• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಮುಖಪುಟ >> ಚಿಂತನ ರಶ್ಮಿ

  ಸಂಸ್ಕೃತಿಯ ಸಂರಕ್ಷಣೆಯ ಮೂಲಕ ರಾಷ್ಟ್ರೀಯ ಏಕತೆ

  September 15th, 2008.


  -ಮಂಗಳಗೌರಿ.ಎಂ ಕಣಿಯೂರು, ದ.ಕ

  ನಮ್ಮ ಭಾರತೀಯ ಸಂಸ್ಕೃತಿ ಸನಾತನವಾದುದು, ಪ್ರಸಿದ್ಧವಾದುದು. ಪ್ರಸ್ತುತ ನಮ್ಮ ಮುಂದಿರುವ ಸಮಸ್ಯೆಗಳಿಗೂ, ಮುಖ್ಯವಾಗಿ ಏಕತೆಯ ಕೊರತೆಗೆ, ಪರಿಹಾರ ಸಂಸ್ಕೃತಿಯ ರಕ್ಷಣೆ. ರಾಷ್ಟ್ರೀಯತೆ, ವಿಶ್ವದೃಷ್ಟಿಗಳ ಸಮನ್ವಯವೂ ಸಂಸ್ಕೃತಿಯ ರಕ್ಷಣೆಯಿಂದ ಸಾಧ್ಯ ಎಂಬ ಚಿಂತನೆ ಮಂಡಿಸಿದ್ದಾರೆ ಮಂಗಳಗೌರಿ ಎಂ.

  ರಾಷ್ಟ್ರಕವಿ ಕುವೆಂಪು ಹೇಳಿದಂತೆ – ಅಸಂಖ್ಯ ಮನಸ್ಸುಗಳ ಸಮಷ್ಟಿಯಲ್ಲಿ ಸಂಭವಿಸಿ, ಪ್ರಕಟವಾಗಿ, ಸಿದ್ಧವಾಗುವ ಒಂದು ದೇಶದ ಸಮಷ್ಟಿ ಮನಸ್ಸಿನ ಚಿತ್‌ಶಕ್ತಿಯ ರಸಗಂಗೆಯೇ ಆ ದೇಶದ ಸಂಸ್ಕೃತಿ. ಸಂಸ್ಕೃತಿ ಎಂದರೆ ಇದೇ, ಹೀಗೆ, ಎಂದು ವರ್ಣಿಸುವುದಕ್ಕಾಗದು. ಅದು ಜನರ ಜೀವನ ವಿಧಾನ. ಜನರ ನಡೆ, ನುಡಿ, ಆಚಾರ, ವಿಚಾರಗಳೇ ಸಂಸ್ಕೃತಿಯನ್ನು ರೂಪಿಸುತ್ತವೆ. ಪಶುಜೀವನವನ್ನು ಸಂಸ್ಕೃತಿ ಎನ್ನುವುದಿಲ್ಲ. ಮಾನವ ಜೀವನ ಮಾತ್ರ ಸಂಸ್ಕೃತಿಯ ಚೌಕಟ್ಟಿನಲ್ಲಿ ಶೋಭಿಸುತ್ತದೆ. ಏಕೆಂದರೆ, ಮಾನವನಲ್ಲಿ ಇತರ ಪ್ರಾಣಿಗಳಿಗಿಂತ ಶ್ರೇಷ್ಠವಾದ ಗುಣವಿದೆ. ಮಾನವ ಸಂಘಜೀವಿ. ಆತ ತನ್ನ ಅಲೆಮಾರಿ ತನವನ್ನು ಬಿಟ್ಟು ಸಂಘಜೀವಿಯಾಗಿ ಒಂದೆಡೆ ನೆಲೆ ನಿಂತು ಜೀವಿಸಲಾರಂಭಿಸಿದಂದಿನಿಂದಲೇ ಸಂಸ್ಕೃತಿಯ ಜನನ. ಗುಂಪು ಜೀವನದಲ್ಲಿ ಪ್ರತಿಯೊಬ್ಬರ ಆಚಾರ ವಿಚಾರಗಳು ಎಲ್ಲರೊಡನೆ ಹೊಂದುವಂತಿರಬೇಕು. ಎಲ್ಲರೂ ಎಲ್ಲರಿಗಾಗಿ ಬದುಕಿದಾಗ ಮಾತ್ರ ಗುಂಪುಜೀವನ ಸಾರ್ಥಕವಾಗ ಬಹುದು. ನಮ್ಮ ಪೂರ್ವಜರ ಜೀವನವನ್ನು ಹೀಗೆ ಅವಲೋಕಿಸಿದಾಗ ನಮಗೆ ಕಾಣುವುದು ಇದೇ. ಏಕತೆಯಿಂದಲೇ ಸಂಸ್ಕೃತಿ ಪೋಷಿತವಾಗಿದೆ. ಸಂಸ್ಕೃತಿಯೂ ಏಕತೆಯನ್ನು ಪೋಷಿಸಿದೆ. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಸಂಸ್ಕೃತಿ ನಿಂತ ನೀರಲ್ಲ, ಹರಿವ ಹೊಳೆ. ನಮ್ಮ ಭಾರತೀಯ ಸಂಸ್ಕೃತಿ ಸನಾತನವಾದುದು, ಪ್ರಸಿದ್ಧವಾದುದು. ಅದು ಕೂಡಾ ಕಾಲದಿಂದ ಕಾಲಕ್ಕೆ ಹಳೆ ಪೊರೆಗಳನ್ನು ಕಳಚಿ ಹೊಸ ಕವಚವನ್ನು ಧರಿಸುತ್ತಾ ಬಂದಿದೆ. ಆದರೆ ಮೊದಲಿನಿಂದಲೂ ಭಾರತೀಯ ಸಂಸ್ಕೃತಿಯ ಪ್ರಧಾನ ಲಕ್ಷಣ ಅಧ್ಯಾತ್ಮವೇ, ಮಾನವನಲ್ಲಿರುವ ಸುಪ್ತಚೇತನವನ್ನು ಜಾಗೃತಗೊಳಿಸ ಬಹುದಾದ ವಿದ್ಯೆ ಇದು. ಭಾರತದಲಿ ಅವತರಿಸಿದ ಎಲ್ಲಾ ಮಹಾಪುರುಷರೂ ಬೋಧಿಸಿದ್ದು-ನವ್ಯ ಸಮನ್ವಯ ಧರ್ಮವನ್ನು. ಸ್ವಾಮಿ ವಿವೇಕಾನಂದರು ಯುರೋಪ್, ಅಮೇರಿಕಾ ಇತ್ಯಾದಿಗಳೆಡೆಯಲ್ಲೂ ಪ್ರಚಾರ ಮಾಡಿದ್ದು. ಈ ಸಮನ್ವಯ ಧರ್ಮವನ್ನೇ, ದ್ವೈತಾದ್ವೈತ ವಿಶಿಷ್ಟಾದ್ವೆತಾದಿ ಸರ್ವ ಸಿದ್ಧಾಂತಗ್ರಾಹಿಯಾದ ಸಮನ್ವಯ ಧರ್ಮದ ಪೂರ್ಣ ದೃಷ್ಟಿಯನ್ನೇ. ಈ ದೃಷ್ಟಿ ವಿದೇಶೀ ಸಂಸ್ಕೃತಿಯ ಕಣ್ಣನ್ನೂ ತೆರೆಸಲಿಲ್ಲವೇ! ನಮ್ಮ ಸಂಸ್ಕೃತಿ ಎಂದು ಉಬ್ಬಿ ಹೊಗಳುವುದಲ ಆದರೆ ಸಂಘೇ ಶಕ್ತಿ ಕಲೌ ಯುಗೇ ಎಂದು ಉದ್ಗರಿಸಿದ್ದು ನಮ್ಮದೇ ಸಂಸ್ಕೃತಿ. ನಮ್ಮ ಪುರಾಣಗಳು, ದೇವರು, ಅವತಾರ, ಕಥೆಗಳು ಸುಳ್ಳೇ ಇರಬಹುದು, ಬರಿಯ ಕಾಲ್ಪನಿಕವಿರಬಹುದು. ಆದರೆ, ತಮ್ಮೊಳಗೆ ಒಂದಲ್ಲ ಒಂದು ಸತ್ಯವನ್ನಿಟ್ಟುಕೊಂಡೇ ಅವನು ಹುಟ್ಟಿರುವವೆಂಬುದು ಮಾತ್ರ ಸುಳ್ಳಲ್ಲ. ನಮ್ಮ ಪುರಾಣದ ಕಥೆಗಳನ್ನೊಂದೊಂದಾಗಿ ಅವಲೋಕಿಸಿ ನೋಡಿ. ಏಕತೆಯ ಮಹಿಮೆ ಕೊಂಡಾಡಲ್ಪಟ್ಟಿಲ್ಲವೇ? ದೇಶಪ್ರೇಮ ರಾರಾ ಜಿಸಿಲ್ಲವೇ? ಮಾತಾಪಿತೃಭಕ್ತಿ, ಭ್ರಾತೃಪ್ರೇಮ, ಸ್ವಾಮಿನಿಷ್ಠೆ ಇತ್ಯಾದಿಗಳ ಕಳೆಯೇರಿಲ್ಲವೇ?

  ಆಧುನಿಕ ಕಾಲದಲ್ಲೂ, ಭಾರತಕ್ಕೆ ಪರಕೀಯರ ಆಕ್ರಮಣವಾದಾಗ ಜನರೆಲ್ಲ ಒಂದಾಗಿ ಅವರನ್ನು ಹಿಮ್ಮೆಟ್ಟಿಸಿದರು. ಶರಣೆಂದು ಪ್ರಾರ್ಥಿಸಿ ಬಂದವರನ್ನು ಹಿಡಿದೆತ್ತಿದರು. ತಲೆ ಬಾಗುತ ಶರಣೆಂಬುದು ನಮಗೊಗ್ಗದು ಸಲ್ಲ, ಶರಣೆನ್ನುತ ಬಂದವರನು ಕೈ ಬಿಡುವವರಲ್ಲ – ಎಂದು ಕವಿವಾಣಿ ಉಲಿಯುವಂತೆ ಮಾಡಿದ್ದು – ನಮ್ಮದೇ ಸಂಸ್ಕೃತಿ. ಅದೇ ಏಕತೆಯ ಪೋಷಕ. ನಮ್ಮ ಇತಿಹಾಸದ ಅವಲೋಕನೆಯಿಂದ ನಮಗೆ ಇನ್ನೊಂದು ಸತ್ಯವೂ ತಿಳಿಯುತ್ತದೆ. ಯಾವಾಗ ಸಂಸ್ಕೃತಿಯ ಅವಹೇಳನವಾಗಿತ್ತೋ, ಆಗಲೇ ಏಕತೆಯ ತಂತೂ ಕಡಿದುಹೋಗಿತ್ತು. ಏಕತೆ ಎಂದರೆ ಪರರಿಗೆ ಮಾರಿಯಾಗುವುದಿಲ್ಲ. ಅದು ನಮ್ಮ ಸಂಸ್ಕೃತಿಯೂ ಅಲ್ಲ.

  ಸಂಸ್ಕೃತಿ ಮತ್ತು ನಾಗರಿಕತೆ ಒಂದಕ್ಕೊಂದು ಸಂಬಂಧಿ. ಸಂಸ್ಕೃತಿಯದ್ದು ಅಂತರ್ಮುಖವಾದರೆ, ನಾಗರಿಕತೆ ಬಹಿರ್ಮುಖಿ. ಸಂಸ್ಕೃತಿಯಂತೆ ನಾಗರಿಕತೆ, ನಾಗರಿಕತೆಯಂತೆ ಸಂಸ್ಕೃತಿ. ಇದು ಅರ್ಥವಾಗಬೇಕಾದರೆ, ಪುನಃ ಇತಿಹಾಸದತ್ತ ಕಣ್ಣು ಹಾಯಿಸಬೇಕು. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನೇ ಗಮನಿಸಿದರೂ ಸಾಕು – ಪರಕೀಯರ ಎಂದರೆ ನಮ್ಮ ಸಂಸ್ಕೃತಿಗೆ ಒಗ್ಗದ ಆಕ್ರಮಣವನ್ನು ನಮ್ಮ ಸಂಸ್ಕೃತಿ ಒಪ್ಪದಾಯಿತು. ’ನಾಗರಿಕ’ ರೆಲ್ಲರೂ ತಿರುಗಿಬಿದ್ದರು. ಎಂದರೆ ಅಂದು ಸಂಸ್ಕೃತಿಯ ನೆರಳಲ್ಲಿ ಏಕತೆ ಚಿಗುರಿತು. ಫಲವನ್ನೂ ಕೊಟ್ಟಿತು. ನಾವಿಂದು ಅನುಭವಿಸುತ್ತಿರುವ ಆ ಫಲವೇ ನಮ್ಮ ಸ್ವಾತಂತ್ರ್ಯ ಪ್ರಜಾಪ್ರಭುತ್ವ. ಜನರ ಮನದಲ್ಲಿ ಏಕತೆ-ಭಾವೈಕ್ಯತೆ ಮೂಡಬೇಕಾದರೆ, ಪರಸ್ಪರ ತಿಳುವಳಿಕೆ, ಹೊಂದಾಣಿಕೆ ಅತ್ಯಗತ್ಯ. ಈ ಹೊಂದಾಣಿಕೆ ಎಂಬುದು ಬಲು ಕಷ್ಟ. ಪಾಶ್ಚಾತ್ಯ ಸಂಸ್ಕೃತಿ ನಮಗೆ ಹೇಳುವುದು ಇದನ್ನೇ. ಪರಸ್ಪರ ವಿಕರ್ಷಿಸಲ್ಪಡುತ್ತಿರುವ ಜನರ ಹೃದಯಗಳನ್ನು ಬಾಂಧವ್ಯ ತಂತಿಯಿಂದ ಮತ್ತೆಂದೂ ಬೇರ್ಪಡದಂತೆ ಕಟ್ಟಬೇಕಾದರೆ, ತಂತಿಯೂ ಗಟ್ಟಿಯಿರಬೇಕು. ಕಟ್ಟುವವನೂ ಚಾಣಾಕ್ಷನಿದ್ದು, ಸಮರ್ಥನಿರಬೇಕು. ಭಾರತೀಯ ಸಂಸ್ಕೃತಿ ಅನಾದಿಕಾಲದಿಂದ ಈ ಸಾಮರ್ಥ್ಯವನ್ನು ಹೊಂದಿದೆ. ಉಳಿದ ಜನಾಂಗಗಳ ಸಂಸ್ಕೃತಿ ಸಾಮಾನ್ಯವಾಗಿ ಹೇಳುವುದಾದರೆ ವಿಜ್ಞಾನ ಮತ್ತು ತತ್ವಶಾಸ್ತ್ರಗಳ ಮೂಲಕವೇ ಸತ್ಯದತ್ತ ಸಾಗಲು ಪ್ರಯತ್ನಿಸುತ್ತಿದೆ. ಆಧುನಿಕ ವಿಚಾರಪರ ವಿಜ್ಞಾನಯುಗದಲ್ಲೂ, ಆ ಸಂಸ್ಕೃತಿ ಬೆಳೆಸಿದ್ದು ಮತ್ಸರವನ್ನೇ ಹುಟ್ಟಿಸಿದ್ದು-ಯುದ್ಧವನ್ನೇ, ಮೂಡಿಸಿರುವುದು ಮೂರನೆ ಮಹಾ ಘೋರ ಯುದ್ಧದ ಭೀತಿಯನ್ನೇ. ನಡೆದುಹೋದ ಆ ಎರಡು ಘೋರ ಮಹಾಯುದ್ಧ ಗಳನ್ನು ಯಾರು ಮರೆತಾರು? ಅದೇ ಸಂಸ್ಕೃತಿಯನ್ನು ನಾವಿಂದು ಕೈಚಾಚಿ ಅಪ್ಪಿಕೊಳ್ಳಲು ಹೊರಟಿದ್ದೇವೆ – ವಿಪರ್ಯಾಸವಲ್ಲವೇ?

  ಹಾಗೆಂದು ನಮ್ಮ ಸಂಸ್ಕೃತಿಯ ಹುರುಳಿಲ್ಲದ ಜೊಳ್ಳುಗಳಿಲ್ಲವೇ? ಇಲ್ಲವೆಂದೇನಿಲ್ಲ. ಆದರೆ ಅದೇ ಮುಖ್ಯವಲ್ಲ. ಮುಖ್ಯವಾಗಿ, ಇತ್ತೀಚಿಗೆ ಪ್ರಗತಿಪರ ಸಮಾಜದ ಕೆಂಗಣ್ಣಿಗೆ ಗುರಿಯಾಗುತ್ತಿರುವುದು ಪುರಾತನವಾದ ವರ್ಣವ್ಯವಸ್ಥೆ, ಜಾತಿಪದ್ಧತಿ. ಆದರೆ, ಅವು ಆಯಾಕಾಲದಲ್ಲಿ ಜನರ ಏಕತೆಯನ್ನು ವೃದ್ಧಿಸಿದ್ದವು. ಜೀವನವನ್ನು ಸುಗಮಗೊಳಿಸಿದ್ದವು ಎಂಬುದನ್ನು ಮರೆಯುವಂತಿಲ್ಲ. ಕಾಲಕ್ರಮೇಣ ಕೆಲವೊಂದು ರೂಪಾಂತರ ಹೊಂದಿ ಕೆಲವೊಂದು ಸಂದರ್ಭಗಳಲ್ಲಿ ಅಸಹನೀಯ ಎನಿಸಿರಬಹುದು. ಆ ಅಸಹನೆಯನ್ನು ತಗ್ಗಿಸಲು ಬೇಕಾದ ಕೆಲವೊಂದು ಅಗತ್ಯ ಸುಧಾರಣೆ ಸಂಸ್ಕೃತಿಗೂ ಅಗತ್ಯವಿದೆ. ಆದರೆ, ಹಾಗೆಂದು ಇಡಿಯ ಸಂಸ್ಕೃತಿಯನ್ನೇ ಬುಡಮೇಲು ಮಾಡಹೊರಟರೆ, ಅಪಾಯ ಕಟ್ಟಿಟ್ಟ ಬುತ್ತಿ.

  ಆಯಾ ಜನಾಂಗಕ್ಕೆ ತನ್ನದೇ ಆದ ಒಂದು ಉದ್ದೇಶವಿರುತ್ತದೆ. ಸಂಸ್ಕಾರವಿರುತ್ತದೆ. ನಮ್ಮ ಭಾರತದಲ್ಲಿ ಏಕತೆಯಿತ್ತು ಎಂದು ಒಪ್ಪಿಕೊಂಡಾಗಿದೆ. ಆದರೆ, ಭಾರತೀಯರಿಗೆ ಎಂದಿಗೂ ಸಂಪತ್ತೇ ತಮ್ಮ ಜೀವನದ ಉದ್ದೇಶವಾಗಿರಲಿಲ್ಲ. ಸಂಪದ್ಭರಿತವಾಗಿದ್ದಾಗಲೂ ಮದ ಬಂದಿರಲಿಲ್ಲ. ದುರ್ಬಲ ರಾಷ್ಟ್ರಗಳನ್ನು ಪೀಡಿಸುತ್ತಿರಲಿಲ್ಲ. ಸಂಪತ್ತಿಗಾಗಿ, ಗೆಲುವಿಗಾಗಿ ಬೇರೆ ರಾಷ್ಟ್ರದ ಮೇಲೆ ದಂಡೆತ್ತಿ ಹೋಗಿರುವುದು ನಮಗೆ ಕಾಣಿಸುವುದಿಲ್ಲ. ಅಧಿಕಾರಕ್ಕೆ ಅಂಟಿಕೊಳ್ಳಲಿಲ್ಲ, ಕೀರ್ತಿ ಬಯಸಲಿಲ್ಲ. ಇಂದು ಪರಕೀಯರ ಆಕ್ರಮಣವನ್ನು ಗುರುತಿಸ ಲಾರದಷ್ಟು, ನಮ್ಮ ಸಂಸ್ಕೃತಿಗೆ ಜಡತೆಯ ಕಿಲುಬು ಹಿಡಿದಿದೆ. ಕತ್ತಿ, ಕೋವಿ ಹಿಡಿದು ಬರದಿದ್ದ ರೇನಾಯಿತು? ಸೌಮ್ಯ ವೇಷದಲ್ಲಿ ಬರುವವರಿಂದ ನಮ್ಮ ಸಂಸ್ಕೃತಿಯನ್ನು ರಕ್ಷಿಸುವವರಿಲ್ಲ. ಸಂಸ್ಕೃತಿ ಎಂದರೇ ಮೂಗು ಮುರಿಯುವ ಮನೆಹಾಳ ಮಕ್ಕಳೇ ಭಾರತಾಂಬೆಯ ಶತ್ರುಗಳಾಗುತ್ತಿದ್ದಾರೆ. ವಿದೇಶ ಎಂದರೆ ನಮಗೇನೋ ವ್ಯಾಮೋಹ. ಪರಿಣಾಮ – ನಮ್ಮ ರಾಷ್ಟ್ರೀಯತೆಯ ಬುಡವೇ ಅಲ್ಲಾಡುತ್ತಿದೆ. ನಮ್ಮೊಳಗಿನ ಶತ್ರುಗಳನ್ನು ನಾವು ಗುರುತಿಸಲಾರದಾಗಿದ್ದೇವೆ. ಭಷ್ಟಾಚಾರ, ಅನ್ಯಾಯ, ಅನಾಚಾರ, ಭಯೋತ್ಪಾದನೆಗಳು ವಿಕಟಾಟ್ಟ ಹಾಸಗೈಯುತ್ತಿವೆ. ಇವೆಲ್ಲವುಗಳಿಂದ ಮುಕ್ತಿ ಪಡೆಯಲು ಇರುವ ಏಕೈಕ ಮಾರ್ಗ ಸಂಸ್ಕೃತಿಯ ರಕ್ಷಣೆ. ಇಂದು ಸಾಮ್ರಾಜ್ಯ ತತ್ವ, ನಿರಂಕುಶ ಪ್ರಭುತ್ವ ಮತ್ತು ಪ್ರಜಾಪ್ರಭುತ್ವಗಳ ನಡುವೆ ಸ್ಪರ್ಧೆ ನಡೆಯುತ್ತಿದೆ. ಶ್ರೀಮಂತ ಮತ್ತು ಬಡವರ ನಡುವಿನ ಅಂತರ ಅಸಹಜ ಪರಿಣಾಮವನ್ನುಂಟು ಮಾಡುತ್ತಿದೆ. ರಾಷ್ಟ್ರಗಳ ಪರಸ್ಪರ ಸಂಬಂಧವೂ ಹಳಸುತ್ತಿದೆ. ಅನ್ಯಾಯ, ಮೋಸ, ವ್ಯಕ್ತಿಜೀವನದಲ್ಲಿನ ಧರ್ಮ ಮತ್ತು ಸ್ವಾತಂತ್ರ್ಯಗಳ ಲೋಪಗಳು ಮಿತಿ ಮೀರುತ್ತಿವೆ. ಇವೆಲ್ಲವುಗಳಿಂದ ಪರಿಹಾರ ಸಿಗಬೇಕಾದರೆ ಒಂದೇ ಒಂದುಪಾಯ – ಸಂಸ್ಕೃತಿಯ ರಕ್ಷಣೆ.

  ವ್ಯಕ್ತಿಗಳ ನಡುವೆ ಭಾವೈಕ್ಯತೆ ಇರಬೇಕಾದರೆ, ಸಮಾಜ ಸುವ್ಯವಸ್ಥಿತವಾಗಿರಬೇಕು. ಅದು ಅಲ್ಲಿನ ಆಡಳಿತವನ್ನವಲಂಬಿಸಿದೆ. ನಮ್ಮ ಇಂದಿನ ರಾಜಕೀಯ ವ್ಯವಸ್ಥೆ, ಅತಂತ್ರ ಆಡಳಿತ ಎಂಥಾ ವ್ಯಕ್ತಿಯನ್ನೂ ರೊಚ್ಚಿಗೆಬ್ಬಿಸಬಹುದು. ಏಕತೆಯನ್ನು ನುಚ್ಚುನೂರಾಗಿಸಬಹುದು. ವ್ಯಕ್ತಿ ಸ್ವಾತಂತ್ರ್ಯ ಇಂದು ಸಮಾಜ ಜೀವನಕ್ಕೆ ಧಕ್ಕೆಯುಂಟು ಮಾಡುವ ಹಂತಕ್ಕೇರಿದೆ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾಜದ ಬಗೆಗಿನ ಸಮನ್ವಯ, ರಾಷ್ಟ್ರಿಯತೆ ಮತ್ತು ವಿಶ್ವದೃಷ್ಟಿಗಳ ಮಿಳಿತ ನಮಗೆ ಆದರ್ಶವಾಗಬೇಕು. ಹೀಗಿದ್ದರೆ ಸಂಸ್ಕೃತಿಯ ರಕ್ಷಣೆಯೂ ಆಗುತ್ತದೆ. ಅದರ ನೆರಳಿನಂತಿರುವ ಏಕತೆಯ ಪೋಷಣೆಯೂ ಆಗುತ್ತದೆ. ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ, ಅದರಲ್ಲಿನ ಏಕತೆಯ ಮಧುರ ಅನುಭವವಾಗಬೇಕಾದರೆ, ಒಂದು ಕಥೆಯನ್ನು ಕೇಳಿ. ಒಂದು ಶಾಲೆ. ಅದರ ಪಕ್ಕದಲ್ಲೇ, ಎರಡು ಮೂರು ಕುಟುಂಬಗಳು ಕಲ್ಲಿನ ಕೆಲಸದಲ್ಲಿ ನಿರತವಾಗಿದ್ದವು. ಆ ಕುಟುಂಬಗಳಲ್ಲಿ ಸಣ್ಣ ಪುಟ್ಟ ಮಕ್ಕಳೂ ಇದ್ದರು. ಒಂದು ದಿನ ಶಾಲೆಯಲ್ಲಿ ಒಬ್ಬ ಹುಡುಗ ತನ್ನ ಹುಟ್ಟುಹಬ್ಬದ ಸಲುವಾಗಿ, ತರಗತಿಗೆಲ್ಲ ಲಾಡು ಹಂಚಿದ. ಪಾಠ ಮಾಡುತ್ತಿದ್ದ ಅಧ್ಯಾಪಕರು ಅತ್ತಿತ್ತ ನೋಡುವಾಗ, ಅಲ್ಲಿಯೇ ಮಣ್ಣಲ್ಲಿ ಹೊರಳಾಡುತ್ತಾ ಅಳುತ್ತಿದ್ದ ಕಲ್ಲು ಒಡೆಯುವ ಕುಟುಂಬದ ಮಗುವನ್ನು ಕಂಡರು. ಲಾಡನ್ನು ಆ ಮಗುವಿಗೆ ನೀಡಿದರು. ಆ ಮಗು ಅಳುತ್ತಿದ್ದರೂ, ತನಗೆ ಸಿಕ್ಕಿದ ಲಾಡನ್ನು ತನ್ನಮ್ಮನಿಗೆ ಹೋಗಿ ನೀಡಿತು. ಆ ಅಮ್ಮನೇನು ಮಾಡಿದಳು ಬಲ್ಲಿರಾ? ಸುತ್ತ ಆಡುತ್ತಿದ್ದ ಎಲ್ಲಾ ಮಕ್ಕಳನ್ನೂ ಕರೆದು, ಆ ಪುಟ್ಟ ಲಾಡನ್ನು ಹಂಚಿದಳು. ಇದೇ ಅಲ್ಲವೇ ಭಾರತೀಯ ಸಂಸ್ಕೃತಿ? ಒಬ್ಬನುಣುವೂಟದಲಿ ಸವಿಯಿಲ್ಲ, ಸೊಗವಿಲ್ಲ – ಎನ್ನುವ ಸಂಸ್ಕೃತಿಯ ಹಿರಿಮೆ ವರ್ಣಿಸಲಸದಳವೇ. ಸಂಸ್ಕೃತಿಯ ಅರ್ಥವನ್ನು ತಪ್ಪಾಗಿ ಗ್ರಹಿಸುವುದು ವ್ಯಕ್ತಿಯ, ಸಮಾಜದ, ರಾಷ್ಟ್ರದ ಉಳಿವಿಗೆ, ಅಭಿವೃದ್ಧಿಗೆ ಮಾರಕ. ಸಂಸ್ಕೃತಿ ಜೀವನಮಾರ್ಗ, ತತ್ತ್ವಸಾಧನೆಯಲ್ಲ. ಬರಿಯ ತತ್ತ್ವಸಾಧನೆಯಾದರೆ ಸಂಸ್ಕೃತಿ ಬರಡಾಗುತ್ತದೆ, ಕೊರಡಾಗುತ್ತದೆ, ಅರ್ಥಹೀನವಾಗುತ್ತದೆ. ತತ್ತ್ವ ಒಂದಲ್ಲ ಒಂದು ದಿನ ಅರ್ಥ ಕಳಕೊಂಡರೆ ಬರಡು ಜೊಳ್ಳು ಜರಿದು ಬೀಳುತ್ತದೆ. ಸರ್ವಧರ್ಮ ಸಹಿಷ್ಣುತೆಯು ನಮ್ಮ ಸಂಸ್ಕೃತಿಯ ವೈಶಿಷ್ಟ್ಯ. ಇದರಿಂದಲೇ ನಮ್ಮಲ್ಲಿನ ಏಕತೆಯೂ ದೃಢವಾಗಿತ್ತು. ಆದರೆ ಬರಿಯ ಸಹಿಷ್ಣುತೆ ಇದ್ದರೆ, ಅದು ಔದಾಸೀನ್ಯದಲ್ಲಿ ಪರ್‍ಯಾವಸಾನಗೊಳ್ಳಬಹುದು. ಸಹನೆಯೊಂದಿಗೆ ಸಹಕಾರವೂ ಅತ್ಯಗತ್ಯ. ಆಗಲೇ ಏಕತೆಯೂ ಬಲಗೊಳ್ಳುತ್ತದೆ. ಇಂದು ಸಮಾಜವನ್ನು ಆವರಿಸಿರುವ ವಿಷಕಿಲ್ಬಿಷಗಳನ್ನು ಶುದ್ಧಿಗೊಳಿಸಲು ನಾವು ಮರೆಯುತ್ತಿರುವ ಆಧ್ಯಾತ್ಮವಿದ್ಯೆಯನ್ನು ನೆನಪಿನ ಪರದೆಗೆ ಎಳೆದು ತರಬೇಕಿದೆ.

  ಏಕತೆ ಎಂದರೆ ನಾವೆಲ್ಲ ಒಂದೆಂಬ ಭಾವ. ತಾನು, ತನ್ನದು ಎಂಬ ನರಕದಿಂದ ಮೇಲೆದ್ದು, ಎಲ್ಲರೂ ತನ್ನವರು ಎಂಬ ವಿಶಾಲ ಸ್ವರ್ಗದತ್ತ ಸಾಗುವುದೇ ಏಕತೆ. ಇದೇ ನಮ್ಮ ಸಂಸ್ಕೃತಿ. ಪ್ರಸ್ತುತ ನಮ್ಮ ಮುಂದಿರುವ ಸಮಸ್ಯೆಗಳಿಗೂ, ಮುಖ್ಯವಾಗಿ ಏಕತೆಯ ಕೊರತೆಗೆ, ಪರಿಹಾರ ಸಂಸ್ಕೃತಿಯ ರಕ್ಷಣೆ. ರಾಷ್ಟ್ರೀಯತೆ, ವಿಶ್ವದೃಷ್ಟಿಗಳ ಸಮನ್ವಯವೂ ಸಂಸ್ಕೃತಿಯ ರಕ್ಷಣೆಯಿಂದ ಸಾಧ್ಯ. ಅಯಂ ನಿಜಃ ಪರೋವೇತಿ ಗಣನಾ ಲಘು ಚೇತಸಾಂ| ಉದಾರ ಚರಿತಾನಾಂತು ವಸುಧೈವ ಕುಟುಂಬಕಂ – ತಾನು ಶ್ರೇಷ್ಠ, ಪರರು ನಿಕೃಷ್ಟರು ಎಂದು ಚಿಂತಿಸುವವರು ಸಂಕುಚಿತ ಮನಸ್ಸುಳ್ಳವರು. ಅದು ನಮ್ಮ ಸಂಸ್ಕೃತಿಯಲ್ಲ. ವಿಶ್ವವೆಲ್ಲಾ ಒಂದೇ ಎಂಬ ಉದಾರ ಭಾವವೇ ಏಕತೆ. ಅದೇ ನಮ್ಮ ಭವ್ಯ ಸಂಸ್ಕೃತಿ.

  ಸಂಸ್ಕೃತಿಯ ಸಂರಕ್ಷಣೆಯ ಮೂಲಕ ರಾಷ್ಟ್ರೀಯ ಏಕತೆ :- ಈವರೆಗೆ 8 ಪ್ರತಿಕ್ರಿಯೆಗಳು

  1. nithya.s

   wow

  2. nithya.s

   this is going to be helpful

  3. suma p

   It was very nice & it become very benefit to me, so i thankful to you.

  4. chandana

   It’s very intresting and we can use the points for essays

  5. chinnu

   it is non comment able

  6. ANKITHA

   VRY USEFUL

  7. johnson

   very nice

  8. Madhushree

   Vry informative & useful

  ಪ್ರತಿಕ್ರಿಯಿಸಿ :