ಆತನ ಕಂಬನಿಯಲ್ಲಿ ’ಭಾರತ’ ಕಾಣುತ್ತಿತ್ತು !!
September 15th, 2008.
ಅದೊಂದು ದಿನ ಬೆಂಗಳೂರಿನ ಚಾಮರಾಜಪೇಟೆಯ ರಸ್ತೆಯೊಂದರಲ್ಲಿ ನಡೆದು ಬರುತ್ತಿದ್ದೆ. ರಾತ್ರಿ ೯.೩೦ ರ ಸಮಯ. ನನ್ನ ನಡಿಗೆಯ ವೇಗವನ್ನು ತಗ್ಗಿಸಿದ್ದು ಒಬ್ಬ ವಯಸ್ಸಾದ, ಮುಟ್ಟಿದರೇ ಬೀಳುವಂತಿದ್ದ, ಮುಖದಲ್ಲಿ ಇನ್ನು ಜಾಗವೇ ಇಲ್ಲ ಎನ್ನುವಷ್ಟು ಸುಕ್ಕುಗಟ್ಟಿದ್ದ, ಪ್ರತಿ ಹೆಜ್ಜೆ ಇಡಲೂ ಪ್ರಯಾಸ ಪಡುವಂತೆ ಕಾಣುತ್ತಿದ್ದ ಹಣ್ಣು ಹಣ್ಣು ಮುದುಕ. ಆತನ ಒಂದು ಕೈಯಲ್ಲಿ ಕೋಲು, ಇನ್ನೊಂದು ಕೈಯಲ್ಲಿ ಭಿಕ್ಷಾ ಪಾತ್ರೆ, ಅಲ್ಲಿದ್ದ ಅಂಗಡಿಯವರ ಎದುರು, ಬೀದಿಬದಿಯಲ್ಲಿ ತಿನ್ನುತ್ತಿದ್ದವರ ಎದುರು ಆತ ಮೌನವಾಗಿ ತನ್ನ ಭಿಕ್ಷಾಪಾತ್ರೆ ಒಡ್ಡುತ್ತಿದ್ದ. ಆದರೆ ಪ್ರತಿ ಹೆಜ್ಜೆಯಲ್ಲೂ ಆತನಿಗೆ ನಿರಾಶೆಯಷ್ಟೇ ಕಾದಿತ್ತು .
ಬೀದಿ ಬದಿಯಲ್ಲಿ ಪಾನಿಪುರಿ ತಿನ್ನುತ್ತಿದ್ದ ಜನಗಳ, ಅಂಗಡಿಯಲ್ಲಿ ಕುಳಿತು ದಿನದ ಕೊನೆಯ ಲೆಕ್ಕಾಚಾರ ಮಾಡುತ್ತಿದ್ದ ಧಣಿಗಳ ಮಾನವೀಯ ಅಂತಃಕರಣವೇ ಪೂರ್ತಿ ಕರಗಿ ಹೋಗಿದೆಯಾ ಅನ್ನಿಸುತ್ತಿತ್ತು.. ಟಿ.ವಿ.ಚಾನೆಲ್‌ಗಳ ಎದುರು ಕೂತು ನಾವು ಹಣದುಬ್ಬರ ಇಳೀತು, ಜಿ.ಡಿ.ಪಿ ಏರಿತು, ಸೆನ್ಸೆಕ್ಸ್ ಮುಗಿಲು ಮುಟ್ಟಿತು, ದೇಶದ ಅಭಿವೃದ್ಧಿಯಾಯ್ತು ಅಂತೆಲ್ಲಾ ಬೀಗುತ್ತೇವಲ್ಲಾ, ಈ ದೇಶದ ಒಬ್ಬ ವ್ಯಕ್ತಿ, ಅದೂ ಹಣ್ಣು ಹಣ್ಣು ಮುದುಕ ರಾತ್ರಿ ೧೦ರ ಸಮಯದಲ್ಲಿ ತುತ್ತು ಅನ್ನಕ್ಕಾಗಿ ಈ ಪರಿ ಕಷ್ಟ, ಅವಮಾನ, ಹತಾಶೆ ಅನುಭವಿಸುತ್ತಾನಲ್ಲಾ, ಇದೇನಾ ನಮ್ಮ ಅಭಿವೃದ್ದಿ?, ಮನಸ್ಸೇಕೋ ಮುದುಡಿಹೋಯ್ತು. ಆ ಮುದುಕ ರಸ್ತೆಯ ಕೊನೆಯ ಜ್ಯೂಸ್ ಅಂಗಡಿಯ ಎದುರು ನಿಂತು ತುಂಬಾ ಕಷ್ಟಪಟ್ಟು ’ಎರಡು ದಿನದಿಂದ ಊಟ ಇಲ್ಲ, ಏನಾದ್ರೂ ಹಾಕಿ ಸಾಮಿ’ ಎಂದ. ಅಂಗಡಿಯವನು ’ಎಲ್ಲಾ ಖಾಲಿ’ ಅಂತ ಹೇಳಿ ಅರ್ಧ ಕೊಳೆತಂತಿದ್ದ ಹಣ್ಣೊಂದನ್ನು ಆತನ ತಟ್ಟೆಗೆಸೆದ.
ಯಾಕೋ ಮನಸ್ಸಿಗೆ ಕಸಿವಿಸಿಯಾದಂತಾಗಿ ಜ್ಯೂಸ್ ಅಂಗಡಿಯವನಿಗೆ ದುಡ್ಡು ಕೊಟ್ಟು ಆ ಮುದುಕನಿಗೆ ಜ್ಯೂಸ್ ಕೊಡಲು ಹೇಳಿದೆ. ಮುದುಕ ’ಲೋಟದಲ್ಲಿ ಕುಡಿದರೆ ಮೈಲಿಗೆ’ಯಾದೀತೆಂದು ಅಂಗಡಿಯವನು ಒಂದಷ್ಟು ಜ್ಯೂಸ್‌ನ್ನು ಆತನ ತಟ್ಟೆಗೆ ಸುರುವಿದ. ಅದನ್ನು ಪೂರ್ತಿ ಕುಡಿದಾದ ಮೇಲೆ ಆ ಹಿರಿಯ ನಿಧಾನವಾಗಿ ನನ್ನೆಡೆಗೆ ನಡೆದು ಬಂದು ಒಮ್ಮೆ ನನ್ನ ಕೈ ಮುಟ್ಟಿ, ನಂತರ ನನಗೆ ಕೈ ಮುಗಿದ. ನಾನು ಆತನ ಕಣ್ಣುಗಳನ್ನು ದಿಟ್ಟಿಸಿದೆ. ಆತನ ಕಣ್ಣುಗಳಿಂದ ಕಣ್ಣೀರು ಒಂದೇ ಸಮನೆ ಹರಿಯುತ್ತಿತ್ತು, ಮತ್ತು ಆ ಕಂಬನಿಯಲ್ಲಿ ನನಗೆ ’ಭಾರತ’ ಕಾಣುತ್ತಿತ್ತು.