜಾರವವನ್ನುಂಟು ಮಾಡುತ್ತಲೇ ಇದೆ.