• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಚರ್ಚೆಗೊಂದು ಚಾವಡಿ

    ’ಮದುವೆ’ -ಬಂಧವೋ,ಬಂಧನವೋ?

    September 17th, 2008.


    - ಸುಧಾ. ಎಂ ಕರ್ಕಿಸವಲು

    ಚೈತ್ರರಶ್ಮಿಯ ಜುಲೈ ಸಂಚಿಕೆಯಲ್ಲಿ ಮಹಾಬಲಭಟ್ ಅವರು ಮದುವೆಯ ಕುರಿತು ’ಬಂಧನವದೇನಲ್ಲ-ಜೀವ

    ಜೀವ ಪ್ರೇಮ’ ಎಂದು ವ್ಯಾಖ್ಯಾನಿಸಿದ್ದರು. ಆ ಚರ್ಚೆಯ ಮುಂದುವರೆದ ಭಾಗವಾಗಿ ಸುಧಾ.ಎಂ ಅವರು ಮದುವೆಯ ಕುರಿತ ತಮ್ಮ ಭಾವನೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

    ಗಂಡು-ಹೆಣ್ಣಿನ ಮಿಲನದ ಕುರಿತು ಹಿರಿಯರ, ಅನುಭವಸ್ಥರ ನುಡಿಯೇ ಚೆನ್ನವೆನಿಸುತ್ತದೆ. ಏಕೆಂದರೆ ಸಂತೃಪ್ತ ಜೀವನ ಉಂಡ ಅವರ ಬದುಕಲ್ಲಿ ಕಾಮ- ಪ್ರೇಮ ಇವೆರೆಡೇ ಜೀವನವಾಗಿರಲಿಲ್ಲ. ಸುಖ ದಾಂಪತ್ಯಕ್ಕೆ ಬೇಕಾಗಿದ್ದು ದೈಹಿಕ, ಮಾನಸಿಕ, ಅಧ್ಯಾತ್ಮಿಕ, ಸಂಸ್ಕಾರದ ಮಾರ್ಗದರ್ಶನ.

    ಸಪ್ತಪದಿ ಜೋಡಿಯಾಗೇ ತುಳಿತೇವೆ. ಅಂದ ಮೇಲೆ ಅಲ್ಲಿ ಸಮರಸ ಕೂಡಿರಬೇಕು. ಸಂಕಟ ಬಂದಾಗ ಹೆಂಡತಿಯನ್ನು ದೂಷಿಸುತ್ತಾ, ಸುಖವಿದ್ದಾಗ ಲೋಲುಪತೆ ಮಗ್ನವಾದರೆ, ಸಮರಸ ಬರಲು ಸಾಧ್ಯವಾ? ಆನಂದವೆಂದರೆ ದಿಢೀರ್ ಧುಮುಕುವ ಜಲಪಾತವೆ? ಸಂಯಮ, ತಾಳ್ಮೆ, ತ್ಯಾಗಗಳ ನೀರೆರೆದು ಪ್ರೇಮದ ಬಳ್ಳಿ ಆರೋಗ್ಯಕರವಾಗಿ ಚಿಗುರಿ, ಬೆಳೆದು, ಕಾಯಾಗಿ ಅನುಭವ ಜ್ಞಾನಗಳ ಮೂಸೆಯಲ್ಲಿ ಹಣ್ಣಾಗಿ ಸಿಗುವ ರಸವೇ ಈ ಸುಖ. ಸಪ್ತಪದಿಯ ಏಳನೆಯ ಹೆಜ್ಜೆ - ಸಖಾಸಪ್ತಪದೀಭವ - ಸ್ನೇಹಕ್ಕಾಗಿ ಈ ಜೋಡಿಹೆಜ್ಜೆ ಅಂದಾಗ ಮದುವೆಯ ಜೀವಾಳವೇ ಸ್ನೇಹ. ಮನಬಿಚ್ಚಿ ಚಿಂತನೆಗಳನ್ನು ಹಂಚಿಕೊಳ್ಳುವ ಪ್ರಾಮಾಣಿಕತೆ ; ಲೋಪ - ದೋಷಗಳನ್ನು ಇದ್ದಂತೆ ಒಪ್ಪಿಯು ಬೇಸರಗೊಳ್ಳದಿರುವುದು; ಸ್ವಯಂ ಸಮಾನತೆಯನ್ನು ಪಾಲಿಸುವುದು; ಯಾರೊಬ್ಬರ ದಬ್ಬಾಳಿಕೆಯಿಲ್ಲದೇ ಏಕಕಾಲದಲ್ಲಿ ಈ ಸ್ವಾತಂತ್ರ್ಯವನ್ನೂ, ಪರಸ್ಪರರಿಗೆ ಶರಣಾಗುವುದನ್ನು ಅನುಭವಿಸುವ ಸ್ಥಿತಿ ಈ ಸ್ನೇಹ. ಮಿತ್ರರಿಗಲ್ಲ, ದಾಂಪತ್ಯದಲ್ಲಿ ಇದು ಅನ್ವಯವಾಗಬೇಕು. ಆಗ ಎರಡು ದೇಹಗಳ ಮನಸ್ಸು ಸರಳ ಸುಂದರ ಸುಭದ್ರವಾಗಿ ಬೆಸೆಯಲು ಕಾರಣವಾಗುತ್ತದೆ. ಯಾಕೆ ಯಾರೂ ವಿವಾಹಬಂಧನದ ಬಗ್ಗೆ ಈ ರೀತಿ ಯೋಚಿಸಲಾರರು? ಕೇವಲ ದೈಹಿಕ ಸುಖಕ್ಕೆ ಮದುವೆಯಾ? ಮುಂದಿನ ಪೀಳಿಗೆಗಾಗಿ ಈ ಶಾಸ್ತ್ರವಾ? ಮಕ್ಕಳನ್ನು ಪಡೆಯಬೇಕೆಂಬ ವಾಂಛೆಗೆ ಹೆಣ್ಣು ಬೇಕಾ? ಎಷ್ಟೋ ಗಂಡು ಮತ್ತು ಹೆಣ್ಣಿನ ಮನಸ್ಥಿತಿಗಳು ಹೀಗೆ. ಬಹುಶಃ ೧೮-೨೦ ರ ಹರೆಯದಲ್ಲಿ ನನ್ನ ಅಲೋಚನೆ ಕೂಡಾ ಹಾಗೇ ಇತ್ತೇನೋ? ಮದುವೆ ಬಂಧನ ಅಲ್ಲವೆಂದು ಹೇಳಲು ಸಾಧ್ಯವೆ? ಬಂಧನ ಎಂಬುದು ಒಂದು ಕೊಂಡಿ. ಕೊಂಡಿ ಕೂಡಿ ಇರುವಷ್ಟು ಕಾಲ ಬಂಧನ. ಕೊಂಡಿ ಕಳಚಿತೋ ಒಂಟಿತನ. ಮುಸ್ಸಂಜೆ ಪಯಣದಲಿ ಸಖೀಗೀತವಿದ್ದರೆಷ್ಟು ಚೆನ್ನ. ಬಹುಶಃ ಗಂಡಿಗೆ ಒಂಟಿತನ ಕಾಡುವುದು ಬದುಕಿನ ಸಂಧ್ಯಾಕಾಲದಲ್ಲಿ. ಮಕ್ಕಳಿರಲಿ, ಮೊಮ್ಮಕ್ಕಳಿರಲಿ, ಸೊಸೆಯಿರಲಿ ಆದರೂ ಹೆಂಡತಿ ತನ್ನ ಜೊತೆಯಿರಬೇಕೆಂಬ ಬಯಕೆ ಇದ್ದೇ ಇರುತ್ತದೆ.

    ನನಗೆ ತಿಳಿದ ಮಟ್ಟಿಗೆ ನಮ್ಮ ಹಳ್ಳಿಗಳಲ್ಲಿ ಹೆಣ್ಣನ್ನ ಮನೆಕೆಲಸದ ಹೊರತಾಗಿ ಸಾಮಾಜಿಕವಾಗಿ ತನ್ನ ಕರ್ತವ್ಯ ಮಾಡಲು ಎಡೆ ಮಾಡಿಕೊಡುವುದಿಲ್ಲ. ಕೇವಲ ಮನೆಗೆ ಮಾತ್ರವೇ ಸೀಮಿತಳು ಎಂಬ ಭಾವನೆ ಇದೆ. ತನ್ನ ಅಂಕೆಯಲ್ಲಿ ತಾನಿದ್ದು ತಮ್ಮ ಕೆಲಸ ನಿರ್ವಹಿಸಿಕೊಂಡು ಹೋಗಬಲ್ಲಳಾದರೂ ಹೆಣ್ಣನ್ನು ಅನುಮಾನದಿಂದಲೇ ನೋಡಲಾಗುತ್ತದೆ. ಯಾಕೆ? ಗಂಡ - ಹೆಂಡತಿಯಲ್ಲಿ ಪರಸ್ಪರ ಪ್ರೀತಿ ವಿಶ್ವಾಸಕ್ಕೆ ಬೆಲೆಯಿಲ್ಲವಾ? ಕೇವಲ ಬೇಕು ಬೇಡ ಇವುಗಳಿಗಾಗಿ ಮದುವೆಯಾ? ಕೆಲವೊಮ್ಮೆ ಇಂತ ವಿಚಾರಗಳೆಲ್ಲ

    ಬರುವಾಗ ಅಸಹ್ಯವಾಗುತ್ತದೆ. ಕಾರಣ ಹೆಣ್ಣು ಅಥವಾ ಗಂಡು ಇಬ್ಬರಲ್ಲೂ ನೋಡುವ ದೃಷ್ಟಿ ಒಂದು

    ರೀತಿಯ ವಾಂಛೆ. ಹೆಣ್ಣು ಎಂದಾಕ್ಷಣ ದೊಡ್ಡವಳಾದಂತೆ ನಲವತ್ತು ವರ್ಷವಾದರೂ ಬೇರೆ ದೃಷ್ಟಿ ಕೋನದಿಂದ

    ನೋಡುತ್ತಾರಲ್ಲ. ಎಷ್ಟೋ ಬಾರಿ ಈ ಹೆಣ್ಣುಗಳೂ ಹಾಗೆ ಭೃಂಗದ ಹಿಡಿದು ಸಾಗುತ್ತವೆ. ಇಷ್ಟೇನಾ ಈ

    ಬದುಕು ಎಂದರೆ……

    ನಾನು ಬದುಕು ನೋಡುವ ದೃಷ್ಟಿಕೋನವೇ ಬೇರೆ. ಗಂಡ ಹೆಂಡತಿ ಸಂಬಂಧವೆಂದರೆ ಹೊರಲು ಹೆರಲಷ್ಟೇ ಅಲ್ಲ. ಬಂಧನದೊಳಗೆ ಕೂಡಿಡುವುದೂ ಅಲ್ಲ. ಮನೆಕೆಲಸಕ್ಕೆ ಸೀಮಿತವಲ್ಲ. ಎಲ್ಲ ಕ್ಷೇತ್ರದಲ್ಲೂ ಮಿಂಚಬೇಕು. ಕೊನೇ ಪಕ್ಷ ತನಗೆ ಆಸಕ್ತಿಯಿರುವ ಯಾವುದಾದರೂ ಒಂದು ವಿಷಯದಲ್ಲಾದರೂ ಗುರುತಿಸಿಕೊಳ್ಳಬೇಕು. ಗಂಡನ ಹೆಸರಿನಡಿ ನಮ್ಮ ಹೆಸರು ವಿರಾಜಿಸುವುದಲ್ಲ. ನಾವು ನಾವಾಗಿದ್ದು ನಮ್ಮನ್ನು ಗುರುತಿಸಿಕೊಳ್ಳಬೇಕು. ಅದವಳ ಸಾಧನೆ. ಇನ್ನುಳಿದದ್ದು ಸಾಮರಸ್ಯ, ಹೊಂದಾಣಿಕೆ, ಸಹನೆಗಳಲ್ಲಿ ಬದುಕು

    ರೂಢಿಸಿಕೊಳ್ಳುವುದು. ಇದ್ದಿದ್ದರಲ್ಲೇ ಸುಖ-ನೆಮ್ಮದಿ ಕಂಡುಕೊಳ್ಳುವುದು. ಇಲ್ಲದಿರುವುದಕ್ಕೆ ಕೊರಗುತ್ತಾ ಶಾಂತಿ ಕದಡಿಕೊಳ್ಳದಿರುವುದು. ಸಂಸಾರ, ಮನೆಯೆಂದರೆ ಅದೇ ಆಗಿರಬೇಕು. ಅನ್ಯೋನ್ಯತೆಯೊಡನೆ, ನಂಬಿಕೆಯೊಡನೆ ಜೀವನ ನಡೆಸಬೇಕು. ಈಗಿನ ಕಾಲದಲ್ಲಿ ದಾಂಪತ್ಯವೆಂದರೆ ಇಂದು ಮದುವೆಯಾಗಿ ನಾಳೆ ಕೂಡಿ, ನಾಡಿದ್ದು ಡೈವೋರ್ಸ್ ಪಡೆಯುವಲ್ಲಿಗೆ ಹೋಗಿ ತಲುಪಿದೆ. ಪರಸ್ಪರ ವಿಚಾರ ವಿನಿಮಯವಾದರೂ ನಡೆಯಬೇಕು. ಯಾವುದೂ ಇರುವುದಿಲ್ಲ. ಇದು ನನ್ನ ಅನಿಸಿಕೆ.

    ನಾನು ಬಡವಿ, ಆತ ಬಡವ. ಕವನದ ಸಾಲಿನಂತೆ ಎಲ್ಲ ಸಂದರ್ಭಗಳಲ್ಲೂ ಸಮಾನ ಹಂಚಿಕೆಯಿರಲಿ. ಸಮಾನ ಮನಸ್ಥಿತಿಯಿರಲಿ. ಸಮರಸವಿರಲಿ. ಒಬ್ಬರ ವಿಚಾರ ಒಂದು ರೀತಿ ಮತ್ತೊಬ್ಬರ ವಿಚಾರ ಇನ್ನೊಂದು ರೀತಿಯಾಗಬಾರದು, ಹೊಂದಿಕೆಯಿರಬೇಕು.

    ಇದು ನನ್ನ ಅನಿಸಿಕೆಯಷ್ಟೇ. ಈ ವಿಷಯದ ಕುರಿತು ಚೈತ್ರರಶ್ಮಿ ಬಳಗದ ಮಿತ್ರರು ತಮ್ಮ ಅಭಿಪ್ರಾಯವನ್ನು ಬರೆದು ಈ ಚರ್ಚೆಯನ್ನು ಮುಂದುವರಿಸುತ್ತಾರೆ ಎಂದು ನಂಬುತ್ತೇನೆ.

    ಪ್ರತಿಕ್ರಿಯಿಸಿ :