’ಪಾತಿ’ ಎಂಬ ದಿವ್ಯಪ್ರೀತಿ
September 15th, 2008.
ತಮ್ಮ ಬದುಕಿನಲ್ಲಿ ಪ್ರಭಾವ ಬೀರಿದ,ಜೀವನೋತ್ಸಾಹ ಹೆಚ್ಚಿಸಿದ ವಿಶಿಷ್ಟ ವ್ಯಕ್ತಿತ್ವವೊಂದರ ನೆನಪನ್ನು ಭಾವಭಿತ್ತಿಯಲ್ಲಿ ಬಿಚ್ಚಿಟ್ಟಿದ್ದಾರೆ ನಿವೇದಿತಾ
ಅಲ್ಲೇ ಬೆಣಚ್‌ಕಿಂಡಿ (ಬೆಳಕಿನ ಕಿಂಡಿ=ಕಿಟಕಿ) ಮ್ಯಾಲೆ ಇಟ್ಟಿದ್ಯಲಾ.ಸರಿ ಕಣ್ ಬಿಟ್ಟು ನೋಡಾ, ಕನ್ನಡಕವನ್ನು ಮರೆತು ಎಲ್ಲೋ ಇಟ್ಟುಮನೆ ತುಂಬಾ ಹುಡುಕಿ, ’ಪಾತಿ’ ಹತ್ತಿರ ಹೀಗೆ ಬೈಸಿಕೊಂಡಿದ್ದೆ.’ಪಾತಿ’ ಹಾಗೆಲ್ಲ ಮುನಿಸಿಕೊಂಡದ್ದಿಲ್ಲ. ಆದರೆ ಖಾಯಂ ಆಗಿ ಬರುತ್ತಿದ್ದಮಗಳ ಪತ್ರ ಈ ತಿಂಗಳು ಬರಲಿಲ್ಲವಾದ್ದರಿಂದ ಮುಖ ಗಂಟುಹಾಕಿಕೊಂಡು ಕುಳಿತಿದ್ದಳು.ಕ್ಷಮಿಸಿ, ’ಪಾತಿ’ ಯಾರೆಂದು ಹೇಳದೇ ಸುಮ್ನೆ ಕೊರಿತಾ ಇದೀನಿಅನ್ನಿಸತ್ತೆ. ಆಕೆ ನಮ್ಮನ್ನು ಸಾಕಿ ಬೆಳೆಸಿದ ತಾಯಿ. ಅವಿಭಕ್ತ ಕುಟುಂಬವಾದ್ದರಿಂದ ನಮ್ಮ ಮನೆಯಲ್ಲಿಎಲ್ಲ ತರದ ಜನರೂ ಇರುತ್ತಿದ್ದರು.
ಆಯಿಯ ಭಾಷೆಯಲ್ಲೇ ಹೇಳಬೇಕೆಂದರೆ ’ಹಾರವು, ಹರಿಯವು’ಎಲ್ಲರು ಇರುತ್ತಿದ್ದರು. ಅದಕ್ಕೆ ನಮ್ಮ ತಾಯಿಗೆ ಬಿಡುವಿಲ್ಲದ ಕೆಲಸ. ಸಾಕಿದ್ದು ಬೆಳೆಸಿದ್ದು ಎಲ್ಲ ಪಾತಿಯೇ!ಮೂಲ ಮುರುಡೇಶ್ವರದವಳು. ಬಹಳ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿದ್ದರಂತೆ. ಒಂದು ಹೆಣ್ಣುಮಗುವಾಗುವುದರೊಳಗೆ ಕೆಲಸ ಹುಡುಕಲೆಂದು ಹೋದ ಗಂಡ ನಾಪತ್ತೆಯಾದ. ಅವನಿಗೆ ಕಾಯಿಲೆಯಾಗಿತೀರಿಕೊಂಡಿರುವನೆಂದು ಮುಂದೊಂದು ದಿನ ಸುದ್ದಿಯೂ ಬಂತು. ಗಂಡನ ಮನೆಯಿಂದ ಹೊರಹಾಕಲ್ಪಟ್ಟಳು. ತಂದೆ ಈಶ್ವರ ಭಟ್ಟರಿಗೆ ದಿಕ್ಕೇ ತೋಚದಂತಾಗಿ ನಮ್ಮ ಮನೆಗೆ ಅಡಿಗೆ ಕೆಲಸಕ್ಕೆಂದುತಂದು ಬಿಟ್ಟರು. ಅಂದಿನಿಂದ ಇಂದಿನವರೆಗೆ ನಮ್ಮ ಮನೆಯ ಸದಸ್ಯಳಾಗಿ ಹೋಗಿದ್ದಾಳೆ.ಏನಿಲ್ಲವೆಂದರೂ ಸುಮಾರು ೭೦-೭೫ ರ ವಯೋವೃದ್ಧೆ. ಗುಳಿಬಿದ್ದ ಕೆನ್ನೆ, ಬೊಚ್ಚು ಬಾಯಿ,ಬಾಗಿದ ಬೆನ್ನು, ಕ್ಷೌರಿಕ ’ಬಂಗಾರೇಶ’ ನುಣ್ಣಗೆ ಹೆರಿಸಿದ ತಲೆ, ಬಿಳಿ ಸೀರೆ. ಮನೆ ಮಂದಿಗೆಲ್ಲ ರುಚಿರುಚಿಯಾಗಿ ಮಾಡಿ ಹಾಕಿದರೂ, ತನಗೆ ಮಾತ್ರ ಮೆತ್ತನೆಯ ಗಂಜಿ ಮಾಡಿಕೊಳ್ಳುತ್ತಿದ್ದಳು. ಪಾತಿ,ಹಲ್‌ಸೆಟ್ಟು ಆದ್ರು ಮಾಡಿಸ್ಕ್ಯಳೇ ಎಂದು ಆಯಿ, ನಾನು, ಎಲ್ಲ ಸೇರಿ ಒತ್ತಾಯ ಮಾಡಿದ್ರೂ ’ವಯಸ್ಸಾತು,ಇನ್ನ್ ಎಂತದೇ ಶಣ (ಶಾಣ್ಯ)’ ಎಂದು ೬ ತಿಂಗಳ ಶಿಶುವಿನಂತೆ ನಗುತ್ತಿದ್ದಳು.ಯೌವನದಲ್ಲಿ ಆಕೆ ಹೇಗೆ ಇದ್ದಳೋ ನಾ ಕಾಣೆ, ಆದರೆ ಈಗಂತೂ ಗುಳಿಬಿದ್ದ ಕೆನ್ನೆಯೊಂದಿಗೂಬಹಳ ಮುದ್ದಾಗಿ ಕಾಣುತ್ತಿದ್ದಳು. ಚಿಕ್ಕಂದಿನಲ್ಲಿ ಓದು ಬರಹ ಕಲಿಯಬೇಕೆಂದು ಬಹಳ ಆಸೆಯಿತ್ತಂತೆ.’ನೀ ಚೊಲೋ ಕಲಿತ್ರೆ, ನಾ ನಿಂಗೆ ಬಂಗಾರದ ಬಳೆ ಮಾಡಿಸಿಕೊಡ್ತೆ’ ಅಂತ ಆಕೆಯ ತಾಯಿಹೇಳಿದ್ಲಂತೆ. ಆದರೆ ೬ನೇ ಮಗುವಿನ ಬಾಣಂತನದಲ್ಲಿ ಅವಳೂ ತೀರಿಕೊಂಡಿದ್ದಳು.ಗೌಡನ ಬಿಡಾರದ ’ಇಂದಿರೇಶ’ ಬಂದು ’ಅಚ್ಚೆಮನೆ(ಆಚೆಮನೆ) ಪಾರ್ವತಕ್ಕನ ಮಗಳಿಗೆ ಹೆರಿಗೆನೋವು ಬಂದದಂತೆ, ನಿಮ್ಗೆ ಹೇಳಿಕಳಿಸಿದ್ರು’ ಎಂದು ಹೇಳಿದ ಪಾತಿ ಗಡಿಬಡಿಸಿ ಹೊರಟೇ ಬಿಟ್ಲು.ಹೊಳೆ ದಾಟುವ ಸಾರ ಈ ಬಾರಿಯ ಭಾರಿ ಮಳೆಗೆ ಮುರಿದು ಬಿದ್ದಿತ್ತು. ಅದಕ್ಕೆ ನಮ್ಮ ಮನೆಯೂಸೇರಿ ನಾಲ್ಕಾರು ಮನೆಗಳಿಗೆ ಹೊರಗಿನ ಸಂಪರ್ಕ ಕಡಿದು ಹೋಗಿತ್ತು. ಮನೆಯಲ್ಲೇ ಹೆರಿಗೆ ಮಾಡಿಸುವುದುಅನಿವಾರ್ಯವಾಗಿತ್ತು. ಹಾಮುಸುಕ್ಲು (ಪಾಚಿ) ಬೆಳಕಂಜು, ಸಾವಕಾಶ ಹೋಗೆ ಪಾತಿ ಎಂದೆ.
ನಂಗೆ ಹೇಳಲ್ ಬತ್ತ್ಯನಾ, ನಿ ಎಷ್ಟ್ ಮಳೆಗಾಲ ಕಂಡಿದ್ದಿ ಎಂದು ಆಕಡೆಯಿಂದ ಉತ್ತರ ಬಂತು. ಕುಟುಂಬಯೋಜನೆಯ ಬಗ್ಗೆ ಅರಿವೇ ಇಲ್ಲದಕಾಲ. ಮನೆ ತುಂಬಾ ಮಕ್ಕಳಿರುತ್ತಿದ್ದರು.ಒಮ್ಮೊಮ್ಮೆ ತಾಯಿ ಮತ್ತು ಮಗಳುಇಬ್ಬರೂ ಒಟ್ಟಿಗೆ ಬಾಣಂತನಮಾಡಿಸಿಕೊಳ್ಳುತ್ತಿದ್ದರಂತೆ. ಹುಟ್ಟಿದಅರ್ಧದಷ್ಟು ಮಕ್ಕಳು ತಮ್ಮ ಮೊದಲನೇ ಹುಟ್ಟುಹಬ್ಬವನ್ನೇ ಕಾಣುತ್ತಿರಲಿಲ್ಲ. ದೇಹದಲ್ಲಿ ನೀರುಶೇಖರಣೆಯಾದೀತು ಎಂಬ ಭೀತಿಯಿಂದ ಬಾಣಂತಿಗೆ ಕುಡಿಯಲು ನೀರನ್ನೇ ಕೊಡುತ್ತಿರಲಿಲ್ಲ. ಜೊತೆಗೆಮೆಣಿಸಿನಕಾಳಿನ ಕಷಾಯ ಬೇರೆ ಕೊಡುತ್ತಿದ್ದರಂತೆ.ಯಾವಾಗಲೂ ಸಮಾಜ ಹೊಸತೇನಾದರೂ ಬಂದರೆ ಅದನ್ನು ಸ್ವೀಕರಿಸಲು ಹಿಂಜರಿಯುತ್ತದೆ.ಮೊದಲು ಹೀಯಾಳಿಸುತ್ತಾರೆ, ವಿರೋಧಿಸುತ್ತಾರೆ. ನಂತರ ಕೊನೆಯಲ್ಲಿ ಸ್ವೀಕರಿಸುತ್ತಾರೆ. ನನ್ನ ಸೋದರಮಾವ ಡಿಗ್ರಿ ಮಾಡಿಕೊಂಡವ, ತಿಳುವಳಿಕೆ ಉಳ್ಳವ, ತನ್ನ ಮಗಳಿಗೆ ಲಸಿಕೆಯನ್ನು ಹಾಕಿಸಿಕೊಂಡು ಬಂದಿದ್ದ.
ಊರಲೆಲ್ಲ ಅದರದ್ದೆ ಗುಸುಗುಸು ಸುದ್ದಿಯಾಗಿ ಹೋಗಿತ್ತು. ’ಆ ಸಣ್ (ಸಣ್ಣ) ಕೂಸಿಗೀಗ ತಗಂಡ ಹೋಗಿ ದಬ್ಬಣ ಚುಚ್ಚಿಸ್ಕ ಬಂದ, ಅವಂಗೆ ಬುದ್ಧಿಗಿದ್ಧಿ ಇದ್ದ’ ಎಂದು ಎಲ್ಲರೂ ಬೈದದ್ದೇ ಬೈದದ್ದು. ನಾನು ಪಾತಿಗೆ ಕೇಳ್ದೆ ’ನಿಂಗೆಂತ ಅನ್ನಿಸ್ತೆ ಪಾತಿ?’ ಮರಿ ನಾ ಹೆಚ್ಚಿಗೆ ಎಂತೂ ತಿಳಿದವ್ವ ಅಲ್ಲ. ಲೋಕ ಕಂಡವ ಅಲ್ಲ. ಆದ್ರೂ ಒಂದ್ ಮಾತ ಹೇಳ್ತಿ ಕೇಳು, ಕಾಲದೊಂದಿಗೆ ನಾವೂ ಬದಲಾಗವು, ಒಳ್ಳೆಯದನ್ನ ಅಳವಡಿಸಿಕೊಳ್ಳವು. ಆಕೆಯ ಮಾತನ್ನು ಕೇಳಿ ಬೆಕ್ಕಸ ಬೆರಗಾಗಿದ್ದೆ. ಆಕೆಯ ಒಳಗೆ ಆಕೆಗೇ ಅರಿವಿಲ್ಲದಂತೆ ತತ್ವಜ್ಞಾನಿಯೊಬ್ಬಳು ಇದ್ದಳೆಂದು ಕಾಣುತ್ತದೆ. ತನ್ನ ಬಿಡುವಿಲ್ಲದ ಮನೆಗೆಲಸದ ನಡುವೆಯೇ ಜಪತಪಾದಿಗಳಿಗೆ ನಿರ್ದಿಷ್ಟ ಸಮಯವನ್ನು ಮೀಸಲಿಟ್ಟಿದ್ದಳು. ತನ್ನ ೬೦ ನೇ ವಯಸ್ಸಿನಲ್ಲೂ ನಮ್ಮನೆಯಲ್ಲೇ ಉಳಿದುಕೊಂಡಿದ್ದ ಸಂಸ್ಕೃತ ಮಾಸ್ತರ್ ಹತ್ತಿರ ಸಂಸ್ಕೃತ ಕಲಿತಿದ್ದಳು. ದಿನವೂ ತಪ್ಪದೇ ಭಗವದ್ಗೀತೆಯನ್ನು ಓದುತ್ತಿದ್ದಳು. ಹೆಣ್ಣುಮಕ್ಕಳಿಗೆ ಸರಿಯಾಗಿ ವಿದ್ಯಾಭ್ಯಾಸ ಮಾಡಲು ಅವಕಾಶ ಮಾಡಿಕೊಟ್ಟಿದ್ದರೆ ಎಷ್ಟು ಮಂದಿ ಗಾರ್ಗೇಯಿ, ಮೈತ್ರೇಯಿಯರಂತೆ ಜ್ಞಾನನಿಧಿಗಳಾಗುತ್ತಿದ್ದರೋ ಎಂದು ಅಲವತ್ತುಕೊಂಡಿದ್ದಳು. ಬದಲಿಗೆ ವಿಧವೆಯರನ್ನು ಕುರೂಪಗೊಳಿಸಿ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಇದಕ್ಕೆ ಶಾಸ್ತ್ರದಲ್ಲಿ ಹೀಗೆ ಹೇಳಲ್ಪಟ್ಟಿದೆ ಎಂಬ ನೆಪ ಬೇರೆ! ಇತ್ತೀಚೆಗೆ ಪ್ರವಚನ ಕೊಡಲು ಆಗಮಿಸಿದ್ದ ಹಿರಿಯರೋರ್ವರು ಹೇಳಿದ್ದರು. ವಿಧವೆಯೆಂದರೆ ಹಿಂದೂ ಸನ್ಯಾಸಿನಿಯರು, ಅವರನ್ನು ಅಮಂಗಳಕರವೆಂದು ಭಾವಿಸಿದರೆ ತಾಯಿಗೆ ದ್ರೋಹ ಬಗೆದಂತೆ, ಅವರಿಗೆ ಬಹಳ ಗೌರವಾದರಗಳೊಂದಿಗೆ ತಾಯಿಗೆ ಕೊಡುವ ಮಾನ್ಯತೆಯನ್ನು ಕೊಡಬೇಕು. ಪಾತಿಯ ಕಣ್ಣಲ್ಲಿ ನೀರು ತುಂಬಿತ್ತು. ಊರಲ್ಲಿ ಒಂದು ಆಸ್ಪತ್ರೆಯೂ, ಹೆಣ್ಣುಮಕ್ಕಳಿಗೆ ಒಂದು ಶಾಲೆಯೂ ಇರಬೇಕೆಂದು ಆಕೆಯ ಹೆಬ್ಬಯಕೆಯಾಗಿತ್ತು. ಆದರೆ ನಾನು ವೈದ್ಯನಾಗಿ ಬಂದು ನಮ್ಮೂರಲ್ಲಿ ದವಾಖಾನೆ ತೆಗೆಯುವ ವೇಳೆಗೆ ಆಕೆ ಇನ್ನಿಲ್ಲವಾದಳು. ಮುಂದೊಂದು ದಿನ ಶಾಲೆಯನ್ನು ತೆಗೆಯುವ ಹೆಬ್ಬಯಕೆಯಿದೆ. ಆಕೆಯ ನೆನಪು, ಆದರ್ಶ ಸದಾ ನನಗೆ ಬೆಂಗಾವಲಾಗಿದೆ.
ಈ ದೇಶದಲ್ಲಿ ಅದಿನ್ನೆಷ್ಟು ಅಸಹಾಯಕರಿದ್ದಾರೋ……?